ಶಾಲಾ ಕಾಲೇಜುಗಳು ಬಂದ್‌ ಆಗಿವೆ. ಯಾರೂ ರಸ್ತೆಗೆ ಇಳಿಯುತ್ತಿಲ್ಲ. ಬಸ್ಸುಗಳು ಇಲ್ಲ. ಪಾರ್ಕುಗಳನ್ನು ಮುಚ್ಚಲಾಗಿದೆ. ಮಾಲ್‌ಗಳಿಗೆ ಹೋಗುವಂತೆಯೇ ಇಲ್ಲ. ಬೀದಿಗಳು ನಿರ್ಮಾನುಷವಾಗಿವೆ. ಮಕ್ಕಳನ್ನು ಬೀದಿಯಲ್ಲಿ ಆಡಲೂ ಜನ ಬಿಡುತ್ತಿಲ್ಲ. ಹಾಗಿದ್ದರೆ ಈ ಚಿನಕುರುಳಿಗಳಂತೆ ಕ್ಷಣಕ್ಕೊಮ್ಮೆ ಸಿಡಿಯುವ, ಹಾವಳಿ ಎಬ್ಬಿಸುವ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಹೆತ್ತವರು ಏನ್‌ ಮಾಡ್ತಿದಾರೆ? ಕುತೂಹಲ ಸಹಜ. ಹೆಚ್ಚಿನವರು ಮಕ್ಕಳಿಗೆ ಮೊಬೈಲ್‌ ಆರೋಗ್ಯಕರವಲ್ಲ ಎಂದು ತಿಳಿದೇ ಇದ್ದಾರೆ. ಅದು ನಿಮಗೂ ಗೊತ್ತಿರಲಿ. ಮೊಬೈಲ್‌ ಹೊರತುಪಡಿಸಿ, ಬೇರೆ ಕ್ರಿಯೇಟಿವ್‌ ಐಡಿಯಾಗಳನ್ನು ನೋಡೋಣ. ನಮ್ಮ ಮನೇಲಿ ಮಕ್ಕಳಿದ್ದರೆ ಅವರನ್ನು ಬ್ಯುಸಿಯಾಗಿಡುವ ಕ್ರಿಯೇಟಿವಿಟಿಯನ್ನು ನಾವು ಹುಡುಕಿಕೊಂಡೇ ಇರುತ್ತೇವೆ. ಇನ್ನೂ ನಿಮಗೆ ಆ ಬಗ್ಗೆ ಐಡಿಯಾ ಇಲ್ಲವಾದರೆ ಇಲ್ಲಿವೆ ಒಂದಷ್ಟು ಐಡಿಯಾಗಳು.

- ಮನೆಯ ಬಾಲ್ಕನಿ ಖಾಲಿ ಇದ್ದರೆ, ಟೆರ್ರೇಸ್‌ನಲ್ಲಿ ಸಾಕಷ್ಟು ಜಾಗವಿದ್ದರೆ ಗಾರ್ಡನಿಂಗ್‌ ಶುರುಹಚ್ಚಿಕೊಳ್ಳಲು ಇದು ಪ್ರಶಸ್ತ ಸಮಯ. ಮಕ್ಕಳನ್ನೂ ಅದರಲ್ಲಿ ತೊಡಗಿಸಿಕೊಳ್ಳಿ. ಬೀಜ ಬಿತ್ತುವುದು, ನೀರು ಹನಿಸುವುದು, ಗೊಬ್ಬರ ಹಾಕುವುದು, ಅದು ಮೊಳಕೆ ಒಡೆಯುವುದು, ಚಿಗುರೆಲೆ ಬಿಡುವುದು, ಎಲೆ ಹಳದಿಯಾಗುವುದು, ಉದುರುವುದು, ಗಿಡದ ಆರೈಕೆ- ಇವುಗಳನ್ನೆಲ್ಲ ನೋಡುವುದನ್ನು, ಎಂಜಾಯ್‌ ಮಾಡುವುದನ್ನು ಕಲಿಸಿ. ಮಕ್ಕಳಿಗೆ ಪ್ರಕೃತಿಯೊಂದಿಗೆ ಒಂದಾಗುವುದನ್ನು ಕಲಿಸಿದರೆ ಅದು ಅವರನ್ನು ಜೀವನ ಪೂರ್ತಿ ಕಾಪಾಡುತ್ತದೆ.

- ಮಕ್ಕಳಿಗೆ ಮಣ್ಣು ಎಂದರೆ ತುಂಬ ಇಷ್ಟ. ಆದರೆ ಹೊರಗೆಲ್ಲೂ ಸರಿಯಾದ ಮಣ್ಣು ಸಿಗುವುದಿಲ್ಲ. ಆದರೆ ಅಂಗಡಿಯಲ್ಲಿ ಬಣ್ಣದ ಕ್ಲೇ ಮುದ್ದೆಗಳು ಸಿಗುತ್ತವೆ. ಅಥವಾ ಸರಿಯಾದ ಜೇಡಿಮಣ್ಣಿನ ಮುದ್ದೆಗಳು ಸಿಕ್ಕರೆ ನೀವು ಅದೃಷ್ಟಶಾಲಿ. ಅದನ್ನು ತಂದು ಮಕ್ಕಳಿಗೆ ಕೊಟ್ಟು ನೀವೂ ಅವರ ಜೊತೆ ಇನ್ವಾಲ್ವ್ ಆದರೆ, ಮಣ್ಣಿನಿಂದ ನಾನಾ ಆಕೃತಿಗಳನ್ನು ಮಾಡಿ ಖುಷಿಪಡಬಹುದು.

- ಬಣ್ಣಗಳನ್ನು ಮಕ್ಕಳು ತುಂಬ ಪ್ರೀತಿಸುತ್ತಾರೆ. ಅವರಿಗೆ ಡ್ರಾಯಿಂಗ್‌ ಶೀಟ್‌, ಬಣ್ಣಗಳನ್ನು ತಂದು ಕೊಡಿ. ಅವರು ಎಂಥ ಲೋಕವನ್ನು ಸೃಷ್ಟಿಸುತ್ತಾರೆ ಅಂತ ನೀವೇ ನೋಡುವಿರಂತೆ. ಅಥವಾ ಮನೆಯ ಒಂದು ಗೋಡೆಯನ್ನು ಅವರಿಗೇ ಬಿಟ್ಟುಕೊಡಿ. ಅಲ್ಲೂ ಅವರು ರಂಜಕವಾದ ಲೋಕವನ್ನು ಸೃಷ್ಟಿಸುತ್ತಾರೆ. ಅದೊಂದು ಸವಿ ನೆನಪಾಗಿ ಉಳಿಯುತ್ತದೆ.

ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು! ...

- ಮನೆಕೆಲಸದಲ್ಲಿ ಮಕ್ಕಳ ಸಹಾಯ ಪಡೆಯಿರಿ. ಕೆಲಸ ಮಾಡುವಂತೆ ಗದರಿಸಬೇಡಿ. ಸಹಾಯ ಮಾಡಲು ಕೇಳಿಕೊಳ್ಳಿ. ಖುಷಿಯಿಂದ ಜತೆಯಾಗುತ್ತಾರೆ. ಅಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು, ಗುಡಿಸಿ ಒರೆಸುವುದು- ಎಲ್ಲದರಲ್ಲೂ ಅವರಿಗೊಂದು ಪಾತ್ರ ಹಾಗೂ ಪ್ರಾಮುಖ್ಯತೆ ಇರಲಿ. ಇದು ಅವರಿಗೆ ಮುಂದಿನ ಜೀವನಕ್ಕೆ ಸಹಾಯಕ. 
- ಕತೆ ಹೇಳಿ. ಯಾವ ಕತೆಯಾದರೂ ಸರಿ. ಚಂದಮಾಮ, ಬಾಲಮಂಗಳ, ಕಾಮಿಕ್ಸ್, ರೋಲ್ ದಹ್ಲ್, ಬೇತಾಳ, ಅಥವಾ ನಿಮ್ಮ ಬಾಲ್ಯದ ಕತೆಗಳು, ಕಾಡಿನ ಕತೆಗಳನ್ನು ಹೇಳಿದರೆ ಮಕ್ಕಳು ಹೆಚ್ಚು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ. ಕತೆಗಳನ್ನು ಓದುವಿಕೆಯನ್ನು ಕಲಿಸಿ. ನೀವೂ ಪುಸ್ತಕ ಹಿಡಿದರೆ ಅವರೂ ಪುಸ್ತಕ ಹಿಡಿದುಕೊಳ್ಳುತ್ತಾರೆ. 
- ಇನ್‌ಡೋರ್‌ ಗೇಮ್‌ಗಳನ್ನು ಒಂದಷ್ಟು ತಂದಿಟ್ಟುಕೊಳ್ಳಿ. ಕಾರ್ಡ್ಸ್, ಕೇರಂ, ಚೆಸ್‌, ಹಾವು ಏಣಿ, ಚೆನ್ನೆಮಣೆಗಳನ್ನು ಹೊರಗೆ ತೆಗೆಯಿರಿ. ಆಡುವುದನ್ನು ನೀವೂ ಕಲಿಯಿರಿ, ಮಕ್ಕಳಿಗೂ ಕಲಿಸಿ. ಇದರಿಂಧ ಇಡೀ ಫ್ಯಾಮಿಲಿ ಒಟ್ಟಾಗಿ ಆನಂದವನ್ನು ಸವಿಯಲು ಸಾಧ್ಯವಾಗುತ್ತದೆ. 

ಬೆಳಗಿನ ಬ್ರೇಕ್ ಫಾಸ್ಟ್ : ಅಮ್ಮಂದಿರ ನಿತ್ಯದ ಗೋಳು! 

- ಮಕ್ಕಳು ಆಟಕ್ಕೆ ಉಪಯೋಗಿಸುವ ಸಾಮಗ್ರಿಗಳನ್ನು ನೀವೇ ಮಾಡಲು ಕಲಿಯಿರಿ. ಅದಕ್ಕೆ ಪೂರಕ ಸಾಮಗ್ರಿ ತಂದುಕೊಳ್ಳಬೇಕು ಅಷ್ಟೇ. ಅವುಗಳನ್ನು ಮಾಡುವ ವಿಧಾನ ಈಗ ಯೂಟ್ಯೂಬ್‌ನಲ್ಲಿ ಲಭ್ಯ. ಲಕ್ಷಾಂತರ ಕಲಾತ್ಮಕ ಐಡಿಯಾಗಳು ನಿಮಗೆ ಅಲ್ಲಿ ಸಿಗುತ್ತವೆ. 
- ನೀವು ಕಲಿತು, ಮರೆತ ವಿದ್ಯೆಯೊಂದನ್ನು ಮರಳಿ ನೆನಪಿಸಿಕೊಳ್ಳಲು, ಮಕ್ಕಳಿಗೂ ಅದರ ಬಗ್ಗೆ ಆಸಕ್ತಿ ಮೂಡಿಸಲು ಇದು ಸಕಾಲ. ನೀವು ಡ್ಯಾನ್ಸ್ ಕಲಿತಿರಬಹುದು, ಯೋಗ ಕಲಿತಿರಬಹುದು, ಪೇಂಟಿಂಗ್‌, ಪ್ರಾಣಾಯಾಮ, ಕರೋಕೆ, ಕೊಳಲು, ವೀಣೆ- ಹೀಗೆ ಏನೇ ಕಲಿತಿದ್ದರೂ ಅದನ್ನು ಶಾರ್ಪ್ ಮಾಡಿಕೊಳ್ಳುವುದಕ್ಕೆ ಸಕಾಲ. 
- ಅವರವರ ಕೆಲಸ ಅವರವರೇ ಮಾಡಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಕಲಿಸುವುದಕ್ಕೆ ಇದು ಸಕಾಲ. ಅವರ ಬಟ್ಟೆ ಅವರೇ ಒಗೆದುಕೊಳ್ಳಲಿ, ಒಣಗಿಸಿ ಮಡಚಿಡುವುದು, ಇಸ್ತ್ರಿ ಮಾಡುವುದು ಕಲಿಯಲಿ. ಇದು ಜೀವನ ಪಾಠ.