ಇನ್ನೊಬ್ಬರ ಮನೆ ದೋಸೆಯಲ್ಲಿ ತೂತು ಹುಡುಕುವ ಗೀಳಿಗೆ ಕಾರಣವೇನು?
ಇನ್ನೊಬ್ಬರ ವಿಷಯ ಅಂದ್ರೆ ಎಲ್ಲರಿಗೂ ಇಂಟ್ರೆಸ್ಟ್ ಜಾಸ್ತಿ. ಅದ್ರಲ್ಲೂ ಬ್ಯಾಕ್‍ಬೈಟರ್ಸ್‍ಗೆ ಸದಾ ಇನ್ನೊಬ್ಬರ ಹುಳುಕುಗಳನ್ನು ಪತ್ತೆ ಹಚ್ಚುವುದು, ಎಲ್ಲರ ಮುಂದೆ ಆಡಿಕೊಳ್ಳೋದೇ ಕೆಲಸ. ಇಂಥವರು ನಮ್ಮ ನಿಮ್ಮ ನಡುವೆ ಇದ್ದೇಇರುತ್ತಾರೆ. ಅವರು ಆ ರೀತಿ ಆಡಲು ಕಾರಣವೇನು?
ಕೆಲವರಿಗೆ ಇನ್ನೊಬ್ಬರ ಮನೆ ದೋಸೆಯಲ್ಲಿ ಎಷ್ಟು ತೂತುಗಳಿವೆ ಎಂದು ಹುಡುಕೋದು ತುಂಬಾ ಖುಷಿ ಕೊಡುವ ಕೆಲಸ. ಹಾಗೆಯೇ ಇನ್ನೊಬ್ಬರು ತೊಡುವ ಡ್ರೆಸ್, ಅವರ ವರ್ತನೆ,ದಾಂಪತ್ಯ ಇತ್ಯಾದಿಗಳ ಬಗ್ಗೆ ಕಮೆಂಟ್ ಮಾಡದಿದ್ದರೆ ಇಂಥವರಿಗೆ ನಿದ್ರೆ ಬಾರದು,ಊಟ ಸೇರದು. ಇಂಥವರು ತಮ್ಮ ಹುಳುಕುಗಳನ್ನು ಮುಚ್ಚಿ ಹಾಕಲು ಇನ್ನೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ.ಇಂಥ ಬ್ಯಾಕ್‍ಬೈಟ್ ವ್ಯಕ್ತಿಗಳು ಆಫೀಸ್‍ನಲ್ಲಿ, ಸಂಬಂಧಿಕರಲ್ಲಿ,ಅಕ್ಕಪಕ್ಕದ ಮನೆಗಳಲ್ಲಿ ನಿಮಗೆ ಸಿಕ್ಕೇಸಿಗುತ್ತಾರೆ.ಇನ್ನೊಬ್ಬರ ಬದುಕಿನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಆಸಕ್ತಿ ವಹಿಸುವುದು,ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವ ಮೂಲಕ ಖುಷಿ ಪಡುವುದು ಒಂದು ರೀತಿಯ ಮಾನಸಿಕ ವ್ಯಾಧಿ.
ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
ಬ್ಯಾಕ್‍ಬೈಟ್ ವರ್ತನೆಗೆ ಕಾರಣವೇನು?: ಇಂಥ ಪರ್ಸ್‍ನಾಲಿಟಿಗೆ ವೈಜ್ಞಾನಿಕ ಕಾರಣ ಹುಡುಕುತ್ತ ಹೋದ್ರೆ ಇಂಥವರಲ್ಲಿ ಒತ್ತಡಕಾರಿ ಹಾರ್ಮೋನ್ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುವ ಮೂಲಕ ಮನಸ್ಸಿನೊಳಗೆ ಅತೃಪ್ತ ಭಾವನೆಯನ್ನು ಹೆಚ್ಚಿಸುತ್ತದೆ. ಈ ಅತೃಪ್ತ ಭಾವನೆಯನ್ನು ಇನ್ನೊಬ್ಬರಿಗೆ ಅಥವಾ ಸುತ್ತಮುತ್ತಲಿನ ಜನರಿಗೆ ಹಾನಿವುಂಟು ಮಾಡುವಂತಹ ಕಮೆಂಟ್‍ಗಳನ್ನು ಪಾಸ್ ಮಾಡುವ ಮೂಲಕ ಹೊರಹಾಕುತ್ತಾರೆ.ಮನಸ್ಸನ್ನು ಶಾಂತವಾಗಿಸುವ, ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ನೆರವು ನೀಡುವ ಸೆರೊಟೊನಿನ್ ಎಂಬ ಹಾರ್ಮೋನು ಅಗತ್ಯ ಪ್ರಮಾಣದಲ್ಲಿ ಸ್ರವಿಕೆಯಾಗದಿದ್ದಾಗ ಇಂಥ ವರ್ತನೆ ಕಂಡುಬರುತ್ತದೆ.ಇನ್ನೂ ಕೆಲವರು ದೈಹಿಕ ಹಾಗೂ ಮಾನಸಿಕವಾಗಿ ಯಾವುದೇ ಸಮಸ್ಯೆ ಹೊಂದಿರದಿದ್ದರೂ ಅಸೂಯೆ, ದ್ವೇಷ ಹಾಗೂ ತನ್ನ ತಪ್ಪನ್ನು ಮರೆಮಾಚಲು ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತ ಗಾಸಿಪ್ ಹಬ್ಬಿಸುತ್ತಿರುತ್ತಾರೆ. ಇಂಥವರನ್ನು ರಿಪೇರಿ ಮಾಡುವುದು ತುಸು ಕಷ್ಟದ ಕೆಲಸವೇ ಸರಿ. ಏಕೆಂದ್ರೆ ಇಂಥವರು ಉದ್ದೇಶಪೂರ್ವಕವಾಗಿಯೇ ಇಂಥ ಕಾಯಕದಲ್ಲಿ ತೊಡಗಿರುತ್ತಾರೆ.
ಊಟ ಆದ್ಮೇಲೆ ಹೀಗ್ ಮಾಡ್ಬೇಡಿ ಅಂತ ಅಪ್ಪ ಅಮ್ಮ ಹೇಳಿದ್ದು ಸುಮ್ಮನೆಯಲ್ಲ
ಇಂಥ ವರ್ತನೆಗೂ ಮದ್ದಿದೆ: ಬ್ಯಾಕ್‍ಬೈಟ್ ವರ್ತನೆಗೆ ಸೆರೊಟೊನಿನ್ ಹಾರ್ಮೋನ್ ಅಗತ್ಯ ಪ್ರಮಾಣದಲ್ಲಿ ಸ್ರವಿಕೆಯಾಗದಿರುವುದೇ ಕಾರಣ. ಹೀಗಾಗಿ ಮನಸ್ಸನ್ನು ಶಾಂತಗೊಳಿಸುವ ಈ ಹಾರ್ಮೋನ್ ಸ್ರವಿಕೆಯನ್ನು ಹೆಚ್ಚಿಸುವ ಕೆಲಸವಾದ್ರೆ ಇಂಥ ವರ್ತನೆಗೆ ಕಡಿವಾಣ ಹಾಕಲು ಸಾಧ್ಯವಿದೆ. ಈ ಹಾರ್ಮೋನ್ ಜೊತೆಗೆ ಖುಷಿ ಹಾಗೂ ಆಹ್ಲಾದಕ್ಕೆ ಕಾರಣವಾಗುವ ಡೊಪಮೈನ್ ಎಂಬ ಹಾರ್ಮೋನ್ ಸ್ರವಿಕೆಯನ್ನು ಕೂಡ ಹೆಚ್ಚಿಸಬೇಕಾದ ಅಗತ್ಯವಿದೆ. ಈ ಎರಡೂ ಹಾರ್ಮೋನ್‍ಗಳ ಸ್ರವಿಕೆ ತಗ್ಗಿದಾಗ ವ್ಯಕ್ತಿ ಮಾನಸಿಕವಾಗಿ ಅನಾರೋಗ್ಯಕ್ಕೀಡಾಗುತ್ತಾನೆ.ಆತನಿಗೆ ತನ್ನ ಭಾವನೆಗಳ ಮೇಲೆ ಹಿಡಿತವಿರುವುದಿಲ್ಲ. ಅತೃಪ್ತಿ, ಸಿಟ್ಟು, ಕ್ರೋಧ, ಅಸೂಯೆ ಎಲ್ಲವೂ ಮನಸ್ಸಿನಲ್ಲಿ ಹೊಯ್ದಾಟ ನಡೆಸುತ್ತವೆ. ಇದನ್ನೆಲ್ಲ ಆತ ಇನ್ನೊಬ್ಬರ ಮೇಲೆ ಬ್ಯಾಡ್ ಕಮೆಂಟ್ ಮಾಡುವ ಮೂಲಕ ಹೊರಹಾಕುತ್ತಾನೆ. ಪ್ರತಿನಿತ್ಯ ಮೆಗ್ನೇಷಿಯಂ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್‍ಗಳು ಹೇರಳವಾಗಿರುವ ಆಹಾರ ಸೇವನೆಯಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದ್ಯರು. ಸೆರೊಟೊನಿನ್ ಹಾಗೂ ಡೊಪಮೈನ್ ಸ್ರವಿಕೆಗೆ ಮೆಗ್ನೇಷಿಯಂ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್‍ಗಳು ಅಗತ್ಯ.
ಇಂಥವರು ಹೀಗೆಲ್ಲ ಯೋಚಿಸ್ತಾರೆ, ಮಾಡ್ತಾರೆ:
- ಅಭದ್ರತಾ ಭಾವನೆ ಹಾಗೂ ಅಸೂಯೆ ಕಾರಣಕ್ಕೆ ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವ ಅಥವಾ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕಾರ್ಯ ಮಾಡುತ್ತಾರೆ.
-ತನ್ನ ತಪ್ಪನ್ನು ಮರೆಮಾಚಲು ಇನ್ನೊಬ್ಬರ ಬಗ್ಗೆ ಬ್ಯಾಡ್ ಕಮೆಂಟ್‍ಗಳನ್ನು ಪಾಸ್ ಮಾಡುತ್ತಾರೆ. ಆ ಮೂಲಕ ಎಲ್ಲರ ಗಮನವನ್ನು ಆ ಕಡೆ ತಿರುವಿಸುವುದು ಇವರ ಪ್ಲ್ಯಾನ್ ಆಗಿರುತ್ತೆ.
-ಇನ್ನೊಬ್ಬರ ಹುಳುಕುಗಳನ್ನು ಎತ್ತಿ ತೋರಿಸಿದ್ರೆ ಅಥವಾ ಕೆಟ್ಟದ್ದಾಗಿ ಮಾತನಾಡಿದ್ರೆ ಉಳಿದವರ ಕಣ್ಣಿನಲ್ಲಿ ನಾನು ಹೀರೋ ಆಗಬಹುದು ಎಂಬ ತಪ್ಪು ಕಲ್ಪನೆ.
-ಪರರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ಅದು ತನಗೇ ತಿರುಗುಬಾಣವಾಗಬಹುದು ಎಂಬ ಕಿಂಚಿತ್ತು ಕಲ್ಪನೆಯೂ ಇವರಿಗಿರುವುದಿಲ್ಲ.ಇಂಥ ಟೀಕೆಗಳಿಂದ ತನ್ನ ವ್ಯಕ್ತಿತ್ವಕ್ಕೆ ತಾನೇ ಮಸಿ ಬಳಿದುಕೊಳ್ಳುತ್ತಿದ್ದೇನೆ ಎಂಬ ಅರಿವಿರುವುದಿಲ್ಲ.
-ಇಂಥ ವ್ಯಕ್ತಿಗಳಲ್ಲಿ ಆತ್ಮಗೌರವ ತುಂಬಾ ಕಡಿಮೆಯಿರುತ್ತದೆ.ಪ್ರತಿ ವಿಷಯಕ್ಕೂ ಇನ್ನೊಬ್ಬರ ಹೊಗಳಿಕೆಯನ್ನು ನಿರೀಕ್ಷಿಸುತ್ತಾರೆ. ಇದು ಯಾವ ಮಟ್ಟಕ್ಕಂದ್ರೆ ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳನ್ನಾಡಿಯಾದ್ರೂ ಮೆಚ್ಚುಗೆ ಗಳಿಸಬೇಕು ಎನ್ನುವ ತನಕ.
-ಇವರು ಪ್ರತಿ ವಿಷಯಕ್ಕೂ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡುತ್ತಾರೆ.ವೃತ್ತಿ, ವೈಯಕ್ತಿಕ ಬದುಕು ಹಾಗೂ ಸಾಧನೆ ವಿಚಾರದಲ್ಲಿ ಬೇರೆಯವರು ತನಗಿಂತ ಮುಂದೆ ಹೋದ್ರೆ ಅವರಿಗೇನೋ ಟೆನ್ಷನ್ ಪ್ರಾರಂಭವಾಗುತ್ತದೆ.