ಹೆಂಡತಿ ತವರೂರಿಗೆ ಹೋಗಿದ್ದಾಳೆ, ಫಲಕದ ಮೂಲಕ ಡಂಗೂರ ಸಾರಿದ ಆಟೋ ಡ್ರೈವರ್!
ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಬಿಸ್ಕೆಟ್ ಹಂಚಿ ಸಂಭ್ರಮಿಸಿದ್ದಾನೆ. ಆಟೋದಲ್ಲಿ 'ಹೆಂಡತಿ ತವರಿಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ' ಎಂದು ಬರೆದ ಫಲಕ ಹಾಕಿಕೊಂಡು ಪ್ರಯಾಣಿಕರಿಗೆ ಬಿಸ್ಕೆಟ್ ನೀಡಿದ್ದಾನೆ.

ಬೆಂಗಳೂರು (ಫೆ.06): ಸಾಮಾನ್ಯವಾಗಿ ಗಂಡ, ಹೆಂಡತಿ ನಡುವೆ ಸಂಬಂಧ ಎಷ್ಟೇ ಅನ್ಯೋನ್ಯವಾಗಿದ್ದರೂ ಹೆಂಡತಿ ಮನೆಯಿಂದ ತವರಿಗೆ ಹೋದಾಗ ಗಂಡನಿಗೆ ಸ್ವಾತಂತ್ರ್ಯ ಸಿಕ್ಕಿದಷ್ಟೇ ಖುಷಿ ಆಗುತ್ತದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಇಲ್ಲೊಬ್ಬ ಆಟೋ ಡ್ರೈವರ್ ನನ್ನ ಹೆಂಡತಿ ಊರಿಗೆ ಹೋಗಿದ್ದು, ನನಗೆ ತುಂಬಾ ಖುಷಿಯಾಗಿದೆ. ಈ ಖುಷಿ ಹಂಚಿಕೊಳ್ಳುವುದಕ್ಕೆ ನಾನು ಎಲ್ಲರಿಗೂ ಬಿಸ್ಕೆಟ್ ಹಂಚುತ್ತಿದ್ದೇನೆ. ನೀವೂ ಬಿಸ್ಕೆಟ್ ತಿನ್ನಿ ಎಂದು ಆಟೋ ಚಾಲಕ ಬೋರ್ಡ್ ಹಾಕಿ ಸಂತಸಪಟ್ಟಿದ್ದಾನೆ.
ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಆಟೋ ಡ್ರೈವರ್‌ಗಳು ಮಾತ್ರ ಆಗಿಂದಾಗ್ಗೆ ಕೆಲವೊಂದು ವಿಚಾರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಾರೆ. ಇದೀಗ ಬೆಂಗಳೂರು ಆಟೋ ಚಾಲಕ ತನ್ನ ಹೆಂಡತಿ ಊರಿಗೆ ಹೋಗಿದ್ದಾಳೆ. ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಫಲಕವನ್ನು ಹಾಕಿಕೊಂಡು ಆಟೋ ಪ್ರಯಾಣಿಕರಿಗೆ ಕಾಣಿಸುವಂತೆ ಪ್ರದರ್ಶನ ಮಾಡಿದ್ದಾನೆ. ಜೊತೆಗೆ, ತನ್ನ ಸಂತೋಷದಲ್ಲಿ ನೀವು ಭಾಗಿಯಾಗಬೇಕು ಎಂದೆನಿಸಿದರೆ ನೀವು ಈ ಬಿಸ್ಕೆಟ್ ತಿಂದು ಖುಷಿಪಡಿ ಎಂದು ಮಿಲ್ಕಿ ಮಿಸ್ಟ್ ಬಿಸ್ಕೆಟ್ ಕೂಡ ಇಟ್ಟಿದ್ದಾನೆ.
ಇದನ್ನೂ ಓದಿ: ನನ್ನ ಹೆಂಡ್ತಿಗೆ ಮೆಸೇಜ್ ಯಾಕ್ ಮಾಡ್ತೀಯಾ? ಎಂದು ಕೇಳಿದ್ದಕ್ಕೆ ಚಾಕು ಚುಚ್ಚಿದ ಸ್ನೇಹಿತ!
ಹೀಗಾಗಿ, ಬೆಂಗಳೂರಿನ ಆಟೋ ಚಾಲಕನ ವಿಚಾರ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ. ತನ್ನ ಹೆಂಡತಿ ತವರು ಮನೆಗೆ ಹೋದ ಖುಷಿಯನ್ನು ಆಟೋ ಡ್ರೈವರ್ ಗಂಡ ಊರ ತುಂಬೆಲ್ಲಾ ಡಂಗೂರ ಸಾರುವುದಕ್ಕೆ ಈ ರೀತಿ ಉಪಾಯ ಮಾಡಿದ್ದಾನೆ. ತನ್ನ ಆಟೋದಲ್ಲಿ ಫಲಕ ಹಾಕಿದ್ದನ್ನು ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕನೊಬ್ಬ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋವನ್ನು ಎಪಿಕ್ ಮೀಡಿಯಾ ಎಂಬ (EPIC MEDIA) ಪೇಜ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿವೆ.
ಇನ್ನು ಆಟೋ ಚಾಲಕ ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕಾಣಿಸುವಂತೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮುದ್ರಣ ಮಾಡಿ ಅದಕ್ಕೆ ಲ್ಯಾಮಿನೇಷನ್ ಮಾಡಿಸಿದ ಫಲಕದ ರೀತಿಯಲ್ಲಿ ತೂಗು ಹಾಕಿದ್ದಾನೆ. ಇದರಲ್ಲಿ 'ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ' ಎಂದು ಬರೆದಿದ್ದಾನೆ. ಆಟೋ ಪ್ರಯಾಣಿಕರಿಗೆ ಬ್ರಿಟಾನಿಯಾ ಮಿಲ್ಕ್ ಬಿಸ್ಕೆಟ್‌ಗಳನ್ನು ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೇ ಆಟೋ ಡ್ರೈವರ್‌ಗೆ ನಿಜವಾದ 'ಸ್ವಾತಂತ್ರ್ಯ'ಎಂದು ಕರೆದಿದ್ದಾರೆ. ಇನ್ನು ಕೆಲವರು ಆಟೋ ಡ್ರೈವರ್‌ಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕಾಮೆಂಟ್ ಮಾಡಿದ್ದಾರೆ.