ಇದು ಧರ್ಮ ರಕ್ಷಣೆ ವಿಷ್ಯ... ತನಿಖೆ ನಡೀತಿದೆ... ಮಧ್ಯೆ ನೀವು... ಪ್ರಕಾಶ್ ರಾಜ್ಗೆ ನಟ ವಿಷ್ಣು ಮಂಚು ಕ್ಲಾಸ್!
ತಿರುಪತಿ ಲಡ್ಡು ವಿಷಯದಲ್ಲಿ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ನಟ ಪ್ರಕಾಶ್ ರಾಜ್ಗೆ ನಟ ವಿಷ್ಣು ಮಂಚು ಹೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ತಿರುಪತಿ ಲಡ್ಡು ವಿಷಯದಲ್ಲಿ ಈಗ ಕೋಲಾಹಲ ಸೃಷ್ಟಿಯಾಗಿದೆ. ರಾಜಕೀಯ ತಿರುವು ಪಡೆದುಕೊಂಡಿರುವ ಈ ಘಟನೆ ನಡುವೆ ಹಿಂದಿನ ಮತ್ತು ಇಂದಿನ ಸರ್ಕಾರಗಳ ವಿರುದ್ಧ ಬೊಟ್ಟು ಮಾಡಿ ತೋರಿಸುವ ಎರಡು ಗುಂಪುಗಳಾಗಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಇದಾಗಲೇ ಸಾಕಷ್ಟು ಮಂದಿ ಹೇಳಿದ್ದಾರೆ. ಈ ಕುರಿತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಕೂಡ ಇದಾಗಲೇ ಹೇಳಿಕೆ ನೀಡಿದ್ದಾರೆ. ಹಿಂದಿನ ಸರ್ಕಾರದ ಅಧಿಕಾರಾವಧಿಯಲ್ಲಿ ಇಂತಹ ಭಯಾನಕ ಕೃತ್ಯ ನಡೆದಿದೆ. ತಿರುಪತಿ ದೇವಾಲಯದಲ್ಲಿ ನೀಡಲಾಗುವ ಲಡ್ಡುಗಳಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬೆರೆಸಿರುವುದು ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಇನ್ನು ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿಯನ್ನು ರಚಿಸಬೇಕು. ಅಂದರೆ, "ಸನಾತನ ಧರ್ಮ ರಕ್ಷಣಾ ಮಂಡಳಿ" ಎಂಬುವುದನ್ನು ತಕ್ಷಣವೇ ಆರಂಭಿಸಬೇಕು ಎಂದಿದ್ದಾರೆ. ಸನಾತನ ಧರ್ಮವನ್ನು ಅವಮಾನಿಸುವ ರೀತಿಯಲ್ಲಿ ನಡೆಯುತ್ತಿರುವ ಈ ವಿಷಯಗಳನ್ನು ಕೊನೆಗಾಣಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸನಾತನ ಧರ್ಮದ ವಿಷಯ ಬಂದಾಗಲೆಲ್ಲಾ ನಟ ಪ್ರಕಾಶ್ ರಾಜ್ ಅವರು ಕಿಡಿಕಾರುವುದು ಮೊದಲಿನಿಂದಲೂ ನಡೆದೇ ಇದೆ. ಅದೇ ರೀತಿ, ಈಗಲೂ ಅವರು ಪವನ್ ಕಲ್ಯಾಣ್ ಅವರ ಈ ಪೋಸ್ಟ್‌ಗೆ ತಿರುಗೇಟು ನೀಡಿದ್ದರು. "ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿರುವಾಗ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕೆಲಸದಲ್ಲಿ ನಿಮ್ಮ ಗಮನವಿರಲಿ" ಎಂದು ತೀವ್ರವಾಗಿ ಟೀಕಿಸಿದ್ದರು.
ವಿಕೃತರಿಂದ ಹಿಂದೂ ಧರ್ಮ ಕಾಪಾಡಬೇಕಿದೆ ಎನ್ನುತ್ತಲೇ ಡಿಸಿಎಂ ಪವನ್ ಕಲ್ಯಾಣ್ 11 ದಿನ ಪ್ರಾಯಶ್ಚಿತ ದೀಕ್ಷೆ!
ಪ್ರಕಾಶ್ ರಾಜ್ ಅವರ ಈ ಮಾತಿಗೆ ಇದಾಗಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್ ರಾಜ್ ಅವರ ತಿರುಗೇಟಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಟಾಲಿವುಡ್ ನಟ ವಿಷ್ಣು ಮಂಚು. ತಮ್ಮ ಎಕ್ಸ್ ಖಾತೆಯಲ್ಲಿ ಅವರು, ಶ್ರೀ ಪ್ರಕಾಶ್ ರಾಜ್ ಅವರೇ ದಯವಿಟ್ಟು ಸ್ವಲ್ಪ ತಾಳಿ.. ತಿರುಮಲ ಪ್ರಸಾದ, ಲಡ್ಡು ಎಂದರೆ ಬರೀ ಲಡ್ಡು ಅಲ್ಲ.. ಇದು ನನ್ನಂತಹ ಕೋಟ್ಯಂತರ ಭಕ್ತರ ಮತ್ತು ಹಿಂದೂಗಳ ನಂಬಿಕೆಯ ಪ್ರತೀಕ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ.. ಧರ್ಮ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನೀವು ನಿಮ್ಮ ಇತಿಮಿತಿಯಲ್ಲಿ ಇದ್ದರೆ ಒಳಿತು.. ನಿಮ್ಮಂಥವರು ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸಿದರೆ.. ಆಗ ಧರ್ಮಕ್ಕೆ ಯಾವ ಬಣ್ಣ ಹಚ್ಚುತ್ತಾರೆ ಗೊತ್ತಾ? ಎಂದು ವಿಷ್ಣು ಮಂಚು ಪ್ರಶ್ನಿಸಿದ್ದಾರೆ.
ತಿರುಪತಿ ಲಡ್ಡುವಿನ ಗಲಾಟೆ ಕುರಿತು ಇದಾಗಲೇ ಹಲವಾರು ಸೆಲೆಬ್ರಿಟಿಗಳೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಅದೇ ರೀತಿ ನಟಿ ಪ್ರಣೀತಾ ಸುಭಾಷ್ ಪ್ರತಿಕ್ರಿಯಿಸಿದ್ದಾರೆ. ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದಾರೆ ಎಂಬ ವಿಚಾರ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿದಂತೆ. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಇದು ತಿರುಪತಿ ತಿಮ್ಮಪ್ಪನ ಭಕ್ತರ ಊಹೆಗೂ ನಿಲುಕದ್ದು ಎಂದಿದ್ದಾರೆ.