ನೀವೀಗ ಆಗಲೇ ಮದುವೆಯಾಗಿದ್ದರೆ ಅಥವಾ ಮದುವೆಯಾಗಬೇಕೆಂದಿದ್ದರೆ ನಿಮಗೂ ಈ ಪೋಸ್ಟ್‌ನಲ್ಲಿರುವ ವ್ಯಕ್ತಿಯ ಅನಿಸಿಕೆ ಸರಿ ಎನಿಸಬಹುದಾ ನೋಡಿ...?

Redditನಲ್ಲಿ ಪ್ರಕಟವಾದ ಈ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ವಿವಾಹದ ನಂತರ ಅವರಿಗಾದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ವಿವಾಹವಾದ ನಂತರ ಜೀವನ ಹೀಗೂ ಇರಬಹುದು ಅನ್ನೋದನ್ನ ಮದುವೆಯಾದ, ಮದುವೆಯಾಗಲಿರುವ ಎಲ್ಲರಿಗೂ ತಿಳಿಸಿದ್ದು, ಸದ್ಯ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಡಿಮ್ಯಾಂಡ್ ಕೂಡ ಕ್ರೀಯೆಟ್ ಆಗಿದೆ. ನೀವೀಗ ಆಗಲೇ ಮದುವೆಯಾಗಿದ್ದರೆ ಅಥವಾ ಮದುವೆಯಾಗಬೇಕೆಂದಿದ್ದರೆ ನಿಮಗೂ ಈ ಪೋಸ್ಟ್‌ನಲ್ಲಿರುವ ವ್ಯಕ್ತಿಯ ಅನಿಸಿಕೆ ಸರಿ ಎನಿಸಬಹುದಾ ನೋಡಿ...?

"ನನಗೆ ಮತ್ತು ನನ್ನ ಹೆಂಡತಿಗೆ 30 ವರ್ಷ. 10 ವರ್ಷ ಲವ್ ಮಾಡಿ ಪರಸ್ಪರ ಅರ್ಥ ಮಾಡಿಕೊಂಡ ನಂತರ ಮದುವೆಯಾದೆವು. ಮದುವೆಯಾಗಿ 3 ವರ್ಷವಾಯ್ತು. ಇಬ್ಬರೂ ಸಂತೋಷವಾಗಿದ್ದೆವು. ಮದುವೆಯಾದ ಮೇಲೆ ಎಲ್ಲವೂ ಬದಲಾಯ್ತು. ಆದರೆ ನಾನೀಗ ಹೇಳಲು ಹೊರಟಿರುವುದು ಇಷ್ಟೇ... "ಇತ್ತೀಚೆಗೆ ಮದುವೆಯಾದ, ಮದುವೆಯಾಗಲಿರುವ ಎಲ್ಲರೂ "ನೀವು ನಿಮ್ಮ ಹೆತ್ತವರ ಮನೆಯಿಂದ ಹೊರಗೆ ಹೋಗಿ".

ಈ ಮಾತನ್ನು ಕೇಳಿ ನಿಮಗೆ ಏನಿದು ಹೀಗೆ ಹೇಳುತ್ತಿದ್ದಾನೆ ಎಂದನಿಸಬಹುದು. ಕೆಟ್ಟದ್ದಾಗಿಯೂ ಕಾಣಿಸಬಹುದು. ಆದರೆ ಕ್ರೂರ ಸತ್ಯವೆಂದರೆ ಪ್ರತಿಯೊಬ್ಬ ಭಾರತೀಯ ಪೋಷಕರು ಅದು ಗಂಡನ ಕಡೆಯವರಾಗಿರಬಹುದು ಅಥವಾ ಹೆಂಡತಿಯ ಕಡೆಯವರಾಗಿರಬಹುದು ಅವರು ಟಾಕ್ಸಿಕ್.

ನೀವು ಆರಂಭದಲ್ಲಿ ಇದನ್ನು ಗಮನಿಸುವುದಿಲ್ಲ. ಆದರೆ ಸಮಯ ಕಳೆದಂತೆ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅವು ನಿಮ್ಮನ್ನು ನೀವು ಕೆಟ್ಟ ವ್ಯಕ್ತಿ ಎಂದು ಭಾವಿಸುವ ಮಟ್ಟಿಗೆ ನಿಮ್ಮನ್ನು ಅಪರಾಧಿ ಪ್ರಜ್ಞೆ ಕಾಡುವಂತೆ ಮಾಡುತ್ತವೆ.

ಇಂದಿನ ಕಾಲದಲ್ಲಿ ವಿಚ್ಛೇದನಕ್ಕೆ ದೊಡ್ಡ ಕಾರಣವೆಂದರೆ ವ್ಯಭಿಚಾರ. ನಂತರ ಅತ್ತೆ-ಮಾವಂದಿರು. ದಂಪತಿಗಳು ಸಂತೋಷದ ದಾಂಪತ್ಯವನ್ನು ನಡೆಸುತ್ತಿದ್ದರೂ ಅವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಮನೆ ಮತ್ತು ಮಗನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ನೀವು ಇದನ್ನು ಬೇಗನೆ ಅರಿತುಕೊಂಡರೆ ಇದು ನಿಮ್ಮ ದಾಂಪತ್ಯವನ್ನು ಉಳಿಸುತ್ತದೆ. ಇದು ಪುರುಷರಿಗೆ ನನ್ನ ಕಡೆಯಿಂದ ಕಿವಿ ಮಾತು. ಇನ್ನು ಎಲ್ಲಾ ಮಹಿಳೆಯರಿಗೆ ಹೇಳ ಬಯಸುವುದೇನೆಂದರೆ ಸ್ನೇಹಿತರು, ಕುಟುಂಬ ಅಥವಾ ಯಾರಿಂದಲೂ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಡಿ. ಆ ಮನೆಯಿಂದ ಹೊರಗೆ ಹೋಗಿ.

ಪುರುಷರಿಗಾಗಿ…
ನಿಮ್ಮ ಹೆಂಡತಿಯ ದೃಷ್ಟಿಕೋನದಿಂದ ಯೋಚಿಸಲು ಪ್ರಾರಂಭಿಸಿ. ಅವಳು ತನ್ನ ಮನೆ, ವೃತ್ತಿಯನ್ನು ತೊರೆದು ಬಂದಿರುತ್ತಾಳೆ. ನಿಮ್ಮ ಜೀವನದಲ್ಲಿ ಪ್ರವೇಶಿಸಿದಾಗ ನಿಮಗಾಗಿ ತನ್ನ ಹೆಸರನ್ನು ಸಹ ಬದಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ನಂಬಿರುತ್ತಾಳೆ. ಅವಳು ನಂಬುವ ಏಕೈಕ ವ್ಯಕ್ತಿ ಮತ್ತು ಸಪೋರ್ಟಿಂಗ್ ಸಿಸ್ಟಮ್ ಎಂದರೆ ಅದು ಗಂಡ, ಹಾಗಾಗಿ ಅವಳನ್ನು ಕೆಣಕಬೇಡಿ, ಅಭಿಪ್ರಾಯವನ್ನು ಗೌರವಿಸಿ.

ಮಹಿಳೆಯರಿಗಾಗಿ…
ಸಾಮಾಜಿಕ ಮಾಧ್ಯಮದಲ್ಲಿ ಹುಸಿ ಸ್ತ್ರೀವಾದಿಗಳನ್ನು ಮತ್ತು ಅವರ ಮಾತುಗಳನ್ನು ಅನುಸರಿಸುವುದನ್ನು ನಿಲ್ಲಿಸಿ. ಅವರು ಎಂದಿಗೂ ಸಮಾನತೆ ಮತ್ತು ಸಮಾನ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಕೇವಲ ಪುರುಷರನ್ನು ನಿಂದಿಸುವುದು ಮತ್ತು ಪುರುಷರನ್ನು ಖಳನಾಯಕರಾಗಿ ಮಾಡುವುದು. ಆದ್ದರಿಂದ ಪುರುಷರಿಗೆ ಅವರದೇ ಆದ ಜಾಗವನ್ನು ನೀಡಿ, ನಿಮ್ಮ ಪತಿ ಅವರ ತಲೆಯ ಮೇಲೆ ಮನೆಯ ದೊಡ್ಡ ಹೊರೆಯನ್ನು ಹೊತ್ತಿದ್ದಾರೆ. ಅದನ್ನು ಅವರು ಹಂಚಿಕೊಳ್ಳಬಹುದು ಅಥವಾ ಹಂಚಿಕೊಳ್ಳದೇ ಇರಬಹುದು. ಅವರನ್ನು ಗೌರವಿಸಿ.

ನೀವಿಬ್ಬರೂ ಪರಸ್ಪರ ಆತ್ಮೀಯರು. ಮದುವೆ ಅತ್ಯಂತ ಮುಖ್ಯವಾದ ವಿಷಯ. ಮದುವೆ ಎಂದಿಗೂ 50-50 ಅಲ್ಲ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅದರ 100% ಜವಬ್ದಾರಿ ನಿಮ್ಮ ಸಂಗಾತಿಯ ಮೇಲೆ ಬೀಳುವುದು. ಅದನ್ನು ಗೌರವಿಸಿ. ಇಬ್ಬರೂ ಗಳಿಸುತ್ತಿದ್ದರೆ ನಿಮ್ಮ ಉಳಿತಾಯ ಮತ್ತು ವೈಯಕ್ತಿಕ ವೆಚ್ಚಗಳಿಗೆ ಕೊಡುಗೆ ನೀಡಲು ಸಮಾನವಾಗಿ ಜವಾಬ್ದಾರರಾಗಿರುತ್ತೀರಿ.

ಒಬ್ಬರು ಸಂಪಾದಿಸುತ್ತಿದ್ದರೆ ಮತ್ತು ಇನ್ನೊಬ್ಬರು ನಿರುದ್ಯೋಗಿಯಾಗಿದ್ದರೆ ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣುವ ಹಕ್ಕು ನಿಮಗಿಲ್ಲ. ಹೆಣ್ಮಕ್ಕಳು ಗೃಹಿಣಿಯಾಗಲು ಆಯ್ಕೆ ಮಾಡಿಕೊಂಡಿದ್ದರೆ ಅವರ ನಿರ್ಧಾರವನ್ನು ಗೌರವಿಸಿ. ಗಂಡ ನಿರುದ್ಯೋಗಿಯಾಗಿದ್ದರೆ ವಿಡಿಯೋ ಗೇಮ್‌ಗಳನ್ನು ಆಡಿ ಅಥವಾ ನೆಟ್‌ಫ್ಲಿಕ್ಸ್ ಅಥವಾ ನಿಮಗೆ ಬೇಕಾದುದನ್ನು ನೋಡಿ. ಆದರೆ ನಿಮ್ಮ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಿಮಗಿದೆ. ಅಡುಗೆ ಮಾಡಲು ಕಲಿಯಿರಿ, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಕಲಿಯಿರಿ. ನೀವು ಪರಿಪೂರ್ಣರಾಗಿರಬೇಕಾಗಿಲ್ಲ. ಆದರೆ ಪ್ರಯತ್ನ ಮುಖ್ಯ ಮತ್ತು ನಿಮ್ಮ ಹೆಂಡತಿ ನಿಮ್ಮನ್ನು ಗೌರವಿಸುತ್ತಾಳೆ. ಎಲ್ಲವೂ ಹೆಂಡತಿಯ ಜವಾಬ್ದಾರಿಯಲ್ಲ. ಗೃಹಿಣಿಯಾಗಿರುವ ನಿಮ್ಮ ತಾಯಿ ಮತ್ತು ಇತರ ಮಹಿಳೆಯರನ್ನು ನೀವು ಅರ್ಥಮಾಡಿಕೊಂಡು ಗೌರವಿಸಿ.

ನೀವಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು ಅದು...1) ನಿಮ್ಮ ಪೋಷಕರಿಂದ 2) ಸಮುದಾಯದಿಂದ 3) ಸಂಬಂಧಿಕರಿಂದ 4) ನೆರೆಹೊರೆಯವರಿಂದ.

ನಿಮ್ಮ ಪೋಷಕರು ಕೊನೆಗೊಂದು ದಿನ ಸಾಯುತ್ತಾರೆ. ಆದರೆ ಕೊನೆಯಲ್ಲಿ ನೀವಿಬ್ಬರೂ ಒಟ್ಟಿಗೆ ಬದುಕಬೇಕಾಗುತ್ತದೆ.

ಮದುವೆಯ ನಂತರ ಪರಸ್ಪರರ ಇಷ್ಟಾನಿಷ್ಟಗಳನ್ನು, ಭಾವನೆಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಿ. ಒಟ್ಟಿಗೆ ದಾರಿಯಲ್ಲಿ ಸಾಗಿ. ಇದೆಲ್ಲಕ್ಕೂ ಸಿದ್ಧವಾದ ನಂತರ ಮಗುವನ್ನು ಯೋಜಿಸಿ. ಮದುವೆಯಾದ ನಂತರ ಹೆಚ್ಚಿನ ದಂಪತಿಗಳು ಒಂದು ವರ್ಷದೊಳಗೆ ಪೋಷಕರಾಗುತ್ತಾರೆ. ಹೀಗೆ ವಿವಾಹೇತರ ಸಂಬಂಧಗಳು, ವಿಚ್ಛೇದನದ ಕಥೆ ಪ್ರಾರಂಭವಾಗುತ್ತದೆ. ಮದುವೆ ಒಂದು ಮಾನಸಿಕ ಆಟ. ನಿಮ್ಮ ಮನೋವಿಜ್ಞಾನ ಬಲವಾಗಿದ್ದಷ್ಟೂ, ನಿಮ್ಮ ದಾಂಪತ್ಯ ಸಂತೋಷದಿಂದ ಕೂಡಿರುತ್ತದೆ. 

ಪುರುಷರೇ...ಮದುವೆಯ ನಂತರ ನಿಮ್ಮ ಹೆಂಡತಿ ಆಕರ್ಷಕವಾಗಿ ಕಾಣದಿರಬಹುದು. ತೂಕ ಹೆಚ್ಚಾಗಬಹುದು. ವೃದ್ಧಾಪ್ಯದ ಲಕ್ಷಣಗಳು ಕಾಣಬಹುದು. ಆದರೆ ಆಕೆ ನಿಮ್ಮ ಆಧಾರಸ್ತಂಭ..ನಿಮಗೇನೂ ಇಲ್ಲದಿದ್ದಾಗ ಅವಳು ನಿಮಗಾಗಿ ಇದ್ದಳು. ಹೆಚ್ಚಿನ ಮಹಿಳೆಯರು ಪಿಸಿಓಎಸ್, ಪಿಸಿಒಡಿಗಳಿಂದ ಬಳಲುತ್ತಿದ್ದಾರೆ. ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು ಮತ್ತು ಇನ್ನೂ ಅನೇಕ. ನೀವು ಇತರ ಮಹಿಳೆಯರ ಕಡೆಗೆ ಆಕರ್ಷಿತರಾಗಬಹುದು. ಅಲ್ಲಿಯೇ ನಿಮ್ಮ ನಿಷ್ಠೆ ಮತ್ತು ಮದುವೆಯನ್ನು ಪರೀಕ್ಷಿಸಲಾಗುತ್ತದೆ. ಮದುವೆಯ ಬಗ್ಗೆ ವಾಸ್ತವವನ್ನು ಸ್ವೀಕರಿಸಿ, ಪರಸ್ಪರರನ್ನು ಬೆಂಬಲಿಸಿ ಮತ್ತು ಸಂತೋಷದ ದಾಂಪತ್ಯ ಜೀವನವನ್ನು ನಡೆಸಿ. ಭಗವಾನ್ ರಾಮನನ್ನು ಪರಿಪೂರ್ಣ ಪತಿ ಎಂದು ಕರೆಯಲು ಸಹ ಒಂದು ಕಾರಣವಿದೆ.

ಮಹಿಳೆಯರೇ...ನಾವು ಪುರುಷರು ಮಾನಸಿಕವಾಗಿ ಗೊಂದಲದಲ್ಲಿರುತ್ತೇವೆ. ಆದರೆ ಅದನ್ನು ಹೆಚ್ಚಿನ ಸಮಯ ತೋರಿಸುವುದಿಲ್ಲ. ಏಕೆಂದರೆ ನಾವು ಬಾಲ್ಯದಿಂದಲೂ ಹಾಗೆ ನಿಯಮಾಧೀನರಾಗಿದ್ದೇವೆ. ನಮಗೆ ಭುಜವಾಗಿರಿ. ಇನ್ನೊಬ್ಬ ವ್ಯಕ್ತಿಯ ಗಮನ ಸೆಳೆಯುವುದು ನಿಮಗೆ ಮಗುವಿನ ಆಟವಾಗಬಹುದು. ಬಹುಶಃ ನಿಮ್ಮ ಪತಿ ಹಾಸಿಗೆಯಲ್ಲಿ ಒಳ್ಳೆಯವನಾಗದೆ ಇರಬಹುದು. ನೀವು ಭಾವಿಸಿದ್ದನ್ನು ಪೂರೈಸಲೂ ಆಗದಿರಬಹುದು. ಬೋಳು, ದಪ್ಪ, ಹೂಸು ಮತ್ತು ಇತರ ಹಲವು ಸಮಸ್ಯೆಗಳಿರಬಹುದು. ಆದರೆ ಕೊನೆಯಲ್ಲಿ ಅವರು ನಿಮ್ಮ ಪತಿ. ಅವರು ಪರಿಪೂರ್ಣರಲ್ಲ. ಆದರೆ ನಿಮಗೆ ಮತ್ತು ಮಗುವಿಗೆ ಉತ್ತಮ ಜೀವನವನ್ನು ಕೊಡಲು ತನ್ನ ಜೀವನವನ್ನೇ ಮುಡಿಪಿಟ್ಟಿರುತ್ತಾರೆ. ಆದ್ದರಿಂದ ಅವರನ್ನು ಗೌರವಿಸಿ. ನಿಮ್ಮ ಅಗತ್ಯತೆಗಳು ಮತ್ತು ಆಸೆಗಳನ್ನು ತಿಳಿಸಿ. ನಿಮ್ಮ ಭೌತಿಕ ಬಯಕೆಗಳನ್ನು ಮಿತಿಗೊಳಿಸಿ. ನೀವು ಒಳಗೆ ಏನು ಅನುಭವಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಟೆಲಿಪತಿ ಕೌಶಲ್ಯಗಳನ್ನು ಊಹಿಸಲು ಅಥವಾ ಹೊಂದಲು ಸಾಧ್ಯವಿಲ್ಲ.

ಪ್ರತಿಯೊಬ್ಬರೂ ಬಹಳಷ್ಟು ಸಂತೋಷದ ನೆನಪುಗಳೊಂದಿಗೆ ದಾಂಪತ್ಯ ಜೀವನವನ್ನು ನಡೆಸುತ್ತಾರೆ ಅಥವಾ ನಡೆಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ".