ರೈಲಿನಲ್ಲಿ ಪಯಣಿಸುತ್ತಿದ್ದ ವೇಳೆ ವೃದ್ಧರೊಬ್ಬರು ತಮ್ಮ ಪತ್ನಿಯ ಕೈಗೆ ನೇಲ್ ಪಾಲಿಶ್ ಹಾಕುತ್ತಿರುವ ವೀಡಿಯೋ ವೈರಲ್ ಆಗಿದೆ.
ಬಹುತೇಕ ಹೆಣ್ಣು ಮಕ್ಕಳು ತಮ್ಮ ಗಂಡಂದಿರು ತಮ್ಮನ್ನು ರಾಣಿಯಂತೆ ನೋಡಿಕೊಳ್ಳಬೇಕು. ಕಣ್ಣಿಗೆ ಕಾಡಿಗೆ ಹಾಕಬೇಕು, ಕೈ ಬೆರಳುಗಳಿಗೆ ನೈಲ್ ಪಾಲಿಶ್ ಹಾಕ್ಬೇಕು, ನಮ್ಮನ್ನೂ ಮಗುವಿನಂತೆ ನೋಡಿಕೊಳ್ಳಬೇಕು ಎಂದು ಬಹುತೇಕ ಹೆಣ್ಣು ಮಕ್ಕಳು ಆಸೆ ಪಡುತ್ತಾರೆ. ಆದರೆ ಎಲ್ಲರಿಗೂ ಅಂತಹ ಗಂಡ ಸಿಗಲ್ಲ, ಬಿಡಿ, ಯೌವ್ವನದ ದಿನಗಳಲ್ಲಿ ಬಹುತೇಕ ದಂಪತಿ ಅನೋನ್ಯವಾಗಿರುತ್ತಾರೆ. ಮದ್ಯವಯಸ್ಸು, ಮಕ್ಕಳು ಸಂಸಾರದ ಜವಾಬ್ದಾರಿ ಹೆಚ್ಚಾಗುತ್ತಿದ್ದಂತೆ ಜಗಳ ಮಾಡಲು ಶುರು ಮಾಡುತ್ತಾರೆ. ಹಾಗೆಯೇ ಇಳಿವಯಸ್ಸಿಗೆ ಜಾರುತ್ತಿದ್ದಂತೆ ಮತ್ತೆ ಅನೋನ್ಯವಾಗಿ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ಮದುವೆಯಿಂದ ಮಸಣದವರೆಗೂ ಕಿತ್ತಾಡುತ್ತಲೇ ಇರುತ್ತಾರೆ. ಅವರದು ಬೇರೆ ಕತೆ. ಆದರೆ ಇಲ್ಲೊಂದು ಕಡೆ ಇಳಿವಯಸ್ಸಿನ ವೃದ್ಧರೊಬ್ಬರು ತಮ್ಮ ಪತ್ನಿಯ ಕೈಗೆ ನೇಲ್ ಪಾಲಿಸ್ ಹಾಕುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.
ಇನಸ್ಟಾಗ್ರಾಮ್‌ನಲ್ಲಿ gauriavadhawkar ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರೈಲಿನಲ್ಲಿ ಈ ವಿಶೇಷ ದಂಪತಿ (Elderly couple) ಪಯಣ ಮಾಡುತ್ತಿದ್ದು, ಇಲ್ಲಿ ಇಳಿವಯಸ್ಸಿನ ಗಂಡ ತನ್ನ ಪತ್ನಿಯ ಕೈ ಬೆರಳುಗಳಿಗೆ ನೇಲ್ ಪೇಂಟ್ ಹಾಕುತ್ತಿದ್ದಾರೆ. 'ಧಾವಿಸಿ ಬರುತ್ತಿರುವ ಲೋಕದಲ್ಲಿ, ಅವರು ಸ್ತಬ್ಧವಾಗಿ ಕುಳಿತರು, ಅವನು ಅವಳ ಉಗುರುಗಳಿಗೆ ಬಣ್ಣ ಬಳಿಯುತ್ತಿದ್ದನು, ಅವಳು ಮೊದಲ ಬಾರಿಗೆ ಅವನು ಅವಳ ಕೈ ಮುಟ್ಟಿದಂತೆ ನಗುತ್ತಿದ್ದಳು. ಈ ರೀತಿಯ ಪ್ರೀತಿ ಹಳೆಯದಾಗುವುದಿಲ್ಲ, ಅದು ಆಳವಾಗುತ್ತದೆ' ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇತ್ತೀಚೆಗೆ ಇಂತಹ ಪ್ರೀತಿ ನೋಡಲು ಸಿಗುವುದು ತೀರಾ ಅಪರೂಪವೆನಿಸಿದೆ. ಹೀಗಾಗಿ ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.
ಅನೇಕ ಈ ಜನರೇಷನ್‌ನ ಯುವಕ ಯುವತಿಯರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ನನಗೂ ಇಂತಹ ಸೌಭಾಗ್ಯ ಕೊಡು ದೇವರೆ ಎಂದು ಬೇಡಿದ್ದಾರೆ. ಕೆಲವರು ಇದೇ ವೇಳೆ ತಮ್ಮ ಅಪ್ಪನನ್ನು ನೆನಪು ಮಾಡಿಕೊಂಡಿದ್ದಾರೆ. ಈ ರೀತಿ ನನಗೆ ಮಾಡಿದ ಏಕೈಕ ವ್ಯಕ್ತಿ ನನ್ನ ಜೀವನದ ಮೊದಲ ಪ್ರೀತಿ ನನ್ನ ತಂದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಈಗ ನಮ್ಮ ಜೊತೆಗಿಲ್ಲ, ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ತಾತ ಎಲ್ಲ ಹೆಣ್ಣು ಮಕ್ಕಳ ಹೃದಯ ಗೆದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾದ ಪ್ರೀತಿ ಜೊತೆಯಾಗೆ ವಯಸ್ಸಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಪ್ರೀತಿ 100ರಲ್ಲಿ ಒಬ್ಬರಿಗೆ ಸಿಗಬಹುದಷ್ಟೇ ಎಂದು ಮತ್ತೊಬ್ಬರು ಭಾವುಕರಾಗಿದ್ದಾರೆ.
ಇಂತಹ ಪ್ರೀತಿ ಇತ್ತೀಚಿನ ದಿನಗಳಲ್ಲಿ ನೋಡಲು ಸಿಗುವುದು ಬಹಳ ಕಡಿಮೆ, ಇದೊಂದು ಬಹಳ ದೀರ್ಘ ಪಯಣ ಹೀಗಾಗಿ ಬಹಳ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಫೋನ್‌ಗಳಿಲ್ಲದ ಕಾಲದಲ್ಲಿ ಜನಿಸಿದವರು. ಅವರು ಪರಸ್ಪರ ಬಹಳ ಸಮಯ ಜೊತೆಯಾಗಿ ಕಳೆದಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಭಾವುಕರಾಗಿಸಿದೆ.
