ಪತಿಯ ಫೇಸ್ಬುಕ್ ಸ್ನೇಹ, ಪತ್ನಿ ಮಕ್ಕಳನ್ನು ಬೀದಿಗೆ ತಳ್ಳಿದೆ. ಪತಿಯ ಬದಲಾದ ವರ್ತನೆಯಿಂದ ಪತ್ನಿ ಬೇಸತ್ತಿದ್ದಾಳೆ. ಸಹಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಉತ್ತರ ಪ್ರದೇಶ (Uttar Pradesh )ದ ಬಾಗ್ಪತ್ ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಷ್ಟು ದಿನ ದೇವರ ಪೂಜೆ, ವೃತ ಅಂತ ಮಾಡ್ತಿದ್ದ ವ್ಯಕ್ತಿ ಸಂಪೂರ್ಣವಾಗಿ ಬದಲಾಗಿದ್ದಾನೆ. ಹೆಂಡ್ತಿ, ಮಕ್ಕಳಿದ್ರೂ ಕೆಲ ದಿನಗಳಿಂದ ಮನೆಗೆ ಬಂದಿಲ್ಲ. ಇದ್ರಿಂದ ಆತಂಕಗೊಂಡಿರುವ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಫರ್ಮಾನ್ ಮಲಿಕ್ ಸಹವಾಸ ಮಾಡಿ ಪತಿ ಬದಲಾಗಿದ್ದಾನೆ. ಧರ್ಮ (Religion) ಬಿಟ್ಟಂತೆ ಕಾಣ್ತಿದೆ. ಒಂದ್ವೇಳೆ ಇದು ಸತ್ಯವಾದ್ರೆ ನನ್ನ ಸಂಸಾರ ಹಾಳಾಗುತ್ತೆ, ನನಗೆ ಸಹಾಯ ಮಾಡಿ ಅಂತ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.

ಘಟನೆಯನ್ನು ವಿಸ್ತಾರವಾಗಿ ಹೇಳ್ಬೇಕು ಅಂದ್ರೆ, ಸಂತ್ರಸ್ತೆ ಜ್ಯೋತಿ ದೆಹಲಿಯ ಬಿಲಾಸ್ಪುರ್ ನಿವಾಸಿ. ಕೆಲ ವರ್ಷಗಳ ಹಿಂದೆ ಬಾಗ್ಪತ್ನ ಸಿಂಘವಲಿ ಅಹಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ಪುರ್ ಚೌಪ್ರಾ ಗ್ರಾಮದ ನಿವಾಸಿ ಅಜಯ್ ಅವರನ್ನು ಮದುವೆ ಆಗಿದ್ದಾರೆ. ಪತಿ ಅಜಯ್ ಹರಿಯಾಣದ ಸೋನಿಪತ್ ಜಿಲ್ಲೆಯ ರಾಯ್ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜ್ಯೋತಿ ಪ್ರಕಾರ, ಇಷ್ಟು ವರ್ಷ ಎಲ್ಲವೂ ಸರಿಯಾಗಿತ್ತು. ಆದ್ರೆ ಕೆಲ ತಿಂಗಳಿಂದ ಅಜಯ್ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಫೇಸ್ಬುಕ್ ನಲ್ಲಿ ಅಜಯ್, ಫರ್ಮಾನ್ ಮಲಿಕ್ ಅಲಿಯಾಸ್ ಶಾನ್ ಜೊತೆ ಸ್ನೇಹ ಬೆಳೆಸಿದ ನಂತ್ರ ಎಲ್ಲ ಅಜಯ್ ವರ್ತನೆ ಸಂಪೂರ್ಣ ಬದಲಾಗಿದೆ ಎಂದು ಜ್ಯೋತಿ ಆರೋಪ ಮಾಡಿದ್ದಾರೆ.

ಮೊದಲು ಅಜಯ್ ಪ್ರತಿ ದಿನ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗ್ತಿದ್ದರಂತೆ. ಪ್ರತಿ ನವರಾತ್ರಿ 9 ದಿನಗಳ ಕಾಲ ಉಪವಾಸ ಮಾಡ್ತಿದ್ದರಂತೆ. ದೇವರ ಪೂಜೆ, ಆರತಿಯನ್ನು ಅಜಯ್ ಪ್ರತಿ ದಿನ ಮಾಡ್ತಿದ್ದರು. ಆದ್ರೀಗ ಎಲ್ಲವನ್ನೂ ಅಜಯ್ ಬಿಟ್ಟಿದ್ದಾರೆ. ಹಿಂದಿನ ನವರಾತ್ರಿಯಲ್ಲಿ ಅಜಯ್ ವ್ರತ ಮಾಡ್ಲಿಲ್ಲ. ಯಾವುದೇ ಪೂಜೆಯಲ್ಲಿ ಪಾಲ್ಗೊಳ್ಳಲಿಲ್ಲ. ಆದ್ರೆ ಫರ್ಮಾನ್ ಮಲಿಕ್ ಜೊತೆ ಈದ್ ಆಚರಣೆಗೆ ಹೋಗಿದ್ರು.

ಜ್ಯೋತಿಗೆ ಧಮ್ಕಿ ಹಾಕಿದ ಫರ್ಮಾನ್ : ಅಜಯ್ ಹಾಗೂ ಫರ್ಮಾನ್ ಸ್ನೇಹವನ್ನು ಜ್ಯೋತಿ ವಿರೋಧಿಸಿದ್ದರು. ಆ ಟೈಂನಲ್ಲಿ ಜ್ಯೋತಿಗೆ ಫೋನ್ ಮಾಡಿದ್ದ ಫರ್ಮಾನ್ ಧಮ್ಕಿ ಹಾಕಿದ್ದರು. ಅಜಯ್ ನನ್ನು ನಿನ್ನಿಂದ ಹಾಗೂ ನಿಮ್ಮ ಧರ್ಮದಿಂದ ಸಂಪೂರ್ಣ ದೂರ ಮಾಡ್ತೇನೆ ಅಂತ ಬೆದರಿಸಿದ್ದರು. ಈಗ ಅದೇ ಆಗಿದೆ ಎಂದು ಜ್ಯೋತಿ ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಅಜಯ್ ಮನೆಗೆ ಬಂದಿಲ್ಲ. ಮಕ್ಕಳ ಜೊತೆ ನಾನು ಒಂಟಿಯಾಗಿದ್ದೇನೆ ಅಂತ ಜ್ಯೋತಿ ತನ್ನ ನೋವನ್ನು ತೋಡಿಕೊಂಡಿದ್ದಾರೆ.

ಅಜಯ್ ಧರ್ಮ ಬದಲಿಸಿರುವ ಭಯ ನನಗಿದೆ ಎಂದು ಜ್ಯೋತಿ ಹೇಳಿದ್ದಾರೆ. ಅಜಯ್ ಮುಸ್ಲಿಂ ಧರ್ಮಕ್ಕೆ ಬದಲಾಗಿದ್ದು, ಹೆಸರು ಬದಲಿಸಿಕೊಂಡಿರುವ ಅನುಮಾನ ನನಗಿದೆ ಎಂದು ಜ್ಯೋತಿ ಹೇಳಿದ್ದಾರೆ. ಶೀಘ್ರವೇ ನೀವು ಇದ್ರ ಬಗ್ಗೆ ತನಿಖೆ ಮಾಡಿಲ್ಲ ಅಂದ್ರೆ ನಮ್ಮ ಕುಟುಂಬ ಬೀದಿಗೆ ಬರೋದು ಗ್ಯಾರಂಟಿ ಅಂತ ಜ್ಯೋತಿ ಪೊಲೀಸರಿಗೆ ಹೇಳಿದ್ದಾಳೆ.

ನಡೆಯುತ್ತಿದೆ ತನಿಖೆ : ಜ್ಯೋತಿ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಜಯ್ ಫೇಸ್ಬುಕ್ (Facebook) ಅಕೌಂಟ್, ಚಾಟ್, ವಾಟ್ಸಪ್ ಮೆಸ್ಸೇಜ್ ಹಾಗೆ ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ಮಾಡಲಾಗ್ತಿದೆ. ಅಜಯ್ ಯಾರ ಸಂಪರ್ಕದಲ್ಲಿದ್ದಾರೆ, ಯಾವ ದಿಕ್ಕಿನಲ್ಲಿ ಸಾಗ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ ನಂತ್ರ ಸೂಕ್ತ ಕ್ರಮಕ್ಕೆ ಮುಂದಾಗೋದಾಗಿ ಪೊಲೀಸರು, ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.