- ಸ್ಕಂದ ಆಗುಂಬೆ

ನಮ್ಮ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲೆಂದು ಪ್ರತಿನಿತ್ಯ ಒಂದು ತಾಸು ಧ್ಯಾನಕ್ಕೆ ಕೂರಿಸುತ್ತಿದ್ದರು. ಕಣ್ಣುಬಿಟ್ಟುಕೊಂಡು ಅರೆನಿಮಿಷ ಸುಮ್ಮನೆ ಕೂರುವುದೇ ಸಂಕಟ ಹುಟ್ಟಿಸುವ ವಯಸ್ಸಿನಲ್ಲಿ ಕಣ್ಣುಮುಚ್ಚಿಕೊಂಡು ಒಂದು ತಾಸು ಕೂರುವುದು ದೊಡ್ಡ ಶಿಕ್ಷೆಯಾಗಿತ್ತು! ಇಡೀ ಶಾಲೆ ಮೌನವ್ರತಕ್ಕೆ ಜಾರಿರುವಾಗಲೇ ಯಾರಾದರೊಬ್ಬರು ಪಿಸುಗುಟ್ಟುವುದೋ, ತೇಗುವುದೋ, ಬಿಕ್ಕಳಿಸುವುದೋ, ಹೂಸು ಬಿಡುವುದೋ ಮಾಡಿ ಅಷ್ಟೂಜನರ ಧ್ಯಾನವನ್ನು ಭಂಗಗೊಳಿಸುತ್ತಿದ್ದರು. ಹಾಗಾಗಿ ಮೂರು ವರ್ಷಗಳ ಅವಧಿಯಲ್ಲಿ ಒಂದು ದಿನವೂ ನಮ್ಮ ಧ್ಯಾನ ಸಫಲವಾಗಲಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಧ್ಯಾನದ ವ್ಯಾಖ್ಯಾನವೇ ಬೇರೆ ಬಿಡಿ. ಕ್ಲಾಸಿಗೆ ಎಲ್ಲರಿಗಿಂತ ಮೊದಲು ಬಂದು ಬೋರ್ಡಿನ ಮೇಲೆ ಏನನ್ನೋ ಗೀಚುವುದರಲ್ಲಿ, ಯಾವುದೋ ಜಾಗದಲ್ಲಿ ಕೂತು ಕನಸು ಕಾಣುವುದರಲ್ಲಿ, ಯಾರದ್ದೋ ಮುದ್ದಾದ ಅಕ್ಷರಗಳನ್ನು ನೋಡಿ ಖುಷಿಪಡುವುದರಲ್ಲಿ, ಬೆಂಚಿನ ಮೇಲೆ ಯಾರಿಗೂ ಕಾಣದಷ್ಟುತೆಳುವಾಗಿ ಗುಟ್ಟನ್ನು ಬರೆಯುವುದರಲ್ಲಿ, ತುಂಬಿ ತುಳುಕುವ ಬಸ್ಸಿನಲ್ಲಿ ತಮಾಷೆ ಮಾಡಿ ಯಾರದ್ದೋ ನಗೆ ಕಾಣುವುದರಲ್ಲಿ ಹುಚ್ಚು ವಯಸ್ಸಿನ ಧ್ಯಾನ ಸಾರ್ಥಕಗೊಳ್ಳುತ್ತಿತ್ತು!

*

ಹಳ್ಳಿಯಲ್ಲೇ ಹುಟ್ಟಿ, ಬೆಳೆದು ಕಾಲೇಜಿಗೆಂದು ಮೈಸೂರು ಸೇರಿದ ನನ್ನನ್ನು ಬಾಚಿ ತಬ್ಬಿಕೊಂಡು ಅಚ್ಚರಿ ಹುಟ್ಟಿಸಿದ ಸಂಗತಿಗಳು ಎಷ್ಟೆಂದು ಎಣಿಸುತ್ತಾ ಕೂತರೆ ಬೆರಳುಗಳು ಸವೆಯುತ್ತವೆ. ಒಂದೊಂದು ಬೆರಳ ತುದಿಗೂ ಒಂದೊಂದು ಬಣ್ಣ ಹಚ್ಚಿಕೊಂಡು ಬಂದ ಹುಡುಗಿ, ಕಾಲೇಜಿನ ಪಕ್ಕದ ಪಾರ್ಕಿನಲ್ಲಿ ಕೂತು ಆರಾಮಾಗಿ ಸಿಗರೇಟು ಎಳೆದ ನನ್ನದೇ ತರಗತಿಯ ಹುಡುಗ, ಅಲ್ಲೇ ಇನ್ನೊಂದು ಬದಿಯಲ್ಲಿ ಕುಳಿತಿರುತ್ತಿದ್ದ ಜೋಡಿಹಕ್ಕಿಗಳು, ಪ್ರತಿನಿತ್ಯದ ಗಲಾಟೆಗಳು, ಲೀಲಾಜಾಲವಾಗಿ ಹರಿದು ಬರುತ್ತಿದ್ದ ಬೈಗುಳಗಳು, ಕಾಲೇಜಿನ ಎದುರೇ ವ್ಹೀಲಿಂಗ್‌ ಮಾಡುತ್ತಿದ್ದ ಹುಡುಗರ ಗುಂಪು, ಊಟದ ವಿರಾಮದಲ್ಲಿ ಕಾರಿಡಾರಿನ ಬದಿಯಲ್ಲಿ ನಿಂತಿರುತ್ತಿದ್ದ ನನ್ನ ಕೈಗೆ ಅಪರೂಪಕ್ಕೊಮ್ಮೆಯಾದರೂ ಚಾಕ್ಲೆಟ್‌ ಇಟ್ಟು ನಕ್ಕು ಓಡುತ್ತಿದ್ದ ಅವಳು! ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟುಅಚ್ಚರಿಗಳಿವೆ. ಆದರೆ, ಅವೆಲ್ಲಾ ಆ ಹೊತ್ತಿನಲ್ಲಿ ನನಗೆ ಮಾತ್ರ ಸೀಮಿತವಾದ ಅಚ್ಚರಿಗಳಾಗಿರುತ್ತಿದ್ದವೇ ವಿನಃ ಅದೇ ವಾತಾವರಣದಲ್ಲಿ ಬೆಳೆದ ನನ್ನ ಸಹಪಾಠಿಗಳಿಗೆ ಯಾವ ವಿಶೇಷ ಭಾವವನ್ನೂ ಹುಟ್ಟುಹಾಕುತ್ತಿರಲಿಲ್ಲ. ಮೊದಮೊದಲು ಈ ಸಂಗತಿ ನನ್ನನ್ನು ಬಹಳಷ್ಟುಕಾಡಿತ್ತಾದರೂ ನಂತರದ ದಿನಗಳಲ್ಲಿ ಅವರಿಗೂ ತಳಮಳಗಳಿವೆ ಹಾಗೂ ಅದಕ್ಕೆ ಕಾರಣವಾಗುವ ಸಂಗತಿಗಳು ಬೇರೆಯಷ್ಟೇ ಎಂಬುದು ಜ್ಞಾನೋದಯವಾಯಿತು.

ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ; ನಿಮ್ಮದು ಯಾವ ರಾಶಿ..? 

ಅಸಲಿಗೆ, ಹರೆಯದ ಹುಡುಗರ ಎದೆಯಲ್ಲಿ ಹುಟ್ಟುವ ಬಹುಪಾಲು ಸೆಳೆತಗಳ ಮೂಲವನ್ನು ಕೆದಕುತ್ತಾ ಕುಳಿತರೆ ಹುಣ್ಣೂ ಹೆಣ್ಣಾಗಬಹುದೇನು! ಲೈಬ್ರರಿಯ ಅಂಚಿನಲ್ಲಿ ಕೂತು ಕಣ್ಣು ಮಿಟುಕಿಸಿದ ಹುಡುಗಿ ಮಾರನೇ ದಿನವೂ ಅಲ್ಲೇ ಕೂರುವಳೆಂಬ ನಂಬಿಕೆಯಿಂದ ಹೋಗಿ ಕಾಯುವಾಗ, ಯಾವುದೋ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಕ್ಕೆ ಗುರುತೇ ಇಲ್ಲದ ಚೆಲುವೆಯೊಬ್ಬಳು ಬಂದು ಕಣ್ಣಲ್ಲಿ ಕಣ್ಣಿಟ್ಟು ಕೈ ಚಾಚಿದ್ದಕ್ಕೆ ಖುಷಿಪಡುವಾಗ, ಫೇಸ್‌ಬುಕ್‌ನಲ್ಲಿ ಯಾರದ್ದೋ ಹೆಸರನ್ನು ಹುಡುಕಿದಾಗ ಎದುರಾಗುವ ಮಗು ಮುಖವನ್ನು ಹೊತ್ತ ರಾಶಿ ರಾಶಿ ಪ್ರೊಫೈಲ್‌ಗಳಷ್ಟಕ್ಕೂ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ, ನಿಜವಾದ ಆಕೆ ಯಾರು ಎಂದು ಮತ್ತೆ ತಲೆ ಕೆಡಿಸಿಕೊಳ್ಳುವಾಗ, ಅಪರಾತ್ರಿಯಲ್ಲಿ ಅವಳ ಮೆಸೇಜು ಬಂದರೂ ಗೊತ್ತಾಗಲಿ ಎಂಬ ಕಾರಣಕ್ಕೆ ಕಸ್ಟಮ್‌ ನೋಟಿಫಿಕೇಶನ್ನಲ್ಲಿ ಲಾಂಗ್‌ ವೈಬ್ರೇಷನ್‌ ಸೆಟ್‌ ಮಾಡುವಾಗ ನಮಗೇ ಗೊತ್ತಿಲ್ಲದಂತೆ ನಾವು ದೊಡ್ಡವರಾಗುತ್ತಾ ಹರೆಯಕ್ಕೆ ಮೆರಗು ತಂದಿಡುತ್ತೇವೆ.

ಆದರೆ, ಇವೆಲ್ಲಾ ತಲೆಹರಟೆಗಳಾಚೆಗೆ ಹರೆಯಕ್ಕೆ ಸಾರ್ಥಕತೆ ನೀಡುವುದು ವಿಷಾದ ಮತ್ತು ವೈರಾಗ್ಯ! ಅವೆರೆಡು ಭಾವಗಳನ್ನು ಅನುಭವಿಸದೇ ಹರೆಯ ಪೂರ್ಣಗೊಳ್ಳುವುದು ಅಸಾಧ್ಯ.

ಟ್ಯೂಷನ್‌ ಸೆಂಟರಲ್ಲಿ ಕಂಡ ಬೇರೆ ಕಾಲೇಜಿನ ಹುಡುಗಿ ಕಣ್ಸೆಳೆದ ಮಾರನೇ ದಿನವೇ ಇನ್ಯಾರೊಂದಿಗೋ ಕಾಣಿಸಿಕೊಂಡಾಗ, ಕಾಲೇಜಿಗೆ ಹೊಸದಾಗಿ ಬಂದವಳು ಜ್ಯೂನಿಯರ್‌ ಆದರೂ ವಯಸ್ಸಿನಲ್ಲಿ ನಮಗಿಂತ ಒಂದೂವರೆ ವರ್ಷ ದೊಡ್ಡವಳೆಂಬ ಸತ್ಯವನ್ನು ಆಕೆಯ ಐಡಿ ಕಾರ್ಡ್‌ ಬಹಿರಂಗಪಡಿಸಿದಾಗ, ಎರಡು ದಿನಗಳ ಹಿಂದಷ್ಟೇ ನಕ್ಕು ಮಾತನಾಡಿಸಿದ ಹುಡುಗಿ ಸದ್ದಿಲ್ಲದೇ ಬಂದು ರಾಖಿ ಕಟ್ಟಿದಾಗ, ಸಿನಿಮಾಕ್ಕೆ ಹೋಗೋಣವೆಂದಾಕೆ ಜೊತೆಯಲ್ಲಿ ಅವರಪ್ಪನನ್ನೂ ಕರೆದುಕೊಂಡು ಬಂದಾಗ, ಕಷ್ಟಪಟ್ಟು ಅವಳಿಂದಲೇ ಪಡೆದುಕೊಂಡ ಫೋನ್‌ ನಂಬರ್‌ ಅಲ್ಲಿಯ ಸರ್ಕಲ್‌ ಇನ್ಸ್‌ಪೆಕ್ಟರ್‌ದು ಎಂದು ಗೊತ್ತಾದಾಗ ಎದೆಯಲ್ಲಿ ಆಶ್ಲೇಷ ಮಳೆಯ ಗಾಳಿಯನ್ನೂ ನಾಚಿಸುವಂತೆ ವಿಷಾದ, ವೈರಾಗ್ಯ ಭಾವಗಳು ಅಸಡಾಬಸಡಾ ಬೀಸುತ್ತವೆ. ಅಂತಹ ವಿಷಮ ಘಳಿಗೆಯಲ್ಲಿ ಹೊಸತೊಂದು ಧ್ಯಾನ ಆರಂಭವಾಗುತ್ತದೆ. ಮನಸ್ಸು ಆಧ್ಯಾತ್ಮದತ್ತ ಒಲಿದಂತಾಗುತ್ತದೆ, ದೇವರ ಮೇಲೆ ಏಕಾಏಕಿ ಭಕ್ತಿ ಹುಟ್ಟಿದಂತೆನ್ನಿಸುತ್ತದೆ, ಪೇಪರಿನಲ್ಲಿ ಬರುವ ದಿನಭವಿಷ್ಯದ ಕಾಲಂ ಬೇಡವೆಂದರೂ ಕಣ್ಣಿಗೆ ಬೀಳುತ್ತದೆ, ಕಣ್ಮುಚ್ಚಿಕೊಂಡು ಧ್ಯಾನಿಸಿ ದೇವರನ್ನು ಒಲಿಸಿಕೊಂಡು ಜಗತ್ತನ್ನೇ ಗೆಲ್ಲುವ ವರ ಬೇಡಬೇಕೆನ್ನಿಸುತ್ತದೆ, ದೇವಸ್ಥಾನದ ಎದುರಿರುವ ನಂದಿಯ ಕಿವಿಯಲ್ಲಿ ಏನನ್ನೇ ಉಸುರಿದರೂ ಅದು ಈಡೇರುತ್ತದೆ ಎಂದು ಯಾವಾಗಲೋ ಕೇಳಿಸಿಕೊಂಡ ಮಾತು ಅರ್ಧರಾತ್ರಿಯಲ್ಲಿ ಇನ್ನಿಲ್ಲದಂತೆ ನೆನಪಾಗುತ್ತದೆ, ವೈರಾಗ್ಯಕ್ಕೆ ಕಾರಣರಾದವರು ಸಂಕಟಪಡುವಂತೆ ಸಾಧಿಸಬೇಕೆಂಬ ಛಲ ಹುಟ್ಟುತ್ತದೆ ಮತ್ತು ಅಂತಹದ್ದೇ ಒಂದೆರೆಡು ಕನಸು ಬಿದ್ದು ಮನಸ್ಸು ಹಿರಿಹಿರಿ ಹಿಗ್ಗುತ್ತದೆ.

ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!

ಇನ್ನೇನು ಬದುಕೇ ಬದಲಾಯಿತು ಎಂದು ಮೀಸೆ ತಿರುವಿಕೊಳ್ಳುವಾಗಲೇ ಮೊಬೈಲಲ್ಲಿ ಲಾಂಗ್‌ ವೈಬ್ರೇಷನ್ನು! ವಿಷಾದ, ವೈರಾಗ್ಯ, ಹಠ, ಛಲ, ನಿರಾಶೆ, ಕೋಪ ಎಲ್ಲವೂ ಒಂದೇ ವೈಬ್ರೇಷನ್ನಿಗೆ ಕರಗಿ ಹೋಗುತ್ತದೆ. ಅವಳ ಮೆಸೇಜಿಗೆ ಪ್ರತ್ಯುತ್ತರಿಸುವುದಕ್ಕಿಂತ ಮಹತ್ತರ ಕೆಲಸವೇ ಈ ಬದುಕಿನಲ್ಲಿಲ್ಲ ಎಂಬ ಭಾವ ಅವತರಿಸಿ, ಹೊಸತಾಗಿ ಹುಟ್ಟಲು ತಯಾರಾಗಿದ್ದ ಧ್ಯಾನ ಆರಂಭಕ್ಕೂ ಮುನ್ನವೇ ಭಗ್ನಗೊಳ್ಳುತ್ತದೆ. ಹಾಗೂ ಹರೆಯ ಸಾರ್ಥಕತೆಯ ಮತ್ತೊಂದು ಮೆಟ್ಟಿಲನ್ನು ಏರುತ್ತದೆ.