ʼಇದು ನನ್ನ ತಪ್ಪೊಪ್ಪಿಗೆ. ಪತ್ನಿಯ ಮುಂದೆ ತಪ್ಪೊಪ್ಪಿಗೆ ಮಾಡಿಕೊಂಡರೂ, ಮತ್ತಷ್ಟು ತಪ್ಪು ಮಾಡುವಂತೆ ಪ್ರಚೋದಿಸುತ್ತಿರುವ ನನ್ನ ಪತ್ನಿಯ, ಮತ್ತು ಕಂಗಾಲಾಗಿರುವ ನನ್ನ ಕತೆʼ- ರಿಚರ್ಡ್ ಕತೆ ಇಲ್ಲಿದೆ.
ನನ್ನ ಹೆಸರು ರಿಚರ್ಡ್, 38 ವರ್ಷದ ವಿವಾಹಿತ. ಪತ್ನಿ ರೀಟಾಗೆ (ಇಬ್ಬರ ಹೆಸರು ಬದಲಿಸಿದೆ) 35 ವರ್ಷ. ನಮ್ಮ ಮದುವೆಯಾಗಿ ಐದು ವರ್ಷವಾಯಿತು. ನಮಗೆ ಮಕ್ಕಳಿಲ್ಲ. ನಮ್ಮ ದಾಂಪತ್ಯದಲ್ಲಿ ಸೆಕ್ಸ್ ಸುಖಕ್ಕೇನೂ ಕೊರತೆಯಿರಲಿಲ್ಲ. ಆದರೆ ಒಮ್ಮೆ ಮಾತ್ರ ನನ್ನ ಮನಸ್ಸು ಸಡಿಲವಾಯಿತು. ಅದು ಆದದ್ದು ಹೀಗೆ. ನನ್ನ ಸಹೋದ್ಯೋಗಿ ವಿಜಿ ಎಂಬವಳು ನನ್ನ ಹತ್ತಿರ ತುಂಬಾ ಮಾತಾಡುತ್ತಿದ್ದಳು. ನನ್ನನ್ನು ಒಮ್ಮೆ ಆಕೆಯ ಮನೆಗೆ ಪಾರ್ಟಿಗೆ ಕರೆದಳು. ಹೋಗಿ ನೋಡಿದಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ. ನಾವಿಬ್ಬರೇ ಅಂದು ನಮಗಿಷ್ಟವಾದ ಕಾಕ್‌ಟೇಲ್ ಸೇವಿಸಿದೆವು. ನಂತರ ಅಲ್ಲೇ ರಾತ್ರಿ ಉಳಿದುಕೊಂಡೆ ಸಹ. ಅಂದು ನಾವಿಬ್ಬರೂ ಒಂದಾದೆವು. ಇದಾಗಿ ಒಂದೇ ವಾರದಲ್ಲಿ ವಿಜಿ ಅಮೆರಿಕದಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಮದುವೆಯಾಗಿ ಅಲ್ಲಿಗೆ ಹಾರಿಹೋದಳು. ಈ ಘಟನೆಯ ನಂತರ ನನ್ನನ್ನು, ಪತ್ನಿಗೆ ಮೋಸ ಮಾಡಿದೆನಲ್ಲ ಎಂಬ ಪಶ್ಚಾತ್ತಾಪ ಕಾಡುತ್ತಿತ್ತು. ಒಂದು ದಿನ ಆಕೆಯಲ್ಲಿ ಈ ವಿಷಯ ತಿಳಿಸಿ ತಪ್ಪು ಒಪ್ಪಿಕೊಂಡೆ. ಆಕೆ ಬಯ್ಯಬಹುದು, ಎದ್ದು ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಗಬಹುದು ಅಂದುಕೊಂಡಿದ್ದೆ. ಆದರೆ ಆದದ್ದೇ ಬೇರೆ.
ಅವಳಿಗೂ ನನ್ನಂಥದೇ ಇನ್ನೊಂದು ಸಂಬಂಧ ಉಂಟಾಗಿತ್ತು. ಅವಳು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಜಿತು ಎಂಬಾತ ಆಕೆಗೆ ಪರಿಚಯವಾಗಿದ್ದಾನೆ. ಅವನು ಅವಳಿಗಿಂತ ಸಣ್ಣವನು. ಆದರೆ ಕಟ್ಟುಮಸ್ತಾಗಿ, ಸುಂದರವಾಗಿದ್ದಾನೆ. ಈಕೆಯ ಮನಸ್ಸು ಗೆದ್ದುಕೊಂಡಿದ್ದಾನೆ. ಇದೆಲ್ಲವೂ ನನ್ನ ಅರಿವಿಗೇ ಬಾರದೆ ನಡೆದಿದೆ. ಒಮ್ಮೆ ಇವಳ ಆಫೀಸಿನವರು ಪಿಕ್‌ನಿಕ್ ಹೋಗಿದ್ದರು. ರಾತ್ರಿ ಒಂದು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಎಲ್ಲರ ಕಣ್ಣು ತಪ್ಪಿಸಿ ಅವರಿಬ್ಬರೂ ಹೇಗೋ ಒಂದಾಗಿದ್ದಾರೆ. ಈ ಗುಪ್ತ ಸಂಬಂಧದ ರುಚಿ ಆಕೆಗೆ ಸಿಕ್ಕಿದೆ. ಇದಾಗಿ ತಿಂಗಳ ಬಳಿಕವೂ ಒಮ್ಮೆ ಅವರಿಬ್ಬರೂ ಆತನ ಫ್ಲ್ಯಾಟ್‌ನಲ್ಲಿ ಸೇರಿದ್ದಾರೆ. ಇದಾಗಿ ಕೆಲವು ದಿನಗಳ ಬಳಿಕ ಅವನು ಕೆಲಸಕ್ಕೆ ರಿಸೈನ ಮಾಡಿ ಕೇರಳದ ತನ್ನೂರಿಗೆ ಹೋಗಿದ್ದಾನೆ. ಅಂದಿನಿಂದ ಸಂಪರ್ಕವಿಲ್ಲ, ಆ ಬಗ್ಗೆ ವಿಷಾದವಿದೆ ಎಂದಳು.
ಇದನ್ನು ಹೇಳಿಕೊಂಡ ಬಳಿಕ ನಮ್ಮಿಬ್ಬರ ಮನಸ್ಸುಗಳು ಹಗುರವಾದವು. ನಾವಿಬ್ಬರೂ ತಪ್ಪು ಮಾಡಿದ್ದೆವು. ಒಬ್ಬರು ಇನ್ನೊಬ್ಬರಿಗೆ ಮೋಸ ಮಾಡಿದ್ದೆವು. ಪಶ್ಚಾತ್ತಾಪದಿಂದ ನೊಂದಿದ್ದೆವು. ಅದರ ಬಗ್ಗೆ ಹೇಳಿಕೊಂಡು ಹಗುರಾಗಿದ್ದೆವು ಕೂಡ. ಇದು ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲಿದೆ ಎಂದು ನಂಬಿಕೊಂಡೆವು. ಅಥವಾ ನಾನಂತೂ ಹಾಗೆ ನಂಬಿಕೊಂಡಿದ್ದೆ.
ಆದರೆ ಇತ್ತೀಚೆಗೆ ಹೊಸ ಬೆಳವಣಿಗೆಯೊಂದು ನಡೆದಿದೆ. ರೀಟಾ ಹೊಸದೊಂದು ವರಸೆ ತೆಗೆದಿದ್ದಾಳೆ. ನೀನು ನನ್ನಿಂದ ಸುಖಪಡುವಂತೆಯೇ ಬೇರೆ ಹೆಣ್ಣಿನ ಸಂಗ ಮಾಡಿಕೋ, ನನಗೇನೂ ಚಿಂತಿಲ್ಲ ಎನ್ನುತ್ತಿದ್ದಾಳೆ. ಜೋಕ್ ಮಾಡುತ್ತಿರಬಹುದು ಎಂದುಕೊಂಡೆ. ಆದರೆ ಇಲ್ಲ! ಸೀರಿಯಸ್ಸಾಗಿ ಹೇಳೀದ್ದಳು. ಇದೇನೂ ಒಂದು ಸಲವಲ್ಲ. ಹಲವು ಬಾರಿ ಹೇಳಿದಳು. ಇನ್ಯಾರ ಜೊತೆಗಾದರೂ ಸಂಬಂಧ ಇಟ್ಟುಕೋ ಎಂದು ದುಂಬಾಲು ಬೀಳುತ್ತಿದ್ದಾಳೆ. ಬೇಕಿದ್ದರೆ ನನ್ನ ಗೆಳತಿಯನ್ನೇ ಸೆಟ್ ಮಾಡಿ ಕೊಡುತ್ತೇನೆ ಎಂದೂ ಹೇಳಿದಳು. ಈಕೆಯ ಈ ಒತ್ತಡದ ಹಿಂದಿರುವ ರಹಸ್ಯವೇನು ಎಂದು ಪತ್ತೇದಾರಿಕೆ ಮಾಡಿದೆ. ಈಕೆ ಮತ್ತೆ ತನ್ನ ಕೊಲೀಗ್ ಜೊತೆ ಸಂಪರ್ಕ ಬೆಳೆಸಿದ್ದಾಳೆ ಎಂದು ಗೊತ್ತಾಯಿತು. ದೇಹ ಸಂಪರ್ಕದ ಆಸೆ ಆಗಿರಬಹುದು. ಅಥವಾ ಈಗಾಗಲೇ ಬೆಳೆಸಿರಲೂಬಹುದು. ಆಕೆಯ ಗಿಲ್ಟ್‌ನಿಂದ ತಪ್ಪಿಸಿಕೊಳ್ಳಲು ನನಗೆ ಇನ್ನೊಂದು ಸಂಬಂಧ ಬೆಳೆಸಲು ಹೇಳುತ್ತಿದ್ದಾಳೆ. ನನಗೂ ನಾನು ಇನ್ನೊಂದು ಸಂಬಂಧ ಬೆಳೆಸಿದರೆ ತಪ್ಪೇನಿದೆ ಅನಿಸುತ್ತಿದೆ.
ಆದರೆ ಗೊಂದಲ, ಒಂದು ಬಗೆಯ ಆತಂಕ ಕಾಡುತ್ತಿದೆ. ಏನು ಮಾಡಲಿ ಎಂದು ತಿಳಿಯುತ್ತಿಲ್ಲ. ನಮ್ಮ ಸಂಬಂಧ ಯಾಕೆ ಹೀಗಾಯಿತು, ಇದು ಎಲ್ಲಿಗೆ ಸಾಗುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ನಾವಿಬ್ಬರೂ ಮಾಡುತ್ತಿರುವುದು ತಪ್ಪು, ಇದರಿಂದ ಭವಿಷ್ಯದಲ್ಲಿ ಸಂಕಷ್ಟ ಬರಲಿದೆ ಎಂದು ಅನಿಸುತ್ತಿದೆ.
