ಉದ್ಯೋಗ ಕಡಿತ: ಅಮೆಜಾನ್‌ಗೆ ಕಾರ್ಮಿಕ ಇಲಾಖೆಯಿಂದ ನೋಟಿಸ್
- ಉದ್ಯೋಗ ಕಡಿತ: ಅಮೆಜಾನ್‌ಗೆ
- ಕಾರ್ಮಿಕ ಇಲಾಖೆಯಿಂದ ಬಿಸಿ
- ಕಾರ್ಮಿಕ ಆಯುಕ್ತರಿಗೆ ಸ್ಪಷ್ಟನೆ ನೀಡಲು ಕಂಪನಿ ಯತ್ನ
- ಮೊದಲು ನೋಟಿಸ್‌ಗೆ ಉತ್ತರ ನೀಡಿ ಎಂದ ಆಯುಕ್ತ
ನವದೆಹಲಿ/ಬೆಂಗಳೂರು (ನ.24): 10000 ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದುಹಾಕಲು ಮುಂದಾಗಿರುವ ಅಮೆರಿಕ ಮೂಲದ ಅಮೆಜಾನ್ ಕಂಪನಿ, ಈ ಸಂಬಂಧ ಬುಧವಾರ ಬೆಂಗಳೂರಿನಲ್ಲಿರುವ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುವ ಯತ್ನ ಮಾಡಿದೆ. ಆದರೆ ಅಮೆಜಾನ್ ಪ್ರತಿನಿಧಿಗಳ ಭೇಟಿಗೆ ನಿರಾಕರಿಸಿರುವ ಕಾರ್ಮಿಕ ಇಲಾಖೆ, ಉದ್ಯೋಗಿಗಳನ್ನು ತೆಗೆದುಹಾಕುವ ಸಂಬಂಧ ಈಗಾಗಲೇ ರವಾನಿಸಲಾಗಿರುವ ನೋಟಿಸ್‌ಗೆ ಮೊದಲು ಉತ್ತರ ನೀಡಿ. ಬಳಿಕ ಖುದ್ದು ಭೇಟಿ ಎಂದು ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯ ನಷ್ಟಕಡಿಮೆ ಮಾಡಲು ಅಮೆಜಾನ್ ಸಂಸ್ಥೆ 10 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿತ್ತು. ಆದರೆ ಇದು ಏಕಪಕ್ಷೀಯ ಕ್ರಮ. ಇಂಥ ಕ್ರಮಕ್ಕೂ ಮೊದಲು ಉದ್ಯೋಗಿಗಳಿಗೆ 3 ತಿಂಗಳ ನೋಟಿಸ್ ನೀಡಬೇಕು ಮತ್ತು ಸೂಕ್ತ ಸರ್ಕಾರದ ಅನುಮತಿ ಪಡೆಯಬೇಕು. ಇದ್ಯಾವುದನ್ನೂ ಮಾಡದೇ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ ಎಂದು ಐಟಿ ಉದ್ಯೋಗಿಗಳ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಪುಣೆ ಮೂಲದ ‘ನ್ಯಾಸಂಟ್ ಇನ್ಫಾರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್’ ಕೇಂದ್ರಕ್ಕೆ ದೂರು ಸಲ್ಲಿಸಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದ ಕೇಂದ್ರ ಕಾರ್ಮಿಕ ಸಚಿವಾಲಯವು ಬುಧವಾರ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು.
ಟ್ವಿಟರ್, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!