ಎಸ್ಟೋನಿಯಾದಲ್ಲಿ59,000 ಜನರ ಮೇಲೆ ನಡೆದ ಅಧ್ಯಯನದ ಪ್ರಕಾರ, ಉದ್ದೇಶ ಮತ್ತು ಸಾಧನೆಯ ಭಾವನೆ ಮೂಡಿಸುವ ಕೆಲಸಗಳು ತೃಪ್ತಿ ನೀಡುತ್ತವೆ. ಧಾರ್ಮಿಕ ವೃತ್ತಿ, ವೈದ್ಯಕೀಯ, ಸೃಜನಶೀಲ ಕ್ಷೇತ್ರಗಳು ಹೆಚ್ಚು ತೃಪ್ತಿಕರ. ಭದ್ರತಾ ಸಿಬ್ಬಂದಿ, ಹೊಟೇಲ್ ಸಿಬ್ಬಂದಿಗಳಿಗೆ ಕಡಿಮೆ ತೃಪ್ತಿ. ಸಂಬಳ, ಪ್ರತಿಷ್ಠೆಗಿಂತ ಸಾಧನೆಯ ಭಾವ ಮುಖ್ಯ. ಸ್ವ ಉದ್ಯೋಗಿಗಳು ಹೆಚ್ಚು ಸಂತೃಪ್ತರು.

ಅಯ್ಯೋ ಇವತ್ತು ಸೋಮವಾರ (Monday) ಅಂತ ರಾಗ ಎಳೆಯೋರ ಸಂಖ್ಯೆ ಹೆಚ್ಚಿದೆ. ಯಾಕಪ್ಪ ಕೆಲ್ಸ, ಸಾಕಾಗೋಗಿದೆ, ಅನಿವಾರ್ಯಕ್ಕೆ ಕೆಲ್ಸ ಮಾಡ್ಬೇಕು ಎಂಬ ಮಾತು ಆಗಾಗ ಕೇಳಿ ಬರ್ತಿರುತ್ತದೆ. ಮತ್ತೆ ಕೆಲವರು ತಮ್ಮ ಕೆಲ್ಸವನ್ನು ಎಂಜಾಯ್ ಮಾಡ್ತಾರೆ. ಖುಷಿಯಾಗಿ ಕೆಲ್ಸಕ್ಕೆ ಹೋಗುವ ಅವರು, ತೃಪ್ತಿಕರವಾಗಿ ವೃತ್ತಿ ಜೀವನವನ್ನು ಮುನ್ನಡೆಸ್ತಾರೆ. ವಿಜ್ಞಾನಿಗಳು ಈಗ ಯಾವ ಕೆಲ್ಸ ನೆಮ್ಮದಿ ನೀಡಿದ್ರೆ ಯಾವ ಕೆಲ್ಸ ಅತೃಪ್ತವಾಗಿರುತ್ತೆ ಅನ್ನೋದನ್ನು ಪತ್ತೆ ಮಾಡಿದ್ದಾರೆ.

ಈ ಆಧಾರದ ಮೇಲೆ ನಡೆದಿದೆ ಸಂಶೋಧನೆ (Research) : ಯಾವ ಕೆಲ್ಸ ಜನರಿಗೆ ತೃಪ್ತಿ ನೀಡುತ್ತೆ ಯಾವ ಕೆಲಸ ಅತೃಪ್ತಿ ಎನ್ನುವ ಬಗ್ಗೆ ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಎಸ್ಟೋನಿಯನ್ ಬಯೋಬ್ಯಾಂಕ್ ಸಹಾಯದಿಂದ ಅವರು ಸುಮಾರು 59,000 ಜನರು ಮತ್ತು 263 ವಿವಿಧ ವೃತ್ತಿಗಳಿಂದ ಡೇಟಾ ವಿಶ್ಲೇಷಿಸಿದ್ದಾರೆ. ಈ ವೇಳೆ ಕೆಲಸ, ಸಂಬಳ, ವ್ಯಕ್ತಿತ್ವ ಮತ್ತು ಜೀವನ ತೃಪ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅವರಿಗೆ ಕೇಳಿ, ಮಾಹಿತಿ ಸಂಗ್ರಹಿಸಲಾಗಿದೆ. 

ತೃಪ್ತಿಕರ ಕೆಲ್ಸ ಯಾವುದು? : ಅಧ್ಯಯನದ ಪ್ರಕಾರ, ಉದ್ಯೋಗಿಗೆ ಯಾವ ಉದ್ಯೋಗ ಉದ್ದೇಶ ಮತ್ತು ಸಾಧನೆಯ ಅನುಭವ ನೀಡುತ್ತವೆಯೋ ಆಗ ಅವರು ಅತ್ಯಂತ ಖುಷಿಯಾಗಿರ್ತಾರೆ. ಧಾರ್ಮಿಕ ಕೆಲಸ ಮಾಡ್ತಿರುವ ಜನರು ಹೆಚ್ಚು ತೃಪ್ತಿಯನ್ನು ಅನುಭವಿಸ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಎಸ್ಟೋನಿಯಾದಲ್ಲಿ ಸಂಶೋಧನೆ ನಡೆದ ಕಾರಣ ಧಾರ್ಮಿಕ ಕೆಲಸ ಮಾಡುವ ಪಾದ್ರಿಗಳು ಹೆಚ್ಚು ತೃಪ್ತರು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಇವರಲ್ಲದೆ, ವೈದ್ಯರು, ದಾದಿಯರು ಸೇರಿದಂತೆ ವೈದ್ಯಕೀಯ ವೃತ್ತಿಪರರು, ಬರಹಗಾರರು ಮತ್ತು ಸೃಜನಶೀಲ ಜನರು, ಮನಶ್ಶಾಸ್ತ್ರಜ್ಞರು ಮತ್ತು ವಿಶೇಷ ಶಿಕ್ಷಣ ನೀಡುವ ಶಿಕ್ಷಕರು, ಶಿಪ್ ಎಂಜಿನಿಯರ್ಗಳು ಮತ್ತು ಲೋಹದ ಕೆಲಸಗಾರರಂತಹ ತಾಂತ್ರಿಕ ವೃತ್ತಿಗಳು ತೃಪ್ತಿ ನೀಡುವ ಕೆಲಸಗಳಾಗಿವೆ. 

ಅತ್ಯಂತ ಅತೃಪ್ತಿಕರ ಉದ್ಯೋಗ (Unsatisfying job) : ಇದಕ್ಕೆ ವ್ಯತಿರಿಕ್ತವಾಗಿ, ಕೆಲಸದಲ್ಲಿ ಹೆಚ್ಚು ನಿರ್ಬಂಧವಿರುವ, ಕಡಿಮೆ ಸ್ವಾತಂತ್ರ್ಯವಿರುವ ಮತ್ತು ಹೆಚ್ಚಿನ ಜವಾಬ್ದಾರಿಗಳ ಒತ್ತಡವಿರುವ ಕೆಲಸಗಳಲ್ಲಿ ಜನರು ಕಡಿಮೆ ತೃಪ್ತರಾಗುತ್ತಾರೆ. ಈ ಪಟ್ಟಿಯಲ್ಲಿ ಭದ್ರತಾ ಸಿಬ್ಬಂದಿ, ಹೊಟೇಲ್ ಮಾಣಿಗಳು ಮತ್ತು ಮಾರಾಟ ಕಾರ್ಮಿಕರು, ಸರ್ವೇ ಇಂಟರ್ವ್ಯೂವರ್, ಪೋಸ್ಟ್ಮ್ಯಾನ್, ಬಡಗಿ ಮತ್ತು ಕೆಮಿಕಲ್ ಎಂಜಿನಿಯರ್, ಸಾರಿಗೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ಕೆಲಸಗಳು ಅತೃಪ್ತ ಕೆಲಸ ಎಂದು ಸಂಶೋಧಕರು ಹೇಳಿದ್ದಾರೆ. 

ಹಣ ಮತ್ತು ಪ್ರತಿಷ್ಠೆಯಿಂದ ತೃಪ್ತಿ ಸಾಧ್ಯವಿಲ್ಲ : ಸಂಶೋಧನೆಯಲ್ಲಿ ಹೊರಬಂದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಕೆಲಸದ ಪ್ರತಿಷ್ಠೆ ಅಥವಾ ಸಂಬಳ ಜನರ ತೃಪ್ತಿಯೊಂದಿಗೆ ಯಾವುದೇ ಪ್ರಮುಖ ಸಂಬಂಧವನ್ನು ಹೊಂದಿಲ್ಲ. ಉನ್ನತ-ಪ್ರತಿಷ್ಠೆಯ ಉದ್ಯೋಗಗಳು ಹೆಚ್ಚಿನ ತೃಪ್ತಿಗೆ ಕಾರಣವಾಗುತ್ತವೆ ಎಂದು ತಾನು ಭಾವಿಸಿದ್ದೆ. ಆದ್ರೆ ಅದು ಹಾಗಲ್ಲ. ಸಮಾಜದಲ್ಲಿ ಆ ಕೆಲಸಕ್ಕೆ ಎಷ್ಟೇ ಕಡಿಮೆ ಪ್ರತಿಷ್ಠೆ ಇದ್ದರೂ, ಆ ಕೆಲಸದಲ್ಲಿ ಸಾಧನೆಯ ಭಾವನೆ ಮೂಡಿದಾಗ ನಿಜವಾದ ಸಂತೋಷ ಸಿಗುತ್ತದೆ ಎಂದು ಅಧ್ಯಯನ ಲೇಖಕಿ ಕೈಟ್ಲಿನ್ ಆನ್ ಹೇಳಿದ್ದಾರೆ. 

ಇವರು ಹೆಚ್ಚು ಖುಷಿಯಾಗಿರ್ತಾರೆ : ತಜ್ಞರ ಪ್ರಕಾರ ಸ್ವಂತ ಇಚ್ಛೆಯಿಂದ ಕೆಲಸ ಮಾಡುವ ಜನರು ಅಂದ್ರೆ Self Employed ಹೆಚ್ಚು ಸಂತೋಷದಿಂದ ಇರ್ತಾರೆ. ಅವರ ಕೆಲಸದ ಮೇಲೆ ನಿಯಂತ್ರಣ ಮತ್ತು ನಮ್ಯತೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಸಂಶೋಧನೆಯನ್ನು ಎಸ್ಟೋನಿಯಾದಲ್ಲಿ ಮಾಡಲಾಗಿದೆ. ಆದ್ರೆ ಸಂಶೋಧನೆ ಫಲಿತಾಂಶ ಕೇವಲ ಎಸ್ಟೋನಿಯಾಗೆ ಸೀಮಿತವಾಗಿಲ್ಲ. ಇಡೀ ಪ್ರಪಂಚಕ್ಕೆ ಇದು ಅನ್ವಯಿಸುತ್ತದೆ. ಆಯಾ ಸ್ಥಳದ ಸಂಸ್ಕೃತಿ ಕೂಡ ಕೆಲಸದ ಚಿಂತನೆ ಮತ್ತು ಅನುಭವದ ಮೇಲೆ ಪ್ರಭಾವ ಬೀರುತ್ತದೆ.