ನೀವಿಂದು ವ್ಯಾಲೆಂಟೈನ್ಸ್‌ ಡೇಯ ಸಂಭ್ರಮದಲ್ಲಿ ಇರಬಹುದು. ನಿಮ್ಮ ನಿಮ್ಮ ಪ್ರೀತಿಯ ಹುಡುಗ/ಹುಡುಗಿಯ ಒಡನಾಟದಲ್ಲಿ ಜಗತ್ತನ್ನೇ ಮರೆತಿರಬಹುದು. ಈ ಸಂದರ್ಭದಲ್ಲಿಯೇ, ತುಸು ಕಹಿ ಅನಿಸಿದರೂ ಸರಿ, ಈ ಕೆಳಗಿನ ಮಾನದಂಡಗಳನ್ನು ಅನುಸರಿಸಿ ನಿಮ್ಮ ಪ್ರೀತಿ ಪ್ರಾಮಾಣಿಕವೇ ಅಲ್ವೇ ಅಂತ ಚೆಕ್‌ ಮಾಡ್ಕೊಳಿ.

ಈಗ ಜಗತ್ತಿನಲ್ಲಿ ಎಲ್ಲವೂ ಸಾಕಷ್ಟು ಫಾಸ್ಟ್‌. ಊಟದಿಂದ ಹಿಡಿದು ಪ್ರೀತಿಯವರೆಗೆ ಇದು ಅನ್ವಯವಾಗುತ್ತದೆ. ಅತಿ ವೇಗದ ಚಾಲನೆ ಅಫಘಾತಕ್ಕೆ ಕಾರಣ ಎಂಬ ಸತ್ಯವೂ ನಮಗೆ ತಿಳಿದೇ ಇದೆ. ಆದರೂ, ವೇಗವಾಗಿ ಚಾಲನೆ ಮಾಡುವಾಗ ಸಿಗುವ ಮಜಾ ನಿಧಾನ ಗತಿಯಲ್ಲಿ ಓಡುವಾಗ ಎಲ್ಲಿಂದ ದಕ್ಕೀತು ಹೇಳಿ? ಅದಕ್ಕಾಗಿಯೇ ಇಂದು ಬಹಳಷ್ಟು ಮಂದಿಗೆ, ಯೌವನದ ಹೊಸ್ತಿಲಲ್ಲಿ, ತಾವು ಹೋಗುವ ಹಾದಿಯ ಅರಿವು ಇರುವುದಿಲ್ಲ. ಆ ಕ್ಷಣದಲ್ಲಿ ದಕ್ಕುವ ಸುಖ ಸಂತೋಷದ ಪ್ರಪಂಚದಲ್ಲಿ ಇವೆಲ್ಲ ಮರೆತು ಹೋಗಿರುತ್ತವೆ. ಅದಕ್ಕಾಗಿಯೇ ಇಂದು ಪ್ರೀತಿ ಆದಷ್ಟೇ ಸುಲಭದಲ್ಲಿ ಬ್ರೇಕಪ್‌ ಕೂಡಾ ಆಗಿರುತ್ತದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎಲ್ಲವೂ ಮುಗಿದಿರುತ್ತದೆ. ಇದು ಮಾನಸಿಕವಾಗಿ ಆಘಾತ, ತಲ್ಲಣ, ಖಿನ್ನತೆಯಂತಹ ಸಮಸ್ಯೆಗಳತ್ತಲೂ ದೂಡುತ್ತವೆ.

ಸಣ್ಣ ವಯಸ್ಸಿನಲ್ಲಿ ನಿಜವಾದ ಪ್ರೀತಿ ಯಾವುದು ಎಂಬುದನ್ನು ಕಂಡು ಹಿಡಿಯುವುದರಲ್ಲಿ ವಿಫಲವಾಗಿ, ಕೇವಲ ಪರಸ್ಪರ ಆಕರ್ಷಣೆಯನ್ನೇ ಪ್ರೀತಿ ಎಂದು ಮೋಸ ಹೋಗುವವರೂ ಅನೇಕರು. ಅದಕ್ಕಾಗಿಯೇ, ಪ್ರೀತಿಸುವಾಗ ಎಚ್ಚರಿಕೆಯೂ ಬೇಕು. ತಾನು ಪ್ರೀತಿಸುವಾತ, ಆಕೆ ನಿಜವಾಗಿಯೂ ಮನಸ್ಸಿನಾಳದಿಂದ ಪ್ರೀತಿಸುತ್ತಾನೆಯೇ ಅಥವಾ ಕೇವಲ ದೈಹಿಕ ಆಕರ್ಷಣೆಯೇ ಎಂಬುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಿರುವುದಿಲ್ಲ. ವಿವೇಕ ಇದ್ದರೆ ಸಾಕು. ಪ್ರೀತಿಯ ಅಮಲಿನಲ್ಲಿಯೂ ಅರ್ಥ ಮಾಡಿಕೊಳ್ಳಲು ಕೆಲವು ವಿಚಾರಗಳು ತಿಳಿದಿದ್ದರೆ ಸಾಕು. ಬನ್ನಿ, ನೀವು ಪ್ರೀತಿಸುವ ಮಂದಿ ಕೇವಲ ದೈಹಿಕವಾಗಿ ಮಾತ್ರ ನಿಮ್ಮತ್ತ ಆಕರ್ಷಿತರಾಗಿದ್ದರು, ನಿಜವಾದ ಪ್ರೀತಿ ಮೊಳೆತೇ ಇಲ್ಲ. ಇದು ಗಂಭೀರವಾದ ಪ್ರೀತಿ ಅಲ್ಲ ಎಂದು ತಿಳಿದುಕೊಳ್ಳಲು ನಿಮಗೆ ಇವಿಷ್ಟು ಸೂಚನೆಗಳೇ ಸಾಕು. ಬನ್ನಿ ಅವು ಯಾವುವು ಎಂಬುದನ್ನು ನೋಡೋಣ.

1) ಅವರಿಗೆ ಯಾವಾಗ ಸೂಕ್ತವೋ ಆಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ಬೇರೆ ಸಂದರ್ಭಗಳಲ್ಲಿ ಅವರು ನಿಮ್ಮಿಂದ ಜಾರಿಕೊಳ್ಳುತ್ತಾರೆ ಎಂಬ ಅರಿವು ನಿಮಗೆ ಬರುವುದೇ ಇಲ್ಲ.

2) ನಿಜವಾದ ಪ್ರೀತಿಯಂತೆಯೇ ಇರುತ್ತದೆ. ಆದರೆ, ಪ್ರೀತಿಯಲ್ಲಿ ಬೆಳವಣಿಗೆಯ ಹಂತವೇ ಇರುವುದಿಲ್ಲ.

3) ಆರಂಭದಲ್ಲಿ ಗೊತ್ತಾಗದಿದ್ದರೂ, ನಿಧಾನವಾಗಿ ಈ ಪ್ರೀತಿಯಲ್ಲೇನೋ ಕೊರತೆ ಇದೆ ಎಂಬ ಅಂಶ ನಿಮ್ಮನ್ನು ಕಾಡತೊಡಗುತ್ತದೆ. ಯಾವಾಗಲೂ ಭೇಟಿಯಾಗುವುದು, ಸುತ್ತಾಡುವುದು ಇಷ್ಟರಲ್ಲೇ ಮುಗಿದುಬಿಡುತ್ತದೆ. ಡೇಟಿಂಗ್‌ ಹಂತ ದಾಟುವುದೇ ಇಲ್ಲ. ಕೇವಲ ಸುತ್ತಾಡಲು, ಕಾಲ ಕಳೆಯಲು ಇರುವ ಜೋಡಿ ಅಷ್ಟೇ ಎಂಬುದು ನಿಮಗೆ ಅರ್ಥವಾಗತೊಡಗುತ್ತದೆ.

4) ಮುಖ್ಯವಾಗಿ, ಆತನ ಆತ್ಮೀಯ ಗೆಳೆಯರ ಬಳಗವನ್ನು ನಿಮಗೆ ಇನ್ನೂ ಪರಿಚಯಿಸಿರುವುದೇ ಇಲ್ಲ! ಅವರ ಎದುರು ನಿಮ್ಮನ್ನು ಕೇವಲ ಫ್ರೆಂಡ್‌ ಅಷ್ಟೇ ಎಂಬಂತೆ ಪರಿಚಯಿಸುವುದು, ಅಥವಾ ನೀವು ಜೊತೆಗಿದ್ದಾಗ ಅವರಿಂದ ತಪ್ಪಿಸಿಕೊಳ್ಳುವುದು, ಗೊತ್ತಾಗದಂತೆ ವಿಚಾರವನ್ನು ಕಾಪಾಡುವುದು ಇತ್ಯಾದಿಗಳು ನಡೆಯುತ್ತಿದ್ದರೆ, ಇದು ಖಂಡಿತ ಗಂಭೀರವಾದ ಪ್ರೀತಿಯಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

5) ನಿಮ್ಮ ಜೊತೆ ಹೆಚ್ಚು ಮಾತಾಡುತ್ತಾರೆ, ಆದರೆ, ಅದು ನಿಮ್ಮ ಆಸಕ್ತಿಯಿಂದ, ಅವರು ಪ್ರಯತ್ನ ಪಟ್ಟು ನಿಮ್ಮ ಬಳಿ ಬಂದು ಮಾತನಾಡಿಸುವುದಿಲ್ಲ ಎಂಬ ಸೂಚನೆ ನಿಮಗೆ ಸಿಕ್ಕರೆ ಅದು ಖಂಡಿತ ಗಂಭೀರವಾದ ಪ್ರೀತಿ ಅಲ್ಲ.

6) ದೈಹಿಕವಾಗಿ, ಮಾನಸಿಕವಾಗಿ ಇಬ್ಬರೂ ಹತ್ತಿರ ಬಂದಿದ್ದೀರಾದರೂ, ನಿರ್ಧಿಷ್ಟವಾಗಿ ಈ ಬಗ್ಗೆ ಮನಸ್ಸು ಬಿಚ್ಚಿ ಏನೂ ಮಾತನಾಡಿಕೊಂಡಿಲ್ಲ ಎಂದಾದರೂ ಕೂಡಾ ಇದು ನಿಜವಾದ ಪ್ರೀತಿ ಆಗಿರುವ ಸಾಧ್ಯತೆ ಕಡಿಮೆ.

Relationship Advice: ಆ ಕ್ರಿಯೆಗೆ ನಂಗೆ ಗಂಡೂ ಬೇಕು, ಹೆಣ್ಣೂ ಬೇಕು ಅನ್ನಿಸಿದರೆ...

7) ಪ್ರೀತಿ ಇದೆ ಎಂದು ಅನಿಸಿದರೂ, ಆ ಬಗ್ಗೆ, ಅದನ್ನು ಮುಂದುವರಿಸುವ ಬಗ್ಗೆ, ಬದುಕಿನಲ್ಲಿ ಮುಂದಿನ ಹೆಜ್ಜೆ ಇಡುವ ಬಗ್ಗೆ ಗಂಭೀರವಾಗಿ ಯೋಚಿಸಿಯೇ ಇಲ್ಲ, ಮಾತನಾಡುವುದೇ ಇಲ್ಲ ಎಂದಾದರೂ, ಅಲ್ಲಿ ಗಂಭೀರತೆ ಇಲ್ಲ ಎಂದೇ ಅರ್ಥ.

8) ನೀವು ಜೊತೆಗಿದ್ದಾಗ ಚೆನ್ನಾಗಿಯೇ ಇರುತ್ತೀರಿ, ಆದರೆ, ಬೇರೆಯಾಗಿದ್ದಾಗ ಗೊಂದಲಕ್ಕೆ ಬೀಳುವ ಸ್ಥಿತಿ ನಿಮ್ಮಲ್ಲಿನ್ನೂ ಇದೆ ಎಂದಾದಲ್ಲಿ ಪ್ರೀತಿ ಪಕ್ಕಾಗಿಲ್ಲ ಎಂದೇ ಅರ್ಥ.

9) ಭೇಟಿಯಾಗುವ ಬಗ್ಗೆ ಮಾತನಾಡುತ್ತೀರಿ. ಆದರೆ, ನಿಜವಾಗಿ ಭೇಟಿಯಾಗುವ ಆಸಕ್ತಿ ವಹಿಸಿ ಸರಿಯಾದ ಸಮಯಕ್ಕೆ ಬರುವುದರಲ್ಲಿ ಇಬ್ಬರೂ ಎಡವುತ್ತೀರಿ! ಮೊದಲಿದ್ದ ಆಸಕ್ತಿ ಈಗಿಲ್ಲ ಅನಿಸಲು ಶುರುವಾಗುತ್ತದೆ ಎಂದರೆ, ಪ್ರೀತಿ ಸರಿಯಾಗಿ ಮೊಳೆತೇ ಇಲ್ಲ ಎಂದೇ ಅರ್ಥ.

ಅದಕ್ಕಾಗಿಯೇ ಪ್ರೀತಿಯ ವಿಚಾರದಲ್ಲಿ ಯೋಚಿಸಿ ಮುಂದಡಿ ಇಡಿ.

ದೈಹಿಕ ಸಂಪರ್ಕವಿಲ್ಲದೆ ಸಂತೋಷ ನೀಡುವ 15 ಸಂಗತಿಗಳು