ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ? ಕಾರ್ಯನಿರ್ವಹಿಸುತ್ತಲೇ ಎಚ್ಡಿಎಫ್ಸಿ ಬ್ಯಾಂಕ್ ಮಹಿಳಾ ಉದ್ಯೋಗಿ ಸಾವು!
ಕೆಲ ದಿನಗಳ ಹಿಂದಷ್ಟೇ ಪುಣೆಯ ಚಾರ್ಟೆಡ್ ಅಕೌಂಟೆಂಟ್ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿಯಾಗಿರುವ ಬೆನ್ನಲ್ಲೇ ಇದೀಗ ಲಖನೌದಲ್ಲಿ ಇನ್ನೋರ್ವ ಮಹಿಳೆಯ ಸಾವಾಗಿದೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪುಣೆಯ EY ಕಂಪೆನಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿರುವ ಘಟನೆಗೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಕಂಪೆನಿಯಲ್ಲಿ ನೀಡಿರುವ ಟಾರ್ಗೆಟ್ ಮುಟ್ಟಲು ಹಗಲು ರಾತ್ರಿ ಈಕೆ ಕಷ್ಟಪಟ್ಟು ಕೆಲಸ ಮಾಡಿದ್ದೇ ಆಕೆಯ ಸಾವಿಗೆ ಕಾರಣ ಎಂದು ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಎಂಬ 27 ವಯಸ್ಸಿನ ಯುವತಿಯ ಅಮ್ಮ ದೂರಿದ್ದರು. ಇದರ ಬಗ್ಗೆ ತನಿಖೆ ಇನ್ನೂ ಪ್ರಗತಿಯ ಹಂತದಲ್ಲಿದೆ. ಇದರ ನಡುವೆಯೇ, ಇದೀಗ ಮತ್ತೊಂದು ಆಘಾತಕಾರಿ ಘಟನೆ ಲಖನೌದಲ್ಲಿ ನಡೆದಿದೆ. ಇಲ್ಲಿಯ ಎಚ್ಡಿಎಫ್ಸಿ ಕ್ಯಾಂಕ್ನಲ್ಲಿ ಹೆಚ್ಚುವರಿ ಡೆಪ್ಯುಟಿ ವೈಸ್ ಪ್ರೆಸಿಡೆಂಟ್ (additional deputy vice-president) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸದಾಫ್ ಫಾತಿಮಾ ಸಾವನ್ನಪ್ಪಿದ್ದು, ಇದಕ್ಕೂ ಕೆಲಸದ ಒತ್ತಡವೇ ಕಾರಣ ಎಂದು ಉದ್ಯೋಗಿಗಳು ಹೇಳಿದ್ದಾರೆ. ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಕುರ್ಚಿಯಿಂದ ಬಿದ್ದ ಅವರು ಅಲ್ಲಿಯೇ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಕೂಡಲೇ ಫಾತಿಮಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್, ಕೆಲಸದ ಒತ್ತಡವು ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು ಎಲ್ಲೆಡೆ ಒಂದೇ ರೀತಿಯಾಗಿವೆ. ಉದ್ಯೋಗಿಗಳ 'ಬಲವಂತ'ದಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ. ಉದ್ಯೋಗಿಗಳ ಸ್ಥಿತಿಯು ಬಂಧಿತ ಕಾರ್ಮಿಕರಿಗಿಂತ ಕೆಟ್ಟದಾಗಿದೆ. ಏಕೆಂದರೆ ಅವರಿಗೆ ಮಾತನಾಡುವ ಹಕ್ಕು ಕೂಡ ಇಲ್ಲ. ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ಇದೆಯೇ ಹೊರತು ಆಧಾರರಹಿತ ಸಲಹೆಗಳನ್ನು ನೀಡಲು ಅಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಟಾರ್ಗೆಟ್ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು! ಕಂಪೆನಿ ಮಾಡಿದ್ದೇನು ನೋಡಿ..
ಪುಣೆಯ ಉದ್ಯೋಗಿಯ ಸಾವಿನ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ನೀವು ಏನೇ ಓದಿ, ಉದ್ಯೋಗ ಮಾಡಿ. ಆದರೆ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ. ಅದನ್ನು ಆಧ್ಯಾತ್ಮದ ಮೂಲಕ ಸಾಧಿಸಬಹುದು. ದೇವರನ್ನು ನಂಬಿದಾಗ ಅಂತಶಕ್ತಿ ಹೆಚ್ಚುತ್ತದೆ. ಶಿಕ್ಷಣ ಸಂಸ್ಥೆಗಳು ದೈವಿಕತೆ ಮತ್ತು ಆಧ್ಯಾತ್ಮಿಕತೆ ಕಲಿಸಬೇಕು’ ಎಂದು ಹೇಳಿದ್ದರು. ಅದನ್ನೇ ಉದ್ದೇಶವಾಗಿಟ್ಟುಕೊಂಡು ಈಗ ಅಖಿಲೇಶ್ ಯಾದವ್ ಈ ಮಾತನ್ನು ಹೇಳಿದ್ದಾರೆ. ಆದರೆ ಫಾತಿಮಾ ಅವರ ಸಾವು ಹೇಗಾಯಿತು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಬಯಲಾಗಬೇಕಿದೆ.
ಟಾರ್ಗೆಟ್, ಡೆಡ್ಲೈನ್... ಇದು ಬಹುತೇಕ ಸಂಸ್ಥೆ, ಕಂಪೆನಿಗಳಲ್ಲಿ ಸಾಮಾನ್ಯವಾಗಿದೆ. ಇಂತಿಷ್ಟು ಸಮಯದಲ್ಲಿ ಇಂತಿಷ್ಟು ಟಾರ್ಗೆಟ್ ಆಗಬೇಕು, ನಿಮಗೆ ಇರುವ ಡೆಡ್ಲೈನ್ ಇಷ್ಟೇ... ಈ ಟೈಮ್ನಲ್ಲಿ ಇಷ್ಟು ಗುರಿ ತಲುಪಬೇಕು, ಏನಾದರೂ ಸೈ. ಮಾಡಲೇಬೇಕು ಎನ್ನುವ ಟಾರ್ಗೆಟ್ ಅನ್ನು ಹಲವು ಸಂಸ್ಥೆ, ಕಂಪೆನಿಗಳು ಉದ್ಯೋಗಿಗಳಿಗೆ ನೀಡಿರುತ್ತವೆ. ಅದರಲ್ಲಿಯೂ ಹೊಸದಾಗಿ ಸೇರಿರುವ ಉದ್ಯೋಗಿಗಳ ಮೇಲೆ ಈ ವರ್ಕ್ ಪ್ರೆಷರ್ ಹೆಚ್ಚಾಗಿರುತ್ತದೆ. ಹಲವು ಬಾರಿ ಕಂಪೆನಿಗಳೇ ಟಾರ್ಗೆಟ್ ಕೊಟ್ಟರೆ, ಮತ್ತೆ ಕೆಲವು ಬಾರಿ ಉದ್ಯೋಗಿಗಳೇ ಬಾಸ್ ಕಡೆಯಿಂದ ಭೇಷ್ ಎನ್ನಿಸಿಕೊಳ್ಳಬೇಕು ಎನ್ನುವ ಭರದಲ್ಲಿ ಓವರ್ ಟೈಮ್ ಕೆಲಸ ಮಾಡಿ, ಒತ್ತಡದಿಂದ ಇದ್ದ ಶ್ರಮವನ್ನೆಲ್ಲಾ ಹಾಕಿಬಿಡುತ್ತಾರೆ. ಇದರಿಂದಾಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹಾರ್ಟ್ ಎಟ್ಯಾಕ್ ಆಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಕೆಲಸದ ಒತ್ತಡದಿಂದ ಯುವತಿ ಸಾವು: ಕೇಂದ್ರದಿಂದ ತನಿಖೆ ಎಂದ ಸಚಿವೆ ಶೋಭಾ ಕರಂದ್ಲಾಜೆ- ಎಚ್ಚೆತ್ತುಕೊಂಡ ಕಂಪೆನಿ!