ತಮ್ಮ ಮಗಳು, ಮೊಮ್ಮಕ್ಕಳ ವಯಸ್ಸಿನಾಕೆಯನ್ನು ಮದುವೆಯಾಗುವ ಅಜ್ಜಂದಿರೇನೂ ಕಮ್ಮಿಯಿಲ್ಲ. ದಿನನಿತ್ಯವೂ ಇಂಥ ಘಟನೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಅದಕ್ಕೆ ಟ್ವಿಸ್ಟ್ ಇದೆ.ಏನಿದು?
ವಯಸ್ಸಾದವರು ಚಿಕ್ಕಮಕ್ಕಳನ್ನು ಮದುವೆಯಾಗುತ್ತಿರುವ ಸುದ್ದಿಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಅದರಲ್ಲಿಯೂ ಹತ್ತಾರು ಮಕ್ಕಳನ್ನು ಹೆರುವುದು ಇನ್ನೂ ಕೆಲವು ಕಡೆಗಳಲ್ಲಿ ಇರುವ ಕಾರಣ, ಹೆಣ್ಣುಮಕ್ಕಳನ್ನು ಮದುವೆ ಮಾಡಿ ಸಾಗ ಹಾಕಿದರೆ ಸಾಕು ಎನ್ನುವುದು ಅಂಥ ಪಾಲಕರು ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಹಣದ ಆಸೆಗೆ ಬಿದ್ದು ಎಂತೆಂಥವರಿಗೋ ಮಗಳನ್ನು ಕೊಟ್ಟು ಮದುವೆ ಮಾಡಲು ಅಪ್ಪ-ಅಮ್ಮ ಹಿಂಜರಿಯುವುದಿಲ್ಲ. ಮಗಳು ಇನ್ನೂ 12-15 ವರ್ಷದವಳಾಗಿದ್ದರೆ ಆಕೆ ಮದುವೆಯಾಗುತ್ತಿರುವವನಿಗೆ ಅದಾಗಲೇ ಮೊಮ್ಮಕ್ಕಳು ಈ ವಯಸ್ಸಿನವರು ಇದ್ದರೂ ಇದ್ದಾರು. ಇದಾಗಲೇ ಮೂರ್ನಾಲ್ಕು ಮದುವೆಯಾದವ ಕೂಡ ಮತ್ತೊಂದು ಮದುವೆಗೆ ಮುಂದಾಗುತ್ತಿರುವುದು ಕೂಡ ನಡೆದೇ ಇದೆ.
ಇದರ ನಡುವೆಯೇ, ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಯುವತಿಯೊಬ್ಬಳಿಗೆ ಸಂಪ್ರದಾಯದಂತೆ ಗುಂಗಟ್ ಹಾಕಿ ಕುಳ್ಳರಿಸಲಾಗಿದೆ. ಅವಳ ಪಕ್ಕದಲ್ಲಿ ಅವಳ ಅಪ್ಪನಿಗಿಂತಲೂ ಹಿರಿಯ ವಯಸ್ಸಿನ ಮದುಮಗ ಕುಳಿತಿದ್ದಾನೆ. ಮದುವೆಯೂ ಆಗಿಹೋಗಿದೆ. ಮದುಮಗಳ ಗುಂಗಟ್ ತೆಗೆದು ಭಾವಿ ಪತಿಯನ್ನು ನೋಡಿದ್ದಾಳೆ. ಅಷ್ಟಕ್ಕೂ ಕೆಲವೊಂದು ಸಂಪ್ರದಾಯದಿಂದ ಹೆಣ್ಣುಮಕ್ಕಳಿಗೆ ತನ್ನ ಗಂಡ ಆಗುವವ ಯಾರು ಎಂದೇ ತಿಳಿದಿರುವುದಿಲ್ಲ! ಆದರೆ ಗಂಡಾದವರ ಮಾತ್ರ ಬಾಯಿ ಚಪ್ಪರಿಸುತ್ತಾ ತನ್ನ ಮಗಳು, ಮೊಮ್ಮಗಳ ವಯಸ್ಸಿನ ಹೆಣ್ಣನ್ನು ನೋಡಬಹುದು. ಅದೇ ರೀತಿ ಇಲ್ಲಿಯು ಆಗಿದೆ.
ಮುಖದ ಮೇಲೆ ಇದ್ದ ಪರದೆಯನ್ನು ಸರಿಸಿ ಆಕೆ ಪತಿಯನ್ನು ನೋಡಿದಾಗ ತಲೆತಿರುಗಿ ಬಿದ್ದಿದ್ದಾಳೆ. ನಿಜ ಜೀವನದಲ್ಲಿ ಈ ರೀತಿಯ ವಿಡಿಯೋ ಮಾಡಿ ಇಂಥ ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಬಹಿರಂಗವಾಗಿ ತೋರಿಸುವಂತೆ ಇಲ್ಲ ಬಿಡಿ. ಏಕೆಂದರೆ, ಇಲ್ಲಿ ಆಕೆ ಕೇವಲ ಭೋಗದ ವಸ್ತು ಅಷ್ಟೇ. ಅಷ್ಟಕ್ಕೂ, ಇದು ಫೇಕ್ ವಿಡಿಯೋ. ಅಂದರೆ ತಮಾಷೆಗಾಗಿ ಮಾಡಿರುವ ವಿಡಿಯೋ. ಆದರೆ ನಿಜ ಜೀವನದಲ್ಲಿ ಅದೆಷ್ಟೋ ಇಂಥ ಹೆಣ್ಣುಮಕ್ಕಳು ಹೆಣ್ಣಾಗಿ ಹುಟ್ಟಿದ್ದೇ ಶಾಪ ಎನ್ನುವಂತೆ ಇದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.
ಅದೇನೇ ಇರಲಿ. ಇದು ಅಸಲಿ ವಿಡಿಯೋ ಅಲ್ಲ ಎಂದು ವಿಡಿಯೋದ ಪಕ್ಕದಲ್ಲಿಯೇ ಮಾಹಿತಿ ನೀಡಿದ್ದರೂ, ಇದು ನಿಜವಾದದ್ದೆ ಎಂದು ತಿಳಿದು ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ. ಇಲ್ಲಿ ಕಮೆಂಟ್ ಮಾಡುವವರು ಹೆಣ್ಣಿನ ಸ್ಥಿತಿಯನ್ನು ಕಂಡು ಮರಗುತ್ತಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ಇಂಥ ಸ್ಥಿತಿ ತರುವ ಅಪ್ಪ-ಅಮ್ಮಂದಿರನ್ನು ಶಪಿಸುತ್ತಿದ್ದಾರೆ. ಆದರೆ ಈ ವಿಡಿಯೋ ರಿಯಲ್ ಅಲ್ಲ ಎನ್ನುವುದು ಅವರಿಗೆ ತಿಳಿದಿಲ್ಲ. ರಿಯಲ್ ಆಗಿದ್ದರೂ ಅಚ್ಚರಿಯೇನಲ್ಲ ಎನ್ನುವ ರೀತಿಯಲ್ಲಿಯೇ ಹಲವರು ಒಂದಷ್ಟು ಕಡೆ ಹೆಣ್ಣಾಗಿ ಹುಟ್ಟುವುದು ನಿಜಕ್ಕೂ ಶಾಪವೇ ಎನ್ನುವ ಅರ್ಥದಲ್ಲಿ ಬರೆಯುತ್ತಿದ್ದಾರೆ.
