ಕರ್ನಾಟಕದ 6 ನಗರಗಳಿಗೆ ಟೌನ್‌ಶಿಪ್‌ ಭಾಗ್ಯ: 10,000 ಉದ್ಯೋಗ ಸೃಷ್ಟಿಯ ಗುರಿ

ಮೈಸೂರು, ಚಿತ್ರದುರ್ಗ, ಹಾವೇರಿ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗೆ ಸಿದ್ಧತೆ, ಬೃಹತ್‌ ಉದ್ದಿಮೆಗಳಿಗೆ ಅವಕಾಶ, ಜೀವನ ಮಟ್ಟಸುಧಾರಿಸಲು ಕ್ರಮ. 

Preparation for Construction of Townships in 6 Cities of Karnataka grg

ಗಿರೀಶ್‌ ಗರಗ

ಬೆಂಗಳೂರು(ಏ.26): ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಜೀವನ ಮಟ್ಟಸುಧಾರಿಸುವ ನಿಟ್ಟಿನಲ್ಲಿ ರಾಜ್ಯದ 6 ನಗರಗಳನ್ನು ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆ ಕುರಿತಂತೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.

ಬೆಂಗಳೂರಿನ ಮೇಲಿನ ಒತ್ತಡ ನಿವಾರಣೆ, 2ನೇ ಹಂತದ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಹಿಂದೆ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗಳ ಅಭಿವೃದ್ಧಿ ಕುರಿತು ಘೋಷಿಸಿತ್ತು. ಆ ಯೋಜನೆಗೆ ಇದೀಗ ಕೆಯುಐಡಿಎಫ್‌ಸಿ ಚಾಲನೆ ನೀಡಿದ್ದು, ಯೋಜನೆ ಅನುಷ್ಠಾನದ ವಿಧಾನದ ಬಗ್ಗೆ ವರದಿ ಸಲ್ಲಿಸಲು ಹಾಗೂ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿಪಡಿಸುವ ಸಂಸ್ಥೆ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದ್ದು, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹಾಲಿ ಅಭಿವೃದ್ಧಿಗೊಂಡಿರುವ ನಗರಗಳ ಜತೆಗೆ ಹೆಚ್ಚುವರಿಯಾಗಿ ಜಾಗ ಗುರುತಿಸಿ ಪ್ರತ್ಯೇಕ ಕೈಗಾರಿಕಾ ವಲಯವನ್ನು ಸ್ಥಾಪಿಸುವುದು ಮತ್ತು ಜನರು ಉತ್ತಮ ರೀತಿಯಲ್ಲಿ ಜೀವನಕ್ಕಾಗಿ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಕರ್ನಾಟಕದಲ್ಲಿ 5 ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ: ಸಿಎಂ ಬೊಮ್ಮಾಯಿ

10 ಸಾವಿರ ಉದ್ಯೋಗ ಸೃಷ್ಟಿಯ ಗುರಿ:

ರಾಜ್ಯ ಸರ್ಕಾರದ ನಿರ್ಧಾರದಂತೆ ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಬೃಹತ್‌ ಕೈಗಾರಿಕಾ ವಲಯ ಅಭಿವೃದ್ಧಿಪಡಿಸಲಾಗುತ್ತದೆ. ಆಮೂಲಕ 2ನೇ ಹಂತದ ನಗರಗಳ ಅಭಿವೃದ್ಧಿಯತ್ತ ಗಮನಹರಿಸಲಾಗುತ್ತಿದೆ. ಯೋಜನೆಗಾಗಿ 6 ನಗರಗಳನ್ನು ಆಯ್ಕೆ ಮಾಡಿ, ಟೌನ್‌ಶಿಪ್‌ ನಿರ್ಮಾಣಕ್ಕೆ ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಬೃಹತ್‌ ಪ್ರಮಾಣದ ಕೈಗಾರಿಕಾ ವಲಯ ಸ್ಥಾಪಿಸಿ ಸಾವಿರಾರು ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಮಾಡಲಾಗುತ್ತದೆ. ಈ ಕ್ರಮದಿಂದ ಅಂದಾಜು 10 ಸಾವಿರ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ.

6 ಜಿಲ್ಲೆಗಳಲ್ಲಿ ಟೌನ್‌ಶಿಪ್‌: 

ನಗರಾಭಿವೃದ್ಧಿ ನಿರ್ದೇಶನದ ಮೇರೆಗೆ ಕೆಯುಐಡಿಎಫ್‌ಸಿ ಮೈಸೂರು, ಹಾವೇರಿ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ರಾಮನಗರ ವ್ಯಾಪ್ತಿಯಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಆ ನಗರಗಳಲ್ಲಿ ಹಾಲಿ ಇರುವ ಕೈಗಾರಿಕಾ ವಲಯದ ಜತೆಗೆ ಹೆಚ್ಚುವರಿ ಪ್ರದೇಶದಲ್ಲಿ ಬೃಹತ್‌ ಕೈಗಾರಿಕಾ ವಲಯ ಸ್ಥಾಪನೆಗೆ ಒತ್ತು ನೀಡಲಾಗುತ್ತದೆ. ಅದರ ಜತೆಗೆ ವಸತಿ ಪ್ರದೇಶದಲ್ಲಿ ಅಗತ್ಯವಿರುವ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. ಕೈಗಾರಿಕಾ ವಲಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ರಸ್ತೆ, ನೀರು, ವಿದ್ಯುತ್‌ ಸಂಪರ್ಕ ಸೇರಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತದೆ. ಅದನ್ನು ಹೊರತುಪಡಿಸಿ ಹಾಲಿ ಇರುವ ವಸತಿ ಪ್ರದೇಶದ ಜತೆಗೆ ಕೈಗಾರಿಕಾ ವಲಯ ಸ್ಥಾಪಿಸಿ ಉಳಿಯುವ ಪ್ರದೇಶದಲ್ಲಿ ಆರೋಗ್ಯ ಸೇವೆ, ಶಿಕ್ಷಣ ಸೇವೆ, ಶಾಪಿಂಗ್‌ ಕಾಂಪ್ಲೆಕ್ಸ್‌, ಬ್ಯಾಂಕ್‌, ಉದ್ಯಾನ, ಸಮುದಾಯ ಭವನದಂತಹ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಕಿತ್ತೂರು ಬಳಿ ಕೈಗಾರಿಕೆ ಟೌನ್‌ಶಿಪ್‌, 50 ಸಾವಿರ ನೌಕರಿ: ಸಿಎಂ ಬೊಮ್ಮಾಯಿ ಘೋಷಣೆ

ಜಾರ್ಖಂಡ್‌ನ ಜೇಮ್‌ಶೆಡ್‌ಪುರ, ಪಶ್ಚಿಮ ಬಂಗಾಳದ ದುರ್ಗಾಪುರ ಹಾಗೂ ಮುಂಬೈನ ಬಿಎಆರ್‌ಸಿ ನಗರಗಳಲ್ಲಿ ಕೈಗಾರಿಕೆ ಮತ್ತು ವಸತಿ ಪ್ರದೇಶಗಳನ್ನೊಳಗೊಂಡ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗಳಿವೆ. ಅದೇ ಮಾದರಿ ಯಲ್ಲಿ ಇದೀಗ ರಾಜ್ಯದಲ್ಲೂ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭೂಸ್ವಾಧೀನದ ತಲೆನೋವನ್ನು ಕಡಿಮೆ ಮಾಡಿಕೊಳ್ಳಲು ಸರ್ಕಾರಕ್ಕೆ ಸಂಬಂಧಿಸಿದ ಜಾಗವೇ ಹೆಚ್ಚಿರುವ ಹಾಗೂ ಹಾಲಿ ವಸತಿ ಪ್ರದೇಶವಾಗಿ ಅಭಿವೃದ್ಧಿಗೊಂಡಿರುವ ಪ್ರದೇಶದಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರಿ ಜಾಗ ಹೊರತುಪಡಿಸಿ ಖಾಸಗಿ ಜಾಗ ಇದ್ದರೆ, ಅದನ್ನು ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ಟೆಂಡರ್‌ ಪಡೆಯುವ ಸಂಸ್ಥೆಯು ಜಾಗದ ವಿಸ್ತೀರ್ಣ ಲೆಕ್ಕ ಹಾಕಿ, ಅದರ ಮೌಲ್ಯವನ್ನು ನಿಗದಿ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಿದೆ.

ಯಾವೆಲ್ಲ ನಗರಗಳಲ್ಲಿ ಟೌನ್‌ಶಿಪ್‌, ನಗರ ವಿಸ್ತೀರ್ಣ

ಮೈಸೂರು 563.33 ಎಕರೆ
ಹಾವೇರಿ 659.19 ಎಕರೆ
ಚಿಕ್ಕಬಳ್ಳಾಪುರ 648.08 ಎಕರೆ
ಚಿತ್ರದುರ್ಗ 656.27 ಎಕರೆ
ಕೋಲಾರ 962.20 ಎಕರೆ
ರಾಮನಗರ 2198.21 ಎಕರೆ

ರಾಜ್ಯದ 6 ಜಿಲ್ಲೆಗಳಲ್ಲಿ ಕೈಗಾರಿಕಾ ವಲಯ ಮತ್ತು ವಸತಿ ಪ್ರದೇಶಗಳನ್ನೊಳಗೊಂಡ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿ ಕುರಿತಂತೆ ಟೆಂಡರ್‌ ಕರೆಯಲಾಗಿದೆ.ಯೋಜನಾ ವೆಚ್ಚ ನಿಗದಿ, ಯೋಜನೆ ಅನುಷ್ಠಾನದ ವಿವರದ ವರದಿ ಸಲ್ಲಿಕೆಗೆ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆ ನಡೆಸಲಾಗಿದೆ ಅಂತ ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios