ನಮ್ಮೊಂದಿಗೇ ಇರೋ ನಿಂದಕರನ್ನು ಸಹಿಸೋದು ಕಷ್ಟ ಬಿಡಿ, ಇವರ ಎದುರಿಸೋದು ಹೇಗೆ?
ಮೊಸರಲ್ಲಿ ಕಲ್ಲು ಹುಡುಕುವ ಜನರು ನಮ್ಮ ಸುತ್ತಮುತ್ತ ಇರುತ್ತಾರೆ. ಕೆಲವೊಬ್ಬರ ಚಾರ್ಟರ್ ತಡೆದುಕೊಳ್ಳಬಹುದು. ಆದರೆ, ನಮ್ಮವರೇ, ನಮ್ಮೊಳಗೆ ಇರುವವರೇ ಇಂಥ ವರ್ತನೆ ತೋರಿದರೆ ಬದುಕೋದು ಹೇಗೆ?
ಮನುಷ್ಯನ ಮನಸ್ಸಿಗೆ ಹೊಗಳಿಕೆಯಷ್ಟು ದೊಡ್ಡ ಮದ್ದು ಇನ್ನೊಂದಿಲ್ಲ. ಆದರೆ, ತೆಗಳಿದಾಗ ಪ್ರತಿಯೊಂದರಲ್ಲೂ, ಹುಳುಕು ಹುಡುಕಿದಾಗ ಬೇಜಾರು ಆಗೋದು ಸಹಜ. ಕೊಲೀಗ್ಸ್, ಸಂಬಂಧಿಗಳು, ಸಹ ಪ್ರಯಾಣಿಕರು, ಪಕ್ಕದ ಮನೆಯವರು ಅಥವಾ ಇನ್ಯಾರೋ...ನಮ್ಮ ಬಗ್ಗೆ ಏನೇನೋ ಹೇಳುತ್ತಾರೆ. ಕೆಲವೊಮ್ಮೆ ಓಕೆ. ಆದರೆ, ತಪ್ಪೇ ಮಾಡದೇ, ಸುಖಾ ಸುಮ್ಮನೆ ದೊಡ್ಡ ತೆಗಳಿಕೆಯನ್ನು ಮನಸ್ಸು ತಡೆದು ಕೊಳ್ಳುವುದು ಅಷ್ಟು ಸುಲಭವಲ್ಲ.
ನಮ್ಮ ಸುತ್ತಮುತ್ತಲ ಸಂಬಂಧಗಳಲ್ಲಿಯೇ ನೆಗಟಿವಿಟಿ ತುಂಬಿರುವ ಜನರು ಹಲವರಿರುತ್ತಾರೆ. ಮಾಡಿದ್ದೆಲ್ಲದರಲ್ಲಿಯೂ ತಪ್ಪು ಹುಡುಕುವುದೇ ತಮ್ಮ ಆಜನ್ಮ ಸಿದ್ಧ ಹಕ್ಕು ಎನ್ನುವಂತೆ ವರ್ತಿಸಿರುತ್ತಾರೆ. ಸದಾ ನಿಮ್ಮನ್ನು ಗಿಲ್ಟ್‌ನಲ್ಲಿಯೇ ಬದುಕುವಂತೆ ಮಾಡುತ್ತಾರೆ. ನಿಮ್ಮಲ್ಲಿ ಕೀಳಿರಿಮೆ ಮೂಡಿಸಿ, ಏನೋ ಸಾಧಿಸಿದ್ದೇನೆ ಎಂದು ಮೆರೆಯುವುದರಲ್ಲಿ ಅವರಿಗೆ ವಿಕೃತ ಆನಂದ ಸಿಗುತ್ತಿರುತ್ತೆ. ಇವರನ್ನು ಎಮೋಷನಲ್ ಅಬ್ಯೂಸರ್ಸ್ ಅಂತ ಕರೀಬಹುದು. ಅವರೇನು ಮಾಡುತ್ತಿದ್ದಾರೆಂದು ಅವರಿಗೆ ಗೊತ್ತಿರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಅದು ಸೃಷ್ಟಿ,ಸುವ ತಲ್ಲಣ ಇದೆಯಲ್ಲ ಅದು ಮಾತ್ರ ಇನ್ನೊಬ್ಬರನ್ನು ಗಡ ಗಡ ಅಂತ ನಡುಗಿಸಿಬಿಡುತ್ತೆ.
ಆದರೆ, ಇಂಥ ಎಮೋಷನಲ್ ಅಬ್ಯೂಸ್, ಫಿಸಿಕಲ್ ಅಬ್ಯೂಸ್‌ಗಿಂತ ಸಿಕ್ಕಾಪಟ್ಟೆ ಡೇಂಜರಸ್. ಆದರೂ ಯಾರೋ ಮಾಡಿದರೆ ಒಂದು ಮಟ್ಟಕ್ಕೆ ತಡೆದುಕೊಳ್ಳಬಹುದು. ಇಗ್ನೋರ್ ಮಾಡುವುದನ್ನು ಕಲಿತು ಬಿಡಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಂಡು, ಮುನ್ನುಗ್ಗಬಹುದು. ಆದರೆ, ಮನೆಯವರಿಂದಾನೇ ಅದರಲ್ಲಿಯೂ ಪೋಷಕರು, ಒಡ ಹುಟ್ಟಿದವರು, ಗಂಡ, ಹೆಂಡತಿ, ಅತ್ತೆ, ಮಾವನಿಂದಾನೇ ಇಂಥದ್ದೊಂದು ನಿಂದನೆ ಎದುರಿಸುತ್ತಲೇ ಇರಬೇಕು ಅಂದ್ರೆ ಸ್ವಲ್ಪ ಕಷ್ಟ. ಅದರಲ್ಲಿಯೂ ಹೆಣ್ಣು ಜೀವಕ್ಕೆ ಇಂಥ ದುಃಖ ತಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ ಬಿಡಿ.
'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' 47ರ ಮಹಿಳೆಯನ್ನು ಮದುವೆಯಾದ 76ರ ವೃದ್ಧ!
ಆದರೇನು ಮಾಡೋದು? ಮಧ್ಯಮ ವರ್ಗದ ಹೆಣ್ಣು ಮಕ್ಕಳಂತೂ ಇಂಥ ಯಾತನೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಹೆಣ್ಣಿಗೆ ಕೀಳರಿಮೆ ಹುಟ್ಟಿಸುತ್ತಲೇ ಇರುತ್ತಾರೆ. ತುಸು ಧೈರ್ಯವಿರೋ ಹೆಣ್ಣು ಮಕ್ಕಳು ಎದುರುತ್ತರ ನೀಡಿ, ಜಯಿಸಿಕೊಳ್ಳುತ್ತಾರೆ. ಆದರೆ, ದೊಡ್ಡವರ ವಿರುದ್ಧ ಮಾತನಾಡಬಾರದು ಎಂದು ತವರಿಂದ ಕಲಿತುಕೊಂಡ ಬಂದವರು, ಮನಸ್ಸಲ್ಲೇ ಮಂಡಿಗೆ ತಿಂತಾರೆ. ಕೀಳರಿಮೆ ಅನುಭವಿಸುತ್ತಾರೆ. ಯಾವಾಗ ಮನುಷ್ಯನಿಗೆ ಆತ್ಮವಿಶ್ವಾಸ ಕುಂದುತ್ತೋ ಅದರಿಂದ ಜೀವನವೇ ಬರ್ಬಾದ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಬಹಳ ಸಮಯದವರಿಗೆ ಈ ನಿಂದನೆಯ ಗಾಯ, ಕಲೆ, ಯಾತನೆ ಉಳಿದು ಬಿಡುತ್ತೆ. ಹೋಗಲಿ ಎಲ್ಲ ನೋವನ್ನೂ ನುಂಗಿಕೊಂಡು, ಮತ್ತೆ ಮೊಗದಲ್ಲಿ ನಗು ಮೂಡಿದರೆ ಸಾಕು, ಮತ್ತೊಂದು ಅಬ್ಯೂಸ್ ಇಲ್ಲ. ಮನಸ್ಸು ಗಟ್ಟಿಯಾಗೋದು ಹೇಳುವಷ್ಟು ಸುಲಭವಲ್ಲ. ವ್ಯಕ್ತಿ ದುರ್ಬಲನಾಗಿದ್ರೆ ಆತ್ಮಹತ್ಯೆಗೂ ದೂಡಬಲ್ಲ ಯಾತನೆಯೇ ಈ ನಿಂದನೆ.
ಕೇವಲ ಗಂಡ, ಅತ್ತೆ ಮಾತ್ರವಲ್ಲ. ಇಂಥ ನಿಂದಕರು ಅಪ್ಪ-ಅಮ್ಮ, ಹೆಂಡತಿ, ಅಣ್ಣ-ಅಕ್ಕ, ಮಕ್ಕಳು ಸೇರಿ ತೀರಾ ಆತ್ಮೀಯರೂ ಆಗಿರಬಹುದು. ಜೀವನದಲ್ಲಿ ನಿಂದಕರು ಇರಬೇಕು ಅಂತ ದಾಸರು ಹೇಳಿದ್ದೇನೋ ಹೌದು. ಆದರೆ, ಅದನ್ನು ಸಹಿಸಿಕೊಳ್ಳಲು ಬೇಕಾಗುವ ಮನೋಸ್ಥೈರ್ಯ, ಆಧ್ಯಾತ್ಮಿಕ ಹೀಲಿಂಗ್ ಮತ್ತು ಕೌನ್ಸಿಲಿಂಗ್ ನೆರವು ಭಾರತದಲ್ಲಂತೂ ಅಷ್ಟರ ಮಟ್ಟಿಗೆ ಇಲ್ಲ. ಆದರೆ, ಇವರನ್ನು ಅವೈಡ್ ಮಾಡಲು ಸಾಧ್ಯವೇ?
ಇಂಥ ವಿಷ ಮನಸ್ಸುಗಳು ಹೇಗಿರುತ್ತವೆ?
ವಿಷ ತುಂಬೋ ವ್ಯಕ್ತಿಗಳಿಂದ ದೂರವಿರೋದು ಅಷ್ಟು ಸುಲಭವಲ್ಲ. ಆದರೆ, ತುಸು ಮಟ್ಟಿಗೆ ಅಂಥವರನ್ನು ಅವೈಡ್ ಮಾಡೋ ಕಲೆ ಕಲಿತುಕೊಂಡರೆ ಒಳ್ಳೇಯದು. ಅಷ್ಟಕ್ಕೂ ಇಂಥವರನ್ನು ಕಂಡು ಹಿಡಿಯುವುದು ಹೇಗೆ?
- ನಿಮ್ಮ ಪ್ರತಿಯೊಂದೂ ಚಲನವನಲನಗಳಲ್ಲಿಯೂ ಅವರು ಕಣ್ಣಿಟ್ಟಿರುವುದು ಮಾತ್ರವಲ್ಲ, ಏನೇ ಮಾಡಿದರೂ ತಪ್ಪು ಹುಡುಕುತ್ತಾರೆ. ನಿಮ್ಮನ್ನು ಮಾತಿನ ಚಾಟಿಯಲ್ಲಿಯೇ ಚುಚ್ಚೋದು, ಹಂಗಿಸೋದು, ಹೀಗಳೆಯುವುದನ್ನು ಮಾಡುತ್ತಲೇ ಇರುತ್ತಾರೆ. ನಿಮ್ಮಿಂದಲೇ ನೀವು ಮಾಡಿದ ಕೆಲಸದ ಬಗ್ಗೆ ಮಾಹಿತಿ ಪಡೆದು, ನೀವು ಮಾಡಿದ್ದು ತಪ್ಪೆಂದು ಪ್ರೂವ್ ಮಾಡಿ, ನಿಮ್ಮ ಸಂತೋಷದ ಕ್ಷಣಗಳ ಖುಷಿಯನ್ನೇ ಮರೆಯಿಸಿ ಬಿಡುತ್ತಾರು ಇಂಥ ದುಷ್ಟ ಶಕ್ತಿಗಳು. ಸದಾ ಅಧಿಕಾರದ ದಾಹ ಇರೋ ಇವರು, ನಿಮ್ಮನ್ನು ಕೀಳಾಗಿ ಕಂಡು, ಏನೋ ವಿಕೃತ ಖುಷಿ ಪಡುತ್ತಾರೆ.
- ಕೆಲವು ಸ್ವಾರ್ಥಿಗಳು ಇಂಥ ಕಾರ್ಯದಲ್ಲಿ ಸದಾ ನಿರತರಾಗಿರುತ್ತಾರೆ. ಇವರಿಗೆ ಸ್ವಲ್ಪ ಡಿಸ್ಟರ್ಬ್ ಆದರೂ, ಇಡೀ ಪ್ರಪಂಚವೇ ಇವರ ವಿರುದ್ಧ ವರ್ತಿಸುತ್ತದೆ ಎಂದು ವಾದಿಸುವ ಇವರ ಸಮಸ್ಯೆಗೆ ಪರಿಹಾರವೇ ಸಿಗುವಂತಿರೋಲ್ಲ. ತಮ್ಮ ತಪ್ಪೇನು ಎಂದು ಕಂಡು ಕೊಂಡು, ಅದಕ್ಕೆ ಪರಿಹಾರ ಕಂಡು ಕೊಳ್ಳುವ ಬದಲು ಇನ್ನೊಬ್ಬರ ತಪ್ಪು ಹುಡುಕುವಲ್ಲಿಯೇ ಜೀವನ ಸವೆಸುತ್ತಾರೆ. ಮತ್ತೊಬ್ಬರ ಮನಸ್ಸು ಅರ್ಥ ಮಾಡಿಕೊಳ್ಳುವ ತಾಳ್ಮೆ ಇವರಿಗೆ ಇರೋಲ್ಲ. ನಿಮ್ಮ ಕಷ್ಟಗಳ ಬಗ್ಗೆಯೊಂದು ಸದಾ ತಾತ್ಸಾರ ಇವರಿಗೆ.
ಫೋನ್ ಕದ್ದವನನ್ನೇ ಪ್ರೀತಿಸಿದ ಯುವತಿ
- ನೀವು ಏನೇ ಒಳ್ಳೆ ಕೆಲಸ ಮಾಡಿ, ಕೆಲವರಿಗೆ ಸಮಾಧಾನವಾಗೋಲ್ಲ. ಅಲ್ಲೊಂದು ಕೊಂಕು ಹುಡುಕುತ್ತಾರೆ. ಮಾಡಿದ್ದು ಅಷ್ಟಕ್ಕಷ್ಟೇ ಎನ್ನುತ್ತಲೇ ಇರುತ್ತಾರೆ. ತಾವು ಬಿಟ್ಟರೆ ಉಳಿದವರೆಲ್ಲರೂ ಇವರಿಗೆ ತೃಣ ಸಮಾನ. ಕಟುವಾಗಿ ಏನಾದರೊಂದು ಹೇಳುತ್ತಲೇ ಇರುತ್ತಾರೆ. ಬೇರೆಯವರೂ ಈ ಕೆಲಸ ಮಾಡಬಹುದು ಎನ್ನುತ್ತಿರುತ್ತಾರೆ. ನಿಮ್ಮನ್ನು ತಪ್ಪಿತಸ್ಥರ ಸ್ಥಾನಕ್ಕೆ ತಳ್ಳಿ, ಗಿಲ್ಟ್ ಫೀಲ್ ಆಗೋ ಹಾಗೆ ಮಾಡಿಯೇ ಮಾಡುತ್ತಾರೆ.
- ಮತ್ತೆ ಕೆಲವರನ್ನು ಗಮನಿಸಿದ್ದೀರಾ. ನಿಮ್ಮ ಬ್ಯೂಟಿ ಹಾಗೂ ವ್ಯಕ್ತಿತ್ವದ ಬಗ್ಗೆ ವಿಶ್ವವೇ ಪಾಸಿಟಿವ್ ಆಗಿ ಮಾತನಾಡುತ್ತಿದ್ದರೆ, ಇವರಿಗೆ ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ. ಅಪ್ಪಿ ತಪ್ಪಿಯೂ ಒಂದೇ ಒಂದು ಪಾಸಿಟಿವ್ ಕಮೆಂಟ್ ಮಾಡೋಲ್ಲ. ತಾವು ಮಾತ್ರ ವಿಶೇಷ ಗಿಫ್ಟ್‌ನಿಂದ ಹುಟ್ಟಿದವರು. ಉಳಿದವರೆಲ್ಲರೂ ಪಾಪಿಗಳು ಅನ್ನುವಂತಿರುತ್ತದೆ ಇಂಥವರ ವರ್ತನೆ.
- ಮತ್ತೆ ಕೆಲವರಿರುತ್ತಾರೆ ಸತ್ಯದ ತಲೆ ಹೊಡೆಯುವಂತೆ ಸುಳ್ಳು ಹೇಳುತ್ತಿರುತ್ತಾರೆ. ಎಂಥ ಸುಳ್ಳನ್ನು ಬೇಕಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಲೀಲಾಜಾಲಾವಾಗಿ ಹೇಳುವಲ್ಲಿ ಇವರು ನಿಸ್ಸೀಮರು. ಇವರ ಸುಳ್ಳಿನಲ್ಲಿ ಮತ್ತೊಬ್ಬರು ಬಿದ್ದು ಜೇಡ ತನ್ನ ಬಲೆಯಲ್ಲಿಯೇ ಸಿಕ್ಕಿ ಹಾಕಿ ಕೊಳ್ಳುವಂತೆ ವಿಲ ವಿಲ ಒದ್ದಾಡುವಂತೆ ಮಾಡುತ್ತಾರೆ. ಅವರು ಸುಳ್ಳು ಅದೆಷ್ಟು ಪ್ರಭಾವಿಯಾಗಿರುತ್ತದೆ ಎಂದರೆ ನಿಮ್ಮ ಆತ್ಮೀಯರೇ ಬದ್ಧ ವೈರಿಗಳಾಗುವಂತೆ ಮಾಡಿ ಬಿಡುತ್ತಾರೆ. ನಿಮ್ಮ ಅನುಕೂಲಕರ ಸನ್ನಿವೇಶಗಳೇ ನಿಮ್ಮ ವಿರುದ್ಧವಾಗಿ ತಿರುಗಿ ಬೀಳುವಂತೆ ಮಾಡುತ್ತದೆ. ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಜಾ ನೋಡುತ್ತಾರೆ ಇವರು.
- ತಾವೇನೂ ತಪ್ಪು ಮಾಡಿದರೂ ಮಹಾನ್ ಮೇಧಾವಿಗಳು ಎಂಬಂತೆ ಕೆಲವರು ಆಡುತ್ತಿರುತ್ತಾರೆ. ಇವರೂ ಕೊಡೋ ಕಾಟ ಅಷ್ಟಿಷ್ಟಲ್ಲ. ಇವರು ಇನ್ನೊಬ್ಬರು ಗಿಲ್ಟ್‌ನಲ್ಲಿ ಬಿದ್ದು ಒದ್ದಾಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ತಮ್ಮದು ಮಾತ್ರ ತಪ್ಪಲ್ಲ ಎಂದೇ ಹೇಳುತ್ತಿರುತ್ತಾರೆ.
-ಕೆಲವು ಪೋಷಕರನ್ನು ಗಮನಿಸಿದ್ದೀರಾ, ಒಂದು ಮಗುವಿನ ಜೊತೆ ಮತ್ತೊಂದನ್ನು ಕಂಪೇರ್ ಮಾಡುತ್ತಲೇ ಇರುತ್ತಾರೆ. ಅವರಿಬ್ಬರಲ್ಲಿಯೇ ಕಾಂಪಿಟೇಷನ್ ಕ್ರಿಯೇಟ್ ಮಾಡಿ, ಇವರೇನು ಸಾಧಿಸಿದ್ದೇವೆ ಎಂಬ ಮನೋಭಾವ ಹೊಂದುತ್ತಾರೆ. ಆದರೆ, ಇದು ಮಕ್ಕಳ ಭವಿಷ್ಯದ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ಆತ್ಮವಿಶ್ವಾಸದಿಂದ ವಂಚಿತರಾಗೋ ಮಕ್ಕಳು ಲೈಫಲ್ಲಿ ಯಶಸ್ಸು ಸಿಗದೇ ಒದ್ದಾಡಬಹುದು. ಇಂಥ ಪೋಷಕರು ಸದಾ ಡೇಂಜರಸ್.
- ಕೆಲವರನ್ನು ಗಮನಿಸಿದ್ದೀರಾ. ಖುಷ್ ಖುಷಿಯಾಗಿರುವಾಗ ಬಂದು ಕುಕ್ಕಿ ಹೋಗುತ್ತಾರೆ. ಸಂಭ್ರಮದ ಕ್ಷಣಗಳನ್ನು ಹಾಳು ಗೆಡವುತ್ತಾರೆ. ಒಂದು ಅದ್ಭುತ ಸಂಜೆ ಇವರ ವರ್ತನೆಯಿಂದ ಹಾಳಾಗಿಬಿಡಬಹುದು. ಆ ಕ್ಷಣವನ್ನೇ ನರಕವಾಗಿಸಿ ಬಿಡಬಹುದು. ಇವರು ಮನಸ್ಸಿನ ಮೇಲೆ ಮಾಡೋ ಗಾಯ ಮಾಗೋದು ಕಷ್ಟ. ಇಂಥವರಿಂದ ಹೇಗಾದರೂ ದೂರ ಇರಬೇಕು.
ಸಂಸಾರವೆಂದ್ರೆ ವ್ಯವಹಾರವಲ್ಲ, ಪ್ರೀತಿ, ವಿಶ್ವಾಸ ತುಂಬಿರಬೇಕು: ಲಕ್ಷ್ಮಿ ಬಾರಮ್ಮಾ ಹೇಳಿದ ಜೀವನ ಪಾಠ!
ಯಾರೋ ಮೂರನೇಯವರು ಇಂಥ ವರ್ತನೆಗಳು ತೋರಿದರೆ ಸಹಿಸಬಹುದು. ನಮ್ಮೊಳಗೆ, ನಮ್ಮೊಂದಿಗೇ ಇರೋರು ಹೀಗ್ ಮಾಡಿದ್ರೆ ಬದುಕು ಕಷ್ಟವಾಗುತ್ತೆ. ಹಾಗಾಗದಂತೆ ಏನು ಮಾಡಬೇಕು ಅಂತ ನಾವೇ ಪರಿಹಾರ ಕಂಡು ಕೊಳ್ಳಬೇಕು.