Parenting Tips: ಮಕ್ಕಳಿಗೆ ಏಟು ಹಾಕೋದೊಂದೇ ಎಲ್ದವಕ್ಕೂ ಪರಿಹಾರವಲ್ಲ; ಕೆಲವೊಮ್ಮೆ ಹೊಡಯಲೇ ಬಾರದು!
ಪಾಲಕರು ತಮ್ಮ ಮಕ್ಕಳನ್ನು ಹೊಡೆಯುವುದು ಅತಿ ಸಾಮಾನ್ಯ ಕ್ರಿಯೆ. ಹಠ ಮಾಡಿದಾಗ, ಏನಾದರೂ ವಸ್ತುವನ್ನು ಹಾಳು ಮಾಡಿದಾಗ, ಇಲ್ಲಸಲ್ಲದ ಮಾತುಗಳನ್ನಾಡಿದಾಗ ಮಕ್ಕಳನ್ನು ದಂಡಿಸುವುದು ಎಲ್ಲರ ಅಭ್ಯಾಸ. ಆದರೆ, ಕೆಲವು ಸಮಯದಲ್ಲಿ ಮಕ್ಕಳನ್ನು ಹೊಡೆಯುವುದು ಸರಿಯಲ್ಲ.
ಪಾಲಕರು ತಮ್ಮ ಮಕ್ಕಳನ್ನು ಯಾವುದಾದರೊಂದು ಕಾರಣಕ್ಕೆ ಹೊಡೆಯುವುದು ಅತಿ ಸಾಮಾನ್ಯ. ನಮ್ಮ ಸಂಸ್ಕೃತಿಯಲ್ಲಿ ಮಕ್ಕಳನ್ನು ದಂಡಿಸುವ ಪರಿಪಾಠವಿದೆ, ಅದು ಅಪರಾಧವಲ್ಲ. ದಂಡಿಸಿಯಾದರೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು ಎನ್ನುವುದು ಭಾರತೀಯರ ಧ್ಯೇಯ. ಹೀಗಾಗಿ, ಪಾಲಕರಿಂದ ಏಟು ತಿನ್ನದ ಮಕ್ಕಳು ಇರಲಿಕ್ಕಿಲ್ಲ. ಕೆಲವು ಪಾಲಕರಂತೂ ಮಕ್ಕಳನ್ನು ಹೊಡೆಯುವುದು ತಮ್ಮ ಹಕ್ಕು ಎಂಬಂತೆ ವರ್ತಿಸುವುದು ಕಂಡುಬರುತ್ತದೆ. ಚಿಕ್ಕಪುಟ್ಟ ಕಾರಣಕ್ಕೂ ಮಕ್ಕಳ ಮೇಲೆ ಕೈ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಹೊಡೆಯುವ ಪರಿಪಾಠದಿಂದ ಅವರ ಮೇಲಾಗುವ ಪರಿಣಾಮದ ಬಗ್ಗೆ ಅರಿವು ಮೂಡುತ್ತಿದೆ. ಹಿಂದಿನ ದಿನಗಳಲ್ಲಿ ಮನೆತುಂಬ ಮಕ್ಕಳಿರುತ್ತಿದ್ದರು. ಆಗ ಭಯ ಮೂಡಿಸಿಯೇ ನಿಯಮ ಪಾಲನೆ ಮಾಡಿಸುವುದು ಅನಿವಾರ್ಯವಾಗುತ್ತಿತ್ತೇನೋ. ಆದರೆ, ಈಗ ಇರುವ ಒಂದಿಬ್ಬರು ಮಕ್ಕಳ ಮನಗೆದ್ದು ನಿಯಮ ಪಾಲನೆ ಮಾಡಿಸುವುದು ಉತ್ತಮ. ಅದರಲ್ಲೂ ಕೆಲವು ಸಮಯದಲ್ಲಿ ಮಕ್ಕಳನ್ನು ಹೊಡೆಯುವುದು ತಪ್ಪು. ಪಾಲಕರ ಈ ಅಭ್ಯಾಸದಿಂದ ಅವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಉಂಟಾಗಬಹುದು. ಹೀಗಾಗಿ, ಯಾವ ಕಾರಣಕ್ಕಾಗಿ ಮಕ್ಕಳನ್ನು ದಂಡಿಸುತ್ತೀರಿ ಎನ್ನುವುದು ಮುಖ್ಯ.
• 1-3 ವರ್ಷದ (Year) ಮಕ್ಕಳು (Children)
ಈ ಸಮಯದಲ್ಲಿ ಮಕ್ಕಳು ಬಾಹ್ಯ ಪ್ರಪಂಚಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಈ ಹಂತದಲ್ಲಿ ಅವರಿಗೆ ಅಧಿಕ ಪ್ರೀತಿ (Love), ಕಾಳಜಿ (Care), ಸುರಕ್ಷಿತ (Safe) ಭಾವನೆ ಮೂಡಿಸಬೇಕಾಗುತ್ತದೆ. ಹಾಗೂ ಧೈರ್ಯ ತುಂಬಬೇಕಾಗುತ್ತದೆ. ಆದರೆ, ಈ ವಯಸ್ಸಿನ ಮಕ್ಕಳು ಎಷ್ಟೋ ಬಾರಿ ಅತಿಯಾದ ಚಟುವಟಿಕೆಯುಳ್ಳವರು (Over Active), ಚಡಪಡಿಕೆಯುಳ್ಳವರು, ಹಠಮಾರಿಗಳೂ ಆಗಿರುತ್ತಾರೆ. ಅವರೊಂದಿಗೆ ಪ್ರೀತಿಯಿಂದ ಜತೆಗಿದ್ದು ಆಟವಾಡಿ ಅವರನ್ನು ಕಂಫರ್ಟೆಬಲ್ ಮೂಡಿಗೆ ತೆಗೆದುಕೊಂಡು ಹೋಗಬೇಕು. ಇಂತಹ ಮಕ್ಕಳೊಂದಿಗೆ (Children) ಉತ್ತಮ ಸಂವಹನ ಮಾಡಬೇಕು. ನಿಧಾನವಾಗಿ ಈ ಗುಣ ಕಡಿಮೆಯಾಗುತ್ತದೆ. ಅಗತ್ಯವಿದ್ದರೆ ತಜ್ಞರ ಸಹಕಾರ ಪಡೆದುಕೊಳ್ಳಬಹುದು.
ನಿಮ್ಮ ಮಗುವನ್ನು ಸೂಪರ್ ಕಾನ್ಫಿಡೆಂಟ್ ಮಾಡೋದು ಹೇಗೆ?
• ಒಡಹುಟ್ಟಿದವರೊಂದಿಗೆ (Siblings) ಜಗಳ
ಮನೆಯಲ್ಲಿ 2-3 ಮಕ್ಕಳಿದ್ದಾಗ ಇದು ಅತ್ಯಂತ ಸಹಜ. ಪರಸ್ಪರ ಜಗಳವಾಡಬಾರದು ಎಂದು ಸ್ಪಷ್ಟವಾಗಿ ತಿಳಿಹೇಳುತ್ತಿರಬೇಕು. ಆದರೂ ಅವರು ಮಾಡುತ್ತಲೇ ಇರುತ್ತಾರೆ. ಅಂತಹ ಸಮಯದಲ್ಲಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಜಾಣತನದಿಂದ ನಿಭಾಯಿಸಬೇಕು. ಬಾಲ್ಯದಲ್ಲಿ (Childhood) ಹೆಚ್ಚು ಏಟು ತಿನ್ನುವ ಮಕ್ಕಳು ದೊಡ್ಡವರಾದ ಮೇಲೆ ಕೋಪದ (Angry) ಪ್ರವೃತ್ತಿ ಹೊಂದುವ ಸಾಧ್ಯತೆ ಹೆಚ್ಚು, ಇದು ಅವರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
• ವಸ್ತುವನ್ನು ಹಾಳುಮಾಡಿದಾಗ
ಮಕ್ಕಳು ಮನೆಯಲ್ಲಿರುವ ಯಾವುದೇ ವಸ್ತುವನ್ನು ಹಾಳುಮಾಡಬಹುದು, ಬೀಳಿಸಬಹುದು. ಅವರಿಗೆ ಅವುಗಳ ಹಣಕಾಸಿನ ಮೌಲ್ಯ ತಿಳಿದಿರುವುದಿಲ್ಲ. ಅವುಗಳ ಮಹತ್ವದ ಅರಿವೂ ಇರುವುದಿಲ್ಲ. ಹೀಗಾಗಿ ಕೋಪಿಸಿಕೊಂಡು ಬೈಯ್ಯುವುದರಿಂದ ಪ್ರಯೋಜನವಿಲ್ಲ. ಬದಲಿಗೆ, ಹಾಳಾದ ವಸ್ತುವನ್ನು ಸ್ವಚ್ಛಗೊಳಿಸಲು ಅವರೊಂದಿಗೇ ಸೇರಿ ಪ್ರಯತ್ನಿಸಿ. ಇದರಿಂದ, ವಸ್ತುವನ್ನು (Things) ಹಾಳು ಮಾಡುವುದು ಸರಿಯಲ್ಲ ಹಾಗೂ ಒಂದೊಮ್ಮೆ ಹಾಳಾದರೆ ಏನು ಮಾಡಬೇಕು ಎನ್ನುವ ಪ್ರಜ್ಞೆ ನಿಧಾನವಾಗಿ ಅವರಲ್ಲಿ ಮೂಡುತ್ತದೆ.
ಪಾಲಕರ ಹೃದಯಾಘಾತಕ್ಕೆ ಕಾರಣವಾಗ್ತಿದೆ ಮಕ್ಕಳ ಹೋಮ್ ವರ್ಕ್ ಮಾಡೋ ಕೆಲಸ!
• ಹಠ ಮಾಡುವಾಗ
ಕೆಲವು ಮಕ್ಕಳು ಸಿಕ್ಕಾಪಟ್ಟೆ ಹಠಮಾರಿ (Stubborn) ಗಳಾಗಿರುತ್ತಾರೆ. ಅದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಅಥವಾ ಪೌಷ್ಟಿಕಾಂಶದ ಕೊರತೆಯೂ ಕಾರಣವಾಗಿರಬಹುದು. ಇಂತಹ ಮಕ್ಕಳನ್ನು ಪದೇ ಪದೆ ಹೊಡೆಯುವುದರಿಂದ ಪ್ರಯೋಜನವಿಲ್ಲ. ಬದಲಿಗೆ, ಕೋಪ ಬಂದಾಗ ನೀವು ಹೇಗೆ ವರ್ತಿಸುತ್ತೀರೋ ಹಾಗೆಯೇ ಬೈಯ್ಯಲು, ವರ್ತಿಸಲು ಕಲಿಯುತ್ತಾರೆ. ಅವರನ್ನು ಓಲೈಸುವುದೂ ಸರಿಯಲ್ಲ. ಶಾಂತವಾಗಿ ವರ್ತಿಸಿ, ತಿದ್ದಬೇಕು. ಅದರಲ್ಲೂ ಹದಿಹರೆಯಕ್ಕೆ (Teenage) ಕಾಲಿಡುವ ಸಮಯದಲ್ಲಿ ಮಕ್ಕಳು ಕೋಪಿಸಿಕೊಳ್ಳುವುದು, ಹಠ ಮಾಡುವುದು ಅತಿ ಸಾಮಾನ್ಯ. ನೀವು ಏನೇ ಹೇಳಿದರೂ ಅವರು “ಇಲ್ಲ’ ಎಂದೇ ಹೇಳುತ್ತಾರೆ. ಹೀಗಾಗಿ, ಎಚ್ಚರಿಕೆಯಿಂದ ವರ್ತಿಸಿ.