Relationship Tips: ಸಂಗಾತಿಗೆ ಮೋಸ ಮಾಡಿದ್ರಾ? ಹೀಗೆ ಕ್ಷಮೆ ಕೇಳ್ಬೋದು
ಕ್ಷಮೆ ಕೇಳುವುದು ಸುಲಭವಲ್ಲ, ಅದೂ ಸಹ ಸಂಬಂಧಗಳ ವಿಚಾರದಲ್ಲಿ. ಆದರೂ ನಿಮ್ಮ ಸಂಗಾತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಭಾವನೆ ನಿಮಗಿದ್ದರೆ ಅಥವಾ ಅವರಿಂದ ಈ ವಿಚಾರವನ್ನು ಮುಚ್ಚಿಟ್ಟೆ ಎನ್ನುವ ಅಪರಾಧಿ ಪ್ರಜ್ಞೆ ನಿಮಗಿದ್ದರೆ ಅದನ್ನು ಅವರಲ್ಲಿ ಹೇಳಿಬಿಡುವುದು ಉತ್ತಮ ಮಾರ್ಗ.
ಅದು ಹೇಗೋ ಕೆಲವೊಮ್ಮೆ ಆ ಮೋಸ (Cheat) ನಡೆದುಹೋಗಿರುತ್ತದೆ. ಅದ್ಯಾವುದೋ ಕ್ಷಣದ ವೀಕ್ ನೆಸ್ (Weakness) ನಿಂದಾಗಿ ನಿಮ್ಮ ಸಂಗಾತಿಗೆ (Partner) ಮೋಸ ಮಾಡಿರುತ್ತೀರಿ. ಕಡೆಗೊಮ್ಮೆ ಸಿಕ್ಕಾಪಟ್ಟೆ ಪಶ್ಚಾತ್ತಾಪ ಪಟ್ಟಿರುತ್ತೀರಿ. ಅದು ಯಾವುದೇ ವಿಚಾರದಲ್ಲಾಗಿರಬಹುದು. ಹಣಕಾಸು (Financial) ಅಥವಾ ಮತ್ತೊಂದು ಅಫೇರ್ (Affair) ...ಹೀಗೆ ಯಾವುದೇ ರೀತಿಯಲ್ಲಿ ಸಂಗಾತಿಗೆ ಮೋಸ ಮಾಡಿದ್ದೀರಿ ಎಂದಾದರೆ ಅದನ್ನು ಹೇಗೆ ದಕ್ಕಿಸಿಕೊಳ್ಳುತ್ತೀರಿ? ಪ್ರೀತಿಪಾತ್ರ ಸಂಗಾತಿಗೆ ಮೋಸ ಮಾಡಿದ್ದೇನೆಂಬ ಭಾವನೆ ನಿಮ್ಮನ್ನು ಕ್ಷಣಕ್ಷಣಕ್ಕೂ ಕೊಲ್ಲಬಹುದು. ಅಂತಹ ಸಮಯದಲ್ಲಿ ಮನಃಪೂರ್ವಕವಾಗಿ ಸಾರಿ ಕೇಳಿಬಿಡುವುದೇ ಉತ್ತಮ. ನಿಮ್ಮ ಸಂಗಾತಿಗೆ ನಿಮ್ಮ ಮೋಸದ ವಿಚಾರ ಬೇರೆಯವರಿಂದ ತಿಳಿಯುವ ಮೊದಲು ನೀವೇ ಅವರಲ್ಲಿ ಕ್ಷಮೆ (Sorry) ಯಾಚಿಸುವುದು ಸಂಬಂಧ ಉಳಿಯುವ ದೃಷ್ಟಿಯಿಂದ ಒಳ್ಳೆಯದು.
ಕ್ಷಮೆ (Apology) ಕೇಳುವಾಗಲೂ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ತುಂಬ ಪ್ರಾಕ್ಟಿಕಲ್ ಆಗಿರಬೇಕು. ಏಕೆಂದರೆ, ಭಾವನಾತ್ಮಕ ವಿಚಾರಗಳಲ್ಲಿ ಅತಿಯಾಗಿ ಗೋಳಿಟ್ಟರೆ ಇನ್ನಷ್ಟು ಅನಾಹುತ ಗ್ಯಾರಂಟಿ. ಹೀಗಾಗಿ, ಕೆಲವು ಟಿಪ್ಸ್ ನಿಮಗಾಗಿ.
• ಮೊದಲ ಸಂಗತಿ ಎಂದರೆ, ನಿಮ್ಮಿಂದ ತಪ್ಪು ನಡೆದ ಬಳಿಕ ಕ್ಷಮೆ ಕೇಳಲು ಹೆಚ್ಚು ಸಮಯ ತೆಗೆದುಕೊಳ್ಳಬೇಡಿ. ಅವರಲ್ಲಿ ಹೇಗೆ ಕ್ಷಮೆ ಯಾಚಿಸುವುದು, ಹೇಳಿದರೆ ಅವರು ನೊಂದುಕೊಳ್ಳುತ್ತಾರೆ ಅದನ್ನು ಹೇಗೆ ಎದುರಿಸುವುದು ಇತ್ಯಾದಿ ಚಿಂತೆಯಲ್ಲಿ ಮುಳುಗಬೇಡಿ. ಹೇಳಲೋ, ಬಿಡಲೋ ಎನ್ನುವ ಗೊಂದಲದಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಏಕೆಂದರೆ, ನೀವು ಗುಟ್ಟನ್ನು (Secret) ಹೆಚ್ಚು ಸಮಯ ನಿಮ್ಮಲ್ಲಿ ಇರಿಸಿಕೊಂಡರೆ ಆ ದ್ರೋಹ ನಿಮ್ಮ ಸಂಗಾತಿಗೆ ಇನ್ನಷ್ಟು ನೋವನ್ನು ಕೊಡುತ್ತದೆ.
• ನಿಮಗೆ ನೇರವಾಗಿ ಹೇಳಲು ಸಾಧ್ಯವೇ ಇಲ್ಲ ಎನ್ನುವ ಭಾವನೆ ಇದ್ದರೆ, ಸಂಗಾತಿಯನ್ನು ಎದುರಿಸುವುದು ಹೇಗೆ ಎನ್ನುವ ಅಳುಕು ತೀವ್ರವಾಗಿದ್ದರೆ ಕ್ಷಮೆ ಕೇಳಲು ಪತ್ರ (Letter) ಬರೆಯಬಹುದು. ಪತ್ರದ ಮೂಲಕ ಕ್ಷಮೆ ಕೇಳಬಹುದು. ಮೊದಲಿಗೆ ಅವರಿಗೆ ಹಿಂಸೆ ಎನಿಸಿದರೂ ಬಳಿಕ, ನಿಮ್ಮ ಪ್ರಾಮಾಣಿಕತೆಯನ್ನು ಅವರು ಖಂಡಿತ ಮೆಚ್ಚಿಕೊಳ್ಳುತ್ತಾರೆ. ಆ ಸನ್ನಿವೇಶದಲ್ಲಿ ನಿಮ್ಮ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಂಡು ನಿಮ್ಮ ಬಗ್ಗೆ ಮೃದುವಾಗುವ ಸಂಭವ ಹೆಚ್ಚು.
• ನೀವು ಯಾರಿಂದ ಆಕರ್ಷಿತರಾಗಿ (Attaction) ಸಂಗಾತಿಗೆ ಮೋಸ ಮಾಡಿದ್ದೀರೋ ಅವರ ಕುರಿತಾಗಿ ಯಾವುದೇ ಭಾವನೆ ಇಲ್ಲ ಎನ್ನುವುದನ್ನು ಸಂಗಾತಿಗೆ ಮನದಟ್ಟು ಮಾಡಿಕೊಡಿ. ಅವರೊಂದಿಗೆ ಯಾವುದೇ ಸಂವಹನ ಇಲ್ಲ ಎಂದು ತಿಳಿಸಿಕೊಡಿ. ಹಾಗೆಯೇ, ಸಂಗಾತಿಗೆ ಮೋಸ ಮಾಡುವ ಇರಾದೆ ಇರಲಿಲ್ಲ, ಕಳೆದುಕೊಳ್ಳಲು ಇಷ್ಟವಿಲ್ಲ ಎನ್ನುವುದನ್ನೂ ಸ್ಪಷ್ಟವಾಗಿ ಹೇಳಿ.
• ಯಾವುದೇ ಷರತ್ತಿಲ್ಲದೆ ಕ್ಷಮೆ ಯಾಚಿಸಿ. ಅಂದರೆ, “ಇದೊಂದು ಬಾರಿ ಕ್ಷಮಿಸಿದರೆ ನಾನು ಮುಂದೆ ಹೀಗಿರುತ್ತೇನೆ, ಹಾಗಿರುತ್ತೇನೆ, ನಿನಗಾಗಿ ಹೀಗೆ ಮಾಡುತ್ತೇನೆ...’ ಇತ್ಯಾದಿ ಯಾವುದೇ ಭರವಸೆ ನೀಡಬೇಡಿ. ಈ ಧೋರಣೆ ಸಂಬಂಧವನ್ನು ಹಗುರ ಮಾಡಿಬಿಡುತ್ತದೆ.
• ಈ ವಿಷಯದ ಕುರಿತು ಮಾತನಾಡಲು ಅವರಿಗೂ ಸಮಯ (Time) ನೀಡಿ. ಏಕೆಂದರೆ, ನಿಮ್ಮ ಮೋಸವನ್ನು ಅರಗಿಸಿಕೊಂಡು, ಚಿಂತನೆ ಮಾಡಲು, ನಿಮ್ಮ ಪ್ರಾಮಾಣಿಕತೆಯನ್ನು ಅರಿತುಕೊಳ್ಳಲು ಅವರಿಗೂ ಸಮಯ ಬೇಕು. ತ್ವರಿತ ಉತ್ತರ ನಿರೀಕ್ಷೆ ಮಾಡಬೇಡಿ.
• ಯಾವುದೇ ಕಾರಣಕ್ಕೂ ನಿಮ್ಮ ಮೋಸಕ್ಕೆ ಸಂಗಾತಿಯನ್ನು ಕಾರಣವನ್ನಾಗಿ ಭಾವಿಸಬೇಡಿ ಹಾಗೂ ಅವರಿಗೆ ಅದನ್ನು ಹೇಳಲು ಮುಂದಾಗಬೇಡಿ. “ನೀನು ಹೀಗಿದ್ದರಿಂದ ನಾನು ಹೀಗೆ ಮಾಡಿದೆ’ ಎನ್ನುವ ಮಾತುಗಳು ಬೇಡ. ಇದು ಸಂಪೂರ್ಣವಾಗಿ ನಿಮ್ಮದೇ ತಪ್ಪು, ಅದನ್ನು ಒಪ್ಪಿಕೊಳ್ಳಿ.
• ಸಂಬಂಧದಲ್ಲಿ ಒಮ್ಮೆ ಇಂತಹ ಮೋಸ ನಡೆದರೆ ಮತ್ತೆ ನಂಬಿಕೆ ಮೂಡುವುದು ಕಷ್ಟ. ಸಂಗಾತಿಯಿಂದ ಮುಂದೆ ನಿರಂತರವಾಗಿ ಮಾತುಗಳನ್ನು ಕೇಳಬೇಕಾದ ಸಂದರ್ಭ ಬರಬಹುದು. ಹೀಗಾಗಿ, ನಿಮ್ಮ ಪರಿಸ್ಥಿತಿಯನ್ನು ವಿಮರ್ಶೆ ಮಾಡಿಕೊಂಡು ಕ್ಷಮೆ ಕೇಳುವ ಬಗ್ಗೆ ಯೋಚಿಸಿ. ಆದರೆ, ಮುಂದೆಂದಿಗೂ ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಲು ಹೋಗಬೇಡಿ.