ರಾಯಚೂರಿನ ಜಿನ್ನಾಪುರ ಗ್ರಾಮದಲ್ಲಿ ಸಾಲದ ವಿಚಾರವಾಗಿ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಪತಿಯನ್ನು ಮಾತ್ರ ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತರ ಕುಟುಂಬಸ್ಥರು ಕವಿತಾಳ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರು (ಏ.3): ಸಿರವಾರ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಗೃಹಿಣಿಯೊಬ್ಬರು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಪ್ರಕರಣವು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತರ ಕುಟುಂಬಸ್ಥರು ಕವಿತಾಳ ಪೊಲೀಸ್ ಠಾಣೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪಾಪಮ್ಮ (24) ಎಂಬುವರು ಕಳೆದ ಮಾರ್ಚ್ 29 ರಂದು ತಮ್ಮ ಜಿನ್ನಾಪುರ ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದರು. 2020 ರಲ್ಲಿ ಪಾಪಮ್ಮ ಮತ್ತು ಮರಿಸ್ವಾಮಿ ಎಂಬುವರಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸಾಲದ ಸುಳಿಯಲ್ಲಿ ಬದುಕು
ಇತ್ತೀಚೆಗೆ ಪಾಪಮ್ಮ ಅವರು ಖಾಸಗಿ ಬ್ಯಾಂಕ್ ಒಂದರಲ್ಲಿ ಸಾಲ ಪಡೆದಿದ್ದರು. ಆ ಹಣವನ್ನು ತಮ್ಮ ಪತಿ ಮರಿಸ್ವಾಮಿಯ ಅಣ್ಣ ಮೌನೇಶ್ ಅವರಿಗೆ ನೀಡಿದ್ದರು. ಸಾಲದ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಮೌನೇಶ್ ಮತ್ತು ಕುಟುಂಬಸ್ಥರು ಪಾಪಮ್ಮ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪತಿ ಮರಿಸ್ವಾಮಿ, ಆತನ ಅಣ್ಣ ಮೌನೇಶ್ ಮತ್ತು ತಂಗಿ ಸಾಬಮ್ಮ ಸೇರಿದಂತೆ ಮೂವರೂ ಸೇರಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತು ಪಾಪಮ್ಮ ಆ*ತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಪೊಲೀಸರ ನಡೆಗೆ ಆಕ್ರೋಶ
ಆ*ತ್ಮಹ*ತ್ಯೆಯ ನಂತರ ಮೃತಳ ಸಹೋದರ ಕವಿತಾಳ ಪೊಲೀಸ್ ಠಾಣೆಯಲ್ಲಿ ಪತಿ ಮರಿಸ್ವಾಮಿ, ಮೌನೇಶ್ ಮತ್ತು ಸಾಬಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಕೇವಲ ಪತಿ ಮರಿಸ್ವಾಮಿಯನ್ನು ಮಾತ್ರ ಬಂಧಿಸಿದ್ದಾರೆ. ಆದರೆ, ಉಳಿದ ಇಬ್ಬರು ಪ್ರಮುಖ ಆರೋಪಿಗಳಾದ ಮೌನೇಶ್ ಮತ್ತು ಸಾಬಮ್ಮ ಅವರನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಟ
ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಪೊಲೀಸರು ಇತರೆ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಮತ್ತು ಸಂಬಂಧಿಕರು, ಕವಿತಾಳ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಹೋರಾಟ ನಡೆಸಿದರು. ಈ ತಾರತಮ್ಯದ ತನಿಖೆಯನ್ನು ಖಂಡಿಸಿದ ಕುಟುಂಬಸ್ಥರು, ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಪಾಪಮ್ಮನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.


