ಯಾರನ್ನಾದರೂನ್ನೇ ನಂಬಿಬಿಡ್ತೀರಾ? ನಿಮಗೆ ತುಂಬಾ ಉಪಕಾರ ಮಾಡಿದರು ಎಂದುಕೊಂಡು ಅದರ ಹಿಂದಿರುವ ಉದ್ದೇಶವನ್ನೇ ನೋಡುವುದಿಲ್ವಾ? ಈ ಬೆಕ್ಕು ಮತ್ತು ಬಾತುಕೋಳಿಯ ವಿಡಿಯೋ ನೋಡಿ ನಿರ್ಧರಿಸಿ! 

'ಅತಿ ವಿನಯಂ ಧೂರ್ತ ಲಕ್ಷಣಂ' ಎನ್ನುವ ಗಾದೆ ಮಾತು ಕೇಳಿಯೇ ಇರುತ್ತೀರಿ ಅಲ್ಲವೆ? ನಂಬಿದವರೇ ಕತ್ತು ಕೊಯ್ಯುವುದು ಹಲವು ಬಾರಿ ಹಲವರ ಗಮನಕ್ಕೆ ಬಂದಿರಲೂಬಹುದು. ಏನೋ ಆಸೆ ತೋರಿಸಿ ಯಾಮಾರಿಸುವುದು, ಯಾವುದೋ ಆಶ್ವಾಸನೆ ಕೊಟ್ಟು ಟೋಪಿ ಹಾಕುವುದು, ಅತ್ಯಂತ ವಿನಮ್ರತೆಯಿಂದ ನಡೆದುಕೊಂಡು ಹಿಂದೆ ಚೂರಿ ಹಾಕುವುದು, ಫಿಟ್ಟಿಂಗ್​ ಇಡುವುದು... ಇವೆಲ್ಲವೂ ಹಲವರ ಜೀವನದಲ್ಲಿ ಒಮ್ಮೆಯಾದರೂ ಬಂದೇ ಇರುತ್ತದೆ. ಅದು ಕಚೇರಿಯೇ ಇರಬಹುದು, ಕೆಲಸ ಮಾಡುವ ಸ್ಥಳವೇ ಇರಬಹುದು, ಸ್ನೇಹಿತರ ನಡುವೆಯೇ ಇರಬಹುದು, ಸಂಬಂಧಿಕರೇ ಆಗಿರಬಹುದು ಅಷ್ಟೇ ಏಕೆ ಮನೆಯಲ್ಲಿಯೇ ಇಂಥ ಘಟನೆಗಳೂ ಆಗಾಗ್ಗೆ ನಡೆಯುತ್ತಲೇ ಇರಬಹುದು. ಇದೇ ಕಾರಣಕ್ಕೇನೆ ಯಾರನ್ನೂ ಸುಲಭದಲ್ಲಿ ನಂಬಬೇಡಿ ಎಂದು ಹಿರಿಯರು ಆಗಾಗ್ಗೆ ಬುದ್ಧಿಮಾತು ಹೇಳುವುದು ಕೂಡ ಇದಕ್ಕೇನೆ.

ಇದನ್ನು ಹಾಗೆಯೇ ಸಾಬೀತು ಮಾಡುವುದು ಬಲುಕಷ್ಟ. ಆದರೆ, ನಂಬಿಸಿ ಮೋಸ ಮಾಡುವುದು ಎಂದರೇನು, ಸ್ನೇಹಿತರಂತೆ ವರ್ತಿಸಿ ಕತ್ತು ಕೊಯ್ಯುವುದು ಎಂದರೇನು ಎಂದು ಅತ್ಯಂತ ಮನೋಜ್ಞವಾಗಿ ಈ ಎಐ ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ನೋಡಿದರೆ ನಿಮಗೂ ಯಾರದ್ದಾದರೂ ನೆನಪು ಬಂದೇ ಬಂದಿರಬಹುದಲ್ಲವೆ? ಇಲ್ಲಿರುವ ಬೆಕ್ಕಿನ ಸ್ಥಾನದಲ್ಲಿ ನೀವು ಯಾರನ್ನೋ ಕಲ್ಪಿಸಿಕೊಂಡಿರಲಿಕ್ಕೆ ಸಾಕು, ಅಥವಾ ಈ ಬಾತುಕೋಳಿ ನೀವೇ ಎನ್ನಿಸಿರಲಿಕ್ಕೂ ಸಾಕು. ಇಂಥದ್ದೊಂದು ಕುತೂಹಲದ ವಿಡಿಯೋ ಇದಾಗಿದೆ.

ಇದರಲ್ಲಿ, ಅಪಘಾತಕ್ಕೆ ಒಳಗಾದ ಬಾತುಕೋಳಿಯನ್ನು ಆ್ಯಕ್ಸಿಡೆಂಟ್​ ಮಾಡಿದ ಕಾರಿನವ ಹಾಗೆಯೇ ಹೊರಟುಹೋಗುತ್ತಾನೆ. ಅಲ್ಲಿ ಬೈಕ್​ನಲ್ಲಿ ಬರುವವನೇ ಪ್ರಾಣ ಕಾಪಾಡುವ ಆಗಂತುಕ! ಬೆಕ್ಕು ಅಲ್ಲಿಗೆ ಬಂದು ಅಪಘಾತಕ್ಕೀಡಾದ ಬಾತುಕೋಳಿಯನ್ನು ತಲೆಯ ಮೇಲೆ ಕುಳ್ಳರಿಸಿಕೊಂಡು ಹೋಗುತ್ತದೆ. ಆ ಬಳಿಕ ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ, ಫಸ್ಟ್​ ಏಡ್​ ಮಾಡಿ, ಸ್ನಾನ ಮಾಡಿಸಿ ಅದನ್ನು ಗುಣಪಡಿಸುತ್ತದೆ. ಅದರ ಜೊತೆ ಬೆಕ್ಕು ಭರ್ಜರಿ ಪಾರ್ಟಿಯನ್ನೂ ಮಾಡುತ್ತದೆ. ಅಬ್ಬಾ ಎಷ್ಟು ಒಳ್ಳೆಯ ಫ್ರೆಂಡ್​ ಸಿಕ್ಕನಲ್ಲ ಎಂದು ಬಾತುಕೋಳಿಗೆ ಖುಷಿಯೋ ಖುಷಿ. ನನ್ನ ಜೀವನದಲ್ಲಿ ಇಂಥವರನ್ನು ಕಂಡೇ ಇಲ್ಲ, ಇಂಥವರೂ ಇರ್ತಾರಾ, ಎಷ್ಟು ಒಳ್ಳೆಯವ ಎಂದೆಲ್ಲಾ ಮನಸ್ಸಿನಲ್ಲಿಯೇ ಆ ಹೊಸ ಗೆಳೆಯನ ನೆನೆದು ಖುಷಿಪಡುತ್ತದೆ.

ಆದರೆ ಕೊನೆಗೆ ಆಗುವುದೇ ಬೇರೆ. ಕುರಿಯನ್ನು ಕಡಿಯುವ ಮುನ್ನ ಅದನ್ನು ಕೊಬ್ಬಿಸಿದಂತೆ, ಬಾತುಕೋಳಿಗೆ ಎಲ್ಲವನ್ನೂ ಕೊಟ್ಟ ಬೆಕ್ಕು ನಂತರ ಅದನ್ನು ಕತ್ತರಿಸಿ ಬೇಯಿಸಿ ತಿಂದುಮುಗಿಸುತ್ತದೆ. ಈ ಎಐ ವಿಡಿಯೋ ಅದೆಂಥ ಪ್ರಭಾವ ಬೀರಿದೆ ಎಂದರೆ ಬಹುಶಃ ಎಲ್ಲರಿಗೂ ಇದನ್ನು ನೋಡಿದ ಬಳಿಕ ಯಾರೊಬ್ಬರಾದರೂ ನೆನಪಾಗಿಯೇ ಆಗುವಂತಿದೆ. ಅಷ್ಟು ಸುಂದರವಾಗಿ ಇದನ್ನು ಚಿತ್ರಿಸಲಾಗಿದೆ. ಜನರನ್ನು ಎಷ್ಟು ನಂಬಬೇಕೊ ಅಷ್ಟೇ ನಂಬಬೇಕು, ಅತಿಯಾಗಿ ಯಾರನ್ನೂ ನಂಬಬಾರದು ಎನ್ನುವುದನ್ನು ತುಂಬಾ ಸುಂದರವಾಗಿ ತಿಳಿಸಲಾಗಿದೆ.

A cat saved the life of a duck who had met with an accident. #animationvideo