ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಮಹಿಳೆಯರು ತಮ್ಮ ಅಗತ್ಯಗಳನ್ನು ಮತ್ತು ವ್ಯಕ್ತಿತ್ವವನ್ನು ಕಡೆಗಣಿಸುತ್ತಾರೆ. ಈ ವರ್ತನೆಯು ತಿರಸ್ಕಾರದ ಭಯ ಮತ್ತು ಸಾಮಾಜಿಕ ಒತ್ತಡದಿಂದ ಉಂಟಾಗಿದ್ದು, ಇದು ಅವರ ಮಾನಸಿಕ ನೆಮ್ಮದಿ ಮತ್ತು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಲವ್ವಲ್ಲಿ ಬಿದ್ದ ಮಹಿಳೆಯರು ಅಥವಾ ಪ್ರೇಮ ಸಂಬಂಧದಲ್ಲಿದ್ದಾಗ ನಾವು ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನೇ ಕೊಡಬೇಕು ಅನ್ನೋದು ಸಹಜ. ಆದರೆ ಅದನ್ನೇ ಅತಿಯಾಗಿ ಮಾಡೋ ಪ್ರಯತ್ನದಲ್ಲಿ ಅನೇಕ ಮಹಿಳೆಯರು ಒಂದು ತಪ್ಪು ಮಾಡುತ್ತಾರೆ. ಸಂಬಂಧ ಉಳಿಯಲಿ ಅನ್ನೋ ಕಾರಣಕ್ಕೆ ಅನ್ನೋದಕ್ಕಿಂತಲೂ ಎಲ್ಲಿ ಸಂಬಂಧ ಬ್ರೇಕ್ ಅಪ್ ಆಗುತ್ತೋ ಎಂಬ ಭಯದಿಂದಲೇ ಕೆಲವೊಂದು ವ್ಯಕ್ತಿತ್ವ ದೋಷ ಕಾಣಿಸಿಕೊಳ್ಳುವಂತೆ ಮಾಡುತ್ತಾರೆ. ಈ ತಪ್ಪು ಹೊರ ಕಾಣಿಸದಿದ್ದರೂ, ವೈಯಕ್ತಿಕ ಖುಷಿಗೂ ಸಂಬಂಧಕ್ಕೂ ದೊಡ್ಡ ಹೊಡೆತ ಕೊಡೋದು ಗ್ಯಾರಂಟಿ. ಒಂಥರಾ ಮಾನಸಿಕ ನೋವು ಅನುಭವಿಸುವ ಸ್ಥಿತಿ ಇದು.
ನೆಮ್ಮದಿ ಉಳಿಸಿಕೊಳ್ಳುವ ಹಂಬಲ, ತಿರಸ್ಕಾರಗೊಳ್ಳುವ ಭಯ, ಅಥವಾ ಪ್ರೀತಿಸೋದು ಅಂದರೆ ತಾನೇ ಕಡಿಮೆ ಆಗೋದು ಅನ್ನೋ ಭ್ರಮೆಯಿಂದ ಅನೇಕ ಮಹಿಳೆಯರು ತಮ್ಮ ಅಗತ್ಯಕ್ಕಿಂತ ಸಂಗಾತಿಯ ಅಗತ್ಯಕ್ಕೇ ಮನ್ನಣೆ ನೀಡುತ್ತಾರೆ. ಇದು ಬಹುತೇಕ ಅರಿವಿಲ್ಲದೇ ನಿಧಾನವಾಗಿ ಹೆಣ್ಣನ್ನೇ ಸುಡಲು ಆರಂಭಿಸುತ್ತದೆ. ಸ್ನೇಹಿತರ ಜೊತೆ ಹೊರಗೆ ಹೋಗೋ ಪ್ಲ್ಯಾನ್ ಕ್ಯಾನ್ಸಲ್ ಮಾಡೋದು, ಸಂಗಾತಿ ಇಷ್ಟಕ್ಕೆ ತಕ್ಕಂತೆ ತಮ್ಮ ಅಭಿರುಚಿ ಬದಲಿಸೋದು, ಜಗಳ ಆಗಬಾರದೆಂದು ಕೊನೆ ಇಲ್ಲದ ಸಮಜಾಯಿಷಿ ಕೊಡೋದು, ಇವೆಲ್ಲ ಕಾಮನ್. ಆದರೆ ಹೀಗೆ ನಮ್ಮನ್ನು ರಕ್ಷಿಸಿಕೊಳ್ಳದೇ ಅತಿಯಾಗಿ ಇನ್ನೊಬ್ಬರ ಬಯಕೆ ಈಡೇರಿಸಿಕೊಳ್ಳಲು ಮುಂದಾದರೆ, ಸಂಬಂಧದಲ್ಲೇ ಅಲ್ಲ, ನಮ್ಮ ಜೀವನದಲ್ಲೂ ನಮ್ಮ ಸ್ಥಾನ ಕಳೆದುಕೊಳ್ಳುವ ಅಪಾಯ ಇದೆ.
ಈ ತಪ್ಪು ಇಷ್ಟು ಸಾಮಾನ್ಯವಾಗಿ ನಮ್ಮ ಸಂಸ್ಕಾರ ಮತ್ತು ನಮ್ಮನ್ನು ಬೆಳೆಸಿದ ಕಾರಣದಿಂದ ಆಗುವುದು. ಇನ್ನೂ ಅನೇಕ ಮನೆಗಳಲ್ಲಿ ಮಹಿಳೆಯರು ಅರ್ಥಮಾಡಿಕೊಳ್ಳೋರು, ತಾಳ್ಮೆ ತುಸು ಹೆಚ್ಚಿಗೆ ಇರೋರು, ಹೊಂದಿಕೊಳ್ಳೋರು ಆಗಿರಲೇಬೇಕೆನ್ನುವ ಭಾವನೆ ಇರುತ್ತದೆ. ಅಂದರೆ ಸಂಬಂಧ ಉಳಿಸಿಕೊಳ್ಳಲು ಹೆಣ್ಣೇ ಕಾಂಪ್ರೋಮೈಸ್ ಆಗಬೇಕು, ತ್ಯಾಗಮಯಿ ಆಗಬೇಕು ಎನ್ನೋದು ಕಾಮನ್ ರೂಲ್. ಅದಕ್ಕೆ ಹೆಣ್ಣನ್ನು ಅದೇ ಮೆಂಟಾಲಿಟಿ ಇರುವಂತೆ ಬೆಳೆಸಿರುತ್ತಾರೆ.
ಹೆಟೆರೋಸೆಕ್ಸುಯಲ್ ಸಂಬಂಧಗಳಲ್ಲಿ ವಿಶೇಷವಾಗಿ, ಸಂಬಂಧದ ಭಾವನಾತ್ಮಕ ಹೊಣೆ ಹೊತ್ತುಕೊಳ್ಳೋದು ಬಹುತೇಕ ಮಹಿಳೆಯರೇ. ಸಂಬಂಧ ಕಾಪಾಡೋ ಹೊಣೆ, ಹೊಂದಿಕೊಳ್ಳೋದು, ಎಲ್ಲವನ್ನೂ ತಾವು ಮಾಡೋದು—ಇವೆಲ್ಲ ಕೆಲವೊಮ್ಮೆ ಅವರದೇ ಸಮತೋಲನಕ್ಕೆ ಬೆಲೆ ಕಟ್ಟಿಸುತ್ತದೆ. ಯಾರನ್ನಾದರೂ ತುಂಬಾ ಪ್ರೀತಿಸಿದರೂ, ತಮ್ಮನ್ನೇ ಕಳೆದುಕೊಳ್ಳಬಹುದು.
ಈ ಲಕ್ಷಣಗಳು ಕಂಡ್ರೆ ಎಚ್ಚರವಾಗಿರಿ
- ನಿಮ್ಮ ಹವ್ಯಾಸಗಳು ಅಥವಾ ವೈಯಕ್ತಿಕ ಗುರಿಗಳನ್ನು ಬಿಟ್ಟು ಬಿಟ್ಟಿದ್ದೀರಾ?.
- ಎಲ್ಲಿ ಶಾಂತಿಗೆ ಭಗ್ನವಾಗುತ್ತದೆಂದು ಮನಸ್ಸಿನ ಆಸೆ, ಮಾತನ್ನೇ ಹೇಳಲು ಹಿಂದೇಟು ಹಾಕುತ್ತೀರಾ?
- ಪ್ರೀತಿ ಪಡೆಯೋಕೆ ಯಾವಾಗಲೂ ಪ್ರಯತ್ನಿಸುತ್ತಿದ್ದೀರಾ?
- ಮಾನಸಿಕವಾಗಿ ದಣಿವಾಗ್ತಾ ಇದೆ, ಮೊದಲಿನಂತ ಖುಷಿ ಇಲ್ಲ ಅನಿಸ್ತಾ ಇದ್ಯಾ?
- ಇಷ್ಟವಿಲ್ಲದಿದ್ದರೂ 'ಇಲ್ಲ' ಅನ್ನೋದು ಕಷ್ಟವಾಗ್ತಾ ಇದ್ಯಾ?
ನೆನಪಿಡಿ ಇದು ದೌರ್ಬಲ್ಯವಲ್ಲ. ಅನೇಕ ಸಲ ಇದು ಈ ಪ್ಯಾಟರ್ನ್ ಬಗ್ಗೆ ಯಾರಿಗೂ ಅರಿವೇ ಇರುವುದಿಲ್ಲ. ತಮ್ಮ ಅಗತ್ಯ ಹೇಳಿದ್ರೆ ಪ್ರೀತಿಯೇ ಕಳೆದು ಹೋಗಬಹುದು ಅನ್ನೋ ಭಯ ಬಹುತೇಕ ಹೆಣ್ಣು ಮಕ್ಕಳನ್ನು ಕಾಡುತ್ತಿರುತ್ತದೆ. ಸಂಬಂಧದಲ್ಲಿ ನಿಮ್ಮ ಸ್ಥಾನವನ್ನು ಮತ್ತೆ ಪಡೆಯೋದು ಸಾಧ್ಯ. ಪ್ರೀತಿಯನ್ನು ಬ್ಯಾಲೆನ್ಸ್ ಮಾಡಲು ದೂರವಾಗುವ ಅಗತ್ಯವಿಲ್ಲ, ಸ್ವಾರ್ಥಿಯಾಗುವುದೂ ಬೇಡ. ಅದು ಇಬ್ಬರು ಪೂರ್ಣ ವ್ಯಕ್ತಿಗಳ ನಡುವಿನ ಸಂಬಂಧ.
ಹಾಗಾದ್ರೆ ಮಾಡಬೇಕಾಗಿದ್ದೇನು?
- ನಿಮ್ಮ ಒಳಗಿನ ನಿಜವಾದ ಆಸೆಗಳೊಂದಿಗೆ ಕನೆಕ್ಟ್ ಆಗಿ.
- ನಿಜವಾಗ್ಲೂ ನಿಮಗೆ ಏನು ಬೇಕು? ಎಂಬುದನ್ನು ಅಭಿವ್ಯಕ್ತಗೊಳಿಸಿ.
- ಜಗಳ ಆಗುತ್ತೆ ಎನ್ನುವ ಭಯವಿಲ್ಲದೆ ನಿಮ್ಮ ಬೇಕು, ಬೇಡಗಳನ್ನು ಹೇಳಿಕೊಳ್ಳಿ.
- ಸಂಬಂಧ ಬಲವಾಗಲು ಪ್ರಾಮಾಣಿಕವಾಗಿರಬೇಕು.
- ನಿಮ್ಮದೇ ಸ್ಪೇಸ್ ಕಾಪಾಡಿ—ಸ್ನೇಹಿತರು, ಹವ್ಯಾಸ, ಗುರಿಗಳೆಡೆಗೆ ಇರಲಿ ಗಮನ.
- ಕಷ್ಟ ಎನಿಸಿದರೂ ಒಂದು ತಕ್ಕಮಟ್ಟಿನ ಗಡಿ ಹಾಕೋದನ್ನು ಕಲಿಯಿರಿ.
- ಅವಶ್ಯಕತೆ ಇದ್ದರೆ ಥೆರಪಿಸ್ಟ್ ಸಹಾಯ ಪಡೆದು ನಿಮ್ಮ ಸಂಬಂಧ ಪ್ಯಾಟರ್ನ್ ಅರ್ಥಮಾಡಿಕೊಳ್ಳಿ.
- ಸಂಬಂಧ ಉಳಿಸೋಕೆ ತಮ್ಮನ್ನೇ ಮರೆತುಕೊಳ್ಳೋದು ತಪ್ಪು. ಆದರೆ ಅದರ ಪರಿಣಾಮಗಳು ಭೀಕರ ಎನ್ನೋದು ನೆನಪಿರಲಿ.
Description: Relationship ಉಳಿಸೋಕೆ ತಮ್ಮನ್ನೇ ಮರೆತುಕೊಳ್ಳೋ ಮಹಿಳೆಯರ ಸಾಮಾನ್ಯ ತಪ್ಪು, ಅದರ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.


