ನಾವು ಹಿರಿಯರನ್ನು ಮನೆಯಿಂದ ಹೊರ ಹಾಕ್ತೇವೆ. ಆದ್ರೆ ಜಪಾನ್ ಜನರ ಆಲೋಚನೆ ಭಿನ್ನವಾಗಿದೆ. ಅವ್ರು ಅಜ್ಜಿಯನ್ನು ಹಣಕೊಟ್ಟು ಬಾಡಿಗೆಗೆ ಪಡೀತಾರೆ. ಯಾಕೆ ಗೊತ್ತಾ? 

ಅಜ್ಜಿ ಹವ್ಯಾಸವನ್ನು ಫಾಲೋ ಮಾಡುವ ಮೊಮ್ಮಕ್ಕಳ ವಯಸ್ಸು ಉಳಿದವರಿಗಿಂತ 8 ವರ್ಷ ಹೆಚ್ಚಾಗುತ್ತೆ ಅಂತ ಸಂಶೋಧನೆಯೊಂದು ಹೇಳಿದೆ. ಮನೆಯಲ್ಲಿ ಅಜ್ಜಿ – ಅಜ್ಜನಿಗೆ ಈಗ ಅವಕಾಶವೇ ಇಲ್ಲ. ವಯಸ್ಸಾದ್ಮೇಲೆ ಅವರನ್ನು ಮಕ್ಕಳು ದೂರು ಮಾಡ್ತಾರೆ. ಅನೇಕರಿಗೆ ಅನಾಥಾಶ್ರಮ ಗತಿಯಾದ್ರೆ ಮತ್ತೆ ಕೆಲವರು ಮಕ್ಕಳಿಂದ ಬೇರೆಯಾಗಿ ದೂರ ವಾಸ ಮಾಡ್ತಿರ್ತಾರೆ. ಇದ್ರಿಂದ ಅಜ್ಜಿ ಹವ್ಯಾಸ ಇರ್ಲಿ, ಅಜ್ಜಿ ಹಿತನುಡಿ ಕೂಡ ಮೊಮ್ಮಕ್ಕಳಿಗೆ ಮಿಸ್ ಆಗ್ತಿದೆ. ಜನರು ಹಣ, ಸಮಯದ ಹಿಂದೆ ಬಿದ್ದಿದ್ದಾರೆ. ತಂತ್ರಜ್ಞಾನದಲ್ಲಿ ದಿನಕ್ಕೊಂದು ಸಂಶೋಧನೆಯಾಗ್ತಿದ್ದಂತೆ ಭಾವನೆಗಳು ಬೆಲೆ ಕಳೆದುಕೊಂಡಿವೆ. ನೀವು ಎಷ್ಟೇ ಬುದ್ಧಿವಂತರಾಗಿರಿ, ಟೆಕ್ನಾಲಜಿ ಬಗ್ಗೆ ಎಷ್ಟೇ ಜ್ಞಾನ ಹೊಂದಿರಿ. ಮನೆ, ಮಕ್ಕಳ ನಿರ್ವಹಣೆ ನಿಮಗೆ ತಿಳಿದಿಲ್ಲ ಅಂದ್ರೆ ನೀವು ಸೋತಂತೆ. ಸಂಸಾರದಲ್ಲಿ ಬರೀ ಹಣ ಮುಖ್ಯವಾಗೋದಿಲ್ಲ. ಪರಸ್ಪರ ಹೊಂದಾಣಿಕೆ, ಕಷ್ಟಗಳನ್ನು ಎದುರಿಸುವ ತಾಳ್ಮೆ, ಹಳೆ ಸಂಪ್ರದಾಯ, ಪದ್ಧತಿಗಳ ಬಗ್ಗೆ ಜ್ಞಾನ ಸೇರಿದಂತೆ ಅನೇಕ ವಿಷ್ಯಗಳು ಇಲ್ಲಿ ಮಹತ್ವ ಪಡೆಯುತ್ತವೆ. ಅನೇಕ ಬಾರಿ ನಮಗೆ ಬಂದ ಕಷ್ಟಕ್ಕೆ ಪರಿಹಾರ ಬೇಕಾಗಿರೋದಿಲ್ಲ. ಕಷ್ಟವನ್ನು ಯಾವುದೇ ಲಾಭವಿಲ್ಲದೆ ಕೇಳುವ ಹಾಗೂ ಅನುಭವದ ಮೂಲಕ ಸೂಕ್ತ ಸಲಹೆ ನೀಡುವ ವ್ಯಕ್ತಿಯ ಅವಶ್ಯಕತೆ ಇರುತ್ತದೆ.

ಮನೆಯಲ್ಲಿ ಹಿರಿಯರು ಈ ಸಲಹೆ ನೀಡುವ ಕೆಲ್ಸ ಮಾಡ್ತಾರೆ. ಈಗ ಮನೆಯಲ್ಲಿ ಹಿರಿಯರೇ ಇರೋದಿಲ್ಲವಾದ್ರಿಂದ ಜಪಾನ್ ಕಂಪನಿ (Japan company) ಇದಕ್ಕೊಂದು ಪರಿಹಾರ ಕಂಡು ಹಿಡಿದಿದೆ. ಜನರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ನೀಡಲು ಓಕೆ ಗ್ರ್ಯಾಂಡ್ಮಾ (OK Grandma) ಎಂಬ ಕಂಪನಿ ಶುರು ಮಾಡಿದೆ.

ಏನಿದು ಓಕೆ ಗ್ರ್ಯಾಂಡ್ಮಾ? : ಜಪಾನ್ನ ಕಂಪನಿ ಕ್ಲೈಂಟ್ ಸರ್ವೀಸಸ್, ಓಕೆ ಗ್ರ್ಯಾಂಡ್ಮಾ ಸೇವೆಯನ್ನು 2012 ರಲ್ಲಿಯೇ ಪ್ರಾರಂಭಿಸಿದೆ. ಈ ಸೇವೆ ಅಡಿಯಲ್ಲಿ ನಿಮಗೆ ಅಜ್ಜಿಯಂದಿರು ಬಾಡಿಗೆಗೆ ಸಿಗ್ತಾರೆ. ಜನರು 60 ರಿಂದ 94 ವರ್ಷ ವಯಸ್ಸಿನ ಮಹಿಳೆಯನ್ನು ಗಂಟೆಗೆ 3,300 ಯೆನ್ ಅಂದರೆ ಸುಮಾರು 1900 ರೂಪಾಯಿಗಳಿಗೆ ಬಾಡಿಗೆ ಪಡೆಯಬಹುದು. ಈ ಅಜ್ಜಿಯರು ಮನೆಕೆಲಸಗಳಲ್ಲಿ ಸಹಾಯ ಮಾಡುವುದಲ್ಲದೆ, ಸಂಬಂಧಗಳು, ಜೀವನ ನಿರ್ಧಾರಗಳು ಮತ್ತು ಮಾನಸಿಕ ಗೊಂದಲಗಳಿಗೆ ಪರಿಹಾರ ನೀಡುವ ಕೆಲ್ಸ ಮಾಡ್ತಾರೆ.

ಅಜ್ಜಿಯರು ಅಮೂಲ್ಯವಾದ ಜೀವನ ಅನುಭವ ಹೊಂದಿದ್ದಾರೆ. ಕೆಲವರು ಸಾಂಪ್ರದಾಯಿಕ ಜಪಾನೀಸ್ ಆಹಾರ ಮಾಡೋದ್ರಲ್ಲಿ ಪರಿಣಿತರಾಗಿದ್ರೆ ಮತ್ತೆ ಕೆಲವರು ಮಕ್ಕಳ ಪಾಲನೆ, ಮನೆ ಕ್ಲೀನಿಂಗ್ ನಲ್ಲಿ ಎಕ್ಸ್ಫರ್ಟ್. ಅನೇಕ ಅಜ್ಜಿಯರು ಭಾವನಾತ್ಮಕ ಬೆಂಬಲ ನೀಡುತ್ತಾರೆ. ಇಲ್ಲಿ ಅನೇಕ ಅಜ್ಜಿಯರು ನಿಮ್ಮ ಮಾತುಗಳನ್ನು ಕೇಳ್ತಾರೆಯೇ ವಿನಃ ಯಾವುದೇ ಪರಿಹಾರ ನೀಡುವುದಿಲ್ಲ. ಒಂಟಿಯಾಗಿ ವಾಸಿಸುವ ಯುವಕರಿಗೆ, ಡಿವೋರ್ಸ್ ನಂತ್ರ ನೋವು ಅನುಭವಿಸ್ತಿರುವ ಜನರಿಗೆ, ಕೆಲಸದಲ್ಲಿ ತೊಂದರೆ ಅನುಭವಿಸಿ, ಸಂಕಷ್ಟದಲ್ಲಿರುವ ಜನರಿಗೆ ಈ ಸರ್ವಿಸ್ ಲಭ್ಯವಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಅಜ್ಜಿಯರನ್ನು ಕಳುಹಿಸಲಾಗುತ್ತದೆ. ಮಾತನಾಡಲು ಅಜ್ಜಿ ಬೇಕು ಎನ್ನುವವರಿಂದ ಹಿಡಿದ, ಜಟಿಲ ಸಮಸ್ಯೆ ಬಿಡುವ ಅಜ್ಜಿಯವರೆಗೆ ಎಲ್ಲ ರೀತಿಯ ಅಜ್ಜಿಯಂದಿರು ಇಲ್ಲಿ ಲಭ್ಯವಿದ್ದಾರೆ. ಈ ಸೇವೆಗೆ ಸೇರಲು, ಅಜ್ಜಿಗೆ ಯಾವುದೇ ವಿಶೇಷ ಪದವಿ ಬೇಕಾಗಿಲ್ಲ. ಕೇವಲ ಅನುಭವ, ತಾಳ್ಮೆ ಮತ್ತು ಮನಸ್ಸಿನಿಂದ ಸಹಾಯ ಮಾಡುವ ಮನೋಭಾವ ಇರಬೇಕು. ಕಂಪನಿ ಈ ಸೇವೆ ವೃದ್ಧರಿಗೆ ಹೊಸ ಗುರುತನ್ನು ಪಡೆಯಲು ಸಹಾಯ ಮಾಡಿದ್ರೆ ಯುವಕರಿಗೆ ಅನುಭವದ ಮೂಲಕ ಉತ್ತಮ ದಾರಿ ಕಂಡುಕೊಳ್ಳಲು ಸಹಾಯವಾಗಿದೆ.