ವರ್ಷಗಟ್ಟಲೆ ರಜೆ ಕೊಟ್ಟು ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ಕೊಡ್ತಿದೆ ಗೂಗಲ್: ಕಾರಣ ಮಾತ್ರ ವಿಚಿತ್ರ!
ಕೆಲಸಕ್ಕೆ ಬರುವುದು ಬೇಡ, ಒಂದು ವರ್ಷ ಮನೆಯಲ್ಲಿ ಸುಮ್ಮನೇ ಇದ್ದು ಲಕ್ಷ ಲಕ್ಷ ಸಂಬಳ ಪಡೆಯಿರಿ ಎಂದು ಗೂಗಲ್ ತನ್ನ ಹಲವು ಉದ್ಯೋಗಿಗಳಿಗೆ ಹೇಳಿದೆ. ಇದ್ಯಾಕೆ ಅಂತೀರಾ?

ದಿನಪೂರ್ತಿ ಕೆಲ್ಸ ಮಾಡಿದ್ರೂ ಪೈಸೆ ಪೈಸೆಗೂ ಲೆಕ್ಕ ಹಾಕುವ ಕಂಪೆನಿ, ಸಂಸ್ಥೆಗಳೇ ಎಲ್ಲೆಡೆ ತುಂಬಿರುವಾಗ, ಸುಮ್ಮನೇ ಮನೆಯಲ್ಲಿ ಇರಿ, ನಾವು ಲಕ್ಷ ಲಕ್ಷ ಸಂಬಳ ಕೊಡ್ತೀವಿ ಎನ್ನೋದನ್ನು ಎಲ್ಲಾದ್ರೂ ಕೇಳಿದ್ರಾ? ಸಿನಿಮಾ ನಿರ್ದೇಶಕರಿಗೂ ಇಂಥದ್ದೊಂದು ಐಡಿಯಾ ಬಂದಿರಲಿಕ್ಕಿಲ್ಲ, ಇದನ್ನು ಸಿನಿಮಾಗಳಲ್ಲಿ ತೋರಿಸಿದರೆ ಹುಚ್ಚರು ಎಂದುಕೊಂಡಾರು. ಆದರೆ ನಿಜಕ್ಕೂ ಹೀಗೆ ಆಗ್ತಿದೆ. ಅಂದಮಾತ್ರಕ್ಕೆ ಅದ್ಯಾವುದೋ ಕಂಪೆನಿಯಲ್ಲ, ಬದಲಿಗೆ ಟೆಕ್ ದೈತ್ಯ ಗೂಗಲ್! ಇದು ನಿಜನಾ ಎಂದು ಕೆಲವರು ಹುಬ್ಬೇರಿಸಿದರೆ, ಸುಳ್ಳೇ ಸುದ್ದಿ ಎಂದುಕೊಳ್ಳಲೂ ಬಹುದು. ಆದರೆ ಇದು ನಿಜವಾಗಿರುವ ಸುದ್ದಿಯೇ. ಅಷ್ಟೇ ಏಕೆ. ಮನೆಯಲ್ಲಿ ಸುಮ್ಮನೇ ಕುಳಿತುಕೊಂಡು ಸಂಬಳ ಪಡೆಯಿರಿ ಎಂದು ಹೇಳುವ ಮೂಲಕವೇ ಕೆಲವು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ತಿದೆ!
ಇದರ ಕಾರಣ ಕೇಳಿದ್ರೆ ಸಾಮಾನ್ಯ ಜನರಿಗೆ ಹುಚ್ಚರ ರೀತಿ, ವಿಚಿತ್ರವಾಗಿ ಕಂಡರೂ ಗೂಗಲ್ನಂಥ ದೈತ್ಯ ಕಂಪೆನಿಗಳಿಗೆ ಇದು ಸರಿಯೆಂದು ತೋರುತ್ತದೆ. ಇದಕ್ಕೆ ಕಾರಣ ಏನೆಂದರೆ, ಈ ಉದ್ಯೋಗಿಗಳು ಬೇರೆ ಕಡೆ ಕೆಲಸ ಹುಡುಕಿ ಹೋಗಬಾರದು ಎನ್ನುವ ಕಾರಣಕ್ಕೆ! ಹೌದು. ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ, ಗೂಗಲ್ ತನ್ನ ಉದ್ಯೋಗಿಗಳ ಮೇಲೆ, ವಿಶೇಷವಾಗಿ Google DeepMind ನಲ್ಲಿ ಕೆಲಸ ಮಾಡುವವರ ಮೇಲೆ ಸ್ಪರ್ಧಾತ್ಮಕವಲ್ಲದ ಒಪ್ಪಂದಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ, ಎಐನಲ್ಲಿ ನುರಿತ ಇರುವ ಉದ್ಯೋಗಿಗಳು ತಮ್ಮ ಈ ಐಡಿಯಾಗಳನ್ನು ತಮ್ಮ ಎದುರಾಳಿ ಕಂಪೆನಿಗಳಿಗೆ ಹೋಗಿ ನೀಡಿಬಿಟ್ಟರೆ ಎನ್ನುವ ಕಾರಣದಿಂದ ಈ ತಂತ್ರವನ್ನು ಅಳವಡಿಸಿಕೊಂಡಿದೆ. ಸದ್ಯಕ್ಕೆ ಒಂದು ವರ್ಷ ಇಂಥ ಎಕ್ಸ್ಪರ್ಟ್ ಉದ್ಯೋಗಿಗಳಿಗೆ ಕೆಲಸ ಇಲ್ಲದೇ ಸಂಬಳ ನೀಡಲಾಗುತ್ತಿದೆ!
ಸರ್ಕಾರಿ ಕೆಲಸ ಹುಡುಕುತ್ತಿರುವಿರಾ? 10ನೇ ಕ್ಲಾಸ್ ಪಾಸಾದ್ರೂ ರೈಲ್ವೆಯಲ್ಲಿ 1007 ಉದ್ಯೋಗ-ಡಿಟೇಲ್ಸ್ ಇಲ್ಲಿದೆ..
ಅಂದಹಾಗೆ ಗೂಗಲ್ನ ಯುನೈಟೆಡ್ ಕಿಂಗ್‌ಡಂ ಈ ರೀತಿಯ ವಿವಾದಾತ್ಮಕ ತಂತ್ರವನ್ನು ಅಳವಡಿಸಿಕೊಂಡಿದೆ. ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಈ ಒಪ್ಪಂದವು ಉದ್ಯೋಗಿಗಳು 12 ತಿಂಗಳವರೆಗೆ ಪ್ರತಿಸ್ಪರ್ಧಿ ಕಂಪೆನಿ ಸೇರುವುದನ್ನು ತಡೆಯುವುದು ಆಗಿದೆ. ಈ ಸಮಯದಲ್ಲಿ ಅವರಿಗೆ ಯಾವುದೇ ಕೆಲಸ ನೀಡದೇ ಸಂಬಳ ನೀಡಲಾಗುತ್ತಿದೆ. ಮೈಕ್ರೋಸಾಫ್ಟ್ AI ನ ಉಪಾಧ್ಯಕ್ಷ ಮತ್ತು DeepMind ನ ಮಾಜಿ ನಿರ್ದೇಶಕ ನಂಡೋ ಡಿ ಫ್ರೀಟಾಸ್ ರೂಪಿಸಿರುವ ಯೋಜನೆ ಇದಾಗಿದೆ.
ಎಐ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಗೂಗಲ್ ಇದಾಗಲೇ ಹಲವಾರು ಸೂಕ್ಷ್ಮ ರೂಪದ ಯೋಜನೆಗಳನ್ನು ರೂಪಿಸುತ್ತದೆ. ಇದು ಬೇರೆ ಕಂಪೆನಿಗಳ ಪಾಲಾಗುವದನ್ನು ವರ್ಷದ ಮಟ್ಟಿಗಾದರೂ ತಪ್ಪಿಸಲೇಬೇಕಾದ ಅನಿವಾರ್ಯತೆ ಕಂಪೆನಿಗೆ ಇದೆ. ಇಲ್ಲಿ ಕೆಲಸ ಮಾಡುವ ನುರಿತರು ಬೇರೆ ಕಂಪೆನಿಗೆ ಸೇರಿಕೊಂಡು ಇಲ್ಲಿಗಿಂತಲೂ ಅಲ್ಲಿ ಹೆಚ್ಚು ಸಂಬಳ ಪಡೆದು ಐಡಿಯಾಗಳನ್ನು ನೀಡಿಬಿಟ್ಟರೆ, ಅದು ಗೂಗಲ್ಗೆ ಭಾರಿ ಹೊಡೆದ ಬೀಳುತ್ತದೆ. ಆದ್ದರಿಂದ ಬೇರೆ ಕಂಪೆನಿಗಳಿಗೆ ಉದ್ಯೋಗಿಗಳು ಹೋಗುವುದು ಹಾಗೂ ಈ ಕ್ಷೇತ್ರದಲ್ಲಿ ನುರಿತರು ಬೇರೆ ಕಂಪೆನಿಗಳಿಗೆ ಸೇರಿ ಅಲ್ಲಿ ಇಂಥ ವಿನ್ಯಾಸಗಳ ಬಗ್ಗೆ ಚರ್ಚಿಸುವುದು ಗೂಗಲ್ಗೆ ಇಷ್ಟವಿಲ್ಲ. ಅದಕ್ಕಾಗಿಯೇ ಈ ಯೋಜನೆ!
ಫಾರಿನ್ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...