ವಿವಾಹ ವಿಚ್ಛೇದನ ಇನ್ನು ಫಟಾಫಟ್: ಆರು ತಿಂಗಳು ಕಾಯುವ ಅಗತ್ಯವೂ ಇಲ್ಲ: ಸುಪ್ರೀಂಕೋರ್ಟ್
ಸರಿಪಡಿಸಲಾರದ ಮಟ್ಟಕ್ಕೆ ಮುರಿದುಬಿದ್ದಿರುವ ವಿವಾಹ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನವದೆಹಲಿ: ಸರಿಪಡಿಸಲಾರದ ಮಟ್ಟಕ್ಕೆ ಮುರಿದುಬಿದ್ದಿರುವ ವಿವಾಹ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ, ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳು 6ರಿಂದ 18 ತಿಂಗಳ ಕಾಲ ಕಾಯುವ ಅನಿವಾರ್ಯತೆ ತಪ್ಪಲಿದೆ.
ಸಂವಿಧಾನದ 142ನೇ ಪರಿಚ್ಛೇದದಡಿ ತಮಗೆ ವಿಚ್ಛೇದನ ನೀಡಬೇಕು ಎಂದು ಶಿಲ್ಪಾ ಶೈಲೇಶ್ (Shilpa Shailesh) ಹಾಗೂ ವರುಣ್ ಶ್ರೀನಿವಾಸನ್ (Varun Srinivasan) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ.ಕೌಲ್ (S.K. Koul) ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಸರಿಪಡಿಸಲಾಗದಷ್ಟು ಮುರಿದು ಬಿದ್ದಿರುವ ವಿವಾಹ ಪ್ರಕರಣಗಳಲ್ಲಿ ವಿವಾಹವನ್ನು ವಿಸರ್ಜನೆಗೊಳಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಿದೆ. ಇದು ಸಾರ್ವಜನಿಕ ನೀತಿಯ ನಿರ್ದಿಷ್ಟಅಥವಾ ಮೂಲಭೂತ ತತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಒಂದಾಗಲು ಇನ್ನು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿರುವ ದಂಪತಿಗಳು ವಿಚ್ಛೇದನಕ್ಕಾಗಿ (Divorce) ಕಾಯುತ್ತಾ ಕೂರುವ ಬದಲಿಗೆ, ಸಂವಿಧಾನದ 142ನೇ ಪರಿಚ್ಛೇದದಡಿ ನೇರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ.
ದಾಂಪತ್ಯಕ್ಕೆ ಸಮಯವೆಲ್ಲಿ ಕೊಟ್ಟಿದ್ದೀರಿ: ವಿಚ್ಛೇದನಕ್ಕೆ ಮುಂದಾದ ಟೆಕ್ಕಿ ದಂಪತಿಯ ಪ್ರಶ್ನಿಸಿದ ಕೋರ್ಟ್
ಈಗ ಹೇಗಿದೆ?:
ಹಿಂದು ವಿವಾಹ ಕಾಯ್ದೆ- 1955ರ ಸೆಕ್ಷನ್ 13ಬಿ ಅಡಿ ಪರಸ್ಪರ ಸಮ್ಮತಿಯಿಂದ ವಿಚ್ಛೇದನ ಪಡೆಯಲು ನಿಯಮಗಳನ್ನು ರೂಪಿಸಲಾಗಿದೆ. ಅದರ ಪ್ರಕಾರ, ತಾವಿಬ್ಬರೂ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿ ಬಾಳುತ್ತಿದ್ದೇವೆ ಅಥವಾ ಒಟ್ಟಾಗಿ ಬಾಳಲು ಸಾಧ್ಯವಿಲ್ಲ ಅಥವಾ ವಿವಾಹವನ್ನು ಮುರಿದುಕೊಳ್ಳಲು ಪರಸ್ಪರ ಸಮ್ಮತಿಸಿದ್ದೇವೆ ಎಂಬ ಕಾರಣಗಳನ್ನು ನೀಡಿ ಇಬ್ಬರೂ ಕಕ್ಷಿದಾರರು ಜಿಲ್ಲಾ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಬಹುದು.
ಹಿಂದು ವಿವಾಹ ಕಾಯ್ದೆಯ (Hindu Marriage Act) ಸೆಕ್ಷನ್ 13ಬಿ(2)ರ ಪ್ರಕಾರ, ವಿಚ್ಛೇದನ ಬಯಸುವವರು ತಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಿದ ದಿನದಿಂದ 6ರಿಂದ 18 ತಿಂಗಳ ಕಾಲ ಕಾಯಬೇಕಾಗುತ್ತದೆ. ಅರ್ಜಿ ಹಿಂಪಡೆಯುವುದಕ್ಕಾಗಿ ಆರು ತಿಂಗಳ ಸಮಯಾವಕಾಶವನ್ನೂ ನೀಡಲಾಗುತ್ತದೆ. ಇಷ್ಟೆಲ್ಲಾ ಅವಧಿ ಮುಗಿದ ಬಳಿಕ ಇಬ್ಬರೂ ಕಕ್ಷಿದಾರರ ವಾದವನ್ನು ಆಲಿಸುವ ಕೋರ್ಟ್ ತನಗೆ ತೃಪ್ತಿಯಾಗಿದ್ದರೆ ವಿಚ್ಛೇದನ ನೀಡುತ್ತದೆ.
ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್: ವಿಚ್ಛೇದನದ ಬಳಿಕ ಮಗುವಿನ ಅಮ್ಮ!
ಈ ರೀತಿ ವಿಚ್ಛೇದನ ಪಡೆಯಲು ವಿವಾಹವಾಗಿ ಕನಿಷ್ಠ ಒಂದು ವರ್ಷ ಅವಧಿ ಮುಗಿದಿರಬೇಕು. ಇದಲ್ಲದೆ ಅಕ್ರಮ ಸಂಬಂಧ, ಹಿಂಸೆ, ಪರಿತ್ಯಾಗ, ಧಾರ್ಮಿಕ ಮತಾಂತರ, ಬುದ್ಧಿವಿಕಲ್ಪ, ಕುಷ್ಠರೋಗ, ಲೈಂಗಿಕ ರೋಗ (sexually transmitted disease) ಮತ್ತಿತರೆ ಕಾರಣಗಳನ್ನೂ ನೀಡಿ ವಿಚ್ಛೇದನ ಪಡೆಯಬಹುದು. ಅಸಾಧಾರಣ ಪ್ರಕರಣಗಳಲ್ಲಿ ವಿವಾಹವಾಗಿ ಒಂದು ವರ್ಷವಾಗುವ ಮುನ್ನವೇ ವಿಚ್ಛೇದನ ನೀಡಲಾಗುತ್ತದೆ.