ಹದಿಹರೆಯದ ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಅವರು ಯಾವುದೋ ವಿಷಯದ ಬಗ್ಗೆ ತುಂಬಾ ಹಠಮಾರಿಗಳಾಗುತ್ತಾರೆ. ಪೋಷಕರು ತಮ್ಮ ಆಸೆಗಳನ್ನು ಪೂರೈಸದಿದ್ದರೆ ಕೋಪಗೊಳ್ಳುತ್ತಾರೆ ಮತ್ತು ತುಂಬಾ ನೋವುಂಟು ಮಾಡುವ ಮಾತುಗಳನ್ನು ಹೇಳುತ್ತಾರೆ.
ಮಕ್ಕಳು ಕೆಲವೊಮ್ಮೆ ತಮ್ಮ ಹೆತ್ತವರ ಜೊತೆ ಕೋಪದಿಂದ ನಡೆದುಕೊಳ್ಳುವುದಲ್ಲದೆ, ಕಹಿಯಾಗಿ ಮಾತನಾಡುತ್ತಾರೆ. ಇದರಿಂದ ಪೋಷಕರ ಮನಸ್ಸಿಗೆ ನೋವಾಗುವುದಲ್ಲದೆ, ಅವರು ಒಳಗಿನಿಂದಲೇ ಕೊರಗುತ್ತಾರೆ. ತಮ್ಮ ಪಾಲನೆಯಲ್ಲಿ ತಪ್ಪೇನಾಯ್ತು?, ತಮ್ಮ ಸ್ವಂತ ಮಗುವೇ ಇಂತಹ ಮಾತುಗಳನ್ನು ಹೇಳುತ್ತಿದೆಯೇ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ, ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ, ಅಲ್ಲಿ ಒಬ್ಬ ಮಗಳು ಕೋಪದಿಂದ ತನ್ನ ಹೆತ್ತವರಿಗೆ, 'ನನ್ನನ್ನು ಬೆಳೆಸುವ ಸಾಮರ್ಥ್ಯ ನಿಮಗಿಲ್ಲದಿದ್ದಾಗ, ನೀವು ನನಗೆ ಏಕೆ ಜನ್ಮ ನೀಡಿದ್ದೀರಿ?' ಎಂದು ಅದೂ ಸಾರ್ವಜನಿಕ ಸ್ಥಳದಲ್ಲಿ ಅಂದರೆ ಜನದಟ್ಟಣೆಯ ಮಾಲ್‌ನಲ್ಲಿಯೇ ಪ್ರಶ್ನಿಸಿದ್ದಾಳೆ. ತಮ್ಮ ಮಗಳಿಂದ ಇಂತಹ ಮಾತನ್ನು ಕೇಳಿದ ಪೋಷಕರು ಶಾಕ್ ಆಗಿದ್ದಾರೆ. ಈ ಸಂಪೂರ್ಣ ಘಟನೆಯ ಮಾಹಿತಿಯನ್ನು ಪ್ರಸಿದ್ಧ ಪೋಷಕರ ತರಬೇತುದಾರ (Parenting coach) ಪರೀಕ್ಷಿತ್ ಜೋಬನ್‌ಪುತ್ರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಲ್ಲರ ಮುಂದೆ ಆ ಹುಡುಗಿ ಹೀಗೆ ಹೇಳಿದ್ದೇಕೆ?
'ನಿಮಗೆ ಧೈರ್ಯವಿಲ್ಲದಿದ್ದರೆ, ನೀವು ನನ್ನನ್ನು ಏಕೆ ಹೆತ್ತಿದ್ದೀರಿ?' ಎಲ್ಲರ ಮುಂದೆ ಹುಡುಗಿ ತನ್ನ ಹೆತ್ತವರಿಗೆ ಹೀಗೆ ಕೇಳಿರುವುದು, ಮಕ್ಕಳು ತಮ್ಮ ಹೆತ್ತವರನ್ನು ಪ್ರಶ್ನಿಸುವ ಇಂತಹ ಅನೇಕ ಪ್ರಕರಣಗಳು ನಮಗೆ ಕಾಣಸಿಗುತ್ತವೆ ಎಂದು ಹೇಳಿರುವ ಪರೀಕ್ಷಿತ್ ಜೋಬನ್‌ಪುತ್ರ, ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಖರೀದಿಸಿ ಕೊಡುವಂತೆ ಒತ್ತಾಯಿಸುತ್ತಿದ್ದ ಕಾರಣ ಹುಡುಗಿ ತನ್ನ ಹೆತ್ತವರಿಗೆ ಹೀಗೆ ಹೇಳಿದ್ದಾಳೆ ಎಂದು ತಿಳಿಸಿದರು. ಯಾವಾಗ ಪೋಷಕರು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದರೋ ಆಗ ಬಾಲಕಿ ಕೋಪದಿಂದ ಮಾತನಾಡಿದ್ದು, ಇದನ್ನು ಕೇಳಿ ಪೋಷಕರು ಶಾಕ್ ಆಗಿದ್ದಾರೆ.
ಸಮಾಲೋಚನೆಗಾಗಿ ಕರೆತಂದ ಪೋಷಕರು
ಪೋಷಕರು ತಮ್ಮ ಮಗಳನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಪರಿಸ್ಥಿತಿ ಸುಧಾರಿಸದಿದ್ದಾಗ, ಅವರು ಸಮಾಲೋಚನೆಗಾಗಿ ನನ್ನ ಬಳಿಗೆ ಬಂದರು ಎಂದು ಪರೀಕ್ಷಿತ್ ಹೇಳುತ್ತಾರೆ. ಸಂಭಾಷಣೆಯ ಸಮಯದಲ್ಲಿ, ಅವರು ತಮ್ಮ ಮಗಳನ್ನು ತುಂಬಾ ದುಬಾರಿ ಶಾಲೆಗೆ ಸೇರಿಸಿದ್ದಾರೆಂದು ತಿಳಿದುಬಂದಿದೆ. ಇದು ಏನನ್ನು ತಿಳಿಸುತ್ತದೆ ಎಂದು ಈಗ ಅರ್ಥಮಾಡಿಕೊಳ್ಳೋಣ.
ಶಾಲಾ ಶುಲ್ಕಕ್ಕೆ ಹೆಚ್ಚು ಹಣ ಖರ್ಚು ಮಾಡ್ಬೇಡಿ
ಪರೀಕ್ಷಿತ್ ಜೋಬನ್‌ಪುತ್ರ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಪೋಷಕರು ತಮ್ಮ ಬಜೆಟ್‌ನ ಗರಿಷ್ಠ 70% ಅನ್ನು ತಮ್ಮ ಮಗುವಿನ ಶಾಲಾ ಶುಲ್ಕಕ್ಕಾಗಿ ಖರ್ಚು ಮಾಡಬೇಕು ಎಂದು ಹೇಳಿದ್ದಾರೆ . ಇದನ್ನು ಏಕೆ ಮಾಡಬೇಕೆಂದು ಎಲ್ಲಾ ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
ಕಡಿಮೆ ಶುಲ್ಕವಿರುವ ಶಾಲೆ ಆರಿಸಿ
ಒಬ್ಬ ಪೋಷಕರ ಶಾಲಾ ಶುಲ್ಕದ ಬಜೆಟ್ 10,000 ರೂಪಾಯಿಗಳಾಗಿದ್ದರೆ, ಅವರು ತಮ್ಮ ಮಗುವನ್ನು 7,000 ರೂಪಾಯಿಗಳ ಶಾಲೆಗೆ ಸೇರಿಸಿದರೆ, ಅಂತಹ ಪರಿಸ್ಥಿತಿಯಲ್ಲಿ, ಮಗುವು ಆ ವಾತಾವರಣದಲ್ಲಿ ಹಾಯಾಗಿರುತ್ತದೆ ಮತ್ತು ತನ್ನ ಮತ್ತು ತನ್ನ ಹೆತ್ತವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಪರೀಕ್ಷಿತ್ ಹೇಳುತ್ತಾರೆ.
ಕೀಳರಿಮೆ ಅನುಭವಿಸಬೇಕಾಗುತ್ತೆ
ಕೊನೆಗೆ ಪರೀಕ್ಷಿತ್ ಹೇಳುವುದೇನೆಂದರೆ, ನಿಮ್ಮ ಮಗುವಿಗೆ 1 ಲಕ್ಷ ರೂಪಾಯಿ ಶುಲ್ಕವಿರುವ ಶಾಲೆಗೆ ಸೇರಿಸಿದರೆ, ಅಲ್ಲಿನ ವಾತಾವರಣ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹವಾನಿಯಂತ್ರಿತ ಶಾಲೆಗಳಲ್ಲಿ ಓದುತ್ತಿರುವ ಅನೇಕ ಮಕ್ಕಳು ತಮ್ಮ ಹೆತ್ತವರನ್ನು 'ದೇಸಿ' ಎಂದು ಪರಿಗಣಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಮಕ್ಕಳು ತನ್ನ ಸ್ನೇಹಿತನ ತಂದೆ ದುಬಾರಿ ಕಾರುಗಳಲ್ಲಿ ಬರುವುದನ್ನು ನೋಡುತ್ತಾರೆ. ಇವರಲ್ಲಿ ಕೆಲವರು BMW ನಲ್ಲಿ ಮತ್ತು ಕೆಲವರು ಮರ್ಸಿಡಿಸ್ ನಲ್ಲಿ ಬರುತ್ತಾರೆ. ಆಗ ಮಕ್ಕಳು ಕೀಳಾಗಿ ಭಾವಿಸಲು ಪ್ರಾರಂಭಿಸುತ್ತಾನೆ. ಈ ಹೋಲಿಕೆ ಕ್ರಮೇಣ ಕೋಪ ಮತ್ತು ಕಹಿಯಾಗಿ ಬದಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ Instagram ವಿಡಿಯೋ ಆಧರಿಸಿದೆ.