ಅಮ್ಮನ ಸಾವಿನ ನಂತರ ವೃದ್ಧ ಅಪ್ಪನಿಗೆ ನಾಯಿ ಗಿಫ್ಟ್ ನೀಡಿದ ಮಕ್ಕಳು... ಒಂಟಿ ಬದುಕಿಗೆ ಜಂಟಿಯಾದ ಶ್ವಾನ
- ಶ್ವಾನ ಹಾಗೂ ವೃದ್ಧನ ಪ್ರೀತಿ ತುಂಬಿದ ಒಡನಾಟ
- ಮುದ್ದಿನ ನಾಯಿಯೊಂದಿಗೆ ಆಡುವ ವೃದ್ಧ
- ಪತ್ನಿ ಸಾವಿನ ಬಳಿಕ ಒಂಟಿ ಬದುಕಿಗೆ ಜಂಟಿಯಾದ ಶ್ವಾನ
ಅಮ್ಮನ ಸಾವಿನ ನಂತರ ಒಂಟಿಯಾದ ಅಪ್ಪನಿಗೆ ಮಕ್ಕಳು ಶ್ವಾನವೊಂದನ್ನು ಉಡುಗೊರೆಯಾಗಿ ನೀಡಿದ್ದು, ಶ್ವಾನದೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ವೃದ್ಧನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃದ್ಧಾಪ್ಯ ಎಂಬುದು ಒಡನಾಟವನ್ನು ಬಯಸುತ್ತದೆ. ಮೊದಲೆಲ್ಲಾ ಕೂಡು ಕುಟುಂಬವಿತ್ತು, ಮಕ್ಕಳು ದೊಡ್ಡವರೆಂದು ಮನೆ ತುಂಬಾ ಜನರಿರುತ್ತಿದ್ದರು. ಪತಿ ಅಥವಾ ಪತ್ನಿ ಮೊದಲೇ ತೀರಿದ್ದರೂ ಯಾರಿಗೂ ಒಂಟಿತನ ಕಾಡುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಮನೆಗೊಬ್ಬ ಮಗನೋ ಮಗಳೋ ಇದ್ದು ಅವರು ಕೂಡ ಉದ್ಯೋಗ ಶಿಕ್ಷಣ ಎಂದು ಮಹಾನಗರಗಳಲ್ಲಿ ನೆಲೆಯಾಗುತ್ತಾ ಪೋಷಕರಿಂದ ದೂರವೇ ಇರುತ್ತಾರೆ. ಹೀಗಾಗಿ ಇಂದು ಪತಿ ಅಥವಾ ಪತ್ನಿ ಇಲ್ಲದ ಅನೇಕ ವಯೋವೃದ್ಧರಿಗೆ ಒಂಟಿತನ ಕಾಡುತ್ತಿರುತ್ತದೆ. ಪ್ರೀತಿ ಹಾಗೂ ಒಡನಾಟಕ್ಕಾಗಿ ಅವರು ಕಾಯುತ್ತಿರುತ್ತಾರೆ. ಹಾಗಂತ ಯಾರನೋ ಪರಿಚಯ ಮಾಡಿಕೊಂಡು ಮನೆಗೆ ಸೇರಿಸಿಕೊಳ್ಳುವಂತಿಲ್ಲ. ಇಂದಿನ ಕಾಲದಲ್ಲಿ ಯಾರನ್ನು ನಂಬುವಂತಿಲ್ಲ. ಒಂಟಿ ಮಹಿಳೆ ಅಥವಾ ವೃದ್ಧ ಒಂಟಿಯಾಗಿ ಬದುಕುತ್ತಿದ್ದರೆ ಅವರನ್ನು ಯಾರು ಕಾಯುವವರಿಲ್ಲ ಎಂದು ತಿಳಿದರೆ ಕಳ್ಳಕಾಕಾರ ಕಾಟವೂ ಶುರುವಾಗುತ್ತದೆ. ಇದೇ ಕಾರಣಕ್ಕೆ ಇಲ್ಲೊಂದು ಕಡೆ ಮಕ್ಕಳು ಹೊಸ ಉಪಾಯ ಮಾಡಿದ್ದಾರೆ.
ಕುಸಿದು ಬಿದ್ದಿದ್ದ ಶ್ವಾನಕ್ಕೆ ಸಿಪಿಆರ್ ಮಾಡಿ ರಕ್ಷಿಸಿದ ವ್ಯಕ್ತಿ... ವಿಡಿಯೋ ನೋಡಿ
ಹೌದು ವಾಸ್ತವತೆಯನ್ನು ಚೆನ್ನಾಗಿ ಅರಿತ ಮಕ್ಕಳು ಅಮ್ಮನ ಸಾವಿನ ನಂತರ ಒಂಟಿಯಾದ ಅಪ್ಪನಿಗೆ ಶ್ವಾನವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ವೃದ್ಧನ ಒಂಟಿತನವನ್ನು ನಿವಾರಿಸುವುದರ ಜೊತೆ ಮಕ್ಕಳಂತೆ ಆಟವಾಡುತ್ತಾ ಆತನನ್ನು ಖುಷಿಪಡಿಸುತ್ತಿದೆ. ವೃದ್ಧ ವ್ಯಕ್ತಿಯೂ ಕೂಡ ಶ್ವಾನದೊಂದಿಗೆ ತುಂಬಾ ಖುಷಿಯಾಗಿ ಸಮಯ ಕಳೆಯುತ್ತಿದ್ದು, ಮಕ್ಕಳಂತೆ ಶ್ವಾನದೊಂದಿಗೆ ಆಟವಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ.
ಈ ಶ್ವಾನದ ಹೆಸರು ಲೋಲಾ ಮರಿಯಾ (Lola Maria) ಬೀದಿನಾಯಿಯಾಗಿದ್ದ ಇದನ್ನು ರಕ್ಷಿಸಿ ತರಲಾಗಿತ್ತು. ಅಮ್ಮನ ಸಾವಿನ ನಂತರ ಒಂಟಿಯಾದ ಅಪ್ಪನಿಗೆ ಮಕ್ಕಳು ನಾಯಿಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು. ಅದು ಸುಂದರವಾದ ಸಾಂಗತ್ಯ ನೀಡಬಹುದು ಎಂದು ಮಕ್ಕಳು ಭಾವಿಸಿದ್ದರು. ಆದರಂತೆ ಶ್ವಾನವೂ ಕೂಡ ಮಕ್ಕಳ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ. ತನ್ನ ಸ್ನೇಹಿತನೊಂದಿಗೆ ಅದು ಮಜಾ ಮಾಡುತ್ತಾ ಆಟವಾಡುತ್ತಿದೆ. ಹಾಗೆಯೇ ಈ ವಯಸ್ಸಾದ ವ್ಯಕ್ತಿಯೂ ಕೂಡ ಯಾವುದೇ ಅಂಜಿಕೆ ಇಲ್ಲದೇ ಶ್ವಾನದೊಂದಿಗೆ ಮಗುವಿನಂತೆ ಆಟವಾಡುತ್ತಿದ್ದಾರೆ. ಅವರ ಈ ಸುಂದರ ಸ್ನೇಹಕ್ಕೆ ವಿಡಿಯೋ ಸಾಕ್ಷಿಯಾಗಿದೆ.
ಬೀದಿನಾಯಿಗೆ ಅನ್ನ ಹಾಕಿದ ವೃದ್ಧ... ಭಾವುಕ ವಿಡಿಯೋ ವೈರಲ್
ಈ ಉಡುಗೊರೆ ತುಂಬಾ ಅಮೂಲ್ಯ ಹಾಗೂ ಚಿಂತನಶೀಲವಾದುದಾಗಿದೆ. ಆ ವೃದ್ಧ ವ್ಯಕ್ತಿಯ ಮಕ್ಕಳು ಈ ಸುಂದರ ಗಿಫ್ಟ್ ನೀಡುವ ಮೂಲಕ ಆವರ ತಂದೆ ಹಾಗೂ ನಾಯಿ ಇಬ್ಬರ ಜೀವವನ್ನು ಉಳಿಸಿದ್ದಾರೆ. ನಾನು ಇದುವರೆಗೆ ನೋಡಿದ ಅತ್ಯಂತ ಒಳ್ಳೆಯ ವಿಚಾರ ಇದು ಎಂದು ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ.
ಹೇಳಿ ಕೇಳಿ ಶ್ವಾನ ಮನುಷ್ಯನ ಬೆಸ್ಟ್ ಫ್ರೆಂಡ್. ಮಾನಸಿಕ ಒತ್ತಡವನ್ನು ನಿವಾರಿಸುವ ಶ್ವಾನಗಳು ಅತ್ಯಂತ ಸ್ವಾಮಿನಿಷ್ಠ ಪ್ರಾಣಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ತನಗಿಂತಲೂ ತನ್ನ ಒಡೆಯನನ್ನು ಪ್ರೀತಿಸುವ ಒಂದೇ ಒಂದು ಜೀವ ಎಂದರೆ ಅದು ಶ್ವಾನ. ಈ ವಿಡಿಯೋ ಶ್ವಾನ ಹಾಗೂ ಮನುಷ್ಯನ ನಡುವಿನ ಒಡನಾಟಕ್ಕೆ ಒಂದು ಸುಂದರ ಉದಾಹರಣೆಯಾಗಿದೆ.