ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳನ್ನು ಕೆಲವರು ತಮ್ಮಲ್ಲಿರುವ ಟ್ಯಾಲೆಂಟ್, ಶ್ರೀಮಂತಿಕೆ, ಬುದ್ಧಿವಂತಿಕೆಯನ್ನು ಮಾರ್ಕೆಟಿಂಗ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ.ಕೆಲವೊಮ್ಮೆ ಇದು ಅತಿರೇಕ ಅನ್ನಿಸಿಬಿಡುತ್ತದೆ. ಆದ್ರೆ,ಕೆಲವು ವಿಷಯಗಳು, ಸಂದರ್ಭಗಳಿಗೆ ಸಂಬಂಧಿಸಿ ನಮ್ಮನ್ನು ನಾವೇ ಮಾರ್ಕೆಟಿಂಗ್ ಮಾಡಿಕೊಳ್ಳಬೇಕಾದ ಅಗತ್ಯ ಇಂದು ಹೆಚ್ಚಿದೆ. ಅದ್ರಲ್ಲೂ ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿ ನೀವು ಇತರರಿಗಿಂತ ಹೇಗೆ ಭಿನ್ನ ಎಂಬುದನ್ನು ತೋರಿಸೋದು ಅನಿವಾರ್ಯ. ಆದ್ರೆ, ಹೀಗೆ ಮಾಡುವಾಗ ಎಲ್ಲಿಯೂ ಅಹಂ ಇಣುಕದಂತೆ ಹಾಗೂ ಬೇರೆಯವರಿಗೆ ನಮ್ಮದು ಸ್ವಪ್ರಶಂಸೆ ಎನ್ನುವುದು ಅರಿವಿಗೆ ಬಾರದಂತೆ ಜಾಣತನ ಪ್ರದರ್ಶಿಸಬೇಕಾಗುತ್ತದೆ.

ಸ್ನೇಹಿತರ ಮುಂದೆ ನೀವು ‘ಕಚೇರಿಯಲ್ಲಿ ನಾನು ಅತ್ಯಂತ ಉತ್ತಮ ಕೆಲಸಗಾರ. ನನಗಿಂತ ಚೆನ್ನಾಗಿ ಕೆಲಸ ಮಾಡುವವರು ಯಾರೂ ಇಲ್ಲ. ಉಳಿದವರಿಗೆ ಸರಿಯಾಗಿ ಕೆಲಸ ಮಾಡಲು ಬರೋದಿಲ್ಲ’ ಎಂದು ಹೇಳುತ್ತೀರಿ ಎಂದು ಭಾವಿಸೋಣ. ನಿಮ್ಮ ಈ ಹೇಳಿಕೆಯಲ್ಲಿ ನಾನೇ ಶ್ರೇಷ್ಠ ಎಂಬ ಅಹಂ ಭಾವ ಇಣುಕುತ್ತಿರುವುದು ಸ್ಪಷ್ಟ. ಇನ್ನೂ ಕೆಲವೊಮ್ಮೆ ಬೇರೆಯವರು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣಕ್ಕೆ ನಾವು ನಮ್ಮ ಸಾಧನೆಗಳನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇದ್ರಿಂದ ಉಳಿದವರಿಗೆ ನಮ್ಮ ಸಾಮಥ್ರ್ಯದ ಬಗ್ಗೆ ತಿಳಿಯುವುದಿಲ್ಲ. ಇನ್ನು ಉದ್ಯೋಗ ಸಂದರ್ಶನಗಳಲ್ಲಿ ನಮ್ಮ ಸಾಮಥ್ರ್ಯ, ಸಾಧನೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದು ಅಗತ್ಯ. ಇಲ್ಲವಾದರೆ ಸಂದರ್ಶಕರು ನಮ್ಮನ್ನು ಕಡಿಮೆ ಅಂದಾಜಿಸಬಹುದು. ಇಲ್ಲವೆ ಆ ಹುದ್ದೆಗೆ ಆಯ್ಕೆ ಮಾಡದೆ ಹೋಗಬಹುದು. ಹಾಗಾದರೆ ಎಲ್ಲಿಯೂ ಅಹಂ ಇಣುಕದಂತೆ ನಮ್ಮನ್ನು ನಾವು ಪ್ರಶಂಸಿಕೊಳ್ಳುವುದು ಹೇಗೆ? 

ಸಂಬಳ ಕಟ್‌ ಆಯ್ತಾ? ಬದುಕುವುದು ಹೇಗೆ?

ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಒತ್ತು 
‘ಆ ಕೆಲಸ ತುಂಬಾ ಸುಲಭ. ನಾನು ಹೆಚ್ಚು ಶ್ರಮಪಡದೆ ಅದನ್ನು ಪೂರ್ಣಗೊಳಿಸಿದೆ’ ಎಂದು ನೀವು ಹೇಳಿದಾಗ ಅದರಲ್ಲಿ ಅಹಂ ಭಾವ ಕಾಣುತ್ತದೆ. ಅದರ ಬದಲು ನೀವು ದೊಡ್ಡ ಸಾಧನೆ ಮಾಡಿದಾಗ ಅದಕ್ಕಾಗಿ ನೀವೆಷ್ಟು ಶ್ರಮ ಹಾಕಿದ್ದೀರಿ ಎಂಬುದನ್ನು ತಿಳಿಸಿ. 

ಇನ್ನೊಬ್ಬರನ್ನು ತೆಗಳಬೇಡಿ
ಇನ್ನೊಬ್ಬರ ಸಾಮಥ್ರ್ಯವನ್ನು ಹೀಗೆಳೆಯುವ ಮೂಲಕ ನಿಮ್ಮ ಸಾಮಥ್ರ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಡಿ. ‘ನನ್ನ ಸ್ನೇಹಿತನಿಗೆ ನನ್ನಷ್ಟು ತಿಳಿದಿಲ್ಲ’ ಎನ್ನುವುದು ನಿಮ್ಮ ಸಾಮಥ್ರ್ಯವನ್ನು ಎತ್ತಿ ತೋರಿಸುವುದಿಲ್ಲ. ಬದಲಿಗೆ ಕೇಳುಗರಲ್ಲಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸಬಹುದು. 

ಸಹಕಾರ ನೀಡಿದವರನ್ನು ಸ್ಮರಿಸಿ
ನಿಮ್ಮ ಸಾಧನೆಯ ಹಿಂದೆ ಅನೇಕರ ಸಹಕಾರ ಇದ್ದೇಇರುತ್ತದೆ. ಅಪ್ಪ-ಅಮ್ಮ, ಕುಟುಂಬದ ಇತರ ಸದಸ್ಯರು, ಸ್ನೇಹಿತರು.....ಹೀಗೆ ಯಾರೇ ಆಗಿರಲಿ, ನಿಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತವರನ್ನು ಸ್ಮರಿಸಿಕೊಳ್ಳಿ. ಇದು ನಿಮ್ಮ ಬಗ್ಗೆ ಕೇಳುಗರಲ್ಲಿ ಗೌರವ, ಅಭಿಮಾನವನ್ನು ಮೂಡಿಸುತ್ತದೆ. ಎಲ್ಲವೂ ನನ್ನೊಬ್ಬನಿಂದಲೇ ಸಾಧ್ಯವಾಯಿತು ಎನ್ನುವುದು ಖಂಡಿತವಾಗಿಯೂ ಅಹಂಕಾರವೆನಿಸಿಕೊಳ್ಳುತ್ತದೆ. 

ಲಾಕ್ ಡೌನ್ ಮುಗಿದ ನಂತ್ರ ನೌಕರರ ಮನಸ್ಥಿತಿ ಹೇಗಿರುತ್ತೆ?

ವಾಸ್ತವ ಸ್ಥಿತಿಯನ್ನು ತಿಳಿಸಿ
ವಾಸ್ತವಾಂಶದ ಮೇಲೆ ಬೆಳಕು ಚೆಲ್ಲಿದರೆ ಸಾಕು, ನಿಮ್ಮ ಸಾಮಥ್ರ್ಯ ಮತ್ತು ಕೌಶಲದ ಬಗ್ಗೆ ಉಳಿದವರಿಗೆ ತಿಳಿದು ಬಿಡುತ್ತದೆ. ಸಕಾರಾತ್ಮಕ ಮನೋಭಾವ ಹೊಂದಿರುವ ವ್ಯಕ್ತಿಗಳನ್ನು ಬೇಕಿದ್ದರೆ ಗಮನಿಸಿ ನೋಡಿ, ಅವರು ತಮ್ಮ ಸಾಧನೆಯ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡುತ್ತಾರೆ. ಆದರೆ, ಎಲ್ಲಿಯೂ ತನ್ನನ್ನು ತಾನು ಹೊಗಳಿಕೊಳ್ಳುವುದಿಲ್ಲ.

ಇನ್ನೊಬ್ಬರು ಹೊಗಳಿದಾಗ ಬೀಗಬೇಡಿ
ಕೆಲವರಿಗೆ ಇನ್ನೊಬ್ಬರು ಅವರನ್ನು ಹೊಗಳಿದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ಆ ಖುಷಿಯಲ್ಲಿ ಕೆಲವೊಮ್ಮೆ ಅವರು ತಮ್ಮ ಸಾಧನೆಗಳನ್ನು ಇನ್ನಷ್ಟು ದೊಡ್ಡದಾಗಿ ಹೇಳಿಕೊಳ್ಳಲು ಮುಂದಾಗುತ್ತಾರೆ. ಯಾರಿಗಾದರೂ ಹೊಗಳಿದಾಗ ಖುಷಿಯಾಗುವುದು ಸಹಜ. ಆದರೆ, ಆ ಖುಷಿಯನ್ನು ಮನಸ್ಸಿನಲ್ಲೇ ಆಸ್ವಾದಿಸಿ. ಅದನ್ನು ಬಿಟ್ಟು ಎಲ್ಲರ ಮುಂದೆ ಪ್ರದರ್ಶಿಸಲು ಹೊರಟರೆ ನೀವೇ ನಗೆಪಾಟಲಿಗೀಡಾಗುವ ಸಾಧ್ಯತೆ ಇರುತ್ತದೆ.

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

ಸವಾಲುಗಳನ್ನು ವಿವರಿಸಿ
ಕೆಲವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅದ್ಭುತ ಸಾಧನೆ ಮಾಡಿರುತ್ತಾರೆ. ನೀವು ಕೂಡ ಗುರಿ ಮುಟ್ಟುವ ಹಾದಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿರಬಹುದು. ವಿಷಮ ಪರಿಸ್ಥಿತಿಯಲ್ಲಿಯೂ ನೀವು ನಿಮ್ಮ ಪ್ರಯತ್ನ ಮುಂದುವರಿಸಿ ಗೆಲುವು ಸಾಧಿಸಿರಬಹುದು. ಉದಾಹರಣೆಗೆ ಬಡತನ, ಆರೋಗ್ಯ ಸಮಸ್ಯೆ, ಕುಟುಂಬದಲ್ಲಿನ ಸಮಸ್ಯೆಗಳು....ಹೀಗೆ ಇವೆಲ್ಲವನ್ನು ಸಮರ್ಥವಾಗಿ ಎದುರಿಸಿ ಅಂದ್ಕೊಂಡ ಗುರಿ ಸಾಧಿಸಿದ್ದೀರಿ ಎಂದಾದರೆ ನೀವು ಎದುರಿಸಿದ ಸವಾಲುಗಳನ್ನು ಹೇಳಿಕೊಳ್ಳಲು ಹಿಂಜರಿಕೆ ಬೇಡ. ನಿಮ್ಮ ಈ ಸವಾಲಿನ ಹಾದಿ ಇತರರ ಸಾಧನೆಗೆ ಪ್ರೇರಣೆ ಒದಗಿಸಬಹುದು. 

ಇನ್ನಷ್ಟು ಕಲಿಯಬೇಕು ಎಂಬ ಭಾವನೆ 
ನನಗೆ ಎಲ್ಲವೂ ತಿಳಿದಿದೆ ಎಂಬ ಭಾವನೆ ಎಲ್ಲಿಯೂ ಇಣುಕದಂತೆ ನೋಡಿಕೊಳ್ಳಿ. ನಾನು ಕಲಿತಿರುವುದು, ಸಾಧಿಸಿರುವುದು ತುಂಬಾ ಕಡಿಮೆ. ಇನ್ನಷ್ಟು ಸಾಧಿಸಬೇಕಾದ ಅಗತ್ಯವಿದೆ ಎಂಬುದನ್ನು ಹೇಳಲು ಮರೆಯಬೇಡಿ.