Asianet Suvarna News Asianet Suvarna News

ಮಂಡೆಬಿಸಿ ಮಾಡುವ Monday ಬ್ಲೂಸ್‍ಗೆ ಮದ್ದೇನು?

ಸೋಮವಾರ ಅಂದ್ರೆ ಏನೋ ಬೇಸರ, ಆತಂಕ. ಮತ್ತದೇ ಆಫೀಸ್, ಬಿಡುವಿಲ್ಲದ ದಿನಚರಿಯ ಕನವರಿಕೆ ವೀಕೆಂಡ್ ಕಂಫರ್ಟ್ ಝೋನ್‍ನಿಂದ ಇನ್ನೂ ಹೊರಬಾರದ ಮನಸ್ಸನ್ನು ಕಂಗೆಡಿಸುತ್ತದೆ. ಇದೇ ಮೂಡ್‍ನಲ್ಲಿ ಆಫೀಸ್‍ಗೆ ಹೋದ್ರೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲಾಗದೇ, ಒಂದೆರಡು ತಪ್ಪುಗಳಾಗೋದು ಗ್ಯಾರಂಟಿ. ಮಂಡೆಬಿಸಿ ಮಾಡುವ ಈ Monday ಬ್ಲೂಸ್‍ಗೆ ಮದ್ದೇನು ಎಂಬುದೇ ಬಹುತೇಕರ ಪ್ರಶ್ನೆ.

What are the reasons for Monday blues and how to manage it
Author
Bangalore, First Published Mar 4, 2020, 7:11 PM IST

ಸಂಡೇ ಬಂತು ಎಂದು ಖುಷಿಯಿಂದ ಕುಣಿಯುವವರು ಆ ದಿನ ಸಂಜೆ ಹೊತ್ತಿಗೆ ಬಾಲ ಸುಟ್ಟ ಬೆಕ್ಕಿನಂತೆ ಆಡಲು ಪ್ರಾರಂಭಿಸುತ್ತಾರೆ.‘ಅಯ್ಯೋ, ನಾಳೆ ಮಂಡೇ ಆಫೀಸ್‍ಗೆ ಹೋಗಬೇಕಲ್ಲಪ್ಪ’ ಎನ್ನುವುದು ದೊಡ್ಡವರ ಚಿಂತೆಯಾದ್ರೆ,‘ನಾಳೆ ಸ್ಕೂಲ್ ಇದೆ, ಬೆಳಗ್ಗೆ ಬೇಗ ಏಳಬೇಕಲ್ಲ’ ಎನ್ನುವ ಟೆನ್ಷನ್ ಮಕ್ಕಳಿಗೆ. ಈ ಸೋಮವಾರದ ಹಣೆಬರಹವೇ ಇಷ್ಟು. ಅದನ್ನು ಖುಷಿಯಿಂದ ಸ್ವಾಗತಿಸುವ ಬದಲು ಬೈದುಕೊಂಡು, ಹಳಿದುಕೊಂಡೇ ವೆಲ್‍ಕಂ ಮಾಡ್ತಾರೆ. ಈಗಂತೂ ಬಹುತೇಕ ಕಂಪೆನಿಗಳು, ಸ್ಕೂಲ್‍ಗಳಿಗೆ ಶನಿವಾರ, ಭಾನುವಾರನೂ ರಜೆ. ಹೀಗಾಗಿ ಶುಕ್ರವಾರ ಸಂಜೆಯೇ ರಜೆಯ ಸಂಭ್ರಮ ಪ್ರಾರಂಭವಾಗಿರುತ್ತೆ. ಶನಿವಾರ,ಭಾನುವಾರ ಎಂಬ ಹೆಸರು ಕೇಳಿದ್ರೆ ಮನಸ್ಸು ಕುಣಿದು ಕುಪ್ಪಳಿಸುತ್ತದೆ.ಅದೇ ಸೋಮವಾರ ಅಂದ್ರೆ ಆಕಾಶವೇ ತಲೆಮೇಲೆ ಕಳಚಿ ಬಿದ್ದ ಅನುಭವ. ಇದನ್ನೇ ಮಂಡೇ ಬ್ಲೂಸ್ ಅನ್ನೋದು.

ಬಾಸ್ ಮೇಲಿನ ಕೀಳು ಜೋಕನ್ನು ಅವರಿಗೂ ಶೇರ್ ಮಾಡಿಕೊಂಡರೆ...!

ಭಾನುವಾರ ಸಂಜೆಯೇ ಮಂಡೆ ಬಿಸಿ 
ನಾಳೆ ಸೋಮವಾರ ಎನ್ನುವುದು ಭಾನುವಾರ ಸಂಜೆಯೇ ತಲೆಯನ್ನು ಕೊರೆಯಲಾರಂಭಿಸಿ ನೆಮ್ಮದಿ ಕೆಡಿಸುತ್ತದೆ.ಶುಕ್ರವಾರ ರಜೆಯ ಮೂಡ್‍ನಲ್ಲಿರುವ ಕಾರಣ ಅರ್ಧಂಬರ್ಧ ಮುಗಿಸಿದ ಕೆಲಸ,ಸೋಮವಾರ ಬಾಸ್ ಜೊತೆಗಿನ ಮೀಟಿಂಗ್, ಸೋಮವಾರವೇ ಡೆಡ್‍ಲೈನ್ ಫಿಕ್ಸ್ ಆಗಿರುವ ಪ್ರಾಜೆಕ್ಟ್ಗಳು...ಒಂದೇ ಎರಡೇ! ಸಾಲು ಸಾಲು ಕೆಲಸಗಳು ಕಣ್ಣ ಮುಂದೆ ಬಂದು ನೆಮ್ಮದಿ ಕೆಡಿಸುವ ಜೊತೆಗೆ ಒತ್ತಡ ಹೆಚ್ಚಿಸುತ್ತವೆ.ಇವೆಲ್ಲದರ ಜೊತೆಗೆ ಇನ್ನು ಐದು ದಿನ ಆಫೀಸ್ ಅಥವಾ ಸ್ಕೂಲ್‍ಗೆ ಹೋಗಬೇಕಲ್ಲಪ್ಪ ಎಂಬ ಯೋಚನೆಯೇ ರಜೆಯ ಮಜಾ ಸವಿದ ಮನಸ್ಸನ್ನು ಆಲಸ್ಯದ ಮೂಡ್‍ಗೆ ಕೊಂಡೊಯ್ಯುತ್ತದೆ.

ಇದೊಂದು ವೈಜ್ಞಾನಿಕ ಪ್ರಕ್ರಿಯೆ 
ಮಂಡೇ ಬ್ಲೂಸ್ ಎನ್ನುವುದು ಉದಾಸೀನದ ಪರಮಾವಧಿ ಎಂದೇ ಎಲ್ಲರೂ ಹೇಳುತ್ತಾರೆ. ಆಲಸ್ಯದ ಕಾರಣಕ್ಕ ಸೋಮವಾರ ಆಫೀಸ್‍ನಲ್ಲಿ ಮನಸ್ಸಿಟ್ಟು ಕೆಲಸ ಮಾಡಲು ಸಾಧ್ಯವಾಗದೆ ಏನಾದರೊಂದು ಎಡವಟ್ಟು ಆಗುತ್ತದೆ ಎಂದು ತಪ್ಪು ನಡೆದಾಗಲೆಲ್ಲ ಅಂದುಕೊಳ್ಳುತ್ತೇವೆ. ಆದ್ರೆ ಇಂಥ ತಪ್ಪಿಗೆ ವೈಜ್ಞಾನಿಕ ಕಾರಣವೂ ಇದೆ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಹೇಳಿದೆ. ಮಂಡೇ ಬ್ಲೂಸ್ ಪರಿಣಾಮಗಳು ವೈಜ್ಞಾನಿಕ ಪ್ರಕ್ರಿಯೆಯಾಗಿದೆ ಎಂದು ಇನ್ಫಾರ್ಮೆಷನ್ ಸಿಸ್ಟ್‍ಂ ರಿಸರ್ಚ್ ಜರ್ನಲ್‍ನಲ್ಲಿ ಪ್ರಕಟವಾದ ಲೆಹಿಗ್ ಯುನಿವರ್ಸಿಟಿ ಕಾಲೇಜ್ ಆಫ್ ಬ್ಯುಸಿನೆಸ್ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ. ವೀಕೆಂಡ್ ರಜೆಯ ಮಜಾ ಸವಿದು ಸೋಮವಾರ ಕೆಲಸಕ್ಕೆ ಮರಳುವ ಉದ್ಯೋಗಿಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಅವರಿಗರಿವಿಲ್ಲದಂತೆ ಹಣಕಾಸು, ಉತ್ಪಾದನೆ ಹಾಗೂ ಮಾನಸಿಕ ಸ್ಥಿತಿ ಮೇಲೆ ಮಂಡೇ ಬ್ಲೂಸ್ ಪರಿಣಾಮ ಬೀರಿರುವುದು ಬೆಳಕಿಗೆ ಬಂದಿದೆ. 

ಮುಖ ನೋಡಿ ಮಣೆ ಹಾಕೋ ಸಂದರ್ಶಕರು: ಅಧ್ಯಯನ!

ಮಂಡೇ ಬ್ಲೂಸ್‍ಗೆ ಮದ್ದೇನು?
ಸೋಮವಾರ ಬೆಳಗ್ಗೆ ಹಾಸಿಗೆ ಮೇಲೆ ಎಂದಿಗಿಂತ ತುಸು ಹೆಚ್ಚೇ ಪ್ರೀತಿ ಹುಟ್ಟುತ್ತದೆ. ಯಾಕಾದ್ರೂ ಇಷ್ಟು ಬೇಗ ಬೆಳಗಾಯಿತು ಎಂದು ಬೈಯುತ್ತ ಹಾಸಿಗೆ ಮೇಲೆ ಒಂದಿಷ್ಟು ಹೊತ್ತು ಸುಮ್ಮನೆ ಹೊರಳಾಡುತ್ತ ಆಮೇಲೆ ಎದ್ದೇಳುವುದು ಮಾಮೂಲು.ಎದ್ದ ಬಳಿಕ ಉಳಿದ ದಿನಗಳ ಬೆಳಗಿಗಿಂತ ತುಸು ಹೆಚ್ಚೇ ಗಡಿಬಿಡಿ ಎದುರಾಗುತ್ತದೆ. ಇದಕ್ಕೆ ಕಾರಣ ನಾವು ಸೋಮವಾರವನ್ನು ಎದುರಿಸಲು ಸೂಕ್ತ ಸಿದ್ಧತೆ ಮಾಡದಿರುವುದು. ಇದು ಮಂಡೇ ಬ್ಲೂಸ್ ಭಾವನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ರೆ ಭಾನುವಾರ ಸಂಜೆಯಿಂದಲೇ ಸೋಮವಾರಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳುವ ಜೊತೆಗೆ ಅಗತ್ಯ ತಯಾರಿ ನಡೆಸಿದ್ರೆ ಸೋಮವಾರ ಬೆಳಗ್ಗೆ ಮಂಡೇ ಬ್ಲೂಸ್ ಲಕ್ಷಣಗಳು ಅಷ್ಟಾಗಿ ಕಾಡುವುದಿಲ್ಲ. 
-ಸೋಮವಾರ ಆಫೀಸ್‍ಗೆ ಧರಿಸುವ ಡ್ರೆಸ್‍ಗೆ ಭಾನುವಾರ ರಾತ್ರಿಯೇ ಇಸ್ತ್ರಿ ಮಾಡಿ.ಇದರಿಂದ ಸೋಮವಾರ ಬೆಳಗ್ಗೆ ಎದ್ದ ತಕ್ಷಣ ಇಂದು ಯಾವ ಡ್ರೆಸ್ ಧರಿಸೋದು ಎಂದು ತಲೆಕೆರೆದುಕೊಳ್ಳುತ್ತ ವಾರ್ಡ್‍ರೋಪ್ ತಡಕಾಡುವುದು, ಆ ಬಳಿಕ ಡ್ರೆಸ್‍ಗೆ ಇಸ್ತ್ರಿ ಮಾಡಲು ಹೆಣಗಾಡುವುದು ಎಲ್ಲವೂ ತಪ್ಪುತ್ತದೆ. ಅದೇರೀತಿ ಕರವಸ್ತ್ರ, ಸಾಕ್ಸ್, ಶೂಸ್ ಎಲ್ಲವನ್ನೂ ಕೈಗೆ ಸಿಗುವ ಜಾಗದಲ್ಲಿಡಿ. ಇದರಿಂದ ಬೆಳಗ್ಗಿನ ಒತ್ತಡ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ.
-ಮಹಿಳೆಯರು ಭಾನುವಾರ ಮಧ್ಯಾಹ್ನವೇ ಸೋಮವಾರ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಎಂದು ನಿರ್ಧರಿಸಿ ಅದಕ್ಕೆ ಸೂಕ್ತ ಸಿದ್ಧತೆ ಮಾಡಿಟ್ಟುಕೊಂಡರೆ ಉದ್ಯೋಗಸ್ಥೆ ಮಹಿಳೆಯರಿಗೆ ಬೆಳಗ್ಗಿನ ಉಪಹಾರದ ಒತ್ತಡ ತಗ್ಗುತ್ತದೆ.

ಗರ್ಭಿಣಿ, ಭ್ರೂಣ ಕಾಳಜಿಯ ಹೊಸ ಕೋರ್ಸ್ ಗರ್ಭ ಸಂಸ್ಕಾರ

-ಭಾನುವಾರ ರಾತ್ರಿಯೇ ಆಫೀಸ್‍ಗೆ ಸಂಬಂಧಿಸಿದ ಫೈಲ್‍ಗಳು ಅಥವಾ ಲ್ಯಾಪ್‍ಟಾಪ್ ಸೇರಿದಂತೆ ಆಫಿಸ್‍ಗೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳನ್ನು ಬ್ಯಾಗ್‍ಗೆ ಹಾಕಿಡಿ. ಇದರಿಂದ ಬೆಳಗ್ಗೆ ಎದ್ದು ಆ ವಸ್ತುಗಳು ಎಲ್ಲಿವೆ ಎಂದು ಹುಡುಕುವ ತಾಪತ್ರಯ ತಪ್ಪುತ್ತದೆ.
-ಸೋಮವಾರ ಆಫೀಸ್‍ನಲ್ಲಿ ಮಾಡಬೇಕಿರುವ ಪ್ರಮುಖ ಕೆಲಸಗಳು ಯಾವುವು ಎಂಬುದನ್ನು ರಾತ್ರಿ ಮಲಗುವ ಮುನ್ನ ಮನಸ್ಸಿನಲ್ಲೇ ಯೋಚಿಸಿ. ಅದನ್ನು ಹೇಗೆ ಪೂರ್ಣಗೊಳಿಸಬಹುದು ಎಂಬ ಬಗ್ಗೆ ಮನಸ್ಸಿನಲ್ಲೇ ಯೋಜನೆ ರೂಪಿಸಿ.
-ಸೋಮವಾರ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳಿ. 15-20 ನಿಮಿಷ ವ್ಯಾಯಾಮ ಅಥವಾ ಯೋಗ, ಧ್ಯಾನ ಮಾಡಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುವ ಜೊತೆಗೆ ಮುಂದಿನ ಕೆಲಸಗಳಿಗೆ ಸಿದ್ಧಗೊಳ್ಳುತ್ತದೆ. ಅಲ್ಲದೆ, ದಿನವಿಡೀ ನೀವು ಫ್ರೆಷ್ ಆಗಿರಲು ಬೆಳಗ್ಗೆ ನೀವು ಮಾಡುವ ವರ್ಕ್‍ಔಟ್ ಅಥವಾ ಯೋಗ ನೆರವು ನೀಡುತ್ತದೆ.
-ಇನ್ನು ಐದು ದಿನ ಕೆಲಸ ಮಾಡಿದ್ರೆ ಆಯ್ತು ಮತ್ತೊಂದು ವೀಕೆಂಡ್ ಬಂದೇಬರುತ್ತದೆ. ಈ ವಾರವನ್ನು ಖುಷಿಯಿಂದ, ಉತ್ಸಾಹದಿಂದ ಕಳೆಯುವ ಜೊತೆಗೆ ನಿಗದಿತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ನಿಮ್ಮನ್ನು ನೀವೇ ಚಿಯರ್ ಅಪ್ ಮಾಡಿಕೊಂಡು ಆಫೀಸ್‍ಗೆ ಹೊರಡಿ. 

Follow Us:
Download App:
  • android
  • ios