ಹಿಂದೂ ಹುಡುಗಿಯೊಬ್ಬಳಿಂದ ಅಂಗಾಗ ದಾನ ಪಡೆದ ಮುಸ್ಲಿಂ ಯುವತಿಯೊಬ್ಬಳು ಆಕೆಯ ಸಹೋದರನಿಗೆ ರಕ್ಷಾ ಬಂಧನದಂದು ರಾಖಿ ಕಟ್ಟಿ ಸೋದರಿಯಂತೆ ತಾನಿರುವುದಾಗಿ ಭರವಸೆ ನೀಡಿದರು. ಈ ಭಾವುಕ ಕ್ಷಣ ಅನೇಕರ ಕಣ್ಣಾಲಿಗಳ ತೇವಗೊಳಿಸಿತು.

ಕೆಲವೊಂದು ಬದುಕಿನಲ್ಲಿ ನಡೆಯುವ ಘಟನೆಗಳು ಊಹೆಗೂ ನಿಲುಕದ್ದು, ಕೆಲ ನಿಮಿಷಗಳಲ್ಲಿ ಬದುಕೇ ಅಡಿಮೇಲಾಗಿ ಹೋಗುತ್ತದೆ. ನಾವು ಪ್ರೀತಿಸುವ ಜೀವವೊಂದು ನಮ್ಮ ಕಣ್ಣಮುಂದೆಯೇ ಇಲ್ಲವಾಗುತ್ತದೆ. ಅದೇ ರೀತಿ ಅದೊಬ್ಬ ಅಣ್ಣನಿಗೂ ಆಗಿತ್ತು, ಸದಾ ಕಿತ್ತಾಡುತ್ತಾ ಕಿರಿಕಿರಿ ಮಾಡುತ್ತಾ, ಅದಕ್ಕಿಂತಲೂ ಹೆಚ್ಚು ಜೀವದಂತೆ ಪ್ರೀತಿಸುತ್ತಿದ್ದ ತಂಗಿ ಹಠಾತ್ ಆಗಿ ಹೊರಟು ಹೋಗಿದ್ದಳು. ಪ್ರತಿ ಬಾರಿಯೂ ರಕ್ಷಾಬಂಧನ ಬಂದಾಗಲೆಲ್ಲಾ ಆ ತಂಗಿ ಅಣ್ಣನಿಗೆ ನೆನಪಾಗುತ್ತಿದ್ದಳು. ಆದರೆ ಇತ್ತ ಸಾಯುವ ಮೊದಲು ಈ ಅಣ್ಣನ ಪ್ರೀತಿಯ ತಂಗಿ ರೀಯಾ ತಾನು ದಾನ ಮಾಡಬಹುದಾದ ಅಂಗಾಂಗಳೆಲ್ಲವನ್ನೂ ದಾನ ಮಾಡಿದ್ದಳು. ಅತ್ತ ಆಕೆಯ ವೈದ್ಯರ ಮನವೊಲಿಕೆಗೆ ಒಪ್ಪಿದ ಪೋಷಕರು ರೀಯಾಳ ಅಂಗಾಂಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಆದರೆ ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳ ಸಾವು ಪೋಷಕರಿಗೆ ಸಾಯುವವರೆಗೂ ಕಾಡುತ್ತದೆ. ಮಕ್ಕಳ ಸಾವಿನ ಶೋಕ ಸಾಯುವವರೆಗೂ ನಿರಂತರವಾಗಿರುತ್ತದೆ. ಅದೇ ರೀತಿ ರೀಯಾಳ ಪೋಷಕರಿಗೂ ಮಗಳ ಅಗಲಿಕೆಯ ನೋವು ನಿರಂತರ ಕಾಡುತ್ತಿತ್ತು. ಪ್ರತಿ ರಕ್ಷಾಬಂಧನದಂದು ರೀಯಾ ಸೋದರ ತಂಗಿಯ ನೆನಪು ಮಾಡಿಕೊಳ್ಳುತ್ತಿದ್ದ.

ರೀಯಾಳ ಸೋದರನಿಗೆ ಕಾದಿತ್ತು ಸರ್‌ಪ್ರೈಸ್

ಆದರೆ ಈ ಬಾರಿಯ ರಾಖಿ ಹಬ್ಬದಂದು ರೀಯಾಳ ಸೋದರನಿಗೆ ಸರ್‌ಪ್ರೈಸ್ ಕಾದಿತ್ತು. ರಾಖಿ ಕಟ್ಟುವುದಕ್ಕೆ ರೀಯಾ ಜೀವಂತವಾಗಿರಲಿಲ್ಲ. ಆದರೆ ಆಕೆ ಸಾಯುವುದಕ್ಕೂ ಮೊದಲು ದಾನ ಮಾಡಿದ್ದ ಕೈ ಆಕೆಯನ್ನು ಅರಸಿ ಬಂದಿತ್ತು. ಹೌದು. ರೀಯಾಳ ಕೈಯನ್ನು ದಾನ ಪಡೆದಿದ್ದ ಮುಸ್ಲಿಂ ಹುಡುಗಿಯೊಬ್ಬಳು ಈ ರಕ್ಷಾ ಬಂಧನ ದಿನದಂದು ರೀಯಾಳನ್ನು ನೆನಪಿಸಿಕೊಳ್ಳುವುದರ ಜೊತೆಗೆ ಆತನ ತಂಗಿ ಇಲ್ಲದ ಕೊರಗನ್ನು ನೀಗಿಸುವ ನಿರ್ಧಾರ ಮಾಡಿದ್ದಳು. ಅದರಂತೆ ರೀಯಾಳ ಕುಟುಂಬದವರು ವಾಸವಿದ್ದ ಮಹಾರಾಷ್ಟ್ರದ ವಲ್ಸದ್‌ಗೆ ಈ ಹುಡುಗಿ ಪ್ರಯಾಣ ಬೆಳೆಸಿದರು. ಅಲ್ಲಿ ರೀಯಾಳ ಸೋದರನಿಗೆ ರಾಖಿ ದಿನ ತಂಗಿ ಇಲ್ಲದ ನೋವನ್ನು ನೀಗಿಸುವ ಸಣ್ಣ ಪ್ರಯತ್ನವನ್ನು ಮಾಡಿದರು.

ರೀಯಾಳ ಕೈ ದಾನ ಪಡೆದಿದ್ದ ಮುಸ್ಲಿಂ ಹುಡುಗಿ

ಈ ಭಾವುಕ ಕ್ಷಣವನ್ನು @phoolpari_anamta ಎಂಬ ಮುಸ್ಲಿಂ ಹುಡುಗಿ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ officialpeopleofindia ಕೂಡ ಈ ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿದೆ. ವೀಡಿಯೋದಲ್ಲಿ ರೀಯಾಳ ಸೋದರನಿಗೆ ಈ ಹುಡುಗಿ ಆರತಿ ಬೆಳಗಿ ರಾಖಿ ಕಟ್ಟಿದ್ದಾರೆ. ಅತ್ತ ರಿಯಾ ಕುಟುಂಬಕ್ಕೆ ಇದು ತುಂಬಾ ಭಾವುಕವಾದ ಕ್ಷಣವಾಗಿತ್ತು. ಈ ಹುಡುಗಿಗೆ ಅಳವಡಿಸಲಾದ ರೀಯಾಳ ಕೈಯನ್ನೇ ಅವರು ಹಲವು ಬಾರಿ ಸ್ಪರ್ಶಿಸಿ ಕಣ್ಣೀರಿಟ್ಟು ಭಾವುಕರಾಗಿದ್ದಾರೆ. ರೀಯಾ ಹಿಂದೆ ರಾಖಿ ಕಟ್ಟಿದ ಕೈಗಳಿಂದಲೇ ನಾನು ಆಕೆಯ ಸೋದರನಿಗೆ ರಾಖಿ ಕಟ್ಟಿದೆ. ಒಂದು ಸೋಲಿನಲ್ಲೂ ಪ್ರೀತಿ ಗೆದ್ದಿತು ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಫೂಲಂಪರಿ ಅನಮತ್ ಬರೆದುಕೊಂಡಿದ್ದಾರೆ.

ಡೊನೇಟ್ ಲೈಫ್ ಎಂಬ NGO ಮೂಲಕ, ನಾನು ರಿಯಾಳ ಕೈಯನ್ನು ಪಡೆದುಕೊಂಡೆ. ಒಂದು ವರ್ಷದ ನಂತರ, ಅದೇ ಕಸಿ ಮಾಡಿದ ಕೈಯಿಂದ ನಾನು ಅವಳ ಸಹೋದರನಿಗೆ ರಾಖಿ ಕಟ್ಟಿದೆ.

ನಾನು ಭೀಕರ ಅಪಘಾತದಲ್ಲಿ ನನ್ನ ಕೈಯನ್ನು ಕಳೆದುಕೊಂಡಿದ್ದೆ.ಘಟನೆಯ ನಂತರ ನನ್ನ ಜೀವನವು ಅಪೂರ್ಣವಾಗಿದೆಯೆಂದೆ ಭಾವಿಸಿದೆ. ಆದರೆ ಅತ್ತ ರಿಯಾಳ ಮರಣದ ನಂತರ ಡೋನೇಟ್ ಲೈಫ್ ಎನ್‌ಜಿಒ ಅವಳ ಕುಟುಂಬವನ್ನು ಭೇಟಿ ಮಾಡಿದರು. ತಾಳ್ಮೆ, ಪ್ರೀತಿ ಮತ್ತು ಧೈರ್ಯದಿಂದ ರೀಯಾಳ ಅಂಗಗಳನ್ನು ದಾನ ಮಾಡುವಂತೆ ಅವರ ಕುಟುಂಬದ ಮನವೊಲಿಸಿದರು. ಅವಳ ಪೋಷಕರು ಇದಕ್ಕೆ ಒಪ್ಪಿದರು. ಮಗಳು ಇನ್ನೆಂದು ಬದುಕುವುದಿಲ್ಲ ಎಂದಾದ ಮೇಲೆ ಅವಳ ಕೈಯೊಂದು ಮತ್ತೊಬ್ಬರಿಗೆ ಜೀವ ನೀಡಬಹುದಾದರೆ ಬೇಡ ಎಂದು ಹೇಳುವುದೇಕೆ ಎಂದು ಅವರು ಮಗಳ ಅಂಗಾಂಗ ದಾನಕ್ಕೆ ಮುಂದಾದರು. ಇತ್ತ ರಿಯಾಳ ಕೈಯನ್ನು ಸ್ವೀಕರಿಸಲು ನಾನು ಬಹಳ ಕೃತಜ್ಞಳಾಗಿದ್ದೇನೆ. ಅದು ನನಗೆ ಕೇವಲ ಒಂದು ಕೈಯನ್ನು ನೀಡಲಿಲ್ಲ ನನಗೆ ಜೀವನದಲ್ಲಿ ಎರಡನೇ ಅವಕಾಶವನ್ನು ನೀಡಿತು ಎಂದು ಆ ಮುಸ್ಲಿಂ ಹುಡುಗಿ ಬರೆದುಕೊಂಡಿದ್ದಾರೆ.

ಈ ರಾಖಿಯ ದಿನ, ನಾನು ರಿಯಾಳ ಮನೆಗೆ ಭೇಟಿ ನೀಡುವ ಧೈರ್ಯ ಮಾಡಿದೆ. ಅವಳ ಕೈ ಈಗ ನನ್ನ ಭಾಗವಾಗಿರುವುದರಿಂದ, ನಾನು ಅವಳ ಸಹೋದರರಿಗೆ ರಾಖಿ ಕಟ್ಟಿದೆ. ಆ ಕ್ಷಣ ಆ ಮನೆ ಹೇಳಲಾಗದ ಭಾವನೆಗಳಿಂದ ತುಂಬಿತ್ತು. ಅವರ ಕಣ್ಣುಗಳು ನನ್ನ ಮೇಲೆ ಪ್ರೀತಿ ಸೂಸುತ್ತಿದ್ದವು. ಜೊತೆಗೆ ಅವರ ಸಹೋದರಿಗಾಗಿ ಹಾತೊರೆಯುತ್ತಿದ್ದವು. ನನ್ನ ಹೃದಯವೂ ಭಾರವಾಗಿತ್ತು ಆದರೆ ತುಂಬಿತ್ತು. ಆ ಕ್ಷಣದಲ್ಲಿ ರಿಯಾಳ ಉಪಸ್ಥಿತಿಯನ್ನು ನಾನು ಅನುಭವಿಸುವಂತಿತ್ತು. ಅದು ಕೇವಲ ರಾಖಿಯಾಗಿರಲಿಲ್ಲಅದು ರಿಯಾಳ ಜೀವನವನ್ನು ಗೌರವಿಸುವ ಮೌನ ಭರವಸೆಯಾಗಿತ್ತು. ಆ ಕ್ಷಣ ನಮ್ಮ ಎರಡೂ ಕುಟುಂಬಗಳನ್ನು ರಕ್ತ ಸಂಬಂಧಕ್ಕೂ ಮೀರಿದ ಬಂಧದಲ್ಲಿ ಸೇರಿಸಿತು. ಮತ್ತು ರಿಯಾಳ ಉಡುಗೊರೆ ನನ್ನಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತದೆ ಎಂದು ರೀಯಾಳ ಕೈ ದಾನ ಪಡೆದ ಮುಸ್ಲಿಂ ಹುಡುಗಿ ಫೂಲಂಪರಿ ಅನಮತ್ ಬರೆದುಕೊಂಡಿದ್ದಾರೆ.

ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ. ಅನೇಕರು ಅಂಗಾಂಗ ದಾನದ ಮಹತ್ವವನ್ನು ಒತ್ತಿ ಹೇಳುತ್ತಿದ್ದು, ಈ ಮೂಲಕ ನಮ್ಮ ಪ್ರೀತಿಪಾತ್ರರೂ ಹೀಗೂ ಜೀವಂತವಾಗಿರಬಹುದು ಎಂಬುದನ್ನು ಈ ವೀಡಿಯೋ ತೋರಿಸಿದೆ. ಈ ವೀಡಿಯೋ ನಿಮಗೇನನಿಸಿತು ಕಾಮೆಂಟ್ ಮಾಡಿ.

View post on Instagram

View post on Instagram