ಗೂಗಲ್‌ನಿಂದ 12,000 ಉದ್ಯೋಗಿಗಳ ಕಡಿತ, ಸಿಇಒ ಸುಂದರ್ ಪಿಚೈ ಭಾವುಕ ಸಂದೇಶ!
ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಂದು ಹೊಡೆತ ಎದುರಾಗಿದೆ. ಈಗಾಗಲೇ ಮೈಕ್ರೋಸಾಫ್ಟ್, ಶೇರ್‌ಚಾಟ್ ಸೇರಿದಂತೆ ಕೆಲ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳ ವಜಾ ಮಾಡುತ್ತಿದೆ. ಇದೀಗ ಗೂಗಲ್ 12,000 ಉದ್ಯೋಗಿಗಳ ವಜಾಗೆ ತಯಾರಿ ನಡೆಸಿದೆ.
ನ್ಯೂಯಾರ್ಕ್(ಜ.20): ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮಗಳು ಗೋಚರಿಸುತ್ತಿದೆ. ಹಲವು ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿದೆ. ಇದೀಗ ಗೂಗಲ್ ಸರದಿ. ಮೈಕ್ರೋಸಾಫ್ಟ್, ಶೇರ್‌ಚಾಟ್ ಬಳಿಕ ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಇಂಕ್ ಬರೋಬ್ಬರಿ 12,000 ಉದ್ಯೋಗಿಗಳ ವಜಾ ಮಾಡುವುದಾಗಿ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಗೂಗಲ್ ನಿರ್ಧಾರ ಇದೀಗ ಆತಂಕ ಹೆಚ್ಚಿಸಿದೆ. ಕಾರಣ ಇಂಟರ್ನೆಟ್ ದಿಗ್ಗಜ ಎಂದೇ ಗುರುತಿಸಿಕೊಂಡಿರುವ ಗೂಗಲ್ ಆರ್ಥಿಕ ಹಿಂಜರಿತದ ಕಾರಣಕ್ಕೆ ಉದ್ಯೋಗಿಗಳ ವಜಾಗೆ ಆರಂಭಿಸಿದರೆ, ಗೂಗಲ್ ನೆಚ್ಚಿಕೊಂಡಿರುವ ಹಲವು ಕಂಪನಿಗಳು ಉದ್ಯೋಗ ಕಡಿತ ಆರಂಭಿಸುವ ಸಾಧ್ಯತೆಗಳಿವೆ.
ಗೂಗಲ್ ಜಾಗತಿಕ ಮಟ್ಟದಲ್ಲಿ ಒಟ್ಟು 12,000 ಉದ್ಯೋಗಿಗಳ ವಜಾ ಮಾಡುವುದಾಗಿ ಹೇಳಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹಲವು ಉದ್ಯೋಗಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇನ್ನು ಇತರ ಭಾಗದ ಗೂಗಲ್ ಉದ್ಯೋಗಿಗಳಿಗೆ ಶೀಘ್ರದಲ್ಲೇ ಇಮೇಲ್ ಮೂಲಕ ಸಂದೇಶ ರವಾನೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಆಲ್ಫಾಬೆಟ್ ಇಂಕ್ ಉದ್ಯೋಗ ಕಡಿತ ಮಾಡುತ್ತಿದೆ. ಮೊದಲ ಹಂತದಲ್ಲಿ ಅಮೆರಿಕದಲ್ಲಿ ಉದ್ಯೋಗಳ ಅಮಾನತು ಮಾಡಲಾಗುತ್ತಿದೆ.
ಈ ಕುರಿತು ಸಿಇಒ ಸುಂದರ್ ಪಿಚೈ ಮಹತ್ವದ ಹೇಳಿಕೆ ನೀಡಿದ್ದಾರೆ. ನಾನಿಂದು ಅತ್ಯಂತ ಕಠಿಣ ವಿಷಯವನ್ನು ಹಂಚಿಕೊಳ್ಳಬೇಕಿದೆ. ನಾವು ನಮ್ಮ ಉದ್ಯೋಗ ಸಂಪನ್ಮೂಲವನ್ನು ಕಡಿತಗೊಳಿಸಲು ನಿರ್ಧರಿಸಿದ್ದೇವೆ. ಸರಿಸುಮಾರು 12,000 ಉದ್ಯೋಗಿಗಳ ವಜಾ ಮಾಡುತ್ತಿದ್ದೇವೆ. ಈಗಾಗಲೇ ಅಮೆರಿಕದ ಕೆಲ ಉದ್ಯೋಗಿಗಳಿಗೆ ವೈಯುಕ್ತಿಕ ಇ ಮೇಲ್ ರವಾನಿಸಲಾಗಿದೆ. ಇತರ ದೇಶದ ಉದ್ಯೋಗಳ ವಜಾ ಪ್ರಕ್ರಿಯೆ ಕೆಲ ದಿನಗಳು ತೆಗೆದುಕೊಳ್ಳಲಿದೆ. ಅಲ್ಲಿನ ಕಾನೂನು ಹಾಗೂ ಪ್ರಕ್ರಿಯೆ ಬಳಿಕ ಇಮೇಲ್ ಸಂದೇಶ ರವಾನಿಸಲಾಗುತ್ತದೆ ಎಂದಿದ್ದಾರೆ.
ಗೂಗಲ್ ಕಂಪನಿಯ ಜೊತೆ ಕೆಲಸ ಮಾಡಿದ ಕೆಲ ಪ್ರತಿಭಾನ್ವಿತರಿಗೆ ಗುಡ್ ಬಾಯ್ ಹೇಳಬೇಕಾಗಿದೆ. ಈ ನಿರ್ಧಾರಕ್ಕೆ ಕ್ಷಮೆ ಇರಲಿ. ಈ ನಿರ್ಧಾರ ಗೂಗಲ್ ಕುಟುಂಬದ ಹಲವರಿಗೆ ಸಮಸ್ಯೆ ತಂದೊಡ್ಡಲಿದೆ. ಇದು ನನಗೆ ತೀವ್ರವಾಗಿ ಕಾಡುತ್ತಿದೆ. ಗೂಗಲ್ ನಿರ್ಧಾರದ ಜವಾಬ್ದಾರಿಗಳನ್ನು ನಾನು ಹೊರುತ್ತೇನೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್..!
ಕಳೆದೆರಡು ವರ್ಷ ಪರಿಸ್ಥಿತಿಗೆ ಅನುಗುಣವಾಗಿ ಗೂಗಲ್ ಹಲವರನ್ನು ನೇಮಕ ಮಾಡಿಕೊಂಡಿತ್ತು. ಇದೀಗ ಆರ್ಥಿಕ ಹಿಂಜರಿತ, ನಿಧಾನಗತಿಯಲ್ಲಿ ಚೇತರಿಕೆ ಸೇರಿದಂತೆ ಹಲವು ಕಾರಣಗಳಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಆದರೆ ನನಗೆ ಭರವಸೆ ಇದೆ. ಉತ್ತಮ ಅವಕಾಶವೂ ನಮ್ಮ ಮುಂದಿದೆ. ನಮ್ಮ ಗುರಿ ಸಾಧಿಸಲು ಮತ್ತಷ್ಟು ಶ್ರಮವಹಿಸಬೇಕಾಗಿದೆ. ಕಂಪನಿ ಸುದೀರ್ಘ ಹಾಗೂ ಸುಸ್ಥಿರ ಯಶಸ್ಸಿಗಾಗಿ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಗೂಗಲ್‌ನಿಂಗ ಹೊರಹೋಗತ್ತಿರುವ ಉದ್ಯೋಗಳಿಗೆ ಅನಂತ ಅನಂತ ಧನ್ಯವಾದ. ನಿಮ್ಮ ಕಠಿಣ ಪರಿಶ್ರಮ, ಶ್ರದ್ಧೆಯಿಂದ ನಮ್ಮ ವ್ಯವಹಾರ ಜಾಗತಿಕ ಮಟ್ಟದಲ್ಲಿ ಉತ್ತಮವಾಗಿದೆ. ನಿಮ್ಮ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.