ಮಾಚ್‌ರ್‍ 12 ರಂದು ತೆರೆಗೆ ಬರಲಿರುವ ಚಿತ್ರ ಇದು. ‘ ಅಂಬಾನಿ ಪುತ್ರ’ ಹೆಸರಿನ ಚಿತ್ರದೊಳಗಿನ ಕತೆಯೇನು ಅಂತ ಅದರ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಎದುರಾದ ಮಾಧ್ಯಮದ ಪ್ರಶ್ನೆಗೆ ಚಿತ್ರತಂಡ ತನ್ನದೇ ರೀತಿಯಲ್ಲಿ ಉತ್ತರಿಸಿತು. ‘ಹೌದು,ಅಂಬಾನಿ ಅಂದಾಕ್ಷಣ ಧೀರು ಬಾಯ್‌ ಅಂಬಾನಿ ಅಥವಾ ಅವರ ಕುಟುಂಬ ನೆನಪಾಗುವುದು ಸಹಜ. ಆದರೆ ಈ ಸಿನಿಮಾಕ್ಕೂ, ಅವರಿಗೂ ಯಾವುದೇ ಕನೆಕ್ಷನ್‌ ಇಲ್ಲ. ಬದಲಿಗೆ ಇದೊಂದು ಹಳ್ಳಿ ಹುಡುಗನ ಕತೆ.

ಸಾಮಾನ್ಯವಾಗಿ ಹಳ್ಳಿಯಲ್ಲಿ ಅಲ್ಪಸ್ವಲ್ಪ ದುಡ್ಡಿದ್ದು, ಅಹಂಕಾರದಿಂದ ಮೆರೆಯುವವರಿಗೆ ಇವನೇನು ಅಂಬಾನಿ ಪುತ್ರನೇ ಅಂತೆಂದು ಟೀಕಿಸುವುದು ಕಾಮನ್‌. ಅಂತೆಯೇ ಊರಿನ ಜನರಿಂದ ಅಂಬಾನಿ ಪುತ್ರ ಎಂದೆಲ್ಲ ಕರೆಸಿಕೊಳ್ಳುವ ಕಥಾ ನಾಯಕನ ಬದುಕಿನ ಸುತ್ತಲ ಕತೆಯಿದು. ಹಾಗಾಗಿಯೇ ಚಿತ್ರಕ್ಕೆ ಅಂಬಾನಿ ಪುತ್ರ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಕತೆಗೆ ಅದು ಸೂಕ್ತವಾಗಿದೆ’ ಎಂದು ಪ್ರತಿಕ್ರಿಯಿಸಿದರು ನಿರ್ಮಾಪಕ ವೆಂಕಟೇಶ್‌.

ಪೋಸ್ಟರ್‌, ಟ್ರೇಲರ್‌ ಮೂಲಕ ವೈರಲ್‌ ಆಗುತ್ತಿದೆ 'ಒಂದು ಗಂಟೆಯ ಕಥೆ'!

ವೆಂಕಟೇಶ್‌ ಹಾಗೂ ವರುಣ್‌ ಗೌಡ ನಿರ್ಮಾಣದ ಈ ಚಿತ್ರವಿದು. ದೊರೆ ರಾಜ್‌ ತೇಜ್‌ ಕತೆ, ಚಿತ್ರಕತೆ ಬರೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರತಂಡ ಅಂದುಕೊಂಡಂತಾಗಿದ್ದರೆ ಈ ಚಿತ್ರ ಬಂದು ಹೋಗಿ ಹಳೇ ಮಾತೇ ಆಗುತ್ತಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೊಂಚ ತಡವಾಗಿಯೇ ಈಗ ಬಿಡುಗಡೆ ಆಗುತ್ತಿದೆ. ತಡವಾಗಿದ್ದರೂ ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಇದೊಂದು ಹೊಸಬರ ಚಿತ್ರ ಎನ್ನುವುದು ಅದಕ್ಕಿರುವ ಮೊದಲ ಕಾರಣ. ಅದರ ಜತೆಗೆ ಒಂದೊಳ್ಳೆ ಕತೆ ಇಲ್ಲಿದೆ ಎನ್ನುವುದು ಅದಕ್ಕಿರುವ ಎರಡನೇ ಕಾರಣ.ಅದೇ ವಿಶ್ವಾಸದಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎನ್ನುವ ವಿಶ್ವಾಸ ಮಾತು ನಿರ್ಮಾಪಕ ವರುಣ್‌ ಗೌಡ ಅವರದ್ದು.

ಜೈ ರಾಜ್‌ ಬಯೋಗ್ರಫಿಯಲ್ಲಿ ಮುತ್ತಪ್ಪ ರೈ ಪಾತ್ರ ಇರೋಲ್ಲ; ಅಗ್ನಿ ಶ್ರೀಧರ್‌?

ನಿರ್ಮಾಪಕ ವೆಂಕಟೇಶ್‌ ಪುತ್ರ ಸುಪ್ರೀಂ ಚಿತ್ರದ ನಾಯಕ ನಟ. ಸಿನಿಮಾದ ಮೇಲಿನ ಆಸಕ್ತಿಯಿಂದಾಗಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರಂತೆ. ಹೀರೋ ಆಗಿ ಮಿಂಚಬೇಕೆನ್ನುವ ಬಯಕೆಗಿಂತ ಕಲಾವಿದನಾಗಬೇಕೆನ್ನುವ ಆಸೆಯಿಂದಾಗಿ ಬೆಳ್ಳಿತೆರೆಗೆ ಬಂದಿದ್ದಾಗಿ ಹೇಳುತ್ತಾರೆ.ಚಿತ್ರಕ್ಕೆ ಇಬ್ಬರು ನಾಯಕಿಯರು. ಕಾವ್ಯ ಮತ್ತು ಆಶಾ ಭಂಡಾರಿ. ಇಬ್ಬರಿಗೂ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರವೇ ಸಿಕ್ಕಿದೆಯಂತೆ. ಚಿತ್ರಕ್ಕೆ ಹಾಸನ, ಮಂಡ್ಯ, ಹೊನ್ನಾವರ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆದಿದೆ. ಮಧು ದೇವಲಾಪುರ ಹಾಗೂ ರೋಹಿತ್‌ ಆದಿತ್ಯ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿಲ ಐದು ಹಾಡುಗಳಿವೆ. ಅಭಿಷೇಕ್‌ ರಾಯ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರಿಗಿದು ಮೊದಲ ಸಿನಿಮಾ. ರಾಮಾಂಜನೇಯ ಛಾಯಾಗ್ರಹಣ ವಿದೆ. ಎಸ್‌ಎಸ್‌ ಸಂಸ್ಥೆ ಚಿತ್ರದ ವಿತರಣೆಯ ಹಕ್ಕು ಪಡೆದಿದೆ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.