ಕನ್ಯತ್ವ ಪರೀಕ್ಷೆ ಕ್ರೂರ ಪರೀಕ್ಷೆಯಿಂದ ನಲುಗಿದ ಸೋದರಿಯರ ಹೋರಾಟದ ಹಾದಿ
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ಯಾಪೊರೆ ಪರೀಕ್ಷೆಯ ಕ್ರೂರ ಪದ್ಧತಿಗೆ ನಲುಗಿದ ಇಬ್ಬರು ಸೋದರಿಯರ ಹೋರಾಟದ ಕತೆ ಇಲ್ಲಿದೆ.
ಇದು ಇಬ್ಬರು ದಿಟ್ಟ ಸಹೋದರಿಯರ ಕತೆ. ಕನ್ಯತ್ವ ಪರೀಕ್ಷೆ ಎಂಬ ಅನಾಗರಿಕ ಪದ್ಧತಿಯನ್ನು ವಿರೋಧಿಸಿ ನಿಂತ ಈ ಸೋದರಿಯರು ಈಗ ಮಹಾರಾಷ್ಟ್ರದಲ್ಲಿ ಸುದ್ದಿಯಾಗಿದ್ದಾರೆ.
ಮಹಾರಾಷ್ಟ್ರದ ಕೆಲವೆಡೆಗಳಲ್ಲಿ ಒಂದು ವಿಚಿತ್ರ ಪದ್ಧತಿಯಿದೆ. ಇದು ಭಾರತದ ನಾನಾ ಕಡೆಗಳಲ್ಲಿ ಮೊದಲೂ ಇತ್ತು. ಈಗಲೂ ಅನೇಕ ಕಡೆ ಇದೆ. ಮಹಾರಾಷ್ಟ್ರದ ದಕ್ಷಿಣ ಕೊಲ್ಹಾಪುರದ ಒಂದು ಕಡೆ ಕಂಜರ್‌ಭಾಟ್ ಎಂಬ ಒಂದು ಸಮುದಾಯದಲ್ಲಿ, ಮದುವೆಯಾದ ಮೊದಲ ರಾತ್ರಿ ವಧುವಿನ ಕನ್ಯತ್ವ ಪರೀಕ್ಷಿಸುವ ಈ ಪದ್ಧತಿಯಿದೆ. ಆ ರಾತ್ರಿ ವಧು- ವರರು ಮಲಗುವ ಹಾಸಿಗೆಗೆ ಬಿಳೀ ಬಟ್ಟೆಯನ್ನು ಹಾಸುತ್ತಾರೆ. ಮರುದಿನ ಅದನ್ನು ಪರೀಕ್ಷಿಸುತ್ತಾರೆ. ಆ ಬಟ್ಟೆಯಲ್ಲಿ ರಕ್ತದ ಕಲೆಗಳಿದ್ದರೆ ವಧು ಕನ್ಯತ್ವವನ್ನು ಆ ರಾತ್ರಿಯೇ ಕಳೆದುಕೊಂಡಿದ್ದಾಳೆ, ಅಂದರೆ ಅದುವರೆಗೆ ಆಕೆ ಕನ್ಯೆಯಾಗಿಯೇ ಇದ್ದಳು ಎಂಬುದು ಇವರ ಲೆಕ್ಕಾಚಾರ.
ಕನ್ಯತ್ವ ಪರೀಕ್ಷೆಯಲ್ಲಿ ಫೇಲ್: ತವರಿಗೆ ಮರಳಿದ ಸಹೋದರಿಯರು
ಮೇಘಾ ಗುಮಾನೆ ಹಾಗೂ ಸಂಜನಾ ಗುಮಾನೆ ಎಂಬ ಇಬ್ಬರು ಸಹೋದರಿಯರ ಪಾಲಿಗೆ ಮಾತ್ರ ಈ ಪದ್ಧತಿ ದುರಂತವೇ ಆಗಿಹೋಯಿತು. ಇವರಿಬ್ಬರಿಗೂ ಆರು ತಿಂಗಳ ಹಿಂದೆ ಮದುವೆಯಾಯಿತು. ಪಕ್ಕದ ಹಳ್ಳಿಯ ಇಬ್ಬರು ಸೋದರರೊಂದಿಗೆ ಅವರ ಮದುವೆ ಕಳೆದ ವರ್ಷ ನವೆಂಬರ್‌ನಲ್ಲಿ ನಡೆಯಿತು. ಮೇಘಾ, ಲ್ಯಾನ್ಸ್ ಹವಾಲ್ದಾರ್ ಸಂದೀಪ್ ಕಂಜರ್‌ಭಾಟ್ ಎಂಬಾತನ್ನು ಮದುವೆಯಾದಳು; ಆಕೆಯ ತಂಗಿ ಸಂಜನಾ, ಸಂದೀಪ್‌ನ ಸಹೋದರ ಸುರ್ಮಿತ್‌ನನ್ನು ಮದುವೆಯಾದಳು. ಆದರೆ ಮದುವೆ ಒಂದು ದಿನವೂ ಉಳಿಯಲಿಲ್ಲ. ಕಾರಣ ಇದೇ ಪದ್ಧತಿ.
ಮದುವೆಯ ರಾತ್ರಿ ಇವರಿಬ್ಬರಿಗೂ ಇದೇ ಪದ್ಧತಿ ಅನುಸರಿಸಲಾಯಿತು. ಮರುದಿನ, ಮೇಘಾ ಮತ್ತು ಗಂಡ ಮಲಗಿದ್ದ ಬಿಳಿಯ ಬಟ್ಟೆಯಲ್ಲಿ ಯಾವುದೇ ರಕ್ತದ ಕಲೆ ಇರಲಿಲ್ಲ. ಇದರಿಂದಾಗಿ, ಮೇಘಾ, ಅಪವಿತ್ರೆ ಎಂದು ಕಂಜರ್‌ಭಾಟ್ ಸಮುದಾಯದ ಸರಪಂಚರು ತೀರ್ಮಾನಿಸಿದರು. ಅಕ್ಕ ಮೇಘಾ ಕಳಂಕಿತೆಯಾದ್ದರಿಂದ ತಂಗಿ ಸಂಜನಾಗೂ ಶಿಕ್ಷೆಯ ಝಳ ತಗುಲಿತು. ಶಿಕ್ಷೆ ಏನು ಗೊತ್ತೆ? ಮನೆಯಿಂದ ಇಬ್ಬರನ್ನೂ ಹೊರಹಾಕಲಾಯಿತು. ಸಮುದಾಯದಲ್ಲಿ ಯಾರೂ ಇವರ ಮನೆಗೆ ಹೆಣ್ಣು ಕೊಡುವುದಾಗಲೀ ಹೆಣ್ಣು ತರುವುದಾಗಲೀ ನಿಷೇಧಿಸಲ್ಪಟ್ಟಿತು.
ಕನ್ಯತ್ವ ಪರೀಕ್ಷೆ ಎಂಬ ದುಷ್ಟ ಪದ್ಧತಿ
ಯಾವ ತಪ್ಪನ್ನೂ ಮಾಡಿರದ ಈ ಹೆಣ್ಣುಮಕ್ಕಳಿಗೆ ಅವರ ತಾಯಿಗೂ ಬಂಡೆ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಇವರ ತಾಯಿಯಂತೂ ಸರಪಂಚರ ಬಳಿಗೆ ಹೋಗಿ ಬೇಡಿದರು, ದಮ್ಮಯ್ಯಗುಡ್ಡೆ ಹಾಕಿದರು. ಆದರೆ ಪಂಚರು ಕಠೋರವಾಗಿದ್ದರು. ವಿಶೇಷ ಪಂಚಾಯಿತಿ ಸೇರಿಸಿ, ಕಡ್ಡಿ ತುಂಡು ಮಾಡಿ, ಇಬ್ಬರ ದಾಂಪತ್ಯವನ್ನೂ ಮುರಿದು ಹಾಕಲಾಯಿತು.
ಒಂದೆರಡು ತಿಂಗಳು ಸಂಸಾರ ಮತ್ತೆ ಒಂದಾಗಬಹುದು ಎನ್ನುವ ಯೋಚನೆಯಲ್ಲಿದ್ದ ಸೋದರಿಯರು, ದಿನ ಕಳೆದಂತೆ ಮನಸ್ಸು ಕಲ್ಲು ಮಾಡಿಕೊಂಡರು. ಇನ್ನು ತಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದು ಅವರಿಗೆ ಅರ್ಥವಾಯಿತು. ಹೀಗಾಗಿ ಅವರು ನೇರವಾಗಿ ಹೋಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಪೊಲೀಸರು ಪ್ರಕರಣ ದಾಖಲಿಸಿಕೊಂಡ ಅದೇ ದಿನ ರಾತ್ರಿ ಈ ಸೋದರಿಯರ ಮನೆಗೆ ಕಲ್ಲು ಬಿತ್ತು. ಮರುದಿನ ಪೊಲೀಸರು ಹಿರಿಯ ವರ ಸಂದೀಪ್‌ನನ್ನು ಬಂಧಿಸಿದರು.
ಪಂಚರು ಬಂದು, ಕಂಪ್ಲೇಂಟ್ ವಾಪಸು ತೆಗೆದುಕೊಳ್ಳಿ, ಇಲ್ಲವಾದರೆ ನಿಮ್ಮನ್ನು ಜಾತಿಯಿಂದಲೇ ಬಹುಷ್ಕರಿಸುವುದಾಗಿ ಬೆದರಿಸಿದರು. ಆದರೆ ಸೋದರಿಯರು ಅದಕ್ಕೆ ಸೊಪ್ಪು ಹಾಕಲಿಲ್ಲ. 'ನಾವು ಇನ್ನು ಕಳೆದುಕೊಳ್ಳುವುದು ಏನೂ ಇಲ್ಲ. ನಮ್ಮ ಹೆತ್ತವರು ತುಂಬಾ ಬಡತನದಲ್ಲಿ ನಮ್ಮನ್ನು ಬೆಳೆಸಿದ್ದಾರೆ. ಈ ಜಾತಿಯ ಕಟ್ಟಳೆಗಳು ನಮಗೆ ಏನೂ ಸಹಾಯ ಮಾಡಿಲ್ಲ. ನಾವೀಗ ಆರ್ಥಿಕವಾಗಿ ಬೆಳೆಯಬೇಕಾಗಿದೆ. ನಮ್ಮನ್ನು ಮುಜುಗರಕ್ಕೆ ಒಳಪಡಿಸಿದ, ತೇಜೋವಧೆ ಮಾಡಿದ ಇವರಿಗೆ ಶಿಕ್ಷೆ ಆಗಬೇಕು, ನಮಗೆ ನ್ಯಾಯ ಸಿಗಬೇಕು' ಎಂದು ಸೋದರಿಯರು ಪಟ್ಟು ಹಿಡಿದು ಕೂತಿದ್ದಾರೆ.
ವಿಶ್ವದೆಲ್ಲೆಡೆ ಇರೋ ವಿಚಿತ್ರ ಲೈಂಗಿಕ ಆಚರಣೆಗಳು... ಕೇಳಿದರೆ ವಿಚಿತ್ರ ಎನಿಸುತ್ತೆ ...
ಈ ನಡುವೆ, ಈ ಕಷ್ಟಗಳಿಂದ ಪಾರಾಗಿ ಸಾಧನೆ ಮಾಡುವ ಆಸೆ ಸೋದರಿಯರಿಗೆ. ಇವರಲ್ಲಿ ಕಿರಿಯ ಸಂಜನಾಗೆ ಪೊಲೀಸ್ ಅಧಿಕಾರಿ ಆಗುವ ಆಸೆ. ಹಿರಿಯ ಮೇಘಾಗೆ ಬ್ಯೂಟಿಷಿಯನ್ ಕೋರ್ಸ್ ಮಾಡಿ ಬ್ಯೂಟಿ ಪಾರ್ಲರ್ ತೆರೆಯುವ ಆಸೆ. ಇಬ್ಬರೂ ಆ ಹಾದಿಯಲ್ಲಿ ಕಷ್ಟದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಅದಕ್ಕೆ ಅನೇಕ ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು ಬೆಂಗಾವಲಾಗಿ ನಿಂತಿವೆ. ಹೀನ ಪದ್ಧತಿಯ ವಿರುದ್ಧ ಹೋರಾಡಲು ಮುಂದಾಗಿರುವ ತಮಗೆ ಇಷ್ಟೊಂದು ಬೆಂಬಲ ದೊರೆಯಬಹುದು ಎಂಬ ನಿರೀಕ್ಷೆಯೂ ಈ ಸೋದರಿಯರಿಗೆ ಇರಲಿಲ್ಲ.
ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಬೇರೆ ಬೇರೆ ಹಿಂದುಳಿದ ಸಮುದಾಯಗಳಲ್ಲಿ ಇಂಥ ಕನ್ಯತ್ವ ಪರೀಕ್ಷೆಯ ಅನಾಗರಿಕ ಪದ್ಧತಿ ನಡೆಯುತ್ತಲೇ ಇದೆ. ಇವರಲ್ಲೇ ವಿದ್ಯಾವಂತರು ಇದನ್ನು ನಿರಾಕರಿಸಿದ್ದಾರೆ. ಆದರೆ ಸುಶಿಕ್ಷಿತರಲ್ಲದವರು ಇದನ್ನು ಮುನ್ನಡೆಸಿದ್ದಾರೆ. ಅನೇಕ ಸಾಮಾಜಿಕ ಕಾರ್ಯಕರ್ತರು, ವಕೀಲರು, ಸಂಘ ಸಂಸ್ಥೆಗಳು ಇದನ್ನು ಹೋಗಲಾಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ರೆಗ್ಯುಲರ್ ಸೆಕ್ಸ್ ಮಾಡಿದ್ರೆ ಇಮ್ಯೂನಿಟಿ ಹೆಚ್ಚಾಗುತ್ತಾ? ...
ಈಗ ಸೋದರಿಯರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಮೇಘಾಳ ಗಂಡ ಸಂದೀಪ್‌ನನ್ನು ಬಂಧಿಸಲಾಗಿದೆ. ಇತರ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ. ಇವರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಸೋದರಿಯರು ಹೇಳಿದ್ದಾರೆ. 27 ವರ್ಷದ ಹಿಂದೆಯೇ ಕೃಷ್ಣ ಕಂಜರ್‌ಭಾಟ್ ಎಂಬಾತ, ತನ್ನ ಪತ್ನಿಗೆ ಇಂಥ ಕನ್ಯತ್ವ ಪರೀಕ್ಷೆ ನಡೆಸುವುದನ್ನು ವಿರೋಧಿಸಿದ್ದು, ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರು ಈ ಸೋದರಿಯರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇನ್ನೂ ಕೂಡ ಕೆಲವರಲ್ಲಿ ಕನ್ಯತ್ವ, ಕನ್ಯಾಪೊರೆಯ ಬಗ್ಗೆ ಮೂಢನಂಬಿಕೆ ಇದೆ. ಆದರೆ ತಜ್ಞರು ಹೇಳುವಂತೆ, ಸೈಕಲ್ ಹೊಡೆಯುವಂಥ ಆಟಪಾಠಗಳಿಂದಲೂ ಕನ್ಯಾಪೊರೆ ಹರಿದುಹೋಗುವ ಸಾಧ್ಯತೆ ಇದೆ. ಹೀಗಾಗಿ ಕನ್ಯಾಪೊರೆಗೆ ಮಹತ್ವ ನೀಡಬೇಕಿಲ್ಲ. ಅದು ಮಹಿಳೆಯ ಚಾರಿತ್ರ್ಯದ ಬಗ್ಗೆ ಯಾವ ವಿವರವನ್ನೂ ನೀಡಲಾರದು.
ಮೊದಲ ಬಾರಿ ಗರ್ಭಿಣಿಯಾಗ್ತಾ ಇದೀರಾ? ಇವನ್ನು ನೆನಪಿಟ್ಟುಕೊಳ್ಳಿ... ...