ಪಣಜಿ(ಜ.17): ಕೊರೋನಾ ಕಾಲದಲ್ಲಿ ಸಂಕಷ್ಟಕ್ಕೀಡಾದ ಸಿನೆಮಾ ರಂಗ, ಹೊಸ ‘ಕೊರೋನಾ’ವಾಗಲಿ, ಅದು ಎಲ್ಲೆಡೆ ‘ಸಾಂಕ್ರಾಮಿಕ’ವಾಗಲಿ ಎಂದು ಖ್ಯಾತ ನಟ ಕಿಚ್ಚ ಸುದೀಪ್‌ ಆಶಿಸಿದ್ದಾರೆ. ಗೋವಾದ ರಾಜಧಾನಿ ಪಣಜಿಯಲ್ಲಿ ಶನಿವಾರ ಚಾಲನೆ ಪಡೆದ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿಕ್ಕದಾಗಿ, ಚೊಕ್ಕ ಭಾಷಣ ಮಾಡಿದ ಸುದೀಪ್‌ ಎಲ್ಲರ ಗಮನ ಸೆಳೆದರು.

"

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸುದೀಪ್‌ ಮೊದಲಿಗೆ ಕನ್ನಡದಲ್ಲೇ ತಮ್ಮನ್ನು ತಾವು ಪರಿಚಯಿಸಿಕೊಂಡರು. ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಪರವಾಗಿ ಈ ಕಿಚ್ಚನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿ ಅಭಿಮಾನಿಗಳ ಮನಗೆದ್ದರು.

ನಂತರ ಮಾತನಾಡಿದ ಸುದೀಪ್‌ ‘ಸಿನಿಮಾ ಮತ್ತು ಕ್ರೀಡೆಗಳು ನಮ್ಮೆಲ್ಲರನ್ನೂ ಬೆಸಿದಿವೆ. ಇದೇ ಕಾರಣಕ್ಕಾಗಿ ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ. ಸಿನಿಮಾ ರಂಗವೂ ಸಾಂಕ್ರಾಮಿಕ ಕೊರೋನಾದಂತೆಯೇ ಎಲ್ಲೆಲ್ಲೂ ವ್ಯಾಪಿಸಲಿ. ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯನ್ನು ನಾವು ಕೇಳಿದ್ದೇವೆ. ಅದೇ ರೀತಿ ಸಿನಿಮಾವು ಒಂದೇ ವೇದಿಕೆಯಲ್ಲಿ ಈ ಎರಡನ್ನೂ ಪೂರೈಸುತ್ತದೆ. ಅಂದರೆ ಒಂದೇ ವೇದಿಕೆಯಲ್ಲಿ ನಿಮಗೆ ಜ್ಞಾನದ ಜೊತೆಗೆ ವಿಶ್ವದೆಲ್ಲಾ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಈ ಕಾರ್ಯಕ್ರಮದ ಅತಿಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆಗಳು. ಎಲ್ಲರಿಗೂ ಅಭಿನಂದನೆಗಳು. ಈಗಾಗಲೇ ಹೇಳಿದಂತೆ ಸಿನಿಮಾವೂ ಸಹ ಕೊರೋನಾ ರೀತಿ ಎಲ್ಲೆಡೆಗೂ ಪಸರಿಸಲಿ’ ಎಂದು ತಮ್ಮ ಮಾತು ಮುಗಿಸಿದರು.

ಸಿನಿಮಾ ರಂಗ ಸಹಕಾರ ನೀಡಲಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, ‘ಅಂತಾರಾಷ್ಟ್ರೀಯ ಸಿನಿಮಾ ಮಹೋತ್ಸವದ ಆಚರಣೆಗಾಗಿ ಸರ್ಕಾರದ ಜೊತೆ ದೇಶದ ಎಲ್ಲಾ ಚಿತ್ರರಂಗ ಮತ್ತು ಇತರ ವಲಯಗಳು ಸಹಕಾರ ನೀಡಬೇಕು’ ಎಂದು ಹೇಳಿದರು. ದೇಶದ ಕಲೆ ಮತ್ತು ಸಂಸ್ಕೃತಿಯ ಉತ್ತೇಜನದ ಜವಾಬ್ದಾರಿ ಸರ್ಕಾರದ ಮೇಲೆ ಇದೆ ಎಂಬುದು ಎಲ್ಲವೂ ಸರ್ಕಾರವೇ ಮಾಡಬೇಕಿಂದಿಲ್ಲ. ಪ್ರತೀ ವರ್ಷವೂ ಕೇಂದ್ರ ಮತ್ತು ಗೋವಾ ಸರ್ಕಾರ ಮಾತ್ರವೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸಬೇಕು. ಏಕೆ? ಈ ಉತ್ಸವದಲ್ಲಿ ಸಿನಿಮಾ ರಂಗ ಮತ್ತು ಸಿನಿಮಾ ರಂಗದೊಂದಿಗೆ ನಂಟಿರುವ ಇತರ ವಲಯಗಳು ಸಹ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ.