ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಟೆಕ್ಕಿ ಭರತ್ ಎಂಬಾತ, ಮದುವೆ ಆಮಿಷವೊಡ್ಡಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿದ್ದ ಯುವತಿ ಕುಟುಂಬ ಚೆನ್ನಮ್ಮನಕೆರೆ ಪೊಲೀಸ್ ಠಾಣೆಗೆ ಭರತ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ.
ಬೆಂಗಳೂರು (ಮೇ 29): ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕ ಪ್ರೀತಿ ಹಾಗೂ ಮದುವೆ ಹೆಸರಲ್ಲಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ಮದುವೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದಾನೆ. ಇದೀಗ ಯುವಕನ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯಾಗಿ ಭರತ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಗುರುತಿಸಲಾಗಿದ್ದು, ಯುವತಿ ಸೇರಿದಂತೆ ನಾಲ್ವರ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: 22 ವರ್ಷದ ಯುವತಿಯು ಇನ್‌ಸ್ಟಾಗ್ರಾಂ ಮೂಲಕ ಭರತ್ ಎಂಬಾತನಿಗೆ ಪರಿಚಿತರಾಗಿದ್ದಳು. ಪ್ರಾರಂಭದಲ್ಲಿ 'ನಿಮ್ಮ ಕಾರು ನನ್ನ ಏರಿಯಾದಲ್ಲಿ ಓಡಾಡುತ್ತಿದೆ' ಎಂಬ ಮೆಸೇಜ್ ಕಳಿಸಿದ್ದ ಭರತ್, ಹೀಗೆ ದಿನಕ್ಕೊಂದು ಸಂದೇಶದ ಮೂಲಕ ಸ್ನೇಹ ಬೆಳೆಸಿದ್ದನು. ಸ್ನೇಹವು ಮುಂದೆ ಪ್ರೀತಿಗೆ ತಿರುಗಿ, ಮದುವೆಯ ಹಂತವರೆಗೆ ತಲುಪಿತು. ಜಾತಿ ಬೇರೆ ಬೇರೆ ಆಗಿದ್ದರೂ ಅದನ್ನು ಕಡೆಗಣಿಸಿದ ಯುವತಿ, ಭರತ್‌ನೊಂದಿಗೆ ಮದುವೆಗೆ ಸಮ್ಮತಿಸಿದ್ದರು. ಯುವತಿ ಪೋಷಕರೂ ಈ ಸಂಬಂಧಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಇಬ್ಬರ ಕುಟುಂಬಗಳಲ್ಲೂ ಎಂಗೇಜ್ಮೆಂಟ್, ಮುಂಚಿತ ಮದುವೆ ಚಟುವಟಿಕೆಗಳಾಗಿ, ಲಕ್ಷಾಂತರ ರೂಪಾಯಿ ವೆಚ್ಚವನ್ನು ಮಾಡಿದ್ದಾರೆ. ಆದರೆ ಮದುವೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಭರತ್ ಅನಿರೀಕ್ಷಿತವಾಗಿ ವಿದೇಶಕ್ಕೆ ಪರಾರಿ ಆಗಿದ್ದಾನೆ.
ಮದುವೆಗಿಂತ ಮೊದಲು ಬಿಇ ಓದುತ್ತಿದ್ದ ಯುವತಿಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಸಿನಿಮಾ, ಪಬ್, ಕ್ಲಬ್, ಶಾಪಿಂಗ್ ಮಾಲ್ ಎಂದೆಲ್ಲಾ ಕರೆದುಕೊಂಡು ಸುತ್ತಾಡಿದ್ದಾನೆ. ಯುವತಿ ಮನೆಯವರಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಅವರ ಮನೆಗೆ ಹೋಗಿಬಂದು ಮಾಡುವುದನ್ನು ಮುಂದುವರೆಸಿದ್ದಾನೆ. ಒಂದು ದಿನ ಯುವತಿಯ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮನೆಗೆ ತೆರಳಿ ಹೇಗಿದ್ದರೂ ನಾವಿಬ್ಬರೂ ಮದುವೆ ಮಾಡಿಕೊಳ್ಳುವ ಜೋಡಿಯೆಂದು ಬಲವಂತವಾಗಿ ಯುವತಿಯನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದಾನೆ. ಇದಾದ ನಂತರ ಯುವತಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದಾಗಲೆಲ್ಲಾ ಈ ಬಾರಿ ನಮ್ಮ ಮನೆಯವರ ಜೊತೆಗೆ ಮಾತನಾಡುತ್ತೇನೆ, ಅದಕ್ಕೂ ಮೊದಲು ಒಮ್ಮೆ ಸೇರೋಣ ಎಂದು ಹೇಳಿಕೊಂಡು ಪದೇ ಪದೆ ಪುಸಲಾಯಿಸಿ ವಿವಿಧೆಡೆ ಆಕೆಯೊಂದಿಗೆ ದೈಹಿಕವಾಗಿ ಹಲವು ಬಾರಿ ಸಂಬಂಧ ಬೆಳೆಸಿದ್ದಾನೆ.
ಇದಾದ ನಂತರ ಒಂದು ದಿನ ಭರತ್ ಮನೆಯಲ್ಲಿ ಅವರ ತಂದೆ ಸೂರ್ಯಪ್ರಸಾದ್, ತಾಯಿ ಅನುರಾಧಾ ಹಾಗೂ ಅಕ್ಕ ರಂಜಿತಾ ಅವರೊಂದಿಗೆ ಮಾತನಾಡಿದ್ದಾನೆ. ಆದರೆ, ಯುವತಿಗೆ ನೀನು ಕೆಳಜಾತಿಯವಳು ಎಂದು ಹೀಯಾಳಿಸಿ, ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ. ಆಗ ಯುವತಿ ನನಗೆ ಸಾವೇ ಗತಿ ಎಂದು ಹೇಳಿದಾಗ ಭಯಪಟ್ಟು ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ, ನಿಮ್ಮ ಅಪ್ಪ-ಅಮ್ಮನಿಗೆ ತಿಳಿಸಿ ಎಂಗೇಜ್‌ಮೆಂಟ್ ಹಾಗೂ ಮದುವೆಗೆ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಹೇಳಿದ್ದಾನೆ. ಯುವತಿ ಮನೆಯವರು ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿ ಎಂಗೇಜ್ಮೆಂಟ್‌ಗೆ ಸಿದ್ಧತೆ ಮಾಡಿಕೊಂಡು, ಮದುವೆಗೆ ಮಂಟಪವನ್ನೂ ಬುಕ್ ಮಾಡಿದ್ದಾರೆ.
ಆದರೆ, ಯುವತಿ ಮನೆಯವರು ಮದುವೆ ತಯಾರಿಯಲ್ಲಿರುವಾಗ ನಾನು ರಷ್ಯಾ ಮತ್ತು ಚೀನಾಗೆ ಒಂದು ಪ್ರಾಜೆಕ್ಟ್ ಮಾಡಿಕೊಟ್ಟಿದ್ದು, ಅದರ ಸಂಬಂಧವಾಗಿ ಅರೆಸ್ಟ್ ಆಗುವುದರಿಂದ ತಪ್ಪಿಸಿಕೊಂಡು ದುಬೈಗೆ ಹೋದಾಗ ಅಲ್ಲಿನ ಪೊಲೀಸರು ಬಂಧಿಸಿ ತನ್ನ ಫೋನ್ ಕಿತ್ತುಕೊಂಡಿದ್ದಾರೆಂದು ಮೆಸೇಜ್ ಮಾಡಿ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಆಗ ಯುವತಿ ಸಾವಿನ ಪ್ರಯತ್ನ ಮಾಡಿದಾಗ ತಾಯಿ ತಡೆದು ವಿಚಾರಿಸಿದಾಗ ತನಗಾದ ಮೋಸ ಹೇಳಿದ್ದಾಳೆ. ಇದಾದ ನಂತರ ಯುವತಿ ತನ್ನ ತಂದೆಯ ಜೊತೆಗೆ ಯುವಕನ ಮನೆಗೆ ಹೋಗಿ ವಿಚಾರಿಸಿದಾಗ ಹುಡುಗನ ತಂದೆ ನಿಮಗೆ ಮಾನ ಮರ್ಯಾದೆ ಇಲ್ಲವಾ? ನಿಮ್ಮಂತ ಕೀಳು ಜಾತಿಯವರ ಮಗಳನ್ನು ಮದುವೆ ಮಾಡಿಕೊಳ್ಳುವುದಿಲ್ಲ. ಈ ಮದುವೆ ನಿಲ್ಲಸಬೇಕೆಂದೇ ನನ್ನ ಮಗಳನ್ನು ಅಮೇರಿಕಾದಲ್ಲಿರುವ ಅವರ ಅಕ್ಕನ ಮನೆಗೆ ಕಳಿಸಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ, ಇನ್ನೊಮ್ಮೆ ನಮ್ಮ ಮನೆ ಬಳಿಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಈ ಘಟನೆಯಿಂದ ವಂಚನೆಗೊಳದಾಗ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೋಕ್ಸೋ ಕಾಯ್ದೆ, ಮೋಸ ಹಾಗೂ ಮಹಿಳೆಯ ಮಾನಸಿಕ ಮತ್ತು ಲೈಂಗಿಕ ಹಕ್ಕುಗಳ ಉಲ್ಲಂಘನೆ ಸೇರು ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
