ವಿದೇಶದಲ್ಲಿ ಕೆಲಸ ಮಾಡುವ ಆಸೆಯಿಂದ ಅನೇಕ ಭಾರತೀಯ ಯುವಕರು ಸೈಬರ್ ಅಪರಾಧ ಜಾಲಕ್ಕೆ ಸಿಲುಕುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ಮೈನ್ಮಾರ್‌ನಂತಹ ದೇಶಗಳಿಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗುತ್ತಿದೆ. ಭಾರತ ಸರ್ಕಾರ ರಕ್ಷಣಾ ಕಾರ್ಯ ಕೈಗೊಂಡರೂ, ವಂಚನೆಗಳು ಮುಂದುವರೆದಿವೆ. ವಿದೇಶದ ಉದ್ಯೋಗದ ಬಗ್ಗೆ ಎಚ್ಚರಿಕೆ ವಹಿಸಿ, ರಾಯಭಾರಿ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ.

ನನ್ನ ಮಗ, ಮಗಳು ಫಾರಿನ್​ನಲ್ಲಿ ಕೆಲ್ಸ ಮಾಡೋದು, ಅವನು/ಳು ಫಾರಿನ್​ ರಿಟರ್ನ್​ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಬಯಸುವ ಹಲವು ಪಾಲಕರು ಇದ್ದಾರೆ. ಒಳ್ಳೊಳ್ಳೆ ಶಿಕ್ಷಣ ಪಡೆದು ಭಾರತದಲ್ಲಿ ಸುಲಭದಲ್ಲಿ ಕೆಲಸ ಸಿಗುವ ಸಂಭವ ಇದ್ದರೂ, ವಿದೇಶದ ನೆಲಕ್ಕೆ ಹೋಗುವ ಹಂಬಲದಲ್ಲಿ ಹಲವು ಯುವಕ- ಯುವತಿಯರು ಇದ್ದಾರೆ. ವಿದೇಶದಲ್ಲಿ ಕೆಲಸ ಮಾಡಿದರೆ, ಅಥವಾ ಅಲ್ಲಿ ಮಾಡಿ ವಾಪಸದಾದರೆ ತಮಗೆ ಭಾರಿ ಡಿಮಾಂಡ್​ ಎನ್ನುವ ಕಲ್ಪನೆ ಕೆಲವರದ್ದಾದರೆ, ತಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುವುದು ವಿದೇಶದಲ್ಲಿ ಮಾತ್ರ ಎನ್ನುವ ಕಲ್ಪನೆ ಮತ್ತೆ ಕೆಲವರದ್ದು. ಇನ್ನು ಡಾಲರ್​ಗಳಲ್ಲಿ ಸಂಬಳ ಪಡೆಯುವ ಆಸೆ ಇನ್ನಷ್ಟು ಮಂದಿಯರದ್ದಾದರೆ, ಫಾರಿನ್​ ರಿಟರ್ನ್​ ಆದರೆ ಮಾತ್ರ ಒಳ್ಳೆಯ ಹೆಣ್ಣು ಸಿಕ್ತಾಳೆ ಎನ್ನುವ ಕಲ್ಪನೆ ಮತ್ತಷ್ಟು ಮಂದಿಯದ್ದು. ಒಟ್ಟಿನಲ್ಲಿ ವಿದೇಶದ ಉದ್ಯೋಗ ಬೇಕು ಅಷ್ಟೇ.

ಈ ಕನಸು ನನಸು ಮಾಡಿಕೊಳ್ಳುವ ಮಾರ್ಗ ತಿಳಿಯದೇ ಸಹಸ್ರಾರು ಭಾರತೀಯ ಯುವಕರು ವಿದೇಶದಲ್ಲಿ ಬೆಂದು ಹೋಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ವಿದೇಶದ ಕನಸು ನನಸು ಮಾಡುವುದಾಗಿ ಹೇಳಿ, ಫಾರಿನ್​ಗೂ ಕರೆದುಕೊಂಡು ಹೋಗಿ, ಅಲ್ಲಿ ಸೈಬರ್​ ಅಪರಾಧಿಗಳ ಕೆಲಸ ನೀಡಿ ಚಿತ್ರಹಿಂಸೆ ನೀಡುತ್ತಿರುವ ಆಘಾತಕಾರಿ ವರದಿ ಇದು. ಇದಕ್ಕೆ ಸಿಲುಕಿರುವವರು ಹೆಚ್ಚಾಗಿ ಇಂಜಿನಿಯರಿಂಗ್​ ಪದವಿ ಪಡೆದವರು ಎನ್ನುವುದು ಇನ್ನೂ ಆತಂಕದ ಸಂಗತಿಯಾಗಿದೆ. ತಮ್ಮ ಕೆಲಸಕ್ಕೆ ವಿದೇಶದಲ್ಲಿ ಉದ್ಯೋಗ ಸಿಗಬಹುದು ಎಂದು ಜಾಲತಾಣಗಳಲ್ಲಿ ತಡಕಾಡುವ ಸುಶಿಕ್ಷಿತರೇ ಈ ಮಹಾವಂಚಕರ ಬಂಡವಾಳ. ಯುವಕರ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅಮೆರಿಕನೋ, ಮಲೇಷಿಯಾನೋ, ಆಸ್ಟ್ರೇಲಿಯಾನೋ ಹೀಗೆ ಯಾವುದಾದರೂ ದೇಶಗಳ ಹೆಸರು ಹೇಳಿ, ಅಲ್ಲಿ ಒಳ್ಳೆಯ ಉದ್ಯೋಗ ಇದೆ ಎಂದು ತಿಳಿಸಿ, ಯುವಕರನ್ನು ಮರಳು ಮಾಡಿ, ತಾವೇ ಎಲ್ಲಾ ವ್ಯವಸ್ಥೆ ಮಾಡಿಸಿಬಿಡುತ್ತಾರೆ. 

ಫೇಸ್​ಬುಕ್​ ಸ್ನೇಹ, ರಾತ್ರಿ ತಂಗಿದ್ದ ಆರೋಪಿ... ಅಂದು ನಡೆದದ್ದೇನು? ಕಾಂಗ್ರೆಸ್​ ಕಾರ್ಯಕರ್ತೆ ಹಿಮಾನಿ ಸಾವಿನ ರಹಸ್ಯ ತಿಳಿಸಿದ ಪೊಲೀಸರು

ಅಬ್ಬಾ! ತಮ್ಮ ಕನಸು ಇಷ್ಟು ಬೇಗ ನನಸಾಗುತ್ತದೆ ಎಂದು ಅಂದುಕೊಂಡೇ ಇರಲಿಲ್ಲ ಎಂದು ಹಿರಿಹಿರಿ ಹಿಗ್ಗುವ ಯುವಕರು, ಅವರು ಪಾಲಕರು ಈ ವಂಚಕರ ಬಲೆಗೆ ಬಿದ್ದು ಬಿಡುತ್ತಿದ್ದಾರೆ. ಆ ಖದೀಮರು ವಿಮಾನದಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾರೆ, ವಿಮಾನ ನಿಲ್ದಾಣದಲ್ಲಿ ಕರೆದುಕೊಂಡು ಹೋಗಲು ಗಾಡಿಯೂ ಬೇಕಿದ್ದರೆ ಬರುತ್ತದೆ. ಆದರೆ, ಆ ಯುವಕರು ಹೋಗ್ತಿರೋದು ಮೈನ್ಮಾರ್​ಗೆ ಎನ್ನುವುದು ತಿಳಿದೇ ಇರುವುದಿಲ್ಲ. ಇದಾಗಲೇ ಕೆಲವು ಯುವಕರು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು, ತಮಗಾಗಿರುವ ಕರಾಳ ಅನುಭವ ತೆರೆದಿಟ್ಟಿದ್ದಾರೆ. ಅಲ್ಲಿ ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಕೊನೆಗೆ ಸೈಬರ್​ ಅಪರಾಧಗಳನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಸಿಕೊಡಲಾಗುತ್ತದೆ. ದಿನಕ್ಕೆ 17-18 ಗಂಟೆ ಕೆಲಸ, ರಜೆಗೆ ಅವಕಾಶವೇ ಇಲ್ಲ. ಸುಸ್ತು ಎಂದು ಹೇಳುವಂತಿಲ್ಲ. ಸ್ವಲ್ಪ ಎಡವಟ್ಟು ಮಾಡುವುದು ತಿಳಿದರೂ ಸಾವು ನಿಶ್ಚಿತ ಎನ್ನುವ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಇದೀಗ ಸೈಬರ್​ ಅಪರಾಧಗಳ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಲಿಂಕ್​ ಕಳಿಸಿ, ಫೋನ್​ ಮೂಲಕ ಹೀಗೆ ಇವರದ್ದು ಸಹಸ್ರಾರು ಕೋಟಿ ರೂಪಾಯಿಗಳ ವಂಚನೆಯ ಜಾಲ. ಜನರನ್ನು ಹೇಗೆ ಮರುಳು ಮಾಡಬೇಕು, ಅವರ ತಲೆ ಹೇಗೆ ಬ್ರೇನ್​ವಾಷ್​ ಮಾಡಿ ದುಡ್ಡು ಕೀಳಬೇಕು, ಯಾರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬ ಬಗ್ಗೆ ಸ್ಟಡಿ ಮಾಡಿ ಇಂತಿಷ್ಟು ಮಂದಿಯಿಂದ ದುಡ್ಡು ಕೀಳುವ ಕೆಲಸ ಇವರದ್ದು. ಊಟ-ತಿಂಡಿಗೂ ಗತಿಯಿಲ್ಲದೇ, ನೆತ್ತಿಯ ಮೇಲೆ ಸಾವಿನ ತೂಗುಗತ್ತಿಯ ನಡುವೆಯೇ ಕೆಲಸ ಮಾಡಬೇಕು. ಭಾರತದ ಯುವಕರು ಬುದ್ಧಿವಂತರಾಗಿರುವ ಕಾರಣ, ಅವರೇ ಟಾರ್ಗೆಟ್​ ಇವರಿಗೆ. ಭಾರತದ ಸಹಸ್ರಾರು ಯುವಕರು ಇನ್ನೂ ಅಲ್ಲಿ ಒದ್ದಾಡುತ್ತಿದ್ದಾರೆ. ಭಾರತ ಬಿಟ್ಟರೆ ಬೇರೆ ಬೇರೆ ದೇಶಗಳ ಯುವಕರೂ ಈ ಮೋಸದ ಜಾಲಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ ತಪ್ಪಿಸಿಕೊಂಡು ಬಂದ ಯುವಕರು. 

ಇದಾಗಲೇ ಕೆಲವು ಯುವಕರನ್ನು ಭಾರತ ಸರ್ಕಾರ ರಕ್ಷಿಸುವ ಕಾರ್ಯವನ್ನೂ ಮಾಡಿದೆ. ಇತ್ತ ರಕ್ಷಿಸುತ್ತಿದ್ದಂತೆಯೇ ಅತ್ತ ಮತ್ತಿಷ್ಟು ಮಂದಿ ಮೋಸದ ಜಾಲಕ್ಕೆ ಸಿಲುಕುತ್ತಿರುವುದರಿಂದ ಎಲ್ಲಾ ಸರ್ಕಾರಗಳಿಗೂ ರಕ್ಷಣಾ ಕಾರ್ಯಾಚರಣೆಯೇ ದೊಡ್ಡ ತಲೆನೋವಾಗಿದೆ. ಕಳೆದ ವರ್ಷ 526 ಯುವಕರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ. ಆದರೆ, ತಾವು ಜಾಣರು, ತಮಗೆ ವಂಚನೆ ಮಾಡಲು ಸಾಧ್ಯವಿಲ್ಲ ಎಂದೇ ಬಹುತೇಕ ಎಲ್ಲರೂ ಅಂದುಕೊಳ್ಳುವುದು, ತಮಗೆ ಮೋಸ ಮಾಡುವವರು ಯಾರು ಎಂದು ತಿಳಿಯುತ್ತದೆ ಎಂದುಕೊಳ್ಳುವವರೇ ಈ ರೀತಿಯ ಜಾಲಕ್ಕೆ ಬಿದ್ದಿರುವ ಸಾಕಷ್ಟು ಉದಾಹರಣೆಗಳೂ ಇವೆ. ಆದ್ದರಿಂದ ವಿದೇಶದ ಉದ್ಯೋಗ ಆಮಿಷ ತೋರಿದಾಗ ಸರಿಯಾದ ವಿಚಾರಣೆ, ತನಿಖೆ ನಡೆಸಿ ಅಗತ್ಯಬಿದ್ದರೆ ಅಲ್ಲಿರುವ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಉದ್ಯೋಗಕ್ಕೆ ಹೋಗುವುದು ಒಳಿತು ಎನ್ನುತ್ತಾರೆ ತನಿಖಾಧಿಕಾರಿಗಳು.

7 ರೇ*ಸ್ಟ್​ಗಳಿಗೆ ಒಂದೇ ದಿನ ಜೀವಾವಧಿ ಶಿಕ್ಷೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್​ಗಳು! ಕುತೂಹಲದ ಮಾಹಿತಿ ಇಲ್ಲಿದೆ...