ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು!
ಕೊರೋನಾ ಎಂಬ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತೇವೆ. ಈ ವೈರಸ್‍ನಿಂದ ತಪ್ಪಿಸಿಕೊಳ್ಳಲು ಇರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ರೆ ಪದೇಪದೆ ಮುಖ,ಮೂಗು,ಕಣ್ಣು ಮುಟ್ಟಿಕೊಳ್ಳುವ ಮಕ್ಕಳನ್ನು ಈ ಅಭ್ಯಾಸದಿಂದ ಹೊರತರುವುದು ಹೇಗೆ ಎಂಬುದೇ ಪೋಷಕರಿಗೆ ದೊಡ್ಡ ಚಿಂತೆ.
ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನಾ ಪೀಡಿತರ ಸಂಖ್ಯೆ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ನಡುವೆ ಕೇರಳದಲ್ಲಿ 3 ವರ್ಷದ ಮಗುವಿಗೂ ಕೊರೋನಾ ವೈರಸ್ ತಗುಲಿರುವುದು ಪುಟ್ಟ ಮಕ್ಕಳ ಪೋಷಕರ ದುಗುಡವನ್ನು ಇನ್ನಷ್ಟು ಹೆಚ್ಚಿಸಿದೆ. ಕೈಗಳನ್ನು ಆಗಾಗ ತೊಳೆಯುವುದು, ಪದೇಪದೆ ಮೂಗು, ಮುಖ ಹಾಗೂ ಕಣ್ಣುಗಳನ್ನು ಮುಟ್ಟದೇ ಇರುವ ಮೂಲಕ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಬಹುದು ಎಂಬುದು ವೈದ್ಯಕೀಯ ಸಲಹೆ. ಆದ್ರೆ ಪುಟ್ಟ ಮಕ್ಕಳು ಸಾಮಾನ್ಯವಾಗಿ ಅರೆ ಕ್ಷಣಕ್ಕೊಮ್ಮೆ ಮೂಗಿನೊಳಗೆ ಬೆರಳು ತೂರುವ, ಮುಖ ಮುಟ್ಟುವ, ಕಣ್ಣು ಉಜ್ಜಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ.ದೊಡ್ಡವರಿಗೇ ಮುಖ ಮುಟ್ಟಿಕೊಳ್ಳದಿರುವುದು ಕಷ್ಟದ ಕೆಲಸ. ಹೀಗಿರುವಾಗ ಮಕ್ಕಳನ್ನು ಇಂಥ ಅಭ್ಯಾಸಗಳಿಂದ ಹೊರತರುವುದು ಹೇಗೆ ಎಂಬುದೇ ಪೋಷಕರ ದೊಡ್ಡ ಚಿಂತೆ. ಇದು ತುಸು ಕಷ್ಟದ ಕೆಲಸವಾದ್ರೂ ಸ್ವಲ್ಪ ಪ್ರಯತ್ನಪಟ್ಟರೆ ಅಸಾಧ್ಯವಾದದ್ದೇನಲ್ಲ. ಮಕ್ಕಳ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಈ ಕಷ್ಟದ ಕೆಲಸಕ್ಕೆ ಕೈ ಹಾಕಲೇಬೇಕಾದ ತುರ್ತು ಅಗತ್ಯ ಇಂದು ಹೆಚ್ಚಿದೆ.
ಆಕ್ಷೀ ಎಂದರೆ ಸಾಕು ಭಯವಾಗೋ ಈ ಟೈಮಲ್ಲಿ ಈ ವೀಡಿಯೋ ನೋಡಿ ನಕ್ಕು ಬಿಡಿ
ಕೈ ಮುಖಕ್ಕೆ ಹೋದ ತಕ್ಷಣ ಎಚ್ಚರಿಸಿ
ಮಕ್ಕಳು ಅಭ್ಯಾಸ ಬಲದಿಂದ ಆಗಾಗ ಮುಖ ಮುಟ್ಟಿಕೊಳ್ಳುತ್ತಾರಷ್ಟೇ. ಎಷ್ಟೋ ಬಾರಿ ತಾನು ಮುಖ ಮುಟ್ಟಿಕೊಳ್ಳುತ್ತಿದ್ದೇನೆ ಎಂಬ ಅರಿವು ಮಗುವಿಗಿರುವುದಿಲ್ಲ. ಹೀಗಾಗಿ ಮಗು ಕೈಯಿಂದ ಪದೇಪದೆ ಮುಖ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಲು ಇರುವ ಸುಲಭದ ಉಪಾಯವೆಂದ್ರೆ ಪ್ರತಿ ಬಾರಿ ಅವರ ಕೈ ಮುಖದ ಬಳಿ ಹೋದ ತಕ್ಷಣ ಅವರನ್ನು ಎಚ್ಚರಿಸುವ ಕೆಲಸವನ್ನು ಪೋಷಕರು ಮಾಡಬೇಕು. ಹೀಗೆ ಮಾಡುವುದರಿಂದ ಕ್ರಮೇಣ ಮಕ್ಕಳು ಸ್ವಯಂಪ್ರೇರಣೆಯಿಂದ ತಮ್ಮಷ್ಟಕ್ಕೆ ಮುಖ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡುತ್ತಾರೆ. ಇನ್ನು ಹೇಳಿದ್ದು ಅರ್ಥ ಮಾಡಿಕೊಳ್ಳಬಲ್ಲ ವಯಸ್ಸಿನ ಮಕ್ಕಳಿಗೆ ಮುಖ, ಮೂಗು ಹಾಗೂ ಕಣ್ಣು ಮುಟ್ಟಿಕೊಳ್ಳುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ವಿವರಿಸಬೇಕು. ಆಗ ಅವರಾಗಿಯೇ ಇಂಥ ಅಭ್ಯಾಸಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಾರೆ.
ಮನೆಯಲ್ಲಿ ಮಕ್ಕಳಿಗೆ ಕೈಗೆಟುಕುವಂತೆ ಟಿಶ್ಯೂ ಇಡಿ
ಟಿಶ್ಯೂ ಕೈಗೆ ಸಿಕ್ಕರೆ ಮಕ್ಕಳು ಹಾಳು ಮಾಡುತ್ತಾರೆ, ಮನೆ ತುಂಬಾ ಕಸ ಮಾಡುತ್ತಾರೆ ಎಂಬ ಕಾರಣಕ್ಕೆ ಮಕ್ಕಳ ಕೈಗೆಟುಕದ ಜಾಗದಲ್ಲಿ ಟಿಶ್ಯೂ ಪ್ಯಾಕ್ ಇಟ್ಟಿರುತ್ತೇವೆ. ಆದ್ರೆ ಈಗಿನ ಪರಿಸ್ಥಿತಿಯಲ್ಲಿ ಟಿಶ್ಯೂ ಸದಾ ಮಕ್ಕಳ ಕೈಗೆಟುಕುವ ಜಾಗದಲ್ಲಿಡುವುದು ಒಳ್ಳೆಯದು. ಶೀನುವಾಗ, ಕೆಮ್ಮುವಾಗ ಅಥವಾ ಶೀತ ಬಂದಾಗ ಟಿಶ್ಯೂ ಬಳಸಿ ಅದನ್ನು ಡಸ್ಟ್ ಬಿನ್‍ನಲ್ಲಿ ಎಸೆಯುವಂತೆ ಮಕ್ಕಳಿಗೆ ತರಬೇತಿ ನೀಡಿ. ಹಾಗೆಯೇ ಆ ಬಳಿಕ ಕೈ ತೊಳೆದುಕೊಳ್ಳುವುದು ಅಗತ್ಯ ಎಂಬುದನ್ನೂ ತಿಳಿಸಿ.
ಭಯ ಬೇಡ: ಶೇ. 80 ರಷ್ಟು ಕೊರೋನಾ ರೋಗಿಗಳು ಸಾಯೋದಿಲ್ಲ!
ಕೈಗೆ ಏನಾದರೊಂದು ವಸ್ತು ಕೊಡಿ
ನಿಮ್ಮ ಮಗುವಿಗೆ ಪದೇಪದೆ ಮುಖ ಮುಟ್ಟಿಕೊಳ್ಳುವ ಅಭ್ಯಾಸವಿದ್ರೆ ಅದನ್ನು ತಪ್ಪಿಸಲು ಇರುವ ಸುಲಭದ ಉಪಾಯವೆಂದ್ರೆ ಅವರ ಕೈಗಳು ಸದಾ ಬ್ಯುಸಿಯಾಗಿರುವಂತೆ ನೋಡಿಕೊಳ್ಳೋದು. ಅಂದ್ರೆ ಕೈಯಲ್ಲಿ ಏನಾದರೊಂದು ವಸ್ತು ಇರುವಂತೆ ನೋಡಿಕೊಳ್ಳಿ. ಮುಖ ಮುಟ್ಟಿಕೊಳ್ಳುವ ಅಭ್ಯಾಸ ತುಂಬಾನೇ ಇದೆ ಅಂದ್ರೆ ಕೈಗೆ ಗ್ಲೌಸ್ ಅಳವಡಿಸಿ.
ತಲೆಗೂದಲು ಮುಖಕ್ಕೆ ಬಾರದಂತೆ ನೋಡಿಕೊಳ್ಳಿ
ತಲೆಗೂದಲು ಉದ್ದವಿದ್ದು, ಮುಖಕ್ಕೆ ಬರುತ್ತಿದ್ರೆ ಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಇದೇ ಕಾರಣಕ್ಕೆ ಅವರು ಕೂದಲನ್ನು ಮೇಲೆ ಹಾಕಿಕೊಳ್ಳಲು ಆಗಾಗ ಮುಖ ಮುಟ್ಟಿಕೊಳ್ಳುತ್ತಾರೆ. ಆದಕಾರಣ ನಿಮ್ಮ ಮಗುವಿನ ಕೂದಲನ್ನು ಶಾರ್ಟ್ ಮಾಡಿಸಿ ಇಲ್ಲವೆ ಉದ್ದ ಕೂದಲಿದ್ರೆ ಹಿಂದೆ ಬಾಚಿ ಕಟ್ಟಿ. ಇದರಿಂದ ಕೂದಲು ಮುಖದ ಮೇಲೆ ಬೀಳುವುದಿಲ್ಲ.
ಮದ್ವೆಯಾಗೋವಾಗ ಗಂಡಿನ ಸಂಬಳ ಕೇಳಿದ್ರೆ ಸಾಲದು, ವ್ಯಕ್ತಿತ್ವದೆಡೆಗೂ ಇರಲಿ ಗಮನ
ಆಗಾಗ ಕೈ ತೊಳೆಯಲು ಹೇಳಿ
ಮೇಲೆ ಹೇಳಿದ ಎಲ್ಲ ಟಿಪ್ಸ್ ಫಾಲೋ ಮಾಡಿದ್ರೂ ನಿಮ್ಮ ಮಗು ಆಗಾಗ ಮುಖ ಮುಟ್ಟಿಕೊಂಡೇ ಮುಟ್ಟಿಕೊಳ್ಳುತ್ತದೆ. ಈ ರೀತಿ ಮುಖ, ಮೂಗು ಅಥವಾ ಕಣ್ಣು ಮುಟ್ಟಿಕೊಂಡ ತಕ್ಷಣ ಸೋಪ್ ಅಥವಾ ಹ್ಯಾಂಡ್ ವಾಷ್ ಬಳಸಿ ಕೈಗಳನ್ನು 20-30 ಸೆಕೆಂಡ್‍ಗಳ ಕಾಲ ಚೆನ್ನಾಗಿ ತೊಳೆಯುವಂತೆ ನೋಡಿಕೊಳ್ಳಿ. ಸಾಧ್ಯವಾದ್ರೆ ನೀವೇ ಕೈಗಳನ್ನು ತೊಳೆಸಿ. ಮನೆಯಿಂದ ಹೊರಗಡೆ ಹೋಗಿ ಬಂದ ಬಳಿಕ, ಆಟವಾಡಿದ ಬಳಿಕ, ಕೊಳಕಾದ ವಸ್ತುಗಳನ್ನು ಮುಟ್ಟಿದ ನಂತರ ಕಡ್ಡಾಯವಾಗಿ ಕೈಗಳನ್ನು ತೊಳೆದುಕೊಳ್ಳುವಂತೆ ತಿಳಿಸಿ. ಈ ಅಭ್ಯಾಸವನ್ನು 2-3 ದಿನಗಳ ಕಾಲ ನೀವೇ ನಿಂತು ಮಾಡಿಸಿದ್ರೆ ನಂತರ ಅವರಾಗಿಯೇ ಈ ಕೆಲಸವನ್ನು ಮಾಡುತ್ತಾರೆ. ಇದರಿಂದ ರೋಗಾಣುಗಳು ದೇಹವನ್ನು ಪ್ರವೇಶಿಸದಂತೆ ತಡೆಯಬಹುದು.