ಅರಸಿಕ ಪತಿದೇವನ ರೊಮ್ಯಾಂಟಿಕ್ ಪತ್ರ!
ಆಫೀಸ್‌ಗೆ ಹೋಗೋ ಗಂಡ, ಹೋಂ ಮೇಕರ್ ಹೆಂಡ್ತಿಗೆ ಬರ್ದಿರೋ ಕ್ಯೂಟ್ ಲೆಟರ್ ಇಲ್ಲಿದೆ. ಅವಳ ಬರ್ತ್‌ಡೇಗೆ ವಿಶ್ ಮಾಡಲು ಮರೆಯುವ, ಆ್ಯನಿವರ್ಸರಿ ದಿನ ಲೇಟ್ ಆಗಿ ಆಫೀಸ್‌ನಿಂದ ಬರುವ, ಅನ್ ರೊಮ್ಯಾಂಟಿಕ್ ಗಂಡ ಇಲ್ಲಿ ಚಂದವಾಗಿ ತನ್ನೊಳಗೆ ಗುಪ್ತವಾಗಿ ಹರಿಯುವ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ.
ಬೆಳಗಿನ ಆರು ಗಂಟೆ. ಕಿಚನ್ ನಲ್ಲಿ ಪಾತ್ರೆ ಶಬ್ದಕ್ಕೆ ಎಚ್ಚರಾಗುತ್ತದೆ. ಸಣ್ಣ ಅಚ್ಚರಿಯೊಂದಿಗೆ ಏಳುತ್ತೇನೆ. ಏಕೆಂದರೆ ಬೆಳಗಿನ ಈ ಹೊತ್ತಿಗೆ ಅಡುಗೆ ಮನೆಗೆ ಮೊದಲು ಹೋಗೋದು ನಾನು. ಅವಳಿಗೆ, ಅಮ್ಮನಿಗೆ ಕುಡಿಯಲು ಬಿಸಿ ನೀರು ರೆಡಿ ಮಾಡಿ ಫ್ಲಾಸ್ಕ್ ಗೆ ಹಾಕಿ ಇಡುತ್ತೇನೆ. ನಾನೊಂದು ಕಪ್ ಬಿಸಿನೀರು ಗಂಟಲಿಗೆ ಹುಯ್ದುಕೊಳ್ಳುತ್ತೇನೆ. ಆಮೇಲೆ ಟೀಗಿಟ್ಟು ಇನ್ನೊಂದು ಫ್ಲಾಸ್ಕ್‌ಗೆ ಸುರುವಿ ನಾನು ಒಂದು ಕಪ್ ಟೀ ಎತ್ಕೊಂಡು ಹಾಲ್‌ಗೆ ಬರುತ್ತೇನೆ. ಆಮೇಲೆ ಟೀ ಕುಡೀತಾ ನ್ಯೂಸ್ ಪೇಪರ್‌ನೊಳಗೆ ಮುಳುಗಿ ಹೋಗೋದು ನನ್ನ ಅಭ್ಯಾಸ. ಅವಳು ಅವಳ ಟೈಮ್‌ಗೆ ಎದ್ದು ಪ್ರೆಶ್ ಆಗಿ ನಾನು ಮಾಡಿಟ್ಟ ಬಿಸಿ ನೀರು, ಆಮೇಲೆ ಟೀ ಕುಡಿದು ಅವಳ ಕೆಲಸದಲ್ಲಿ ಮುಳುಗುತ್ತಾಳೆ. ಕಳೆದ ಹದಿನೇಳು ವರ್ಷಗಳಿಂದ ಹೆಚ್ಚು ಕಡಿಮೆ ಹೀಗೇ ನಡೆದು ಬರುತ್ತಿದೆ. ಆದರೆ ಇವತ್ತು ಉಲ್ಟಾ ಆದ ಹಾಗಿದೆ. ಅವಳು ನನಗಿಂತ ಮೊದಲೇ ಎದ್ದು ಅಡುಗೆ ಮನೆಗೆ ಹೋಗಿದ್ದಾಳೆ. ಫ್ರೆಶ್ ಆಗಿ ಕಿಚನ್‌ನಲ್ಲಿ ಸೇರ್ಕೊಂಡ್ರೆ ಆಗಲೇ ಬಿಸಿ ನೀರು ರೆಡಿ ಇದೆ. ಅದನ್ನು ಗುಟುಕರಿಸುತ್ತಾ ಸದ್ದಿಲ್ಲದ ಹಾಲ್‌ಗೆ ಬಂದು ನ್ಯೂಸ್ ಪೇಪರ್ ಎತ್ತಿಕೊಂಡೆ. ಸ್ವಲ್ಪ ಹೊತ್ತಿಗೆ ಶುಂಠಿ ಘಮ ಮೂಗಿಗೆ ಬಡಿಯಿತು. ಅವಳು ಟೀ ಹಿಡಿದು ನಿಂತಿದ್ದಳು. ಟೀ ಹೀರುತ್ತಾ ಪೇಪರ್‌ನೊಳಗೆ ಸೇರಿಹೋದೆ. ಆಫೀಸ್‌ಗೆ ಹೋಗೋದ್ರೊಳಗೆ ಒಂದೆರಡು ಮಾತು ಅಷ್ಟೇ. ಪ್ರತಿದಿನವೂ ಹೀಗೇ ತಾನೇ..
ನಮ್ಮ ಪ್ರೀತಿಗೆ ಇಪ್ಪತ್ತು ವರ್ಷ ದಾಟಿದೆ. ಮದುವೆಗೆ ಹದಿನೇಳು.
ಕಾಲೇಜು ದಿನಗಳಲ್ಲಿ ನಾವು ಒಬ್ಬರಿಗೊಬ್ಬರು ನೋಡಿದ್ದು, ಹಾಗೇ ಸ್ನೇಹಿತರಾಗಿದ್ದು. ಅವಳು ನನಗಿಂತ ಒಂದು ಕ್ಲಾಸ್ ಮುಂದಿದ್ದಳು. ಆದರೆ ವಯಸ್ಸಲ್ಲಿ ನನಗಿಂತ ಎರಡು ವರ್ಷ ಚಿಕ್ಕವಳು. ಹಳ್ಳಿಯಲ್ಲಿ ಹುಟ್ಟಿದ ಅವಳನ್ನು ಬೇಗ ಸ್ಕೂಲ್ ಗೆ ಸೇರಿಸಿದ್ದರು. ಅವಳು ನನ್ನ ಗರ್ಲ್ ಫ್ರೆಂಡ್ ಆಗಿದ್ದ ದಿನಗಳಲ್ಲಿ, ನನ್ನ ಮದ್ವೆ ಆಗ್ತೀಯಾ ಅಂತ ಕೇಳಿದ್ದೆ, ಬಹಳ ಯೂಶ್ಯವಲ್ ಆಗಿ. ಏಕೆಂದರೆ ನಾನು ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ಅಪ್ಪಿತಪ್ಪಿಯೂ ಅದನ್ನು ನನ್ನ ವರ್ತನೆಯಲ್ಲಿ ತೋರಿಸುತ್ತಿರಲಿಲ್ಲ. ನಾನು ಮದುವೆ ಆಗ್ತೀಯಾ ಅಂದಾಗ ಅವಳು ಎಸ್ ಅಂದಳು. ನಾವು ಮದುವೆ ಆದ್ವಿ. ಹಾಗಂತ ಮಂಡಿ ಮೇಲೆ ಕಾಲೂರಿ ಅವಳಿಗೆ ಪ್ರೊಪೋಸ್ ಮಾಡಿದ್ದು, ಪಾರ್ಕ್‌ನ ಮೂಲೆಯಲ್ಲಿ ಕೂತು ಅವಳನ್ನಪ್ಪಿ ಕಿಸ್ ಮಾಡಿದ್ದು..ಊಹೂಂ.. ಈ ತರದ್ದೆಲ್ಲ ನಮ್ಮ ನಡುವೆ ನಡೆಯಲೇ ಇಲ್ಲ.
ನಮ್ಮ ದಿನ ತೀರಾ ಸಾಧಾರಣವಾಗಿ ಶುರುವಾಗುತ್ತೆ. ನಾನು ಎಂಥ ಅನ್ ರೊಮ್ಯಾಂಟಿಕ್ ಫೆಲೋ ಅಂದರೆ ಅವಳ ಬರ್ತ್ ಡೇ ಯಾವಾಗ ಅಂತಾನೂ ನೆನಪಿರಲ್ಲ. ನಮ್ಮ ಆ್ವನಿವರ್ಸರಿ ಡೇಟ್ ಮರೆತೇ ಹೋಗಿರುತ್ತೆ. ಆಗಾಗ ಟ್ರೆಕ್ಕಿಂಗ್ ಹೋಗ್ತೀವಿ ಅನ್ನೋದು ಬಿಟ್ಟರೆ ರೊಮ್ಯಾಂಟಿಕ್ ತಾಣಕ್ಕೆ ಹೋಗಿದ್ದಿಲ್ಲ. ಸೋ, ನಾನೊಬ್ಬ ಬೋರಿಂಗ್ ಮತ್ತು ಅನ್ ರೊಮ್ಯಾಂಟಿಕ್ ಗಂಡ. ಆ ಬಗ್ಗೆ ಬೇಜಾರಿಲ್ಲ. ಓಕೆ ನಾನಿರೋದೇ ಹೀಗೆ ಅಂದ್ಕೋತೀನಿ.
ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!
ಆದರೆ ಆಫೀಸ್ ಗೆ ಹೋದ ಮೇಲೆ ನನ್ನ ಮುಠಾಳತನ ಗೊತ್ತಾಯ್ತು. ಅವತ್ತು ನಮ್ಮ ಆ್ಯನಿವರ್ಸರಿ ಅಂತ ಎಫ್‌ಬಿ ನೆನಪಿಸಿತು. ಬೆಳಗ್ಗೆ ಘಮ ಘಮಿಸುವ ಟೀ ಹಿಡ್ಕೊಂಡು ಬಂದವಳ ಮುಖ ನೋಡಿದ್ರೂ ಹಿಂಟ್ ಸಿಗ್ತಿತ್ತೇನೋ. ಆದರೆ ವಡ್ಡ ನಾನು, ಯಾವುದೋ ಸುದ್ದಿಯಲ್ಲಿ ಮುಳುಗಿ ಹೋದವನಿಗೆ ಅದೂ ಗೊತ್ತಾಗಲಿಲ್ಲ. ಅವಳಿಗೆ ಕಾಲ್ ಮಾಡಿದೆ. ಊಹೂಂ, ರಿಸೀವ್ ಮಾಡ್ತಿಲ್ಲ. ಬೇಗ ಬೇಗ ಕೆಲಸ ಮುಗಿಸಿ ಸಂಜೆ ಸ್ವಲ್ಪ ಬೇಗ ಮನೆಗೆ ಹೊರಟೆ. ದಾರಿಯುದ್ದಕ್ಕೂ ಮನಸ್ಸು ಒಂಥರ ಆಗಿತ್ತು.
ನಾನು ಅವಳಿಗಿಂತ ಸುಂದರಿಯರನ್ನು ಬಹಳ ಸಲ ನೋಡಿದ್ದೇನೆ. ಆದರೆ ನನ್ನ ಬೆಳಗು ಅವಳಿಂದಲೇ ಶುರುವಾಗ ಬೇಕು ಅಂತ ಹಂಬಲಿಸಿದವನು. ಅವಳು ನನ್ನ ಜೊತೆಗೆ ಜಗಳ ಆಡಿದ್ದಾಳೆ. ಮಾತು ಡಿವೋರ್ಸ್‌ವರೆಗೂ ಹೋಗಿದೆ. ಹಾಗಂತ ನನ್ನ ಮೇಲಿನ ಅವಳ ಸಿಟ್ಟು ನನ್ನ ಪೋಷಕರ ಮೇಲೆ ತಿರುಗಲ್ಲ. ನನಗಿಂತ ಹೆಚ್ಚು ಅವರನ್ನು ಪ್ರೀತಿಸೋದು, ಕಾಳಜಿ ಮಾಡೋದು ಅವಳೇ. ನನಗೂ ನನ್ನ ಅಪ್ಪ ಅಮ್ಮನ ಮೇಲೆ ಪ್ರೀತಿಯಿದೆ, ಆದರೆ ಅವಳ ಹಾಗೆ ನೋಡ್ಕೊಳ್ಳೋದು ಸಾಧ್ಯವಿಲ್ಲ. ಇನ್ನು ಅವಳೇ ನನ್ನ ಜೀವ ಆಗಿ ಹೋಗಿರುವಾಗ ಅವಳಿಲ್ಲದ ನನ್ನ ಬದುಕನ್ನು ಊಹಿಸಲೂ ಸಾಧ್ಯವಿಲ್ಲ.
ಪ್ರೀತಿಯ ತೀವ್ರತೆಯಷ್ಟೇ ವಿರಹವೂ ಸುಖವೇ!
ಸಂಜೆ ಮನೆ ತಲುಪಿ ಬೆಲ್ ಮಾಡಿದರೆ ಬಾಗಿಲು ತೆರೆದವಳ ಕೈಯಲ್ಲೊಂದು ಪುಸ್ತಕ. ಸಿಟ್ಟಲ್ಲಿ ಮುಗುಮ್ಮಾದ ಮುಖ. ಸೀದಾ ರೂಮಿಗೆ ಹೋಗಿ ಪುಸ್ತಕ ತೆರೆದು, ಓದತೊಡಗಿದಳು. ನಂಗೊತ್ತು, ಕಾಲಿಂಗ್ ಬೆಲ್ ಸೌಂಡ್ ಮಾಡಿದಾಗಲೇ ಅವಳು ಪುಸ್ತಕ ಹಿಡಿದದ್ದು ಅಂತ, ಈಗಲೂ ಪುಸ್ತಕ ಕೈಯಲ್ಲಿ ಹಿಡಿದು ಓದುವಂತೆ ನಾಟಕ ಮಾಡುತ್ತಿದ್ದಾಳೆ, ನಿಜಕ್ಕೂ ಅಲ್ಲಿರುವ ಒಂದಕ್ಷರವನ್ನೂ ಓದಿರಲ್ಲ ಅಂತ. ನಾನು ಬ್ಯಾಗ್ ಅನ್ನು ಶೆಲ್ಫ್ ನಲ್ಲಿಟ್ಟು, ಟಿಫಿನ್ ಬಾಕ್ಸ್ ಸಿಂಕ್‌ಗೆ ಹಾಕಿ ಫ್ರೆಶ್ ಆಗಿ ರೂಮ್‌ಗೆ ಬಂದೆ. ಅವಳ ಭಂಗಿ ಮೊದಲಿನ ಹಾಗೆ ಇತ್ತು. ಹೋಗಿ ಅವಳ ಪಕ್ಕ ಕೂತೆ. ಅವಳು ಸರಿದಳು. ಮತ್ತೆ ಒತ್ತೆ ಕೂತೆ. ತೋಳುಗಳಿಂದ ಅವಳನ್ನು ಬಳಸಿದೆ. ತಪ್ಪಿಸಿಕೊಳ್ಳಲು ಕೊಸರಾಡಿದಳು. ನನ್ನ ಹಿಡಿತ ಬಿಗಿಯಾಯ್ತು. ಬಿಡಿಸಿಕೊಳ್ಳುವಂತೆ ನಾಟಕ ಮಾಡಿದಳು. ಹಾಗೆ ಅವಳನ್ನಾವರಿಸಿ ಕೆನ್ನೆಯನ್ನು ಚುಂಬಿಸಿದೆ. ಅವಳು ಎದೆಗೊರೆಗಿ ಮೌನವಾದಳು.