ರಾಜ್ಯದಲ್ಲಿ ಚಿತ್ರದುರ್ಗ, ಹಾವೇರಿ, ದಾವಣಗೆರೆ, ಧಾರವಾಡ ಹಾಗೂ ಬೆಳಗಾವಿಗಳಲ್ಲಿ ಕೈಗಾರಿಕಾ ವಿಶೇಷ ಟೌನ್‌ಶಿಪ್‌ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಹುಬ್ಬಳ್ಳಿ (ಅ.29): ರಾಜ್ಯದಲ್ಲಿ ಚಿತ್ರದುರ್ಗ, ಹಾವೇರಿ, ದಾವಣಗೆರೆ, ಧಾರವಾಡ ಹಾಗೂ ಬೆಳಗಾವಿಗಳಲ್ಲಿ ಕೈಗಾರಿಕಾ ವಿಶೇಷ ಟೌನ್‌ಶಿಪ್‌ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎಫ್‌ಎಂಸಿಜಿ ಕ್ಲಸ್ಟರ್‌ (ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌) ಬಂಡವಾಳ ಹೂಡಿಕೆದಾರರ ಒಡಂಬಡಿಕೆಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಎಸ್‌ಐಆರ್‌ ಆ್ಯಕ್ಟ್ (ವಿಶೇಷ ಹೂಡಿಕಾ ವಲಯ) ಕರಡು ಪ್ರತಿ ಸಿದ್ಧಗೊಂಡಿದೆ. ಬೆಂಗಳೂರು ನಂತರ ಕೈಗಾರಿಕಾ ಬೆಳವಣಿಗೆಗೆ ಅತ್ಯಂತ ಪ್ರಶಸ್ತವಾದ ನಗರವೆಂದರೆ ಅದು ಹುಬ್ಬಳ್ಳಿ -ಧಾರವಾಡ. 

ಮುಂಬೈ- ಚೆನ್ನೈ ಕೈಗಾರಿಕಾ ಕಾರಿಡಾರ್‌ನಿಂದ ರಾಜ್ಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ. ಅದಕ್ಕೆ ಪೂರಕವಾದ ವಾತಾವರಣವನ್ನು ರಾಜ್ಯ ಸರ್ಕಾರ ಸೃಷ್ಟಿಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿಯಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರತಿಯೊಂದು ಕಡೆಯೂ ತಲಾ 1 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ ನಿರ್ಮಿಸಲಾಗುವುದು. ಚಿತ್ರದುರ್ಗ, ದಾವಣಗೆರೆ, ಬೆಳಗಾವಿಯಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಧಾರವಾಡ ಹಾಗೂ ಹಾವೇರಿಯಲ್ಲಿ ಜಾಗ ಗುರುತಿಸುವುದು ಬಾಕಿಯಿದೆ ಎಂದು ತಿಳಿಸಿದರು.

ಕಿತ್ತೂರು ಬಳಿ ಕೈಗಾರಿಕೆ ಟೌನ್‌ಶಿಪ್‌, 50 ಸಾವಿರ ನೌಕರಿ: ಸಿಎಂ ಬೊಮ್ಮಾಯಿ ಘೋಷಣೆ

ಎಸ್‌ಐಆರ್‌ ಆ್ಯಕ್ಟ್: ಧಾರವಾಡ ಮತ್ತು ತುಮಕೂರಗಳಲ್ಲಿ ಎಸ್‌ಐಆರ್‌ (ವಿಶೇಷ ಹೂಡಿಕಾ ವಲಯ) ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ ಕರಡು ಪ್ರತಿ ಸಿದ್ಧವಾಗಿದೆ. ಶೀಘ್ರದಲ್ಲೇ ಬಿಲ್‌ ತಯಾರಿಸಿ ಮಂಡಿಸಿ ಜಾರಿಗೊಳಿಸಲಾಗುವುದು. ಇದರಿಂದ ಈ ಭಾಗಗಳಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ಇಲಾಖೆಗಳ ಅನುಮತಿಗಳು ಈ ಎಸ್‌ಐಆರ್‌ನಡಿ ಇಲ್ಲೇ ಪಡೆಯಬಹುದಾಗಿದೆ. ಈಗಾಗಲೇ ಗುಜರಾತ್‌ನಲ್ಲಿ ಎಸ್‌ಐಆರ್‌ ಇದೆ. ಅದೇ ಮಾದರಿಯಲ್ಲಿ ಇಲ್ಲಿ ರಚಿಸಲಾಗುತ್ತಿದೆ. ಇದು ಮುಂಬೈ- ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಅಭಿವೃದ್ಧಿಗೂ ಪೂರಕವಾಗುತ್ತದೆ. ಇದು ಕೈಗಾರಿಕಾ ಸ್ನೇಹಿಯಾಗಿರುತ್ತದೆ ಎಂದು ಹೇಳಿದರು.

ಭೂಸ್ವಾಧೀನ ಪೂರ್ಣ: ತುಮಕೂರು-ದಾವಣಗೆರೆ ರೈಲ್ವೆ ಮಾರ್ಗದ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಇದಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಬೆಂಗಳೂರು- ಹುಬ್ಬಳ್ಳಿ ಮಧ್ಯೆ ಸಂಚಾರದ ಅವಧಿ ಎರಡೂವರೆ ಗಂಟೆ ಕಡಿಮೆಯಾಗುತ್ತದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಯೋಜನೆಯೂ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಧಾರವಾಡ- ಬೆಳಗಾವಿ ರೈಲು ಮಾರ್ಗದ ನಿರ್ಮಾಣಕ್ಕೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮಧ್ಯೆ ಕೆಲವರು ಕೋರ್ಚ್‌ಗೆ ಹೋಗಿದ್ದರು. ಇದೀಗ ಅದು ಕ್ಲಿಯರ್‌ ಆಗಿದೆ. 

ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಸೂದೆಗೆ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ: ಸಿಎಂ ಬೊಮ್ಮಾಯಿ

ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಇದೇ ವರ್ಷ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದು 890 ಕೋಟಿ ರೂ.ಯೋಜನೆಯಾಗಿದೆ. ಶೇ. 50ರಷ್ಟುಅನುದಾನವನ್ನು ರಾಜ್ಯ ಸರ್ಕಾರ ಭರಿಸಲು ಸಿದ್ಧವಿದೆ ಎಂದು ತಿಳಿಸಿದರು. ಧಾರವಾಡ- ಬೆಂಗಳೂರಿಗೆ ವಂದೇ ಭಾರತ್‌ ರೈಲು ಸಂಚಾರ ಆರಂಭವಾದರೆ ಪ್ರಯಾಣದ ಅವಧಿ ಮೂರೂವರೆ ಗಂಟೆ ಕಡಿಮೆಯಾಗಲಿದೆ. ಇದು ಕೂಡ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಇತರರು ಉಪಸ್ಥಿತರಿದ್ದರು.