ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಇನ್ಫೋಸಿಸ್ ಎಂಬ ದೈತ್ಯ ಕಂಪನಿಯನ್ನು ಕಟ್ಟಿ ಬೆಳೆಸಿದ ಇವರ ದಾಂಪತ್ಯ ಬದುಕು ಸಮಾಜಕ್ಕೆ ಸದಾ ಮಾದರಿ. ಸರಳತೆಗೆ ಹೆಸರಾಗಿರುವ ಇವರಿಬ್ಬರ ನಡುವೆ ಪ್ರೀತಿ ಬೆಸೆದಿದ್ದು ಯಾವುದು ಗೊತ್ತಾ? ಪುಸ್ತಕ. ಹೌದು, ಇಬ್ಬರಿಗೂ ಸಿಕ್ಕಾಪಟ್ಟೆ ಪುಸ್ತಕ ಓದುವ ಗೀಳಿತ್ತು. ಈ ಪುಸ್ತಕ ಪ್ರೇಮವೇ ಇವರಿಬ್ಬರ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಇದನ್ನು ಸ್ವತಃ ಸುಧಾಮೂರ್ತಿ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈಗಲೂ ಕೂಡ ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸುಧಾಮೂರ್ತಿ ಅವರಿಗೆ ನಾರಾಯಣಮೂರ್ತಿ ಎಲ್ಲ ಗಂಡಂದಿರು ತಮ್ಮ ಹೆಂಡತಿಗೆ ನೀಡುವಂತೆ ಸೀರೆ, ಆಭರಣಗಳನ್ನು ಉಡುಗೊರೆಯಾಗಿ ನೀಡಲ್ವಂತೆ, ಬದಲಿಗೆ ಪುಸ್ತಕಗಳನ್ನೇ ಗಿಫ್ಟ್ ಮಾಡುತ್ತಾರಂತೆ. ಪುಸ್ತಕಕ್ಕೆ  ಎರಡು ಹೃದಯಗಳ ನಡುವೆ ಪ್ರೀತಿ ಬೆಸೆಯುವ ಸಾಮಥ್ರ್ಯವಿದೆ. ಸಂಗಾತಿಗಳಿಬ್ಬರೂ ಪುಸ್ತಕ ಓದುವ ಅಭ್ಯಾಸ ಹೊಂದಿದ್ದರೆ ಅವರ ಸಂಬಂಧ ಗಟ್ಟಿಯಾಗುತ್ತದೆ. ನೆಮ್ಮದಿಯ ದಾಂಪತ್ಯ ಬದುಕಿಗೂ ಈ ಗೀಳು ನೆರವು ನೀಡುತ್ತದೆ. ಪುಸ್ತಕ ಓದುವ ಹವ್ಯಾಸ ದಾಂಪತ್ಯ ಜೀವನದ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತದೆ ಗೊತ್ತಾ?

ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು!

ಪರಸ್ಪರ ಗೌರವ ಬೆಳೆಯುತ್ತದೆ

ಪತಿ-ಪತ್ನಿ ಇಬ್ಬರೂ ಪುಸ್ತಕ ಪ್ರೀತಿ ಹೊಂದಿದ್ದರೆ ಸಹಜವಾಗಿಯೇ ಅವರಿಬ್ಬರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಪತಿಯ ಜ್ಞಾನ ಭಂಡಾರ ನೋಡಿ ಪತ್ನಿಗೆ ನಮ್ಮೆಜಮಾನ್ರು ಎಷ್ಟೊಂದು ತಿಳಿದುಕೊಂಡಿದ್ದಾರೆ ಎಂಬ ಹೆಮ್ಮೆ ಮೂಡಿದ್ರೆ, ಪತಿಗೆ ತನ್ನ ಪತ್ನಿ ಎಷ್ಟು ಜಾಣೆ ಎಂಬ ಅಭಿಮಾನ ಮೂಡುತ್ತದೆ. ಇದು ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಲು ಕಾರಣವಾಗುತ್ತದೆ. 

ಜಗಳ ತಗ್ಗುತ್ತದೆ

ಜಗಳ ತಗ್ಗಲು ಪುಸ್ತಕವೇ ಏಕೆ ಬೇಕು? ಮೊಬೈಲ್ ಇದೆಯಲ್ಲ, ಅದನ್ನೇ ಹಿಡಿದು ಹೆಂಡ್ತಿ ಒಂದು ಕಡೆ, ಗಂಡ ಇನ್ನೊಂದು ಕಡೆ ಕುಳಿತರಾಯಿತಪ್ಪ, ಇಬ್ಬರ ನಡುವೆ ಮಾತುಕತೆಯೇ ನಡೆಯಲ್ಲ.ಇನ್ನು ಜಗಳ ಮಡೋದು ದೂರದ ಮಾತು ಎಂದು ನೀವು ಹೇಳಬಹುದು. ಆದ್ರೆ ಪತಿ ಮೊಬೈಲ್ ಹಿಡಿದು ಚಾಟ್ ಮಾಡುತ್ತ ಇಲ್ಲವೆ ಫೇಸ್‍ಬುಕ್ ಅಥವಾ ಇನ್ನಾವುದೋ ವಿಡಿಯೋ ನೋಡುತ್ತ ಕುಳಿತಿದ್ರೆ ಹೆಂಡ್ತಿ ಮನಸ್ಸಿನಲ್ಲಿ ಅನುಮಾನ ನಿಧಾನವಾಗಿ ಹೆಡೆಯೆತ್ತಲಾರಂಭಿಸುತ್ತದೆ.ಹೆಂಡ್ತಿ ಮೊಬೈಲ್ ಹಿಡಿದು ಕೂತ್ರೆ ಗಂಡನಿಗೂ ಇಂಥದ್ದೇ ತಳಮಳ. ಮನಸ್ಸಿನಲ್ಲಿರುವ ಈ ಅನುಮಾನ ಹೇಗೋ ಬಾಯಿ ಮೂಲಕ ಹೊರಬಂದ್ರೆ ಅಲ್ಲೊಂದು ಕುರುಕ್ಷೇತ್ರ ಯುದ್ಧವೇ ನಡೆದು ಹೋಗಬಹುದು.ಅದೇ ಪುಸ್ತಕ ಹಿಡಿದು ಕುಳಿತ್ರೆ ಯಾವ ಅನುಮಾನವೂ ಮೂಡಲ್ಲ, ಯಾವ ಗಲಾಟೆನೂ ನಡೆಯಲ್ಲ.

ಇನ್ನೊಬ್ಬರ ಮನೆ ದೋಸೆಯಲ್ಲಿ ತೂತು ಹುಡುಕುವ ಗೀಳಿಗೆ ಕಾರಣವೇನು?

ಉತ್ತಮ ಹೊಂದಾಣಿಕೆ

ಓದು ಮನಸ್ಸನ್ನು ತಿಳಿಯಾಗಿಸುವ ಗುಣ ಹೊಂದಿದೆ. ಓದಿನಿಂದ ಇನ್ನೊಬ್ಬರನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ಗುಣ ಬೆಳೆಯುವ ಜೊತೆಗೆ ಕರುಣೆಯೂ ಹೆಚ್ಚುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಗಂಡ-ಹೆಂಡ್ತಿ ಸಂಬಂಧಕ್ಕೂ ಇದು ಅನ್ವಯಿಸುತ್ತದೆ. ಇಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಇದರಿಂದ ದಾಂಪತ್ಯದಲ್ಲಿ ಹೊಂದಾಣಿಕೆ ಹೆಚ್ಚುತ್ತದೆ.

ಆರೋಗ್ಯಕರ ಚರ್ಚೆಗೆ ವೇದಿಕೆ 

ಓದು ತಿಳಿವಳಿಕೆ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಇಬ್ಬರೂ ತಮಗಿಷ್ಟವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು. ತಾವು ಓದಿದ ಪುಸ್ತಕದ ಬಗ್ಗೆ ಅನಿಸಿಕೆಗಳನ್ನೂ ಹಂಚಿಕೊಳ್ಳಬಹುದು.ಇವೆಲ್ಲವೂ ಆರೋಗ್ಯಕರ ಚರ್ಚೆಗೆ ವೇದಿಕೆ ಒದಗಿಸುತ್ತವೆ. 

ಸಿಂಗಲ್ಲಾಗಿದೀನಿ ಎಂದು ಕೊರಗಬೇಡಿ!

ಅನ್ಯ ವಸ್ತುಗಳ ಮೇಲಿನ ವ್ಯಾಮೋಹಕ್ಕೆ ಕಡಿವಾಣ

ಒಮ್ಮೆ ಪುಸ್ತಕಗಳ ಮೇಲೆ ಪ್ರೀತಿ ಹುಟ್ಟಿದರೆ ಸಾಕು, ಮತ್ತಷ್ಟು ಪುಸ್ತಕ ಕೊಳ್ಳಬೇಕು, ಓದಬೇಕು ಎಂಬ ಚಟ ಹತ್ತುತ್ತದೆ. ಇದು ಸಹಜವಾಗಿಯೇ ಅನ್ಯ ವಸ್ತುಗಳ ಮೇಲಿನ ವ್ಯಾಮೋಹವನ್ನು ತಗ್ಗಿಸುತ್ತದೆ.ಎಲ್ಲೇ ಹೋದ್ರೂ ಪುಸ್ತಕ ಕಣ್ಣಿಗೆ ಬಿದ್ರೆ ಸಾಕು, ಕೊಳ್ಳಬೇಕು,ಓದಬೇಕು ಎಂಬ ಬಯಕೆ ಮೂಡುತ್ತದೆ. ಇದೊಂಥರ ಒಳ್ಳೆಯ ಚಟ. ರೇಷ್ಮೆ ಸೀರೆ ಬೇಕೆನ್ನುತ್ತಿದ್ದ ಪತ್ನಿ ಪುಸ್ತಕ ಬೇಕು ಅಂದ್ರೆ ಪತಿಗೆ ಖುಷಿಯಾಗದೆ ಇರುತ್ತದೆಯೇ? ಒಂದು ರೀತಿಯಲ್ಲಿ ಇದು ಕುಟುಂಬದ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತದೆ.