Asianet Suvarna News Asianet Suvarna News

Parenting Tips: ಮಕ್ಕಳ ಆತ್ಮ ವಿಶ್ವಾಸ ಹೆಚ್ಚಾಗ್ಬೇಕೆಂದ್ರೆ ಪಾಲಕರು ಮಾಡ್ಬೇಕಾಗಿದ್ದಿಷ್ಟು!

ಮಕ್ಕಳು ತಪ್ಪು ಮಾಡ್ದೆ ದೊಡ್ಡವರು ಮಾಡೋಕೆ ಆಗುತ್ತಾ? ಏನೂ ಅರಿಯದ ಮಕ್ಕಳು ಅನೇಕ ತಪ್ಪುಗಳನ್ನು ಮಾಡ್ತಾರೆ. ಅವರಿಗೆ ನಿರ್ಧಾರ ತೆಗೆದುಕೊಳ್ಳುವ, ಒಳ್ಳೆಯದು, ಕೆಟ್ಟದನ್ನು ಗುರುತಿಸುವ ಸಾಮರ್ಥ್ಯವಿರುವುದಿಲ್ಲ. ಪಾಲಕರಾದವರು ಮಕ್ಕಳಿಗೆ ನೆರವಾದ್ರೆ ಅವರ ಬಾಳು ಹಸನಾಗಿರುತ್ತದೆ. 
 

Kids must be encouraged to get confidence in life and achieve
Author
Bangalore, First Published Jul 18, 2022, 4:07 PM IST

ಮಕ್ಕಳು ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿರ್ತಾರೆ. ಅವರಿಗೆ ಅನುಭವದ ಕೊರತೆಯಿರುತ್ತದೆ. ಹಾಗಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದು ಗೊತ್ತಿರೋದಿಲ್ಲ. ಅಸಮರ್ಥತೆ ಹಾಗೂ ಹಿಂಜರಿಕೆ ಮಗುವಿನ ಬೆಳವಣಿಗೆಗೆ ಸಹಜವಾಗಿಯೇ ಅಡ್ಡಿಯುಂಟು ಮಾಡುತ್ತದೆ. ಪಾಲಕರಾದವರು ಮಕ್ಕಳು ಎಲ್ಲವನ್ನೂ ಜಯಿಸಿ ಮುಂದೆ ನಡೆಯಲು ನೆರವಾಗಬೇಕು. ಮಕ್ಕಳಿಗೆ ಹಿಂಜರಿಕೆ ಹೋಗಲಾಡಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿದ್ರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಯಾಗ್ತಾರೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎನ್ನಲಾಗುತ್ತದೆ. ಇಲ್ಲಿ ಗುರು, ಶಾಲೆ ಅಂದ್ರೆ ಬರೀ ಶಾಲೆಯ ಪಠ್ಯಕ್ರಮ, ಓದು ಹಾಗೂ ಅಂಕಗಳಿಗೆ ಬೆಲೆ ನೀಡುವುದಲ್ಲ. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿರುತ್ತದೆ.  ಪಾಲಕರ ಪ್ರೋತ್ಸಾಹದಲ್ಲಿ ಬೆಳೆದ ಮಕ್ಕಳು ಆತ್ಮವಿಶ್ವಾಸವನ್ನು ಹೊಂದುತ್ತಾರೆ ಮತ್ತು ಅವರು ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಾಧ್ಯವಾಗುತ್ತದೆ.  ಪ್ರೋತ್ಸಾಹ  ನೀಡುವುದು ಮಗುವಿನ ಬೆಳವಣಿಗೆಯಲ್ಲಿ ಬಹಳ ಮುಖ್ಯ  ಎಂದು ಪಾಲಕರು ಅರ್ಥಮಾಡಿಕೊಳ್ಳಬೇಕು. ಮಗು ಆತ್ಮವಿಶ್ವಾಸದಿಂದ ಕೂಡಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ (Children) ಮೇಲೆ ನಂಬಿಕೆ ಇರಲಿ : ಮಕ್ಕಳ ಮೇಲೆ ನಂಬಿಕೆ ಇರ್ಬೇಕು. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಹೊಗಳುವುದು ಮಾತ್ರವಲ್ಲ ತಪ್ಪು (Wrong) ಮಾಡಿದಾಗ್ಲೂ ಅವರ ಪರವಿರಬೇಕು. ನಿನ್ನ ಮೇಲೆ ನನಗೆ ನಂಬಿಕೆಯಿದೆ. ನೀನು ಮುಂದೆ ಈ ತಪ್ಪು ಮಾಡುವುದಿಲ್ಲ ಎಂಬ ಭರವಸೆಯಿಡ್ತೇನೆಂದು ಅವರಿಗೆ ಹೇಳಬೇಕು. 

ಪ್ರಯತ್ನಕ್ಕೆ ಬೆಂಬಲ : ಮಕ್ಕಳ  ಹೊಸ ಪ್ರಯತ್ನ (Effort) ಕ್ಕೆ ನೀವು ಬೆಂಬಲ ನೀಡಬೇಕು. ಅವರಿಗೆ ನೀವು ಸದಾ ಪ್ರೇರಣೆ ನೀಡಬೇಕು. ಅಪಾಯಗಳನ್ನು ಎದುರಿಸಲು ಮತ್ತು ಹೊಸ ವಿಷಯಗಳನ್ನು ಅಥವಾ ಮಾರ್ಗಗಳನ್ನು ಪ್ರಯತ್ನಿಸಲು ಮಗುವಿಗೆ ಕಲಿಸಬೇಕು. ಜೀವನದಲ್ಲಿ ಎಲ್ಲದರಲ್ಲೂ ಯಶಸ್ಸು ಸಿಗುವುದು ಅನಿವಾರ್ಯವಲ್ಲ. ತೃಪ್ತರಾಗುವುದು ಮುಖ್ಯ ಎಂದು ಪೋಷಕರಾದವರು ಮಕ್ಕಳಿಗೆ ಕಲಿಸಬೇಕು. 

ಮಕ್ಕಳಿಗೆ ಓದಿದ್ದು ನೆನಪಿರಬೇಕಂದ್ರೆ ಪೋಷಕರೂ ಹೀಗ್ ಮಾಡಬೇಕು!

ಮಗುವಿನ ಸಾಧನೆ (Achievement) : ಮಗುವಿಗಾಗಿ ಒಂದು ಡೈರಿ ಬರೆಯುವುದನ್ನು ರೂಢಿ ಮಾಡಿಕೊಳ್ಳಿ. ಡೈರಿಯಲ್ಲಿ ಮಗುವಿನ ಎಲ್ಲಾ ಸಾಧನೆಗಳನ್ನು ಬರೆಯಿರಿ. ಈ ಡೈರಿಯನ್ನು ಚೆನ್ನಾಗಿ ಅಲಂಕರಿಸಿ ಮತ್ತು ಮಗು ದುಃಖ ಅಥವಾ ಖಿನ್ನತೆಗೆ ಒಳಗಾದಾಗಲೆಲ್ಲಾ ಈ ಡೈರಿಯನ್ನು ತೋರಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿ.

ಪ್ರಶ್ನೆಗಳನ್ನು ಕೇಳಿ : ಸದಾ ಪಾಲಕರು ನನ್ನ ಜೊತೆಗಿದ್ದಾರೆಂದು ಮಗುವಿಗೆ ಅನ್ನಿಸಬೇಕು. ಮಗುವಿಗೆ ಯಾವುದು ಇಷ್ಟ ಹಾಗೆ ಯಾವುದರ ಬಗ್ಗೆ ಭಯವಿದೆ ಎಂಬುದನ್ನು ಕೇಳಿ ತಿಳಿಯಿರಿ. ಅವರ ಭಯ ಹೋಗಲಾಡಿಸಲು ಏನು ಮಾಡ್ಬೇಕು ಎಂಬುದನ್ನು ಮಗುವಿಗೆ ಕೇಳಿ.

PARENTING TIPS: ಖಾಸಗಿ ಅಂಗ ಸ್ಪರ್ಶಿಸುವ ಮಕ್ಕಳ ಹವ್ಯಾಸ ಹೀಗೆ ಓಡಿಸಿ 

ವಿಶ್ರಾಂತಿ : ನಿರಂತರ ಒಂದೇ ರೀತಿಯ ಕೆಲಸ ಮಕ್ಕಳನ್ನು ಆಯಾಸಗೊಳಿಸುತ್ತದೆ. ಇದ್ರಿಂದ ಮಕ್ಕಳು ಉಲ್ಲಾಸ ಕಳೆದುಕೊಳ್ತಾರೆ. ಇದ್ರ ಬದಲು ಕೆಲಸದ ಮಧ್ಯೆ ವಿರಾಮ ತೆಗೆದುಕೊಳ್ಳಲು ಮಕ್ಕಳಿಗೆ ತಿಳಿಸಿ. ವಿಶ್ರಾಂತಿ ಮಕ್ಕಳ ಮನಸ್ಸನ್ನು ಆಯಾಸ ಮುಕ್ತಗೊಳಿಸಿ, ಉಲ್ಲಾಸದಿಂದಿಡುತ್ತದೆ. 

ನಿಧಾನವೇ ಪ್ರಧಾನ : ಶಾಲೆಗೆ ಸೇರಿಸಿದ ತಕ್ಷಣ ಮಗು ಎಲ್ಲ ಪಾಠವನ್ನು ಓದ್ಬೇಕೆಂದ್ರೆ ಹೇಗೆ ಸಾಧ್ಯ? ಡಾನ್ಸ್ ಕ್ಲಾಸಿಗೆ ಸೇರಿಸಿದ ತಕ್ಷಣ ಡಾನ್ಸ್ ಬರಲು ಹೇಗೆ ಸಾಧ್ಯ. ಪಾಲಕರ ನಿರೀಕ್ಷೆ ಹೆಚ್ಚಿರುತ್ತದೆ. ಅದನ್ನು ನಿಯಂತ್ರಿಸಿಕೊಳ್ಳುವ ಅವಶ್ಯಕತೆಯಿದೆ. ಮಗು ಹೊಸ ವಿಷಯ ಅಥವಾ ಕೌಶಲ್ಯವನ್ನು ಕಲಿಯಲು ಸಮಯ ಬೇಕು ಎಂಬುದನ್ನು ನೀವು ಅರಿಯಬೇಕು. ಮಗು ಬೇಗ ಕಲಿತಿಲ್ಲವೆಂದ್ರೆ ಅದು ದುರ್ಬಲ ಎಂದು ಅರ್ಥವಲ್ಲ. ಇದರಿಂದ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತದೆ. ಪ್ರತಿಯೊಂದು ಮಗುವಿನ ಕಲಿಕೆಯ ವೇಗವು ವಿಭಿನ್ನವಾಗಿರುತ್ತದೆ ಮತ್ತು ನೀವು ಯಾವುದಕ್ಕೂ ನಿಮ್ಮ ಮಗುವಿನ ಮೇಲೆ ಒತ್ತಡ ಹೇರಬಾರದು.
 

Follow Us:
Download App:
  • android
  • ios