Asianet Suvarna News Asianet Suvarna News

ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹ ಅಮಾನ್ಯ ಆದೇಶಕ್ಕೆ, ಕನ್ನಡದ ಕಥೆಗಾರ ವಸುಧೇಂದ್ರ ಬೇಸರ!

ಸುಪ್ರೀಂ ಕೋರ್ಟ್‌ನಿಂದ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನಿರಾಕರಿಸಿದ್ದಕ್ಕೆ ಕನ್ನಡ ಬರಹಗಾರ ವಸುಧೇಂದ್ರ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

Kannada writer Vasudhendra got upset for Supreme Court did not recognize same sex marriage sat
Author
First Published Oct 19, 2023, 3:05 PM IST

ಬೆಂಗಳೂರು (ಅ.19): ದೇಶದಲ್ಲಿ ಸುಪ್ರೀಂ ಕೋರ್ಟ್‌ನಿಂದ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನಿರಾಕರಿಸಿದ ಬೆನ್ನಲ್ಲಿಯೇ, ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ. ಕನ್ನಡ ನಾಡಿನ ಪ್ರಸಿದ್ಧ ಬರಹಗಾರ ಹಾಗೂ ಕಥೆಗಾರ ವಸುಧೇಂದ್ರ ಅವರು ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಅವರು, ಸಲಿಂಗ ವಿವಾಹಕ್ಕೆ ಮಾನ್ಯತೆ ಸಿಗದೇ ಇರುವುದು ದುಃಖವನ್ನೂ ಮತ್ತು ಹತಾಶೆಯನ್ನೂ ತಂದಿದೆ. ಈ ಕ್ವೀರ್‌ ಸಮುದಾಯವು ಚಿಕ್ಕದು. ಇನ್ನು ದೇಶದಲ್ಲಿ ಶಾಸಕಾಂಗವು ಯಾವತ್ತೂ ಬಹುಸಂಖ್ಯಾತರ ಪರವೇ ಇರುತ್ತದೆ. ಆದ ಕಾರಣ, ಅಲ್ಪಸಂಖ್ಯಾತರು ತಮ್ಮ ಸಮಸ್ಯೆಯ ಪರಿಹಾರಕ್ಕೆ ನ್ಯಾಯಾಂಗದ ಮೊರೆ ಹೋಗುವುದು ಸಹಜವಾಗಿದೆ. ಈಗ ನ್ಯಾಯಾಂಗವೇ ಹೀಗೆ ಕೈಚೆಲ್ಲಿ, ಶಾಸಕಾಂಗದ ಕಡೆಗೆ ಬೆರಳು ಮಾಡಿದರೆ ನಮ್ಮ ಗತಿಯೇನು? ಎಂದು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ. 

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ದೇಶದಲ್ಲಿ ಈ ಹಿಂದೆ ಸೆಕ್ಷನ್‌ 377 ಅಮಾನ್ಯ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣದಿಂದಲೇ ನಾವು ನ್ಯಾಯಾಂಗದ ಮೊರೆ ಹೋಗಿದ್ದೆವು. ಆಗ ಸುಪ್ರೀಂ ಕೋರ್ಟ್‌ ಮೊದಲಿಗೆ ಹೆದರಿದರೂ ಅನಂತರ ಧೈರ್ಯದಿಂದ ಮಾನವೀಯತೆಯ ಪರವಾಗಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ಉದ್ದೇಶದಿಂದ ನ್ಯಾಯ ನೀಡಿತ್ತು. ಜೊತೆಗೆ ಶಾಸಕಾಂಗಕ್ಕೆ ಕಾನೂನು ಬದಲಾಯಿಸಲು ಆದೇಶಿಸಿತ್ತು. ಈಗ ಹೊಸದಾಗಿ ಮತ್ತೆ ಸಂಕೋಚವೇಕೆ? ನ್ಯಾಯಾಲಯವು ನಮ್ಮ ಪರವಾಗಿ ಸಾಕಷ್ಟು ಸಹಾನುಭೂತಿ ವ್ಯಕ್ತಿಪಡಿಸಿ, ಕೊನೆಗೆ ನಿರಾಸೆಯ ತೀರ್ಪು ನೀಡಿದೆ. ಈ ತೀರ್ಪು ಮಗುವನ್ನು ಚಿವುಟಿ ಜೋಗುಳ ಹಾಡಿದಂತಿದೆ ಎಂದು ಹೇಳಿದ್ದಾರೆ.

ಮುಂದುವರೆದು 'ನಮ್ಮ ಸಮುದಾಯಕ್ಕೆ ಹೋರಾಟ ಮಾಡುವುದರಲ್ಲಿ ಹಲವು ದಶಕಗಳ ಅನುಭವವಿದೆ. ಇಂದಲ್ಲಾ ನಾಳೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ವಿಶ್ವಾಸ ನಮಗಿದೆ. ನೂರಾರು ಕೋಟಿ ಜನಸಂಖ್ಯೆಯ ದೊಡ್ಡ ದೇಶಕ್ಕೆ, ಪುಟ್ಟ ಸಮುದಾಯವೊಂದರ ನೋವು ಅರ್ಥವಾಗದೇ ಹೋಗಿದೆ. ಅನ್ಯಾಯದ ತೀರ್ಪುಗಳಿಂದ ಹಲವು ಬಲಿಗಳನ್ನು ನೀಡದೆ, ನ್ಯಾಯದ ಸೌಧ ಕಟ್ಟಲಾಗುವುದಿಲ್ಲ ಎನ್ನುವುದು ದುರಂತ' ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸಲಿಂಗ ದಂಪತಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ತೀರ್ಪಿನ ಪ್ರಮುಖಾಂಶಗಳು ಹೀಗಿದೆ..

ಎಲ್ಲರನ್ನೂ ಒಳಗೊಂಡ ಎಲ್‌ಜಿಬಿಟಿಕ್ಯೂ? : 
ಅಲ್ಪಸಂಖ್ಯಾತ ಲಿಂಗತ್ವವನ್ನು ಹೊಂದಿರುವ ಎಲ್‌ಜಿಬಿಟಿಕ್ಯೂ ಅನ್ನು ಅಸಹಜ ಸಮುದಾಯ ಎಂಬುದು ಬಹುತೇಕರ ಗ್ರಹಿಕೆ ಆಗಿತ್ತು. ಅದನ್ನು ಹತ್ತಿಕ್ಕಿ ತಮ್ಮ ಅಸ್ಮಿತೆಯನ್ನು ಮುಚ್ಚಿಟ್ಟು ಬಹುತ್ವರಂತೆ ಬದುಕುತ್ತಿದ್ದರು. ಈಗ ಎಲ್‌ಜಿಬಿಟಿಕ್ಯೂನ ಎಲ್ಲರೂ ತಮ್ಮ ಅಸ್ಮಿತೆಗೆ ಹೋರಾಡುತ್ತಿದ್ದಾರೆ. ಇನ್ನು ಎಲ್‌ಜಿಬಿಟಿಕ್ಯೂ (LGBTQ) ಎಂದರೆ, L- ಲೆಸ್ಬಿಯನ್‌, G- ಗೇ, B- ಬೈಸೆಕ್ಷುವಲ್‌, T- ಟ್ರಾನ್ಸ್‌ಜೆಂಡರ್‌ ಹಾಗೂ Q- ಕ್ವೀರ್‌ ಎಂಬ ಐದು ಭಾವನೆಗಳ ಗುಚ್ಛವಾಗಿದೆ ಎಂದು ಹೇಳಬಹುದು. ಇಲ್ಲಿ ಲೆಸ್ಬಿಯನ್‌ (Lesbian) ಎಂದರೆ: ಮಹಿಳೆ + ಮಹಿಳೆ ಸಂಬಂಧ, ಗೇ (Gay) ಎಂದರೆ: ಪುರುಷ + ಪುರುಷ ಸಂಬಂಧ, ಬೈಸೆಕ್ಷುವಲ್‌ (Bisexual) ಎಂದರೆ: ಹುಡುಗರು ಮತ್ತು ಹುಡುಗಿಯರೊಂದಿಗೆ ಸಂಬಂಧ ಹೊಂದಿರುವವರು. ಟ್ರಾನ್ಸ್‌ಜೆಂಡರ್‌ (Transgender) ಎಂದರೆ: ಹುಟ್ಟಿದ ಲಿಂಗಕ್ಕೆ ಹೊಂದಿಕೆಯಾಗದೆ ಲೈಂಗಿಕ ಸಂಬಂಧ ಹೊಂದಿರುವವರು. ಹಾಗೂ ಕ್ವೀರ್‌ (Queer) ಎಂದರೆ: ತಾನು ಗಂಡೋ, ಹೆಣ್ಣೋ ಗೊತ್ತಿಲ್ಲದ ಜನರಾಗಿದ್ದಾರೆ. ಇವರು ಯಾರ ಆಕರ್ಷಣೆಗೆ ಬೀಳುತ್ತಾರೆಂದು ಸ್ವತಃ ಅವರಿಗೇ ತಿಳಿದಿರುವುದಿಲ್ಲ.

Follow Us:
Download App:
  • android
  • ios