ವಿಚ್ಚೇದನ ಹೊಂದುವುದು ಖಂಡಿತಾ ಖುಷಿ ನೀಡುವ ಸಂಗತಿಯಲ್ಲ. ಎಲ್ಲೋ ಕೆಲವರು ಟಾಕ್ಸಿಕ್ ಸಂಬಂಧದಿಂದ ಹೊರಬಂದು ಸ್ವತಂತ್ರರಾಗಬಹುದು. ಆದರೆ, ಬಹುತೇಕ ವಿಚ್ಚೇದಿತರು ಏನೇ ಜಗಳದಿಂದ ವಿವಾಹದಿಂದ ಹೊರಬಂದರೂ ನಂತರದಲ್ಲಿ ಅವರ ವ್ಯಕ್ತಿತ್ವದ ದೊಡ್ಡ ಭಾಗವೊಂದು ದೊಡ್ಡ ಮಟ್ಟದಲ್ಲಿ ಹಾನಿಗೊಳಗಾಗಿರುತ್ತದೆ. ಇದು ಮತ್ತೆ ಮುಂಚಿನಂತಾಗುವುದು ಅಸಂಭವವೇ. ಬಹುತೇಕ ವಿವಾಹಗಳ ಕತೆ ವ್ಯಥೆಗಳು ಒಂದೇ ಆಗಿರುತ್ತವೆ- ಹೊಂದಾಣಿಕೆ ಕೊರತೆ, ಜಗಳ, ಇಗೋ ಫೈಟ್‌ಗಳು, ಅತ್ತೆ ಸೊಸೆ ಜಗಳ, ಉಸಿರುಗಟ್ಟಿಸುವ ಪ್ರೀತಿ, ಅನುಮಾನ ಇತ್ಯಾದಿ. ಆದರೆ, ಕಳೆದುಕೊಂಡ ಮೇಲೆ ಮಾತ್ರ ಪಡೆದಿದ್ದರ ಬೆಲೆ ಅರಿವಾಗಲು ಸಾಧ್ಯ. ಅಂತೆಯೇ, ವಿಚ್ಚೇದನದ ಬಳಿಕ ಬಹುತೇಕರು ತಾವು ತಮ್ಮ ಸಂಗಾತಿಯೊಂದಿಗೆ ವರ್ತಿಸಿದ ರೀತಿಗೆ ಬೇಸರ ಪಟ್ಟುಕೊಳ್ಳುತ್ತಾರೆ, ಪರಿಸ್ಥಿತಿಯನ್ನು ಬೇರೆ ರೀತಿ ನಿಭಾಯಿಸಬಹುದಿತ್ತು ಎನಿಸಲಾರಂಭಿಸುತ್ತದೆ, ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು ಎಂಬ ವಿವೇಕ ತಡವಾಗಿ ಬರುತ್ತದೆ. ಹಾಗೆ ವಿಚ್ಚೇದಿತರಾಗಿ ಪಶ್ಚಾತ್ತಾಪ ಪಡುತ್ತಿರುವ ಕೆಲ ಮಹಿಳೆಯರ ಮಾತುಕತೆಗಳು ಇಲ್ಲಿವೆ...

'ಕೆಲಸದಲ್ಲಿ ಮುಳುಗಿ ಅವನನ್ನು ಕಡೆಗಣಿಸಿದೆ...'
ಮಹಿಳೆಯರು ಉದ್ಯೋಗದಲ್ಲಿ ಗುರಿ ತಲುಪಬೇಕೆಂದರೆ ಸ್ವಲ್ಪ ಹೆಚ್ಚೇ ಪ್ರಯತ್ನ ಹಾಕಬೇಕು. ಹೀಗೆ ವೃತ್ತಿಯಲ್ಲಿ ಬೆಳೆಯುವ ಹಟಕ್ಕೆ ಬಿದ್ದ ನಾನು ವೈಯಕ್ತಿಕ ಬದುಕನ್ನು ಸಂಪೂರ್ಣ ಕಡೆಗಣಿಸಿದೆ. ಬದುಕಲ್ಲಿ ಸ್ವಲ್ಪ ನಿಂತರೆ ಎಲ್ಲಿ ಹಿಂದೆ ಬೀಳುವೆನೋ ಎಂಬ ಭಯದಲ್ಲಿ ಜೀವನದ ಇತರ ಸಂಗತಿಗಳತ್ತ ಗಮನ ಹರಿಸಲೇ ಇಲ್ಲ. ನನ್ನ ಪತಿ ನನ್ನ ಉದ್ಯೋಗವನ್ನು ಪ್ರೋತ್ಸಾಹಿಸುತ್ತಲೇ, ನಾನು ಅವರೊಂದಿಗೆ ಸಮಯ ಕಳೆಯಬೇಕೆಂದೂ, ಕೆಲ ದಿನ ಎಲ್ಲಾದರೂ ಹೋಗಿಬರೋಣ ಎಂದೂ ಹೇಳುತ್ತಲೇ ಇದ್ದರು. ಆದರೆ, ನಾನು ಕೆಲಸದಲ್ಲಿ ಮತ್ತಷ್ಟು ಬ್ಯುಸಿಯಾದೆ. ಕೆಲ ತಿಂಗಳು ಕಳೆವಷ್ಟರಲ್ಲಿ ನಮ್ಮಿಬ್ಬರ ಮಧ್ಯೆ ಕಂದರವೊಂದು ಸೃಷ್ಟಿಯಾಗಿತ್ತು. ಕಡೆಗಾತ ವಿಚ್ಚೇದನದ ನಿರ್ಣಯಕ್ಕೆ ಬಂದ. ನಾನು ಸ್ವಲ್ಪ ವೈಯಕ್ತಿಕ ಬದುಕಿಗೂ ಗಮನ ಹರಿಸಿದ್ದರೆ....

ಅಪ್ಪ ಅಮ್ಮನಿಗೆ ಡಿವೋರ್ಸ್ ಮಾಡಿದಾಗ ಸಾರಾಗೆ 9 ವರ್ಷ

'ಸೆಲ್ಫ್ ಕೇರ್ ಸಂಪೂರ್ಣ ಮರೆತೆ'
ವಿವಾಹವಾಗಿ 10 ವರ್ಷಗಳಾಗಿದ್ದವು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಮ್ಮದು ಪ್ರೇಮವಿವಾಹ ಬೇರೆ. ಹಾಗಾಗಿ, ಕಲ್ಪನಾಲೋಕದಲ್ಲೇ ತೇಲುತ್ತಿದ್ದೆವು. ಆದರೆ, ವರ್ಷಗಳು ಉರುಳಿದಂತೆ ನಾನು ನನ್ನೆಡೆಗೆ ಗಮನ ಹರಿಸುವುದು ಮರೆತೆ. ವಿವಾಹವಾಗುವಾಗ ಇದ್ದ ನನ್ನ ರೂಪಕ್ಕೂ ಈಗಿನದಕ್ಕೂ ಅಜಗಜಾಂತರ ವ್ಯತ್ಯಾಸವಾಗಿತ್ತು. ಆತ ಪದೇ ಪದೆ ನನ್ನನ್ನು ನಾನು ಕೇರ್ ಮಾಡಿಕೊಳ್ಳುವಂತೆ, ದೇಹಸೌಂದರ್ಯ ಹಾಗೂ ಫಿಟ್ನೆಸ್‌ನತ್ತ ಗಮನ ಹರಿಸುವಂತೆ ಪ್ರೋತ್ಸಾಹಿಸುತ್ತಲೇ ಇದ್ದ. ನಾನು ಯಾವುದಕ್ಕೂ ಕಿವಿಗೊಡಲಿಲ್ಲ. ಕಡೆಗೊಂದು ದಿನ ಆತ ಬಾಹ್ಯ ಸಂಬಂಧದತ್ತ ಹೊರಳಿರುವುದು ತಿಳಿಯಿತು.. ಆತನ ತಪ್ಪಿಗೆ ನಾನೇ ಕಾರಣ ಎಂದು ಪಶ್ಚಾತ್ತಾಪ ಪಡುತ್ತಿದ್ದೇನೆ.

'ಪತಿಯನ್ನು ಹಗುರವಾಗಿ ಪರಿಗಣಿಸಿದೆ'
ನಿಮ್ಮ ಪ್ರೀತಿಪಾತ್ರರ ಅಗತ್ಯಗಳನ್ನು ಕಡೆಗಣಿಸುವ ತಪ್ಪು ಮಾಡಬೇಡಿ. ನಾನು ಆ ತಪ್ಪು ಮಾಡಿದ್ದರಿಂದಲೇ ಇಂದು ಬದುಕಿನಲ್ಲಿ ಏಕಾಂಗಿಯಾಗಿದ್ದೇನೆ. ಎಲ್ಲರಂತೆ ನಮ್ಮ ವಿವಾಹ ಜೀವನವೂ ಚೆನ್ನಾಗಿಯೇ ಇತ್ತು. ಆರಂಭದಲ್ಲಿ ವಿಪರೀತ ಎಕ್ಸೈಟ್‌ಮೆಂಟ್ ಇತ್ತು. ನಿಧಾನವಾಗಿ ಪತಿಯನ್ನು ಕಡೆಗಣಿಸತೊಡಗಿದೆ. ಅವನಿಗೆ ಬೇಕಾದ ಪ್ರೀತಿ ಕಾಳಜಿಗಳ್ಯಾವುವೂ ನನ್ನಿಂದ ಸಿಗಲಿಲ್ಲ. ನನ್ನ ಅಹಂಕಾರದ ಜೊತೆ ಕೆಲ ಕಾಲ ಇರಲು ಪ್ರಯತ್ನಿಸಿದ. ಕಡೆಗೆ ತನ್ನ ಬೆಲೆಯನ್ನು ಅರಿತು ದೂರವಾದ. ಈಗ ಆತನನ್ನು ದೂರುವ ಯಾವ ಹಕ್ಕೂ ನನಗಿಲ್ಲ...

'ಪೊಸೆಸಿವ್ ಆಗಿ ಎಲ್ಲ ಕಳೆದುಕೊಂಡೆ'
ಬಾಲ್ಯದಿಂದಲೂ ನನಗೆ ಕೇಳಿದ್ದೆಲ್ಲ ಸಿಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದೆ. ವಿವಾಹವಾದ ಮೇಲೂ ಅದೇ ರೀತಿಯ ಮುದ್ದನ್ನು ನಿರೀಕ್ಷಿಸತೊಡಗಿದೆ. ಪತಿ ಕೆಲ ಕಾಲ ತನ್ನ ಗೆಳೆಯರು ಹಾಗೂ ಕುಟುಂಬದೊಡನೆ ಇರಲು ಹೋದರೂ ನನ್ನನ್ನು ಕಡೆಗಣಿಸುತ್ತಿದ್ದಾನೆಂದು ಕೋಪ ಬರತೊಡಗಿತು. ಆತ ಪ್ರತಿಕ್ಷಣವೂ ನನ್ನೊಂದಿಗಿರಬೇಕು, ಪ್ರೀತಿ ವ್ಯಕ್ತಪಡಿಸುತ್ತಿರಬೇಕು ಎಂದು ಬಯಸತೊಡಗಿದೆ. ಹಾಗಿಲ್ಲದಿದ್ದರೆ ಜಗಳವಾಡತೊಡಗಿದೆ. ಕಡೆಕಡೆಗೆ ಆತನಿಗೆ ಉಸಿರುಗಟ್ಟಿದಂತಾಯಿತೇನೋ, ಆತ ಮತ್ತಷ್ಟು ದೂರವಾಗತೊಡಗಿದ. 

ನಿಖಿಲ್ ಕುಮಾರಸ್ವಾಮಿ, ಮಡದಿ ರೇವತಿಯ ಮಾದರಿ ಕಪಲ್ ಗೋಲ್ಸ್

'ಆತನಲ್ಲಿ ಕೀಳರಿಮೆ ಹುಟ್ಟಿಸಿದೆ'
ನಾನು ಯಾವಾಗಲೂ ಜನರನ್ನು ವಿಮರ್ಶಿಸುವುದು, ನಿಂದಿಸುವುದು ಮಾಡುತ್ತೇನೆ, ವಿವಾಹವನ್ನು ಹಾಳು ಮಾಡಿಕೊಳ್ಳುವ ಮೊದಲು ಈ ಗುಣವನ್ನು ಬದಲಾಯಿಸಿಕೊಳ್ಳಬೇಕಿತ್ತು. ನನ್ನ ಗಂಡ ಬಹಳ ಒಳ್ಳೆಯವನಿದ್ದ. ನನ್ನನ್ನು ಖುಷಿಯಾಗಿಡಲು ಸಾಧ್ಯವಾದ ಎಲ್ಲ ಪ್ರಯತ್ನ ಮಾಡುತ್ತಿದ್ದ. ಆದರೆ, ಆತನ ಯಾವೊಂದು ಪ್ರಯತ್ನಗಳನ್ನೂ ನಾನು ಶ್ಲಾಘಿಸಲಿಲ್ಲ, ಬದಲಿಗೆ ಆತ ನನಗೆ ತಕ್ಕವನಲ್ಲ ಎಂಬಂತೆ ವರ್ತಿಸಿದೆ. ನನಗೆ ಜೀವನ ನೀಡಿದ ಅಮೂಲ್ಯ ಉಡುಗೊರೆ ಅವನಾಗಿದ್ದ. ಆದರೆ, ಆತನನ್ನು ಬೇಕೆಂದೇ ನನ್ನ ಎಕ್ಸ್‌‌ನೊಂದಿಗೆ ಹೋಲಿಸುತ್ತಾ ಅವನಲ್ಲಿ ಕೊರತೆಯಿದೆ ಎಂದು ಅವನಿಗೇ ಅನಿಸುವಂತೆ ಮಾಡಿಬಿಟ್ಟೆ. ಇದರಿಂದ ನಿಧಾನವಾಗಿ ಆತ ದೂರ ಸರಿದ. 

'ರೊಮ್ಯಾನ್ಸ್ ಕಡೆಗಣಿಸಿದೆ'
ಆರೋಗ್ಯಕರ ಹಾಗೂ ಸಂತೋಷದ ವೈವಾಹಿಕ ಜೀವನಕ್ಕೆ ರೊಮ್ಯಾನ್ಸ್ ಬಹಳ ಅಗತ್ಯ ಎಂಬುದನ್ನು ತಡವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಆತ ಯಾವಾಗಲೂ ನಮ್ಮಿಬ್ಬರ ನಡುವೆ ರೊಮ್ಯಾನ್ಸ್ ಎಳೆದು ತರಲು ಪ್ರಯತ್ನಿಸುತ್ತಲೇ ಇದ್ದ. ಆದರೆ, ನಾನು ಅದನ್ನೆಲ್ಲ ಬಿಟ್ಟು ಮಕ್ಕಳು, ಮನೆಗೆಲಸ ಎಂದು ಉಳಿದೆ. ಪ್ರೀತಿಯನ್ನು ಬೇರಾವ ರೀತಿಯಲ್ಲೂ ವ್ಯಕ್ತಪಡಿಸುವುದು ಬಿಟ್ಟು ಒಂದೇ ರೀತಿಯ ದಿನಚರಿ ರೂಢಿಸಿಕೊಂಡೆ. ಪ್ರೀತಿ, ರೊಮ್ಯಾನ್ಸ್ ಯಾವುದೂ ಸಿಗದ ನನ್ನೊಂದಿಗೆ ಇರಲಾರದೆ ಆತ ದೂರವಾದ.