ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರ ವಾದಗಳಲ್ಲಿ ಬಲವಾದ ಕಾನೂನಾತ್ಮಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಎದುರಾಗಿದ್ದ ಕಾನೂನು ತೊಡಕನ್ನು ನಿವಾರಿಸಿದೆ.
ಬೆಂಗಳೂರು: ಬಹುನಿರೀಕ್ಷಿತ ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಟನೆ ಎಂಬುದು ವಾದವಾಗಿತ್ತು.ಆದರೆ ಕೋರ್ಟ್ ಇದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಇಲ್ಲ ಎಂದು ಅರ್ಜಿ ವಜಾಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಟೌನ್‌ಶಿಪ್ ಯೋಜನೆಗೆ ಎದುರಾಗಿದ್ದ ಕಾನೂನಾತ್ಮಕ ತೊಡಕು ಒಂದು ನಿವಾರಣೆಯಾದಂತಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ
ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರಾಜೇಶ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ನಡೆಯಿತು. ಅರ್ಜಿದಾರರ ಪರವಾಗಿ ರಾಜೇಶ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಾದಗಳನ್ನು ಮಂಡಿಸಿದರು.
ಅರ್ಜಿದಾರರ ಪ್ರಮುಖ ವಾದಗಳೇನು?
ವಿಚಾರಣೆ ವೇಳೆ ಅರ್ಜಿದಾರ ರಾಜೇಶ್ ಅವರು, ಬಿಡದಿ ಭಾಗದಲ್ಲಿ ಸರ್ಕಾರ ಜೂನ್ 10, 2026 ರಂದು ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ವಾದಿಸಿದರು. ರಿಯಲ್ ಎಸ್ಟೇಟ್ ಉದ್ದೇಶ, ರೈತರ ಸುದೀರ್ಘ ಪ್ರತಿಭಟನೆ, ಶೇ. 80 ರಷ್ಟು ಒಪ್ಪಿಗೆಯ ನಿಯಮ ಉಲ್ಲಂಘನೆ, ಅಪೂರ್ಣ ಪರಿಹಾರದ ಭರವಸೆ ಹೀಗೆ ಹಲವು ಅಂಶಗಳನ್ನು ಕೋರ್ಟ್ ಮುಂದೆ ಉಲ್ಲೇಖಿಸಿದರು.
ಕರ್ನಾಟಕ ನಗರಾಭಿವೃದ್ಧಿ ಕಾಯಿದೆಯಡಿ ಕೈಗೊಳ್ಳಲಾಗಿರುವ ಈ ಭೂಸ್ವಾಧೀನದಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಗಳಿಗಾಗಿ ಕನ್ವರ್ಟ್ ಮಾಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಡದಿ ಭಾಗದ ರೈತರು ಕಳೆದ 500ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಕಾನೂನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ನಿಯಮಗಳ ಪ್ರಕಾರ ಭೂಸ್ವಾಧೀನಕ್ಕೆ ಶೇಕಡಾ 80 ರಷ್ಟು ರೈತರು ಒಪ್ಪಿಗೆ ಸೂಚಿಸಬೇಕು. ಆದರೆ ಸರ್ಕಾರ ರೈತರ ಒಪ್ಪಿಗೆಯ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ನೀಡುತ್ತಿಲ್ಲ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಸೂಕ್ತ ಮಾಹಿತಿ ಒದಗಿಸಿಲ್ಲ. ಭೂಮಿ ಕಳೆದುಕೊಂಡವರಿಗೆ ಕೇವಲ ಸೈಟ್ ನೀಡುವುದಾಗಿ ಹೇಳಲಾಗುತ್ತಿದೆಯೇ ಹೊರತು, ಕಾನೂನಾತ್ಮಕವಾಗಿ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸುತ್ತಿಲ್ಲ. ಹಾಗಾಗಿ ತಕ್ಷಣವೇ ಈ ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರ್ಟ್ ಮುಂದೆ ಮನವಿ ಮಾಡಿದರು.
ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆ
ವಾದ ಪ್ರತಿವಾದ ಆಲಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, "ನಗರಾಭಿವೃದ್ಧಿ ಕಾಯಿದೆಯ ಯಾವ ನಿರ್ದಿಷ್ಟ ಕಾನೂನು ಇಲ್ಲಿ ಉಲ್ಲಂಘನೆಯಾಗಿದೆ?" ಎಂದು ಪ್ರಶ್ನಿಸಿದರು.
ಅರ್ಜಿದಾರರು ಮಂಡಿಸಿದ ವಾದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು, "ಕಾನೂನುಬಾಹಿರವಾಗಿ ಭೂಸ್ವಾಧೀನ ಮಾಡಲಾಗುತ್ತಿದೆ, ಕಾನೂನು ಪಾಲನೆ ಆಗುತ್ತಿಲ್ಲ ಹಾಗೂ ರೈತರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ" ಎಂಬ ಅರ್ಜಿದಾರರ ವಾದಗಳಲ್ಲಿ ಯಾವುದೇ ಬಲವಾದ ಕಾನೂನಾತ್ಮಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ವಾದಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠವು, ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು.


