ಬೆಂಗಳೂರಿನ ಐಟಿ ಕಂಪೆನಿಗಳು ಉದ್ಯೋಗ ಕಡಿತ ಮಾಡುತ್ತಿದ್ದು, ಕೃತಕ ಬುದ್ಧಿಮತ್ತೆ ಕಾರಣವಾಗಿದೆ. 2024ರಲ್ಲಿ ಭಾರತದಲ್ಲಿ 1.5 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗ ನಷ್ಟವಾಗಿದ್ದು, ಬೆಂಗಳೂರಿನಲ್ಲಿ 50 ಸಾವಿರ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಟೆಸ್ಲಾ, ಇಂಟೆಲ್, ಸಿಸ್ಕೋ, ಮೈಕ್ರೋಸಾಫ್ಟ್, ಊಬರ್ ಮುಂತಾದ ಕಂಪೆನಿಗಳು ಉದ್ಯೋಗ ಕಡಿತ ಮಾಡಿವೆ. ಇದರಿಂದ ಪಿಜಿ ಮತ್ತು ಬಾಡಿಗೆ ಮನೆಗಳ ಮೇಲೆ ಪರಿಣಾಮ ಬೀರುತ್ತಿದೆ.

ಐಟಿ ಹಬ್​ ಎಂದೇ ಫೇಮಸ್​ ಆಗಿರುವ ಬೆಂಗಳೂರಿನ ಐಟಿ ಕಂಪೆನಿಗಳು ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ಕಡಿತಗೊಳಿಸುತ್ತಲೇ ಬಂದಿವೆ. ಕೃತಕ ಬುದ್ಧಿಮತ್ತೆ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಕೆಲಸ ಕಳೆದುಕೊಳ್ಳುವ ಟೆಕ್ಕಿಗಳು ಸೇರಿದಂತೆ ಐಟಿ ಕಂಪೆನಿಯಲ್ಲಿ ಇರುವ ಹಲವು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಎಂಜಿನಿಯರಿಂಗ್​ ಪದವಿ ಪಡೆದು ಐಟಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಬಹುದೊಡ್ಡ ಆಸೆಯನ್ನು ಹೊತ್ತ ಯುವಸಮುದಾಯಕ್ಕೆ ಇದು ನುಂಗುಲಾಗದ ತುತ್ತಾಗಿದೆ. ಇದಾಗಲೇ ಕಷ್ಟಪಟ್ಟೋ, ಇಷ್ಟಪಟ್ಟೋ ಕೆಲಸ ಪಡೆದುಕೊಂಡವರು ಕೂಡ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಫಾರಿನ್​ ಕನಸು ಕಂಡು ಹೋದವರನ್ನು ಅಲ್ಲಿಯ ಸರ್ಕಾರಗಳು ವಾಪಸ್​ ಕಳಿಸುತ್ತಿರುವುದು ಒಂದೆಡೆಯಾದರೆ, ಭಾರತದಲ್ಲಿಯೇ ಅದರಲ್ಲಿಯೂ ಬೆಂಗಳೂರಿನಲ್ಲಿ ಉದ್ಯೋಗ ಕಡಿತ ಎನ್ನುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

ಈಗ ಬಂದಿರುವ ವರದಿಯ ಪ್ರಕಾರ, 2024ರಲ್ಲಿ ಭಾರತಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರೆ, ಬೆಂಗಳೂರು ಒಂದರಲ್ಲಿಯೇ 50 ಸಾವಿರ ಮಂದಿ ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟೆಸ್ಲಾ, ಇಂಟೆಲ್, ಸಿಸ್ಕೋ ಮತ್ತು ಮೈಕ್ರೋಸಾಫ್ಟ್, ಊಬರ್​ ಸೇರಿದಂತೆ ಹಲವು ಕಂಪೆನಿಗಳು ಇದರಲ್ಲಿ ಸೇರಿವೆ. ಇಂಟೆಲ್ 15 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ. 2024 ರಲ್ಲಿ ಗಮನಾರ್ಹ ನಷ್ಟವನ್ನು ಎದುರಿಸುತ್ತಿರುವ ಇಂಟೆಲ್, 2025 ರ ವೇಳೆಗೆ $10 ಬಿಲಿಯನ್ ವೆಚ್ಚವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದರಲ್ಲಿ ಪುನಃ 15 ಸಾವಿರ ಉದ್ಯೋಗಿಗಳೂ ಸೇರಿದ್ದಾರೆ.

ಫಾರಿನ್​ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...

ಟೆಸ್ಲಾ ಕಂಪೆನಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ಟೆಕ್ಕಿಗಳ ಜೊತೆ, ಹಿರಿಯ ಕಾರ್ಯನಿರ್ವಾಹಕರು ಮತ್ತು ಅದರ ಸೂಪರ್‌ಚಾರ್ಜಿಂಗ್ ತಂಡದವರೂ ಸೇರಿದ್ದಾರೆ. ಇನ್ನೂ 20 ಸಾವಿರ ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇನ್ನು ನೆಟ್‌ವರ್ಕಿಂಗ್ ದೈತ್ಯ ಸಿಸ್ಕೋ ಸಿಸ್ಟಮ್ಸ್, 2024ರಲ್ಲಿ ಎರಡು ಬಾರಿ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ. ಸ್ಯಾಪ್​ ಎಂಟು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆ, ಉಬರ್ ಕಂಪೆನಿ ಸುಮಾರು ಏಳು ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ. ಇನ್ನು ಐಟಿ ದೈತ್ಯ ಡೆಲ್​ ಕಂಪೆನಿ ಕಳೆದ ವರ್ಷ 6 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ.

ಇದೆಲ್ಲವೂ ಈಗ ರಿಯಲ್​ ಎಸ್ಟೇಟ್‌ಗೆ ಉದ್ಯಮಕ್ಕೂ ತೀವ್ರ ಹೊಡೆತ ಬೀಳುತ್ತಿದೆ. ಲಕ್ಷಾಂತರ ಉದ್ಯೋಗಿಗಳಿಗೆ ನೆಲೆಯಾಗಿರುವ ಪೇಯಿಂಗ್ ಗೆಸ್ಟ್ (ಪಿಜಿ) ಸೌಲಭ್ಯಗಳು, ಬಾಡಿಗೆ ಮನೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಈ ವಜಾಗಳು ಬೆಂಗಳೂರಿನ ಪಿಜಿ ವಸತಿ ಮತ್ತು ಬಾಡಿಗೆ ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತವೆ. ಜೂನಿಯರ್ ಐಟಿ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಅತ್ಯಂತ ಕೈಗೆಟುಕುವ ಆಯ್ಕೆಯಾದ ಪಿಜಿ ಸೌಲಭ್ಯಗಳು ಬೇಡಿಕೆಯಲ್ಲಿ ತೀವ್ರ ಕುಸಿತವನ್ನು ಕಾಣುತ್ತವೆ, ಇದು ಭೂಮಾಲೀಕರು ಮತ್ತು ನಿರ್ವಾಹಕರ ಮೇಲೆ ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಉದ್ಯೋಗ ಅರಸಿ ಬೆಂಗಳೂರಿನ ಕನಸು ಕಾಣುತ್ತಿರುವವರಿಗೆ ಹಾಗೂ ಇದಾಗಲೇ ತಮ್ಮ ಸಂಬಳಕ್ಕೆ ತಕ್ಕಂತೆ ಕಮಿಟ್​ಮೆಂಟ್​ ಆದವರಿಗೆ ಭಾರಿ ಹೊಡೆತ ಬೀಳುತ್ತಿದೆ. 

ಸಿವಿ ಮತ್ತು ರೆಸ್ಯೂಮ್​ ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವುದು ಸೂಕ್ತ? ಇಲ್ಲಿದೆ ಡಿಟೇಲ್ಸ್​