ಬಾಸ್ ಮೇಲಿನ ಕೀಳು ಜೋಕನ್ನು ಅವರಿಗೂ ಶೇರ್ ಮಾಡಿಕೊಂಡರೆ...!
ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಹಾಗಂಥ ಬೇಕೆಂದು ಮಾಡುವುದಲ್ಲ, ಕೆಲವೊಮ್ಮೆ ಗಡಿಬಿಡಿಯಲ್ಲಿ ತಪ್ಪುಗಳಾಗುತ್ತವೆ. ಕಚೇರಿಯಲ್ಲಿ ಮಾಡಿದ ಅಚಾತುರ್ಯದ ಕೆಲಸಗಳ ಕುರಿತು ಇಲ್ಲೊಂದಿಷ್ಟು ಮಂದಿ ಹಂಚಿಕೊಂಡಿದ್ದಾರೆ. ಓದಿ ನೋಡಿ.
ನಿಮ್ಮ ಬದುಕಿನ ಅತ್ಯಂತ ಕೆಟ್ಟದಿನ ಕೂಡಾ ಕಚೇರಿಯಲ್ಲಿ ಮಾಡೋ ಕೆಲ ತಪ್ಪುಗಳಿಗಿಂತ ಬೆಟರ್ ಆಗಿರುತ್ತದೆ. ನಿಮ್ಮ ಹುಡುಗಿಗೆ ಕಳುಹಿಸಬೇಕಾದ ಆ ರೊಮ್ಯಾಂಟಿಕ್ ಮೇಲೆ ಅಪ್ಪಿತಪ್ಪಿ ಬಾಸ್ಗೆ ಹೋಯಿತೆಂದುಕೊಳ್ಳಿ, ಅಥವಾ ಅತಿ ಮುಖ್ಯವಾದ, ಬ್ಯಾಕಪ್ ಇಲ್ಲದ ಫೈಲೊಂದು ಕ್ಷಣದಲ್ಲಿ ಡಿಲೀಟ್ ಆಗಿ ಹೋಗಬಹುದು, ಇಲ್ಲವೇ ಹೂಡಿಕೆದಾರರ ಬಳಿ ಗಂಭೀರವಾಗಿ ಚರ್ಚಿಸುವಾಗ ಹೊಟ್ಟೆ ಗರ್ ಎಂದು ದೊಡ್ಡದಾಗಿ ಸದ್ದು ಮಾಡಿತೆಂದುಕೊಳ್ಳಿ... ನೆನೆಸಿಕೊಂಡರೇ ಭಯವಾಗುತ್ತಲ್ಲವೇ? ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಕೆಲ ಜನರು ತಾವು ಕಚೇರಿಯಲ್ಲಿ ಮಾಡಿದ ಅತಿ ದೊಡ್ಡ ತಪ್ಪನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿದರೆ, ನಾವೇನಾದರೂ ತಪ್ಪು ಮಾಡಿದಾಗ ನಾನು ಒಂಟಿಯಲ್ಲ ಎಂದು ಸ್ವಲ್ಪ ರಿಲೀಫ್ ಎನಿಸಬಹುದು.
- 'ನಾನೊಮ್ಮೆ ರೇಡಿಯೋ 4ನ ಮಾಸ್ಟರ್ ಟೇಪನ್ನು ತಿಳಿಯದೇ ಪೂರ್ತಿ ಡಿಲೀಟ್ ಮಾಡಿಬಿಟ್ಟೆ. ಇಂದಿಗೂ ಈ ತಪ್ಪು ನನ್ನನ್ನು ಕೊರೆಯುತ್ತಲೇ ಇದೆ. '
-'ನಾನು ಕೆಲಸಕ್ಕೆ ಸೇರಿದ ಮೊದಲನೇ ವಾರವೇ ಏನೋ ಮಾಡಲು ಹೋಗಿ ಆ ಕಂಪನಿಯ ವೆಬ್‌ಸೈಟ್‌ನ ಹೋಂ ಪೇಜನ್ನೇ ಡಿಲೀಟ್ ಮಾಡಿಬಿಟ್ಟಿದ್ದೆ. ನನ್ನನ್ನು ಕೆಲಸಕ್ಕೆ ತೆಗೆದುಕೊಂಡದ್ದಕ್ಕಾಗಿ ಅವರೆಲ್ಲ ಎಷ್ಟು ಹಳಿದುಕೊಂಡರೋ...'
- 'ವರ್ಷದ ಹಿಂದೆ ನಾನು ಸ್ಪ್ರೆಡ್‌ಶೀಟ್‌ನ ಖಾಲಿ ಸೆಲ್‌ನಲ್ಲಿ 1 ಹಾಕುವ ಬದಲಿಗೆ ಖಾಲಿ ಬಿಟ್ಟ ಪರಿಣಾಮ ಎಷ್ಟು ಕೆಟ್ಟದಾಗಿತ್ತೆಂದರೆ, ಇದರಿಂದ ನಾರ್ಥ್ ಸೀಯಲ್ಲಿ 8 ಮಿಲಿಯನ್ ಡಾಲರ್ ವೆಚ್ಚದ ಆಯಿಲ್ ಡ್ರಿಲ್ ಮಾಡಲಾಯಿತು. ವಿಷಯವೆಂದರೆ ಆ ಆಯಿಲ್ ಡ್ರಿಲ್ ಮಾಡಕೂಡದಾಗಿತ್ತು. '
ಮುಖ ನೋಡಿ ಮಣೆ ಹಾಕೋ ಸಂದರ್ಶಕರು: ಅಧ್ಯಯನ!...
- 'ನಾನು ನನ್ನ ಸ್ಟಾಫ್ ಟೀಂಗೆ ಫೈರ್ ಸೇಫ್ಟಿ ಬಗ್ಗೆ ವಿಷಯ ತಿಳಿಸಿಕೊಡುತ್ತಿದ್ದೆ. ಈ ಸಂದರ್ಭದಲ್ಲಿ ಡೆಮೋ ಕೊಡಲು ಹೋಗಿ ನಾನೇ ಕಚೇರಿಯೊಳಗೆ ಬೆಂಕಿ ಹಚ್ಚಿಬಿಟ್ಟಿದ್ದೆ!'
- '21 ವರ್ಷಗಳ ಹಿಂದೆ ಮೀಟ್ ಲೋಫ್ ಗಿಗ್ ಕಾರ್ಯಕ್ರಮದ ವಿಮರ್ಶೆಯನ್ನು ನಾನು ಸ್ಥಳಕ್ಕೆ ತೆರಳಿ ನಂತರ ನ್ಯೂಸ್‌ಪೇಪರ್‌ಗೆ ಬರೆಯಬೇಕಾಗಿತ್ತು. ಆ ದಿನ ನನಗೆ ಹುಷಾರಿಲ್ಲದ ಕಾರಣ ನಾನು ಅಲ್ಲಿಗೆ ಹೋಗದೆಯೇ ಸುಳ್ಳು ವರದಿಯೊಂದು ಕಪೋಲಕಲ್ಪಿತ ವಿಷಯಗಳನ್ನು ಸೇರಿಸಿ ಬರೆದುಬಿಟ್ಟಿದ್ದೆ. ಈ ವರದಿ ಪ್ರಕಟವಾದ 1 ಗಂಟೆಯ ಬಳಿಕ ನ್ಯೂಸ್‌ಪೇಪರ್ ಎಡಿಟರ್ ನನಗೆ ಕರೆ ಮಾಡಿ ಹೇಳಿದ್ದೇನೆಂದರೆ ಅಂದು ಮೀಟ್ ಲೋಫ್ ಗಿಗ್ ಕಾರ್ಯಕ್ರಮ ನಡೆದೇ ಇರಲಿಲ್ಲ ಎಂದು! ಮತ್ತಿನ್ನೇನು ನನ್ನನ್ನು ಕೆಲಸದಿಂದ ತೆಗೆದು ಹಾಕಿದರು.'
- '26 ಮಿಲಿಯನ್ ಯೂರೋಗಳನ್ನು ನಾನು ಯಾರ ಖಾತೆಗೆ ಕಳುಹಿಸಬೇಕಿತ್ತೋ, ಸಣ್ಣ ತಪ್ಪಿನಿಂದ ಹಣ ಮತ್ಯಾರದೋ ಖಾತೆಗೆ ಹೋಯಿತು. ಅಲ್ಲಿಗೆ ನನ್ನ ಆ ಉದ್ಯೋಗದ ಕತೆ ಮುಗಿಯಿತು.'
- 'ನಾನೊಮ್ಮೆ ಎಫ್‌ಟಿಎಸ್ಇ100 ಕಾರ್ಪೋರೇಶನ್‌ನ ಸಿಇಒಗೆ ಹೀಗೆ ಇ ಮೇಲ್ ಕಳುಹಿಸಿದ್ದೆ- ಏಳು ಗಂಟೆಯ ಹೊತ್ತಿಗೆ ಮನೆಗೆ ಬರುತ್ತೇನೆ, ಬರುವಾಗ ಪಾಸ್ತಾ ತರುತ್ತೇನೆ. ಐ ಲವ್ ಯೂ- ಎಂದು! ಇಂದಿಗೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ.
ಗರ್ಭಿಣಿ, ಭ್ರೂಣ ಕಾಳಜಿಯ ಹೊಸ ಕೋರ್ಸ್ ಗರ್ಭ ಸಂಸ್ಕಾರ...
- 'ಯುಕೆ ಸೆಮಿಕಂಡಕ್ಟರ್ ಪ್ಲ್ಯಾಂಟ್‌ಗೆ ಕೆಲಸ ಮಾಡುತ್ತಿದ್ದೆ. ಒಮ್ಮೆ ಅಮೆರಿಕನ್ ಸಹೋದ್ಯೋಗಿಯೊಬ್ಬ ಎರಡು ಕೆಮಿಕಲ್ ಮಿಕ್ಸ್ ಮಾಡುವ ಕುರಿತು ವಿವರ ಫ್ಯಾಕ್ಸ್ ಮಾಡಿದ್ದ. ವಿವರ ಬಹಳ ಸರಳವಾಗಿತ್ತು, 1 ಬಾಟಲ್ ಕೆಮಿಕಲ್‌ಗೆ ಮತ್ತೊಂದು ಕೆಮಿಕಲ್‌ನ 5 ಭಾಗ ಸೇರಿಸಬೇಕು ಎಂದು. ಆದರೆ, ನನ್ನ ಬಾಟಲ್‌ಗಳ ಗಾತ್ರ ಬೇರೆಯದೇ ಆಗಿತ್ತು. ಪರಿಣಾಮ ಎಲಲ್ಲ ಸಿಬ್ಬಂದಿಯೂ ಕಟ್ಟಡದಿಂದ ಹೊರಗೋಡಬೇಕಾಯಿತು. ಫೈರ್ ಎಂಜಿನ್‌ಗಳು ಬಂದವು. ಪೋಲೀಸ್ ಬಂದರು. ಅಲ್ಲಿಗೆ ನನ್ನ ಕೆಲಸದ ಕತೆ ಮುಗಿಯಿತು.'
- 'ಒಮ್ಮೆ ನಾನು ನಮ್ಮ ಬಾಸ್ ಬಗ್ಗೆ ಕೀಳು ಜೋಕುಗಳಿದ್ದ, ಇ ಮೇಲನ್ನು ಸಹೋದ್ಯೋಗಿಗೆ ಕಳುಹಿಸಿದೆ. ದುರದೃಷ್ಟವೆಂದರೆ ಗಡಿಬಿಡಿಯಲ್ಲಿ ನಾನು ಬಾಸನ್ನು ಕೂಡಾ ರೆಸಿಪಿಯಂಟ್ ಲಿಸ್ಟ್‌ಗೆ ಸೇರಿಸಿದ್ದೆ. ಆಮೇಲೆ ಹಲವು ವಾರಗಳ ಕಾಲ ಆಫೀಸಿನಲ್ಲಿ ನನ್ನ ಪರಿಸ್ಥಿತಿ ಹೇಳತೀರದಾಗಿತ್ತು. '
- 'ನಾನು ನರ್ಸಿಂಗ್ ಮಾಡುತ್ತಿದ್ದಾಗ ಒಮ್ಮೆ ವಾರ್ಡ್‌ನಲ್ಲಿದ್ದ ಎಲ್ಲ ರೋಗಿಗಳ ಕಟ್ಟಿಸಿದ ಹಲ್ಲುಗಳನ್ನು ಸ್ವಚ್ಛ ಮಾಡುವ ಸಲುವಾಗಿ ಸಂಗ್ರಹಿಸಿದ್ದೆ. ಆಗ ನಾನು ಮಾಡಿದ್ದ ತಪ್ಪೆಂದರೆ ಎಲ್ಲರ ಹಲ್ಲನ್ನೂ ಒಂದೇ ಬಟ್ಟಲಲ್ಲಿ ಸಂಗ್ರಹಿಸಿದ್ದು!'
- 'ನಮ್ಮ ಕಂಪನಿಯ ಸಂಪೂರ್ಣ ಫೈನಾನ್ಷಿಯಲ್ ಮಾಹಿತಿ ಹಾಗೂ ಸ್ಟ್ರ್ಯಾಟಜಿಯನ್ನು ನಮ್ಮ ಎಂಡಿಗೆ ಕಳುಹಿಸಲು ಹೋಗಿ ನಮ್ಮ ಮುಖ್ಯ ಎದುರಾಳಿ ಕಂಪನಿಗೆ ಫ್ಯಾಕ್ಸ್ ಮಾಡಿದ್ದೆ. ತಕ್ಷಣದಲ್ಲೇ ನನ್ನನ್ನೇನು ತೆಗೆದು ಹಾಕದಿದ್ದರೂ, ಆ ಕೆಲಸ ಹೆಚ್ಚು ಕಾಲ ಉಳಿಯಲಿಲ್ಲ. '
ಈ ಎಲ್ಲ ತಪ್ಪುಗಳ ಬಗ್ಗೆ ಜನ ಮುಕ್ತವಾಗಿ ಹೇಳಿಕೊಂಡಿರುವುದನ್ನು ಓದಿದರೆ ನಮಗೆ ನಾವು ಕಚೇರಿಯಲ್ಲಿ ಮಾಡಿದ ತಪ್ಪುಗಳ ಬಗೆಗೆ ಪಾಪಪ್ರಜ್ಞೆ ಹೋಗಿ ಒಂದು ಸಣ್ಣ ನಗು ಮೂಡುವುದಲ್ಲವೇ? ಹಾಗಿದ್ದರೆ, ನೀವು ಕಚೇರಿಯಲ್ಲಿ ಮಾಡಿದ ದೊಡ್ಡ ತಪ್ಪೇನು ಎಂಬ ಬಗ್ಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.