ಕಂಟೆಂಟ್ ಕ್ರಿಯೇಟರ್ ಆದ್ರೆ ಕೈ ತುಂಬ ಹಣ ಗಳಿಸ್ಬಹುದು. ಈ ಮಹಿಳೆ ಲೆಕ್ಕಾಚಾರ ಕೂಡ ತಪ್ಪಾಗ್ಲಿಲ್ಲ. ಹಣ ಏನೋ ಬರ್ತಿದೆ, ಆದ್ರೂ ಕಂಟೆಂಟ್ ಕ್ರಿಯೇಷನ್ ಬಿಟ್ಟು ಮತ್ತೆ ಕಾರ್ಪೋರೇಟ್ ಕೆಲ್ಸ ಹುಡುಕ್ತಿರೋದೇಕೆ?
ಅನೇಕರು 9 ಟು 6 ಜಾಬ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆಗ್ತಿದ್ದಾರೆ. ಕೆಲ್ಸದಲ್ಲಿ ಸ್ವಾತಂತ್ರ್ಯ ಹಾಗೂ ಆದಾಯದಲ್ಲಿ ಏರಿಕೆಯನ್ನು ಗಮನದಲ್ಲಿಟ್ಕೊಂಡು ಸೋಶಿಯಲ್ ಮೀಡಿಯಾ ಮೊರೆ ಹೋಗ್ತಿದ್ದಾರೆ. ಆದ್ರೆ ಕಂಟೆಂಟ್ ಕ್ರಿಯೇಟರ್ ಕೆಲ್ಸ ಕೂಡ ಸುಲಭವಲ್ಲ. ಇಲ್ಲೊಬ್ಬ ಮಹಿಳೆ ಕೆಲ್ಸಕ್ಕಿಂತ ಕಂಟೆಂಟ್ ಕ್ರಿಯೇಟರ್ ಆಗಿ ಹೆಚ್ಚು ಸಂಪಾದನೆ ಮಾಡಿದ್ರೂ ಮತ್ತೆ ಕೆಲ್ಸಕ್ಕೆ ಹೋಗುವ ಮನಸ್ಸು ಮಾಡ್ತಿದ್ದಾಳೆ. ಕಾರಣ ಏನು ಅನ್ನೋದನ್ನು ಆಕೆ ಹೇಳಿಕೊಂಡಿದ್ದಾಳೆ.
ಕಾರ್ಪೊರೇಟ್ ಉದ್ಯೋಗಕ್ಕೆ ವಾಪಸ್ ?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಯುವತಿ ಆರ್ಯಾ ಅರೋರಾ (Arya Arora), ಇನ್ಸ್ಟಾಗ್ರಾಮ್ನಲ್ಲಿ ಫಿಟ್ನೆಸ್ ಮತ್ತು ಲೈಫ್ ಸ್ಟೈಲ್ ಗೆ ಸಂಬಂಧಿಸಿದ ಕಂಟೆಂಟ್ ಪೋಸ್ಟ್ ಮಾಡ್ತಾರೆ. ಅಮೆಜಾನ್ನಲ್ಲಿ (Amazon) ಮಾಡಿಕೊಂಡಿದ್ದ ಒಪ್ಪಂದದ ಆಧಾರಿತ ಕೆಲಸ ಮುಗಿದ ಬಳಿಕ ಅವರು ಫುಲ್ಟೈಮ್ ಕಂಟೆಂಟ್ ಕ್ರಿಯೇಷನ್ಗೆ ಇಳಿದಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಪ್ರಕಾರ, ಅವರು ಫುಲ್ಟೈಮ್ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡಲು ಆರಂಭಿಸಿ 10 ತಿಂಗಳಾಗಿದೆ. ಕೆಲಸ ಬಿಟ್ಟಾಗ ಅವರ ಕೈನಲ್ಲಿ ಸಾಕಷ್ಟು ಹಣ ಏನಿರಲಿಲ್ಲ. ಅಮೆಜಾನ್ನಲ್ಲಿ ಒಪ್ಪಂದದ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅವರು ಆ ಕೆಲಸ ಮುಗಿದ ಬಳಿಕ ಕಂಟೆಂಟ್ ಕ್ರಿಯೇಷನ್ ಆಯ್ಕೆ ಮಾಡ್ಕೊಂಡಿದ್ದರು. ಆರಂಭದ ಕೆಲವು ತಿಂಗಳುಗಳು ಚೆನ್ನಾಗಿಯೇ ಕಳೆದಿತ್ತು. ಆದರೆ ಇನ್ಫ್ಲುಯೆನ್ಸರ್ ಆಗಿ ಕೆಲಸ ಮಾಡುವಾಗ ಹಣಕಾಸಿನ ವಿಚಾರಗಳನ್ನು ನಿಭಾಯಿಸುವುದು ಕಷ್ಟವಾಗ್ತಿತ್ತು ಎಂದು ಆರ್ಯಾ ಹೇಳಿದ್ದಾರೆ.
ಪ್ರತಿದಿನ ಬೆಳಗ್ಗೆ ಒತ್ತಡ
ತಮ್ಮ ಆರ್ಥಿಕ ಪರಿಸ್ಥಿತಿ ಮಾನಸಿಕವಾಗಿ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿರುವ ಅವರು, ಪ್ರತಿದಿನ ಬೆಳಗ್ಗೆ ಎದ್ದಾಗ ಬಿಲ್ಗಳನ್ನು ಹೇಗೆ ಪಾವತಿಸೋದು ಎನ್ನುವ ಚಿಂತೆ ಅವರನ್ನು ಕಾಡ್ತಿತ್ತಂತೆ. ಈ ಉದ್ಯಮದಲ್ಲಿ ಪೇಮೆಂಟ್ ಬರುವ ಸಮಯವೇ ದೊಡ್ಡ ಸಮಸ್ಯೆ. ಒಂದು ಕೆಲ್ಸದ ಹಣ ಬರೋದು 60 ದಿನಗಳ ನಂತ್ರ. ಅಲ್ಲಿ ತನಕ ಕಾಯ್ಬೇಕು. ಅಷ್ಟು ಟೈಂ ಹಣಕ್ಕೆ ಹೇಗೆ ವ್ಯವಸ್ಥೆ ಮಾಡೋದು ಎಂಬ ಚಿಂತೆ ಅವರದ್ದು.
ಪೇಮೆಂಟ್ ವಿಳಂಬವಾದ್ರೆ ದೈನಂದಿನ ಹಣಕಾಸಿನ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತದೆ. ಹಿಂದಿನ ಕಾರ್ಪೊರೇಟ್ ಸಂಬಳಕ್ಕಿಂತ ಈಗ ಹೆಚ್ಚು ಹಣ ಗಳಿಸುತ್ತಿದ್ದರೂ ನಿಗದಿತ ಆದಾಯ ಇಲ್ಲದಿರುವುದು ಸಮಸ್ಯೆ ಅಂತ ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಮತ್ತೆ ಕೆಲ್ಸಕ್ಕೆ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಸಮಸ್ಯೆ ಏನು?
ಇಲ್ಲಿ ಕೆಲ್ಸ ಮಾಡುವಾಗ ಹತ್ತು ಬಾರಿ ಯೋಚಿಸಬೇಕು. ಪ್ರತಿ ತಿಂಗಳು ಇಂತಿಷ್ಟೇ ದಿನ ಹಣ ಬರುತ್ತದೆ ಎಂಬ ಖಚಿತತೆ ಇಲ್ಲ. ಆದಾಯದಲ್ಲಿ ಸ್ಥಿರತೆ ಇಲ್ಲ. ಕಾರ್ಪೊರೇಟ್ ಉದ್ಯೋಗದಲ್ಲಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಬರ್ತಿತ್ತು. ಹಣಕಾಸಿನ ಒತ್ತಡದಿಂದಾಗಿ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದ ಸೃಜನಶೀಲ ಕೆಲಸದ ಮೇಲೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಅಂತ ಆರ್ಯ ಹೇಳಿದ್ದಾರೆ.














