ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಸಿದ್ಧತೆ ನಡೆಸುತ್ತಿದ್ದು, ಬಾಂದ್ರಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಚಾಹಲ್ ಧನಶ್ರೀಗೆ 4.75 ಕೋಟಿ ರೂಪಾಯಿ ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಮುಂಬೈ (ಮಾ.20): ಟೀಮ್‌ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಸಿದ್ಧತೆ ನಡೆಸುತ್ತಿದ್ದು, ಮಾರ್ಚ್ 23 ರಂದು ಪ್ರಾರಂಭವಾಗುವ ಐಪಿಎಲ್‌ಗೆ ಮುನ್ನ ಇವರ ವಿಚ್ಛೇದನ ಖಚಿತವಾಗುವ ಸಾಧ್ಯತೆ ಇದೆ. ಬಾಂಬೆ ಹೈಕೋರ್ಟ್‌, ಕಡ್ಡಾಯ ಆರು ತಿಂಗಳ ಕೂಲಿಂಗ್‌ ಅವಧಿಯನ್ನು ಮನ್ನಾ ಮಾಡಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದ ಬೆನ್ನಲ್ಲಿಯೇ ಗುರುವಾರ ಯಜುವೇಂದ್ರ ಚಾಹಲ್‌ ಹಾಗೂ ಧನಶ್ರೀ ವರ್ಮ ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಅಡಿಯಲ್ಲಿ, ವಿಚ್ಛೇದನ ತೀರ್ಪು ನೀಡುವ ಮೊದಲು ಆರು ತಿಂಗಳ ಕೂಲಿಂಗ್‌ ಅವಧಿ ಕಡ್ಡಾಯವಾಗಿದೆ. ದಂಪತಿಗಳು ಈಗಾಗಲೇ ಎರಡು ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುತ್ತಿರುವುದರಿಂದ ಈ ಅವಧಿಯನ್ನು ಮನ್ನಾ ಮಾಡಲಾಗಿದೆ. ಈ ವಿನಾಯಿತಿಯು ಕ್ರಿಕೆಟಿಗನಿಗೆ ಐಪಿಎಲ್ ಮುಂಚಿತವಾಗಿ ವಿಚ್ಛೇದನದ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಮಾರ್ಚ್ 20ರ ಗುರುವಾರ ಅಂತಿಮ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಈ ಹಿಂದೆ ವರದಿಯಾಗಿತ್ತು. ಈಗ ಯಜುವೇಂದ್ರ ಚಾಹಲ್‌, ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ. ಹೂಡಿ ಧರಿಸಿಕೊಂಡು, ಫೇಸ್‌ ಮಾಸ್ಕ್‌ ಹಾಕಿಕೊಂಡು ಕೋರ್ಟ್‌ಗೆ ಹಾಜರಾಗಿದ್ದಾರೆ.

ಈ ನಡುವೆ ಯಜುವೇಂದ್ರ ಚಾಹಲ್‌, ಧನಶ್ರೀಗೆ 4.75 ಕೋಟಿ ರೂಪಾಯಿ ಪರಿಹಾರ ಹಣ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ, ಅದರಲ್ಲಿ ಅವರು ಈಗಾಗಲೇ 2.37 ಕೋಟಿ ರೂ. ಪಾವತಿಸಿದ್ದಾರೆ. ಐಪಿಎಲ್ ಆಡಲಿರುವ ಸಲುವಾಗಿ ಮಾರ್ಚ್ 20 ರೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಕ್ರಿಕೆಟಿಗ ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ.

ಮಾ.20ಕ್ಕೆ ಚಹಾಲ್-ಧನಶ್ರೀ ಡಿವೋರ್ಸ್ ಅಧಿಕೃತ, ಜೀವನಾಂಶ ಮೊತ್ತ ಎಷ್ಟು?

ಇನ್ನು ಯಜುವೇಂದ್ರ ಚಾಹಲ್‌ ವಿಚ್ಛೇದನದ ಪರಿಹಾರದ ಬಗ್ಗೆ ಸೋಶಿಯಲ್‌ಮೀಡಿಯಾದಲ್ಲಿ ಭಾರೀ ಲಕ್ಕಾಚಾರ ಆರಂಭವಾಗಿದೆ. ಕೇವಲ 818 ದಿನಗಳ ಮದುವೆಗೆ ಪ್ರತಿ ದಿನಕ್ಕೆ 50 ಸಾವಿರ ಎನ್ನುವಂತೆ ಧನಶ್ರೀ ವರ್ಮಗೆ ಯಜುವೇಂದ್ರ ಚಾಹಲ್‌ ಪಾವತಿ ಮಾಡಿದಂತಾಗಿದೆ ಎಂದು ಬರೆದಿದ್ದಾರೆ.

ಮಹ್ವಾಶ್ ಜೊತೆ ಕಾಣಿಸಿದ ಬೆನ್ನಲ್ಲೇ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್

ಷೇರ್‌ ಮಾರ್ಕೆಟ್‌ ಲಿಂಕ್: ಇನ್ನೊಂದೆಡೆ ಷೇರು ಮಾರುಕಟ್ಟೆ ತಜ್ಞರೊಬ್ಬರು, 2020ರ ಡಿಸೆಂಬರ್‌ 22 ರಂದು ಯಜುವೇಂದ್ರ ಚಾಹಲ್‌ ಹಾಗೂ ಧನಶ್ರೀ ವರ್ಮ ಮದುವೆ ಆದಾಗ ನಿಫ್ಟಿ ಸೂಚ್ಯಂಕ 13,466 ಅಲ್ಲಿತ್ತು. ಈಗ ಅದು 22,907ರಲ್ಲಿದೆ. ಮದುವೆಯಾಗುವ ಬದಲು ಇದೇ 3.70 ಕೋಟಿ ರೂಪಾಯಿಯನ್ನು (4.75 ಕೋಟಿ ರೂಪಾಯಿಯಲ್ಲಿ ಶೇ. 6ರಷ್ಟು ಬೆಲೆ ಏರಿಕೆಯನ್ನು ಡಿಸ್ಕೌಂಟ್‌ ಮಾಡಿ) ಹೂಡಿಕೆ ಮಾಡಿದ್ದರೆ, ಇಂದು ಅವರು 8.08 ಕೋಟಿ ರೂಪಾಯಿಗೆ ಮಾಲೀಕರಾಗುತ್ತಿದ್ದರು. ಈಗ ಪತ್ನಿಯೂ ಇಲ್ಲ, ಅವಕಾಶವೂ ಇಲ್ಲ ಕೊನೆಗೆ ಹಣವೂ ಇಲ್ಲ ಎನ್ನುವಂತಾಗಿದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.