ಉತ್ತರ ಭಾರತದ ಬರೇಲಿಯಲ್ಲಿ ಕುಡಿದ ಮತ್ತಿನಲ್ಲಿ ವರನು ವಧುವಿನ ಬದಲು ಸ್ನೇಹಿತನಿಗೆ ಹಾರ ಹಾಕಿದ್ದರಿಂದ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. 

ಬರೇಲಿ: ಉತ್ತರ ಭಾರತದಲ್ಲಿ ಮದುವೆ ದಿನವೂ ಖುಷಿಯಲ್ಲಿ ವರ ಕುಡಿದು ತೂರಾಡುವುದು ಸಾಮಾನ್ಯವೆನಿಸಿದೆ. ಕೆಲ ತಿಂಗಳ ಹಿಂದೆ ವರ ಕುಡಿದು ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಮುಹೂರ್ತ ಮೀರಿದ ಮೇಲೆ ಬಂದ ಕಾರಣಕ್ಕೆ ವಧುವೊಬ್ಬಳು ಮದುವೆಯನ್ನೇ ರದ್ದು ಮಾಡಿದ್ದ ಘಟನೆ ನಡೆದಿತ್ತು. ಅದೇ ರೀತಿ ಈಗ ಮತ್ತೊಂದು ಪ್ರಕರಣ ನಡೆದಿದೆ. ಆದರೆ ಇಲ್ಲಿ ವರ ಬೇಗನೇ ಮಂಟಪಕ್ಕೇನೋ ಬಂದಿದ್ದಾನೆ. ಆದರೆ ಮಾಡಿದ ಎಡವಟ್ಟು ಮಾತ್ರ ಬೇರೆ. ಕಂಠಪೂರ್ತಿ ಕುಡಿದಿದ್ದ ವರನಿಗೆ ವಧು ಯಾರು ಸ್ನೇಹಿತ ಯಾರು ಎಂದು ತಿಳಿಯದೇ ವರಮಾಲೆಯನ್ನು ವಧುವಿನ ಬದಲು ಪಕ್ಕದಲ್ಲಿದ್ದ ಸ್ನೇಹಿತನ ಕುತ್ತಿಗೆಗೆ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. 

ಉತ್ತರ ಭಾರತದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲಿಗೆ ಮದುವೆ ದಿನವೂ ಪಾನಮತ್ತನಾಗಿದ್ದ ವರನನ್ನು ನೋಡಿ ಕೋಪಗೊಂಡಿದ್ದಳು. ಈ ಮಧ್ಯೆ ವರ ಹಾರವನ್ನು ವಧುವಿಗೆ ಹಾಕುವ ಬದಲು ತನ್ನ ಸ್ನೇಹಿತನ ಕತ್ತಿಗೆ ಹಾಕಿದ್ದ ಇದರಿಂದ ಮತ್ತಷ್ಟು ಸಿಟ್ಟುಗೊಂಡ ವಧು ಮದುವೆಯನ್ನೇ ರದ್ದುಗೊಳಿಸಿ ವರನ ಕಡೆಯ ದಿಬ್ಬಣವನ್ನು ವಾಪಸ್ ಕಳುಹಿಸಿದ್ದಾಳೆ. 

ಕ್ಯೋಲ್ಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯೋಲ್ಡಿಯಾದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಪೊಲೀಸರು ವರ ಮತ್ತು ಆತನ ತಂದೆಯನ್ನು ವಿಚಾರಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಘಟನೆಯ ವಿವರಗಳನ್ನು ವರ ಹಾಗೂ ಆತನ ಕುಟುಂಬದವರ ಬಳಿ ಕೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಮದುವೆಗಾಗಿ ವರನ ಕಡೆಯವರು ಪಿಲಿಭಿತ್‌ನ ಬರ್ಖೆಡಾದಿಂದ ಬರೇಲಿಗೆ ಪ್ರಯಾಣ ಬೆಳೆಸಿದ್ದರು. 

ಫೆಬ್ರವರಿ 22ರ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ವರನ ಕಡೆಯ ದಿಬ್ಬಣ ಬಂದು ತಲುಪುತ್ತಿದ್ದಂತೆ ವರ ಹಾಗೂ ವಧುವನ್ನು ಹೂ ಹಾರ ಬದಲಾಯಿಸಿ ಮದುವೆಯ ಸಂಪ್ರದಾಯಗಳನ್ನು ಪೂರೈಸುವುದಕ್ಕಾಗಿ ವೇದಿಕೆಯ ಮೇಲೆ ನಿಲ್ಲಿಸಲಾಗಿತ್ತು, ಸಂಪ್ರದಾಯದಂತೆ ವಧು ಮೊದಲಿಗೆ ವರನ ಕತ್ತಿಗೆ ಹೂವಿನ ಹಾರವನ್ನು ಹಾಕಿದ್ದಾಳೆ. ಆದರೆ ಕುಡಿದ ಮತ್ತಿನಲ್ಲಿದ್ದ ವರ ಮಾತ್ರ ತನ್ನ ಕೈಯಲ್ಲಿದ್ದ ಹಾರವನ್ನು ವಧುವಿನ ಕತ್ತಿಗೆ ಹಾಕುವ ಬದಲು ಪಕ್ಕದಲ್ಲಿದ್ದ ಸ್ನೇಹಿತನ ಕೊರಳಿಗೆ ಹಾಕಿದ್ದಾನೆ. ಇದರಿಂದ ಸಿಟ್ಟು ಹಾಗೂ ಮುಜುಗರಕ್ಕೊಳಗಾದ ವಧು ಈ ಬುದ್ಧಿಗೇಡಿ ವರನನ್ನು ಮದುವೆಯಾಗಲು ನಿರಾಕರಿಸಿದ್ದು, ವರ ಹಾಗೂ ಆತನ ಕಡೆಯವರನ್ನು ವಾಪಸ್ ಕಳುಹಿಸಿದ್ದಾಳೆ. 

ಇದೇ ವೇಳೆ ವಧುವಿನ ಕುಟುಂಬದವರು ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರಾದರೂ ವಧು ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಇಂತಹ ಜವಾಬ್ದಾರಿ ಇಲ್ಲದ ವರನನ್ನು ಯಾವುದೇ ಕಾರಣಕ್ಕೂ ಮದುವೆಯಾಗಲಾರೆ ಎಂದು ಹೇಳಿದ್ದಾಳೆ. ನಂತರ ವಧುವಿನ ತಂದೆ ವರ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಸಾರ್ವಜನಿಕ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ ಎಂದು ವರದಿಯಾಗಿದೆ. 

Scroll to load tweet…