ಕೆಲವರನ್ನು ನೋಡಿದ ತಕ್ಷಣ ಅವರತ್ತ ಆಕರ್ಷಿತರಾಗುತ್ತೇವೆ. ಹಾಗಂತ ಆತ ಅಥವಾ ಆಕೆ ಸುರಸುಂದರಾಂಗ ಅಥವಾ ಸುಂದರಾಂಗಿಯೇನೂ ಆಗಿರಬೇಕಿಲ್ಲ. ಸಾಧಾರಣ ರೂಪದ ಅವರಲ್ಲೇನೂ ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವವಿರುತ್ತದೆ. ನೋಡಲು ಸುಂದರವಾಗಿರುವವರಿಗಿಂತಲೂ ಆಕರ್ಷಕವಾಗಿರುವವರು ಬಹುಕಾಲ ಇನ್ನೊಬ್ಬರ ಗಮನವನ್ನು ತಮ್ಮೆಡೆಗೆ ಸೆಳೆದಿಟ್ಟುಕೊಳ್ಳಬಲ್ಲರು. ಸೌಂದರ್ಯ ಎನ್ನುವುದು ದೇವರ ವರವೇ ಇರಬಹುದು,ಆದರೆ ಆಕರ್ಷಕವಾಗಿ ಕಾಣಿಸುವುದು,ಬಿಡುವುದು ನಮ್ಮ ಕೈಯಲ್ಲೇ ಇದೆ. ಅದು ಹೇಗೆ ಅಂತೀರಾ? 

ಉತ್ತಮ ಕೇಳುಗನಾಗಲು ಕಿವಿಯಿದ್ರೆ ಸಾಲದು, ಮನಸ್ಸೂ ಬೇಕು

ನಗುವೇ ಮುಖದ ಆಭರಣ: ನೀವು ಅದೆಷ್ಟೇ ದುಬಾರಿ ಬೆಲೆಯ ಸುಂದರವಾದ ಉಡುಗೆ ತೊಡಿ,ವಜ್ರ,ಬಂಗಾರದ ನೆಕ್ಲೇಸ್,ಕಿವಿಯೋಲೆ ಧರಿಸಿ. ಅಂದವನ್ನು ದುಪ್ಪಟ್ಟುಗೊಳಿಸುವ ಮೇಕಪ್ ಮಾಡಿಕೊಳ್ಳಿ. ಆದರೆ,ನಗುವೆಂಬುದು ನಿಮ್ಮ ಮುಖದಲ್ಲಿ ಇಲ್ಲದೆ ಹೋದರೆ ಇವೆಲ್ಲವೂ ವೇಸ್ಟ್. ಹೌದು,ನಗುವಿಲ್ಲದ ಮುಖ ಆಕರ್ಷಕವಾಗಿ ಕಾಣಲು ಸಾಧ್ಯವೇ ಇಲ್ಲ. ಯಾವ ಮೇಕಪ್, ಆಭರಣವಿಲ್ಲದೆಯೋ ಕೆಲವರು ಆಕರ್ಷಕವಾಗಿ ಕಾಣಿಸುತ್ತಾರೆ.ಇದಕ್ಕೆ ಕಾರಣ ಅವರ ಮುಖದ ಮೇಲಿನ ಮಂದಹಾಸ.ಹೀಗಾಗಿ ನೀವು ಅದೆಷ್ಟೇ ಸುಸ್ತಾಗಿರಿ, ಒತ್ತಡದಲ್ಲಿರಿ, ಅವೆಲ್ಲವನ್ನೂ ಬದಿಗಿಟ್ಟು ನಗುಮೊಗದೊಂದಿಗೆ ಜನರೊಂದಿಗೆ ಬೆರೆಯಲು ಪ್ರಯತ್ನಿಸಿ.ಆಫೀಸ್ ಇರಲಿ, ಸಾರ್ವಜನಿಕ ಸ್ಥಳವಿರಲಿ ನೀವು ಭೇಟಿಯಾಗುವ ಜನರತ್ತ ನಗು ಚೆಲ್ಲಲು ಮರೆಯಬೇಡಿ.

ಧಿರಿಸು ಸ್ವಚ್ಛವಾಗಿರಲಿ, ನೀಟಾಗಿರಲಿ: ನೀವು ಧರಿಸುವ ಡ್ರೆಸ್ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ.ನಿಮ್ಮ ಬಣ್ಣ, ಮನೋಧರ್ಮಕ್ಕೆ ಸೂಟ್ ಆಗುವ ಬಟ್ಟೆಗಳನ್ನೇ ಧರಿಸಿ. ಸ್ವಚ್ಛವಾಗಿರುವ ಬಟ್ಟೆಯನ್ನೇ ಧರಿಸಿ.ಡ್ರೆಸ್ ನೀಟಾಗಿರುವಂತೆ ಎಚ್ಚರ ವಹಿಸಿ.ಗಾಢ ಬಣ್ಣಗಳು ಬಹುಬೇಗ ಇತರರನ್ನು ಸೆಳೆಯುವ ಜೊತೆಗೆ ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಬಿಂಬಿಸುತ್ತವೆ.ಹಾಗಂತ ಗಾಢ ಬಣ್ಣ ಧರಿಸಿದವರು ಮಾತ್ರ ಆಕರ್ಷಕವಾಗಿ ಕಾಣುತ್ತಾರೆ ಎಂದೇನಿಲ್ಲ. ತಿಳಿ ವರ್ಣವೂ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡಬಲ್ಲದು.ಆದರೆ, ಡ್ರೆಸ್‍ಗೆ ಸಂಬಂಧಿಸಿ ಒಂದು ವಿಷಯ ನೆನಪಿನಲ್ಲಿಡಬೇಕು.ಅದೇನೆಂದರೆ ನೀವು ಧರಿಸುವ ಡ್ರೆಸ್ ನಿಮಗೆ ಕಂಫರ್ಟ್ ನೀಡಬೇಕು ಅಷ್ಟೆ. ಆ ಕಂಫರ್ಟ್‍ನೆಸ್ ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಬಿಂಬಿಸುತ್ತದೆ. ಇದು ಸಹಜವಾಗಿಯೇ ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತದೆ. 

ಹಾಸ್ಯಪ್ರಜ್ಞೆ ಮರೆಯಬೇಡಿ: ಹಾಸ್ಯ ಎಲ್ಲರನ್ನೂ ನಗಿಸುವ ಜೊತೆಗೆ ನಿಮ್ಮೆಡೆಗೆ ಸೆಳೆಯುತ್ತದೆ ಕೂಡ. ಸದಾ ಜೋಕ್ ಮಾಡಿಕೊಂಡು,ಎಲ್ಲರನ್ನು ನಕ್ಕುನಗಿಸುವ ವ್ಯಕ್ತಿ ಯಾರಿಗೆ ತಾನೇ ಪ್ರಿಯವಾಗುವುದಿಲ್ಲ ಹೇಳಿ? ವಿನೋದಮಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಸಹಜವಾಗಿ ಇತರರನ್ನು ಆಕರ್ಷಿಸುತ್ತಾರೆ.ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ತಜ್ಞರ ಪ್ರಕಾರ ಮಹಿಳೆಯರು ಸಾಮಾನ್ಯವಾಗಿ ಹಾಸ್ಯಪ್ರಜ್ಞೆಯುಳ್ಳ ಸಂಗಾತಿಯನ್ನು ಹುಡುಕುತ್ತಾರಂತೆ,ಅದೇ ಪುರುಷರು ತಮ್ಮ ಹಾಸ್ಯಚಟಾಕೆಗಳಿಗೆ ಬಾಯಿ ತುಂಬಾ ನಗುತ್ತ ಸಾಥ್ ನೀಡುವ ಸಂಗಾತಿಯನ್ನು ಬಯಸುತ್ತಾರಂತೆ. ಅದೇನೆ ಇರಲಿ, ಹಾಸ್ಯಕ್ಕೆ ಎಲ್ಲರನ್ನು ಹಗುರವಾಗಿಸುವ, ಹತ್ತಿರವಾಗಿಸುವ ಗುಣವಂತೂ ಇದ್ದೇಇದೆ. 

ಸಕ್ಸಸ್‌ ಪೀಪಲ್ ಡೋಂಟ್‌ ಕೇರ್ ಎಂದ 5 ವಿಚಾರಗಳಿವು..!

ಅಭಿಪ್ರಾಯದಲ್ಲಿ ಪ್ರಾಮಾಣಿಕತೆಯಿರಲಿ: ಯಾರನ್ನೋ ಮೆಚ್ಚಿಸಲು ಸತ್ಯವನ್ನು ಮರೆಮಾಚುವುದು,ಹೊಗಳುವುದು,ಅವರ ಎಲ್ಲ ಅಭಿಪ್ರಾಯಗಳಿಗೂ ತಲೆ ಅಲ್ಲಾಡಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವುದಿಲ್ಲ.ಬದಲಿಗೆ ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ಕಾರಣವಾಗಬಹುದು. ಆದಕಾರಣ ಇನ್ನೊಬ್ಬರ ಮುಂದೆ ಅಭಿಪ್ರಾಯ ವ್ಯಕ್ತಪಡಿಸುವಾಗ ಪ್ರಾಮಾಣಿಕರಾಗಿರಿ. ಮನಸ್ಸಿನಲ್ಲೊಂದು, ಮಾತಿನಲ್ಲಿ ಇನ್ನೊಂದು ಹೇಳಿದ್ರೆ ನಿಮ್ಮತ್ತ ಯಾರೂ ಆಕರ್ಷಿತರಾಗಲು ಸಾಧ್ಯವಿಲ್ಲ. ಅದೇ ಪ್ರಾಮಾಣಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿ ಸದಾ ಆಕರ್ಷಕವಾಗಿಯೇ ಕಾಣಿಸುತ್ತಾನೆ. 

ಕರುಣೆ ಇರಲಿ: ಆಕರ್ಷಣೀಯ ವ್ಯಕ್ತಿತ್ವ ಎನ್ನುವುದು ಶಾರೀರಿಕ ಸೌಂದರ್ಯದಲ್ಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಮ್ಮಲ್ಲಿ ಎಲ್ಲ ಉತ್ತಮ ಗುಣಗಳಿದ್ದೂ ಕರುಣೆ ಇಲ್ಲದಿದ್ದರೆ ನೀವು ಆಕರ್ಷಣೀಯ ವ್ಯಕ್ತಿತ್ವ ಹೊಂದಲು ಸಾಧ್ಯವಿಲ್ಲ. ಇನ್ನೊಬ್ಬರ ಕಷ್ಟಗಳಿಗೆ ಮರುಗುವ, ನೆರವಿನ ಹಸ್ತ ಚಾಚುವ ವ್ಯಕ್ತಿ ಎಲ್ಲರಿಗೂ ಸದಾ ಪ್ರಿಯನಾಗುವ ಜೊತೆಗೆ ಆಕರ್ಷಕವಾಗಿ ಕಾಣಿಸುತ್ತಾನೆ ಕೂಡ.