ನಮ್ಮ ಸ್ನೇಹಚಿಗುರಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ. ಇಬ್ಬರೂ ಕಂಪನಿಯ ಒಂದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆವು. ನನಗಿಂತ ಅವನು ಆ ವಿಭಾಗಕ್ಕೆ ಏಳೆಂಟು ತಿಂಗಳು ಸೀನಿಯರ್.  ಪರಿಚಯದಿಂದ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ನಮ್ಮ ಸ್ನೇಹ ಹೆಮ್ಮರವಾಗಿ ಬೆಳೆಯಿತು. ಅವನ ಹೆಸರು ಹನುಮಂತರೆಡ್ಡಿ. ಮೂಲತಃ ಆಂಧ್ರದವನು. ಈಗ

ಬಳ್ಳಾರಿಯಲ್ಲಿ ಸೆಟಲ್ ಆಗಿರುವುದಾಗಿ ಹೇಳಿದ್ದನು. ಪರಸ್ಪರ ನಮ್ಮ ಊರುಗಳಿಗೆ ಆಹ್ವಾನಿಸಿದ್ದರು ಇಬ್ಬರಿಗೂ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಮತ್ತು ನಮ್ಮೂರಿನ ಸ್ನೇಹಿತ ಇಬ್ಬರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದೆವು. ಅವನಿಗೆ ಅದೇ ಕಂಪನಿಯ ಬೇರೆ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು. ನಾವು ಒಂದು ಕಡೆ ಸಣ್ಣ ರೂಂ ಬಾಡಿಗೆ ಪಡೆದುಕೊಂಡಿದ್ದೆವು. ಇಬ್ಬರಿಗೂ ಸಣ್ಣ ಸಂಬಳ. ಮನೆಗೆ ಹಣ ಕಳುಹಿಸುವ ಅನಿವಾರ್ಯತೆ ಇತ್ತು. ಬಾಡಿಗೆ, ಖರ್ಚು ಕಳೆದು ತಿಂಗಳ ಕೊನೆಗೆ ನಯಾಪೈಸೆ ಇರುತ್ತಿರಲಿಲ್ಲ.

ಗೆಳೆಯರಿಂದ ಹೆಚ್ಚುವ ಆಯಸ್ಸು, ಗೆಳೆತನವೇ ಬಾಳಿಗೆ ಹುಮ್ಮಸ್ಸು!

ಈಗಿನಂತೆ ಆಗ ಗ್ಯಾಸ್ ಕೊಳ್ಳಲು ಹಣವೂ ಇರಲಿಲ್ಲ. ಗ್ಯಾಸ್ ಪಡೆಯುವುದು ಸುಲಭವೂ ಇರಲಿಲ್ಲ. ಸೀಮೆ ಎಣ್ಣೆ ಸ್ಟೌವ್‌ನಲ್ಲಿ ಅಡುಗೆ ಮಾಡುತ್ತಿದ್ದೆವು. ಎಷ್ಟೋ ಸಲ ಸೀಮೆಣ್ಣೆ ಖಾಲಿಯಾಗಿ ಕೈನಲ್ಲಿ ದುಡ್ಡು ಇಲ್ಲದಾಗ ಸ್ನೇಹಿತ ಹನುಮಂತರೆಡ್ಡಿ ತನ್ನ ಪರಿಚಯದ ಅಂಗಡಿಯಿಂದ ಸೀಮೆಎಣ್ಣೆ, ದಿನಸಿ ಪದಾರ್ಥಗಳನ್ನು ಸಾಲ ಕೊಡಿಸಿ ನಮ್ಮ ಹೊಟ್ಟೆ ತುಂಬಲು
ನೆರವಾಗಿದ್ದನು.

ಒಂದು ದಿನ ಹನುಮಂತ ನಾನು ಕೆಲಸ ಬಿಡುವುದಾಗಿಯೂ, ಬಂಧುಗಳೊಬ್ಬರ ಸಹಾಯದಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗ್ಯಾಸ್ ಏಜೆನ್ಸಿಯನ್ನು ಪ್ರಾರಂಭಿಸುವುದಾಗಿಯೂ ಹೇಳಿದ. ಅವನು ಕೆಲಸ ಬಿಡುವುದು ಬೇಸರವಾದರು ಅನಿವಾರ್ಯವಾಗಿ ‘ಒಳ್ಳೆಯದಾಗಲಿ’ಎಂದು ಹಾರೈಸಿದೆ. ನಮ್ಮ ಸ್ನೇಹ ಸದಾಜಾರಿಯಲ್ಲಿರಲಿ. ಸಮಯ ಸಿಕ್ಕಿದಾಗ ಭೇಟಿಯಾಗೋಣ. ನಿರಂತರ ಸಂಪರ್ಕದಲ್ಲಿರೋಣ ಎಂದು  ಮಾತಾಡಿಕೊಂಡೆವು. ಬೀಳ್ಕೊಡುವಾಗ ಹೃದಯ ಭಾರವಾಗಿತ್ತು. ಈ ನಡುವೆ ನಾನು, ನನ್ನಊರಿನ ಸ್ನೇಹಿತನು ಸಹ ಕಂಪನಿ ಕೆಲಸ ಬಿಟ್ಟು ನಮ್ಮ ಕ್ಲಾಸ್‌ಮೇಟ್ ಸ್ನೇಹಿತರಿದ್ದ ಕಂಪನಿಗೆ ಸೇರಿಕೊಂಡೆವು. ಪ್ರತಿದಿನ ನಾನು ಹನುಮಂತು ಮೊಬೈಲಿನಲ್ಲಿ ಮಾತಾಡುತ್ತಿದ್ದೆವು. ಒಂದು ದಿನ ಬಸ್ಸಿನಲ್ಲಿ ಹೋಗುವಾಗ ನನ್ನ ಮೊಬೈಲ್ ಕಳೆದುಹೋಯಿತು. ಆಗ ೨೦೦೪ರ ದಿನಗಳು. ಈಗಿನಂತೆ ಆಗ ಮೊಬೈಲ್ ಕ್ರಾಂತಿ ಆಗಿರಲಿಲ್ಲ. ಅದೇ ನಂಬರಿನ ಸಿಮ್ ಸಿಗುವುದು ಕಷ್ಟವಿತ್ತು.

ಆಪತ್ತಿಗಾಗೋನೇ ನೆಂಟ, ಯಾವಾಗ್ಲೂ ಫ್ರೆಂಡ್ ಆಗ್ತಾನೆ ನಮ್ಮ ಬಂಟ

ಅಲ್ಲದೇ ಕಳೆದುಹೋದ ನಂಬರಿನ ಸಿಮ್ ನಂಬರನ್ನು ತೆಗೆದುಕೊಳ್ಳಬಹುದೆಂದು ನನಗೆ ಗೊತ್ತೇ ಇರಲಿಲ್ಲ. ಹನುಮಂತನ ನಂಬರ್ ನಾನು ನೆನಪಿನಲ್ಲಿ ಇಟ್ಟುಕೊಂಡಿರಲಿಲ್ಲ. ಒಂದು ರಜೆ ದಿವಸ ಹನುಮಂತನ ಗ್ಯಾಸ್ ಏಜೆನ್ಸಿಯನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹುಡುಕಿಯೂ ಹುಡುಕಿದೆ. ಸಮುದ್ರದಂತ ಆ ಏರಿಯದಲ್ಲಿ ಯಾವ ಗಲ್ಲಿಯಲ್ಲಿತ್ತೊ? ಒಂದು ದಿನ ಹಳೆ ಕಂಪನಿಯ ಹೊರಗೆ ನಿಂತು ಇಬ್ಬರಿಗೂ ಪರಿಚಯವಿರುವವರ ಬಳಿ ಹನುಮಂತನ ಮೊಬೈಲ್ ನಂಬರ್ ಪಡೆಯಲು ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ. ಅಂತು ನನ್ನ ಸ್ನೇಹಿತ ಸಿಗಲೇ ಇಲ್ಲ.

ನನಗೆ ಎಷ್ಟು ಸಲ ಅವನು ಕಾಲ್ ಮಾಡಿ ಸೋತು ಹೋಗಿದ್ದಾನೋ ಎನೋ? ಇದೀಗ ಹದಿನೈದು ವರ್ಷಗಳೇ ಕಳೆದಿವೆ. ಈಗ ಮೈಸೂರಿನಲ್ಲಿ ವಾಣಿಜ್ಯ ತೆರಿಗೆಇಲಾಖೆಯಲ್ಲಿ ಉದ್ಯೋಗದಲ್ಲಿದ್ದೇನೆ. ಈಗಲೂ ಹನುಮಂತನ ನೆನಪು ಕಾಡುತ್ತದೆ. ಮೈಸೂರಿಗೆ ಅವನು ಪ್ರವಾಸಕ್ಕೆ ಬಂದು ಆಕಸ್ಮಿಕವಾಗಿ ನನ್ನಕಣ್ಣಿಗೆ ಬೀಳಬಾರದೇ ಎಂದುಕೊಳ್ಳುತ್ತಲೇ ಇರುತ್ತೇನೆ.